Sunday, July 11, 2010

Vishnu Sahasranama 145


Vishnu Sahasranama:

145)ಜಗದಾದಿಜಃ
ಜಗದಾದಿಜ ಎಂದರೆ ಸೃಷ್ಟಿಯ ಮೊದಲು ಇದ್ದವ ಹಾಗು ಜಗತ್ತನ್ನು ಸೃಷ್ಟಿಸುವ ಮೊದಲು ಚತುರ್ವ್ಯೂಹ ಮೂರ್ತಿಗಳಾದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ ಎನ್ನುವ ನಾಲ್ಕು ರೂಪದಲ್ಲಿ ತನ್ನನ್ನು ತಾನು ಸೃಷ್ಟಿ ಮಾಡಿಕೊಂಡವ. ಇಲ್ಲಿ ಸೃಷ್ಟಿಯಾಗುವುದು ಎಂದರೆ ಇದ್ದದ್ದು ಕಾಣುವ ರೂಪತಳೆಯುವುದು ಎಂದರ್ಥ. ಭಗವಂತ ಮೊದಲು ಪುರುಷನಾಮಕ ರೂಪವನ್ನು ಧರಿಸಿ , ನಂತರ ಮಹಾತತ್ವದ ಸೃಷ್ಟಿ ಮಾಡಿದ. ಆನಂತರ ಅಹಂಕಾರ ತತ್ವದ ಸೃಷ್ಟಿಯಾಯಿತು. ಅಹಂಕಾರ ತತ್ವದಿಂದ ಪಂಚಭೂತಗಳ ಸೃಷ್ಟಿಯಾಯಿತು. ಪಂಚಭೂತಗಳಿಂದ ಪ್ರಪಂಚ ಪುರುಷನ ಸೃಷ್ಟಿ, ಹಾಗು ಬ್ರಹ್ಮಾಂಡ ಸೃಷ್ಟಿಯಾಯಿತು. ಬ್ರಹ್ಮಾಂಡದಿಂದ ಪಿಂಡಾಂಡ ಸೃಷ್ಟಿಯಾಯಿತು. ಭಗವಂತ ಒಂದೊಂದು ಪಿಂಡಾಂಡದಲ್ಲಿ ಬಿಂಬ ರೂಪಿಯಾಗಿ ನೆಲೆಸಿದ.
ಸೂಕ್ಷ್ಮ ಸೃಷ್ಟಿ ಭಗವಂತನ ನಾಭಿ ಕಮಲ. ಈ ಸೂಕ್ಷ್ಮ ಪ್ರಪಂಚವನ್ನು ಚತುರ್ಮುಖ ಮಹಾತತ್ವದಿಂದ ವಿಸ್ತಾರಗೊಳಿಸಿ, ಸ್ಥೂಲ ಪ್ರಪಂಚ ಸೃಷ್ಟಿ ಮಾಡಿದ. ಮಹಾತತ್ವದಿಂದ ಅಹಂಕಾರ ತತ್ವದ ಒಡೆಯನಾಗಿ ಶಿವ ಬಂದ. ಶಿವನಿಂದ ಅಹಂಕಾರ ತತ್ವದ ಮೂರು ರೂಪಗಳ ಸೃಷ್ಟಿಯಾಯಿತು. ಅವುಗಳೆಂದರೆ: ೧. ಸಾತ್ವಿಕ ಅಹಂಕಾರ ತತ್ವ ೨.ರಾಜಸ ಅಹಂಕಾರ ತತ್ವ ೩.ತಾಮಸ ಅಹಂಕಾರ ತತ್ವ.
ಸಾತ್ವಿಕ ಮತ್ತು ರಾಜಸ ಅಹಂಕಾರತತ್ವದಿಂದ ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ ಹಾಗು ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ತಾಮಸ ಅಹಂಕಾರತತ್ವದಿಂದ ಪಂಚ ಭೂತಗಳ ಹಾಗು ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ಈ ರೀತಿ ನಮಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಯಿತು.
ಈ ಜಗತ್ತಿಗೆ ಮೂಲ ಕಾರಣನಾಗಿ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾಗಿರುವ ಎಲ್ಲರ ಜನಕನಾದ ಭಗವಂತ ಜಗದಾದಿಜ.

No comments:

Post a Comment