Monday, July 5, 2010

Vishnu Sahasranama 137

ಚತುರಾತ್ಮಾ
137)ಚತುರಾತ್ಮಾ
ಭಗವಂತನು ನಾಲ್ಕು ರೂಪಗಳಲ್ಲಿ ಈ ಜಗತ್ತನ್ನು ನಿಯಂತ್ರಿಸುತ್ತಾನೆ. ನಮ್ಮ ಬದುಕಿನಲ್ಲಿ ಸಹಜವಾದ ಸ್ಥಿತಿ ಮೂರು. ಎಚ್ಚರ-ಕನಸು-ನಿದ್ದೆ. ಈ ಮೂರು ಸ್ಥಿತಿಗಳನ್ನು ಎಲ್ಲರೂ ನಿರಂತರ ಅನುಭವಿಸುತ್ತಾರೆ. ಆದರೆ ಈ ಮೂರನ್ನೂ ಮೀರಿದ ನಾಲ್ಕನೇ ಸ್ಥಿತಿ ತುಂಬಾ ಪ್ರಮುಖವಾದದ್ದು. ಅದೇ ತುರೀಯ ಸ್ಥಿತಿ.
೧.ಎಚ್ಚರ ನಿಯಂತ್ರಣಕ್ಕಾಗಿ ನಮ್ಮ ಆಜ್ಞಾಚಕ್ರದಲ್ಲಿ ವಿಶ್ವ ನಾಮಕನಾಗಿ ಕುಳಿತ ಭಗವಂತ ಓಂಕಾರದ ಮೊದಲ ಅಕ್ಷರನಾಮಕ (ಆ-ಆಪ್ತಿ) ವಿಶ್ವಾತ್ಮ.
೨.ವಿಶುದ್ಧಿಚಕ್ರದ ತುದಿಯಲ್ಲಿ ಕಿರುನಾಲಿಗೆಯ ಕೆಳಗೆ ಇಂದ್ರಯೋನಿಯಲ್ಲಿ, ಎಚ್ಚರಾವಸ್ಥೆಯಲ್ಲಿ ಸೆರೆ ಹಿಡಿದ ಪಡಿಯಚ್ಚನ್ನು, ನಾವು ಮಲಗಿದ್ದಾಗ ನಮಗೆ ಕನಸಿನ ಮೂಲಕ ತೋರಿಸುವ ಭಗವಂತ ತೈಜಸಾತ್ಮ.
೩.ಮನಸ್ಸಿನ ನಿಯಂತ್ರಣದಿಂದ ಆಚೆಗೆ ಇರುವ ನಿದ್ರಾವಸ್ಥೆಯನ್ನು ನಿಯಂತ್ರಿಸುವ ಭಗವಂತ ಪ್ರಾಜ್ಞಾತ್ಮ.
೪.ನಮ್ಮ ಎಚ್ಚರ-ಕನಸು ಮನಸ್ಸಿನ ವ್ಯವಹಾರವಾದರೆ, ನಿದ್ದೆ ಮನಸ್ಸಿನ ನಿಯಂತ್ರಣವಿಲ್ಲದೆ,ಆತ್ಮವೇ ತನ್ನನ್ನು ತಾನು ಅನುಭವಿಸುವ ಸ್ಥಿತಿ. ಎಚ್ಚರದಲ್ಲೂ,ಕನಸಿನಲ್ಲೂ, ಎಲ್ಲಾ ಸ್ಥಿತಿಯಲ್ಲೂ, ಮನಸ್ಸಿನ ಹತೋಟಿಯನ್ನು ದಾಟಿನಿಲ್ಲುವ ನಾಲ್ಕನೇ ಸ್ಥಿತಿ ತುರೀಯಾವಸ್ಥೆ. ಈ ಸ್ಥಿತಿಯಲ್ಲಿ ನಾವು ನಮ್ಮನ್ನು ಬಂಧಿಸಿದ ಆ ಹದಿನೈದು ಬೇಲಿಗಳನ್ನು ದಾಟಿ ನಿಂತು ಜ್ಞಾನಾನಂದಮಯವಾದ ನಮ್ಮ ಸ್ವರೂಪವನ್ನು ನೋಡುತ್ತೇವೆ. ಈ ಸ್ಥಿತಿಯಲ್ಲಿ ನಾವು ಕೇವಲ ಪ್ರತಿಬಿಂಬ ಎನ್ನುವ ಸತ್ಯವನ್ನು ತಿಳಿಯುತ್ತೇವೆ, ಹಾಗು ಮೂಲಬಿಂಬ ಭಗವಂತ ಎನ್ನುವ ಸತ್ಯದ ಅರಿವಾಗುತ್ತದೆ. ಈ ಸ್ಥಿತಿಯಲ್ಲಿ ನಾವು ದೇವರನ್ನು ನೋಡಬಹುದು ಹಾಗು ದೇವರಲ್ಲಿ ಮಾತನಾಡಬಹುದು. ನಮ್ಮ ಸ್ವರೂಪ ದ್ರಷ್ಟಿಯಿಂದ ಭಗವಂತನನ್ನು ಕಾಣುವ ಈ ನಾಲ್ಕನೇ ಸ್ಥಿತಿಯನ್ನು ತುರೀಯಾವಸ್ಥೆ ಎನ್ನುತ್ತೇವೆ.ಈ ರೀತಿ ವಿಶ್ವ, ತೈಜಸ, ಪ್ರಾಜ್ಞ, ತುರೀಯ ಈ ನಾಲ್ಕು ಸ್ಥಿತಿಗಳಲ್ಲಿ ನಮ್ಮನ್ನು ನಿಯಂತ್ರಿಸುವ ಭಗವಂತ ಚತುರಾತ್ಮಾ.

ಇದಲ್ಲದೆ ಪ್ರಪಂಚದ ಅನುಭವಕ್ಕಾಗಿ ನಾಲ್ಕು ಬಗೆಯ ದೇಹವನ್ನು ಭಗವಂತ ಜೀವರಿಗೆ ಕರುಣಿಸಿದ್ದಾನೆ.
೧. ಕಣ್ಣಿಗೆಕಾಣುವ ಪಂಚ ಭೂತಗಳಿಂದಾದ ಸ್ಥೂಲ ಶರೀರ.
೨. ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ (Arial body). ಮಾನವ ಸತ್ತ ನಂತರ ಈ ಸೂಕ್ಷ್ಮ ಶರೀರ ಸ್ಥೂಲ ದೇಹವನ್ನು ತ್ಯೆಜಿಸುತ್ತದೆ.
೩. ಸೃಷ್ಟಿಗೆ ಮೊದಲು ಅನಾದಿಯಾಗಿ ಬಂದ ಲಿಂಗರೂಪಿ ಶರೀರ.
೪. ಸ್ವರೂಪಭೂತವಾದ ಶರೀರ.
ಈ ರೀತಿ ಪ್ರಪಂಚದ ಅನುಭವಕ್ಕಾಗಿ ಸ್ಥೂಲ, ಸೂಕ್ಷ್ಮ, ಲಿಂಗ ಹಾಗು ಸ್ವರೂಪ ಎನ್ನುವ ನಾಲ್ಕು ಬಗೆಯ ಶರೀರವನ್ನು ಕೊಟ್ಟ ಭಗವಂತ ಚತುರಾತ್ಮಾ.

ಜೀವ ಸೃಷ್ಟಿಯಲ್ಲಿ ಚತುರ್ವಿಧ.
೧. ಜರಾಯುಜ: ಗರ್ಭದಲ್ಲಿ ಸಂಪೂರ್ಣ ಬೆಳವಣಿಗೆಯಾಗಿ ಹುಟ್ಟುವುದು (ಉದಾ: ಮನುಷ್ಯ ,ಹಸು ಇತ್ಯಾದಿ)
೨. ಅಂಡಜ: ಮೊಟ್ಟೆಯ ರೂಪದಲ್ಲಿ ಭೂಮಿಗೆ ಬಂದು, ನಂತರ ಮೊಟ್ಟೆಗೆ ಕಾವು ಕೊಟ್ಟಾಗ ಸಂಪೂರ್ಣ ಬೆಳೆದು, ಮೊಟ್ಟೆಯೊಡೆದು ಹುಟ್ಟುವುದು (ಉದಾ: ಕೋಗಿಲೆ,ಕೋಳಿ, ಇತ್ಯಾದಿ)
೩. ಸ್ವೇದಜ: ನೀರಿನ ಪಸೆ, ಬೆವರಿನಿಂದ ಹುಟ್ಟುವುದು (ಉದಾ: ವೈರಸ್, ಬ್ಯಾಕ್ಟೀರಿಯ ಇತ್ಯಾದಿ).
೪.ಉದ್ಬಿಜ : ಬೀಜ ರೂಪದಲ್ಲಿದ್ದು, ಬೀಜ ಒಡೆದು ಬೆಳೆಯುವವು (ಉದಾ: ವೃಕ್ಷ)
ಈ ರೀತಿ ಅಂಡಜ-ಸ್ವೇದಜ-ಉದ್ಬಿಜ ಮತ್ತು ಜರಾಯುಜ ಎನ್ನುವ ನಾಲ್ಕು ಬಗೆಯಲ್ಲಿ ಜೀವಜಾತದ ಸೃಷ್ಟಿ ಮಾಡುವ ಭಗವಂತ ಚತುರಾತ್ಮಾ

1 comment:

  1. Thank you very much indeed I was looking for it.
    "Hari OM Tatsadh"

    ReplyDelete