Tuesday, July 20, 2010

Vishnu Sahasranama 166-176


Vishnu Sahasranama ವೀರಹಾ ಮಾಧವೋ ಮಧುಃ , ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ

166) ವೀರಹಾ
ನಮಗೆ ಪೌರುಷ ಕೊಡುವವನು, ಹಾಗು ನಾವು ಪೌರುಷದ ಅಹಂಕಾರ ತೋರಿಸಿದಾಗ, ಅದನ್ನು ಮುರಿಯುವ ಭಗವಂತ, ಪ್ರತೀ ವೀರರ ಒಳಗೆ ಬಲ ದೇವತೆಯಾಗಿ ನಿಂತಿದ್ದಾನೆ. ಹಿಂದೆ ಹೇಳಿದಂತೆ 'ವೀ' ಅಂದರೆ ಪಕ್ಷಿ 'ಇರ' ಎಂದರೆ ಪ್ರಾಣದೇವರು. ಪಕ್ಷಿ ವಾಹನನಾಗಿ, ವಾಯು ದೇವರಲ್ಲಿದ್ದು, ವಿಹರಿಸುವ ಸರ್ವವೀರ ಭಗವಂತ ವೀರಹಾ.
167) ಮಾಧವಃ
ಈ ನಾಮ ಹಿಂದೊಮ್ಮೆ ಬಂದಿದೆ. ಲಕ್ಷ್ಮಿಪತಿ, ಮಧು ವಂಶದಲ್ಲಿ ಅವತರಿಸಿದವ, ಸರ್ವ ಶಬ್ದ ವಾಚ್ಯ, ಸರ್ವ ವೇದ ವಾಚ್ಯ ಇತ್ಯಾದಿ ಅರ್ಥಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಇನ್ನು ಮಾ ಎಂದರೆ ಜ್ಞಾನ. ಭಗವಂತ ಎಲ್ಲಾ ಜ್ಞಾನಗಳ ಸ್ವಾಮಿ. ಸಮಸ್ತ ದೇವತೆಗಳಿಗೆ ಆತನೇ ಲೋಕ ಗುರು. ಅದಕ್ಕಾಗಿ ನಾವು "ಕೃಷ್ಣಂ ಒಂದೇ ಜಗದ್ಗುರು" ಎನ್ನುತ್ತೇವೆ. ನಾವು ಯಾವುದೇ ಗ್ರಂಥ ಅದ್ಯಯನ ಮಾಡುವ ಮೊದಲು "ಸಹನಾವವತು ಸಹನೌಭುನಕ್ತು" ಎನ್ನುತ್ತೇವೆ. ಅಂದರೆ ಗುರು ಶಿಷ್ಯರ ಒಳಗೆ ಭಗವಂತ ಪ್ರವೇಶಿಸಲಿ ಎಂದರ್ಥ. ಹೀಗೆ ಎಲ್ಲಾ ಜ್ಞಾನಗಳ ಸ್ವಾಮಿ, ಜಗದ್ಗುರು, ಭಗವಂತ ಮಾಧವಃ .
168) ಮಧುಃ
ಮಧು ಅಂದರೆ ಆನಂದ. ಭಗವಂತ ಆನಂದದ ಕಡಲು. ಕಡಲಿಗಾದರೂ ಸೀಮೆ ಇದೆ, ಆದರೆ ಭಗವಂತ ಅನಂತ ಆನಂದ ಸ್ವರೂಪ.
169) ಅತೀಂದ್ರಿಯಃ
ಭಗವಂತ ಎಲ್ಲಾಕಡೆ ಇದ್ದರೂ, ಆತ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದಿಲ್ಲ. ಏಕೆಂದರೆ ಆತನದು ನಮ್ಮ ಮಾತು-ಮನಗಳಿಗೆ ನಿಲುಕದ ಸ್ವರೂಪ. ನಾವು ಸಮುದ್ರದ ಜೊತೆಗಿದ್ದೂ ಸಮುದ್ರವನ್ನು ಗ್ರಹಿಸಲಾರದ ಮರಳಿನ ಕಣದಂತೆ. ಯಾವಾಗಲೂ ಭಗವಂತನ ಜೊತೆಗಿದ್ದರೂ ನಮ್ಮ ಇಂದ್ರಿಯ ಆತನನ್ನು ಗ್ರಹಿಸಲು ಸಾಧ್ಯವಿಲ್ಲ. ಇಂತಹ ಭಗವಂತ ಅತೀಂದ್ರಿಯಃ .
170) ಮಹಾಮಾಯಃ
ಭಗವಂತ ಮಹಾನ್ ಮೋಡಿಗಾರ ! ಭಗವಂತ ಪಾಪಿಗಳ ಎದುರೇ ನಿಂತಿದ್ದರೂ, ಅವರು ಆತನನ್ನು ತಿಳಿಯಲಾರರು. ಪ್ರಕೃತಿಮಾತೆ ಲಕ್ಷ್ಮಿ ಮಾಯೆ. ಭಗವಂತ ಮೂಲಪ್ರಕೃತೀಶ್ವರ. ಮಾಯ ಅಂದರೆ ಮಹಿಮೆ, ಇಚ್ಚೆ ಎನ್ನುವ ಅರ್ಥ ಕೂಡ ಪ್ರಚಲಿತದಲ್ಲಿದೆ. ಭಗವಂತನ ಸಂಕಲ್ಪ ಎಂದೂ ಹುಸಿಯಾಗದು. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಅಖಂಡವಾದ ಇಚ್ಚೆಯುಳ್ಳ ಭಗವಂತ ಮಹಾಮಾಯಃ .
171) ಮಹೋತ್ಸಾಹಃ
ಭಗವಂತ ಎಂದೂ ಬತ್ತದ ಉತ್ಸಾಹದ ಚಿಲುಮೆ. ಆತನ ಕಾರ್ಯತತ್ಪರತೆ ಅನಂತವಾದುದು. ಎಂತಹ ವಿಘ್ನ ಬಂದರೂ, ಕೈ ಬಿಡದ ಕಾರ್ಯೋತ್ಸವ.ಯಾವ ಕಾರ್ಯ ಯಾವಾಗ ಆಗಬೇಕೋ, ಅದು ಆತನ ಸಂಕಲ್ಪದಂತೆ ಆಗುತ್ತದೆ. ಚತುರ್ಮುಖ ಕೂಡಾ ಒಮ್ಮೊಮ್ಮೆ ನಿರುತ್ಸಾಹ ತೋರಿಸಬಹುದು, ಆದರೆ ಭಗವಂತ ಮಾತ್ರ ಎಂದೂ ನಿರುತ್ಸಾಹಿ ಅಲ್ಲ. ಆದ್ದರಿಂದ ಆತ ಮಹೋತ್ಸಾಹಃ
172) ಮಹಾಬಲಃ
ಉತ್ಸಾಹ ಮತ್ತು ಬಲ ಒಟ್ಟಿಗಿರುತ್ತದೆ. ಭಗವಂತ ಅಮಿತಬಲ. ಭಗವಂತನಲ್ಲಿ ಬಯಸಿದ್ದನ್ನು ಮಾಡುವ ಅಪಾರ ಶಕ್ತಿಯಿದೆ. ಭಗವಂತನ ಬಯಕೆ ಮತ್ತು ಕ್ರಿಯೆ ಬೇರೆ ಬೇರೆ ಅಲ್ಲ. ಅವನ ಬಯಕೆಯೇ ಅವನ ಕ್ರಿಯೆ.
173) ಮಹಾಬುದ್ಧಿಃ
ಬುದ್ಧಿ ಎಂದರೆ ಜ್ಞಾನ. ಒಂದು ವಸ್ತು ನಿರ್ಮಾಣವಾಗಬೇಕಾದರೆ, ಇಚ್ಚಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಬೇಕು. ಈ ಅಪೂರ್ವವಾದ ಸೃಷ್ಟಿಯನ್ನು ನಿರ್ಮಾಣ ಮಾಡಿದ ಆ ಸರ್ವಜ್ಞ, ಬುದ್ಧಿವಂತರಿಗೆಲ್ಲಾ ಹಿರಿಯ ಬುದ್ಧಿವಂತ. ಇಂತಹ ಮಹಾನ್ ಬುದ್ದಿಶಾಲಿ ಭಗವಂತ ಮಹಾಬುದ್ಧಿಃ
174) ಮಹಾವೀರ್ಯಃ
ಮಹಾವೀರ್ಯ ಎಂದರೆ ಮಹಾನ್ ಪರಾಕ್ರಮಶಾಲಿ. ಸೃಷ್ಟಿ ನಿರ್ಮಾಣ ಮಾಡುವಾಗ ಅನೇಕ ದುಷ್ಟ ಶಕ್ತಿಗಳೂ ನಿರ್ಮಾಣವಾಗುತ್ತವೆ. ಇಡೀ ವಿಶ್ವ ನಿರ್ಮಾಣಕ್ಕೆ ಬೇಕಾದ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ತುಂಬಿರುವವ ಮಹಾವೀರ್ಯಃ
175) ಮಹಾಶಕ್ತಿಃ
ನಮ್ಮಲ್ಲಿರುವ ವೀರ್ಯ (ತಾಕತ್ತು) ಅಭಿವ್ಯಕ್ತವಾಗುವುದನ್ನು ಶೌರ್ಯ ಎನ್ನುತ್ತಾರೆ. ಸೃಷ್ಟಿ ನಿರ್ಮಾಣ ಕಾರ್ಯದಲ್ಲಿ ಅಡ್ಡಿ ಬಂದ ದುಷ್ಟ ಶಕ್ತಿಗಳನ್ನು ಬಗ್ಗು ಬಡಿದ ಭಗವಂತ ಮಹಾಶಕ್ತಿಃ (ವರಾಹ ಅವತಾರ ಇದಕ್ಕೊಂದು ನಿದರ್ಶನ).
176) ಮಹಾದ್ಯುತಿಃ
ಇಡೀ ಜಗತ್ತಿನ ಎಲ್ಲಾ ಬೆಳುಕುಗಳ ಬೆಳಕು ಭಗವಂತ. ಎಲ್ಲಾ ಬೆಳಕುಗಳ ಹಿಂದೆ ಬೆಳಕಾಗಿ ನಿಂತ, ಜ್ಯೋತಿರ್ಮಯ, ಪ್ರಕಾಶ ಸ್ವರೂಪ ಭಗವಂತ, ಮಹಾದ್ಯುತಿಃ.

No comments:

Post a Comment