Vishnu Sahasranama: ಅನಘೋ ವಿಜಯೋ ಜೇತಾ
146) ಅನಘಃ
ಅಘ ಅಂದರೆ ಪಾಪ, ದುಃಖ, ವ್ಯಸನ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಇಲ್ಲಿ ವ್ಯಸನ ಎಂದರೆ ಚಾಳಿ ಅಥವಾ ಚಟ. ಭಗವಂತನಿಗೆ ಯಾವ ಪಾಪದ ಲೇಪವೂ ಇಲ್ಲ. ಆತ ಸಂಹಾರ ಮಾಡುವುದು ಕಾರುಣ್ಯದಿಂದ ಹೊರತು ದ್ವೇಷದಿಂದಲ್ಲ. ಉದಾಹರಣೆಗೆ ಕೃಷ್ಣ ದ್ರೋಣಾಚಾರ್ಯರನ್ನು "ಅಶ್ವತ್ತಾಮ ಸತ್ತ" ಎಂದು ಧರ್ಮರಾಯನಲ್ಲಿ ಹೇಳಿಸಿ ಕೊಲ್ಲುತ್ತಾನೆ. ಇದರ ಹಿಂದಿರುವ ಕಾರುಣ್ಯ ಅಪಾರವಾದದ್ದು. ದುರ್ಯೋದನನಂತಹ ದುಷ್ಟ, ಸಮಾಜಕಂಟಕ, ದ್ರೋಹಿಯ- ಅನ್ನದ ಋಣಕ್ಕೊಸ್ಕರ, ಪ್ರತಿದಿನ ಹತ್ತು ಸಾವಿರ ಸೈನಿಕರನ್ನು ಸಾಯಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ದ್ರೋಣರನ್ನು, ಪಾಪದ ಕಡಲಿನಿಂದ ರಕ್ಷಿಸಲು ಭಗವಂತ ಆತನನ್ನು ಸಾಯಿಸಿ ರಕ್ಷಿಸುತ್ತಾನೆ. ಇಲ್ಲಿ ಭಗವಂತ ನಿರ್ವಿಕಾರ ಹಾಗು ನಿರ್ಲಿಪ್ತ. ಆತನಿಗೆ ಸಾಯಿಸುವುದು ವ್ಯಸನವಲ್ಲ ಹಾಗು ದುಃಖ-ಪಾಪದ ಲೇಪ ಅವನಿಗಿಲ್ಲ. ಇಂತಹ ಭಗವಂತ ಅನಘ.
147)ವಿಜಯಃ
ಅರ್ಜುನನನ್ನು 'ವಿಜಯ'ಎಂದು ಕರೆಯುತ್ತಾರೆ. ಹೆಚ್ಚು ಯುದ್ದಗಳಲ್ಲಿ ಪಾಲ್ಗೊಂಡು ಕಪ್ಪ-ಕಾಣಿಕೆ ಸಂಗ್ರಹಿಸಿದ್ದರಿಂದ ಆತನಿಗೆ ಈ ಅನ್ವರ್ಥ ನಾಮ. ಸೂಕ್ಷ್ಮವಾಗಿ ನೋಡಿದರೆ ಅತೀ ಹೆಚ್ಚು ಸಂಪತ್ತು ಹಾಗು ಅತಿದೊಡ್ಡ ವಿಜಯ ಪಾಂಡವರಿಗೆ ಭೀಮಸೇನನಿಂದ-ಜರಾಸಂದನ ವದೆಯಿಂದ ಬಂದಿರುವುದು. ಆದರೂ ರೂಢಿಯಲ್ಲಿ ಅರ್ಜುನನನ್ನು 'ವಿಜಯ', 'ಧನಂಜಯ' ಎಂದು ಕರೆಯುತ್ತಾರೆ. ಅರ್ಜುನನಲ್ಲಿ 'ನರ' ನಾಮಕ ಭಗವಂತನ ಸನ್ನಿಧಾನವಿದ್ದದರಿಂದ, ಆಂಜನೇಯ ರೂಪಿ ಪ್ರಾಣದೇವರು ಆತನ ರಥದ ದ್ವಜದಲ್ಲಿದ್ದದರಿಂದ, ಅರ್ಜುನ ವಿಜಯನಾದ. ಭಾಗವತದಲ್ಲಿ ಹೇಳುವಂತೆ ಅರ್ಜುನನ ಹಾಗು ಭೀಮನ ಒಳಗೆ ಕುಳಿತು, ವಿಜಯ ಸಾರಥಿಯಾಗಿ, ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ನಿಜವಾದ ವಿಜಯ. ಪಾಂಡವರನ್ನು ಹೆಜ್ಜೆ ಹೆಜ್ಜೆಗೂ ವಿಜಯ ಪಥದತ್ತ ಕೊಂಡೊಯ್ದ ಭಗವಂತ ವಿಜಯ.
ಇಷ್ಟೇ ಅಲ್ಲದೆ, ರಾಮಾವತಾರದಲ್ಲಿ ರಾವಣ-ಕುಂಭಕರ್ಣನನ್ನು, ನರಸಿಂಹ ಅವತಾರಿಯಾಗಿ ಹಿರಣ್ಯಕಷಿಪುವನ್ನು, ವರಾಹ ಅವತಾರದಲ್ಲಿ ಹಿರಣ್ಯಾಕ್ಷನನ್ನು, ಹೀಗೆ ಅನೇಕ ರಾಕ್ಷಸರನ್ನು ವಿಶಿಷ್ಟವಾದ ರೂಪದಲ್ಲಿ ಜಯಿಸಿದ ಭಗವಂತ ವಿಜಯ.
148 ) ಜೇತಾ
ಜೇತೃ ಎಂದರೆ ಎಲ್ಲವನ್ನು ಗೆದ್ದವನು. ಮೇಲೆ ವಿಜಯ ನಾಮದಲ್ಲಿ ನೋಡಿದಂತೆ ಭಗವಂತ ಎಲ್ಲರನ್ನೂ ಗೆದ್ದವನು. ಎಲ್ಲರನ್ನೂ ಗೆದ್ದು, ಎಲ್ಲರಿಗಿಂತ ಎತ್ತರದಲ್ಲಿದ್ದು, ನಮ್ಮನ್ನು ಎತ್ತರಕ್ಕೇರಿಸುವವನು, ಅರಿಗಳನ್ನು ಗೆದ್ದವನು ಜೇತಾ.
No comments:
Post a Comment