Thursday, July 22, 2010

Vishnu sahasranama 181-184


ವಿಷ್ಣು ಸಹಸ್ರನಾಮ : ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿಃ
181) ಮಹೇಷ್ವಾಸಃ

ಮಹೇಷ್ವಾಸ(ಮಹಾ+ಇಷು+ಆಸ) ಅಂದರೆ ಮಹಾನ್ ಬಿಲ್ಲು ಹೊತ್ತ ಬಿಲ್ಲೋಜ. ಭಗವಂತನ ಅವತಾರದಲ್ಲಿ ಈ ನಾಮಕ್ಕೆ ಸಂಬಂಧಪಟ್ಟ ಕೆಲವು ನಿದರ್ಶನಗಳನ್ನು ಕಾಣುತ್ತೇವೆ. ಸೀತಾ ಸ್ವಯಂವರದಲ್ಲಿ ಶ್ರೀರಾಮ ಶಿವನ ಧನುಸ್ಸನ್ನು ಮುರಿದಿರುವುದು, ಬಿಲ್ಲ ಹಬ್ಬದಲ್ಲಿ ಶ್ರೀಕೃಷ್ಣ ಕಂಸ ಪೂಜಿಸುತ್ತಿದ್ದ ಶಿವಧನುಸ್ಸನ್ನು ಮುರಿದು, ಕಂಸನ ಸಂಹಾರ ಮಾಡಿರುವುದು, ಶ್ರೀರಾಮ ಪರಶುರಾಮನಿಂದ ಪಡೆದ ವೈಷ್ಣವ ಧನುಸ್ಸನ್ನು ಧರಿಸಿ, ರಾವಣ-ಕುಂಭಕರ್ಣರ ಸಂಹಾರ ಮಾಡಿರುವುದು, ಇತ್ಯಾದಿ.
ಈ ಮೇಲಿನ ಸಂದರ್ಭಗಳಲ್ಲಿ ಯಾರೂ ಎತ್ತಲು ಆಗದ ಶಿವ ಧನುಸ್ಸನ್ನು ಹರಿ ಹೇಗೆ ಎತ್ತಿದ ? ಆ ಬಿಲ್ಲು ಎಷ್ಟು ದೊಡ್ಡದಿತ್ತು ? ಇತ್ಯಾದಿ ಪ್ರಶ್ನೆಗಳು ನಮಗೆ ಬರುತ್ತದೆ. ಬಿಲ್ಲು ಸಾಮಾನ್ಯವಾಗೇ ಇದ್ದರೂ, ಅದರಲ್ಲಿ ಶಿವಶಕ್ತಿ ಸನ್ನಿಧಾನವಿದ್ದದರಿಂದ, ಯಾರಿಂದಲೂ ಅದನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹಿಂದೆ ಹೇಳಿದಂತೆ, ಶಿವಶಕ್ತಿ-ವಿಷ್ಣುಶಕ್ತಿಗಳು ಹಾಲಿನಲ್ಲಿರುವ ಬೆಣ್ಣೆಯಂತೆ, ಎರಡು ಅನ್ಯೋನ್ಯ ಶಕ್ತಿಗಳು. ಧನುರ್ಧಾರಣೆ ಈ ಶಕ್ತಿಗಳ ಸಮಾಗಮದ ಸಂಕೇತ.
ಈ ರೀತಿ ಮಹಾನ್ ಧನುಸ್ಸನ್ನು ಮುರಿದವ, ಮಹಾನ್ ಧನುಸ್ಸನ್ನು ಹಿಡಿದು ದುಷ್ಟಶಕ್ತಿಗಳ ಸಂಹಾರ ಮಾಡಿದವ, ಅರ್ಜುನನ ಒಳಗೆ ನರನಾಮಕನಾಗಿದ್ದು, ಗಾಂಡೀವ ಧನುಸ್ಸಿನಿಂದ ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ಮಹೇಷ್ವಾಸಃ.
182) ಮಹೀಭರ್ತಾ
ಇಲ್ಲಿ ಮಹೀ ಎಂದರೆ ಭೂಮಿ. ಭರ್ತಾ ಎಂದರೆ ಧರಿಸಿದವ ಅಥವಾ ಪತಿ.
ಭಗವಂತನನ್ನು ಭೂ ಮಾತೆಯ ಪತಿ ಎನ್ನುತ್ತಾರೆ. ಈ ಭೂಮಿಯನ್ನು ಸಂಕರ್ಷಣ ಶಕ್ತಿಯ (Gravitational force) ಮೂಲಕ ಹಿಡಿದಿಟ್ಟು ನಿರಂತರ ಸಲಹುವವನು ಮಹೀಭರ್ತಾ.
183) ಶ್ರೀನಿವಾಸಃ
'ಶ್ರೀ' ಅಂದರೆ ಸಿರಿ, ಸಂಪತ್ತು, ಮಾತೆ ಲಕ್ಷ್ಮಿ , ವೇದ ವಿದ್ಯೆಗಳು, ಇತ್ಯಾದಿ. ಭಗವಂತ ಮಾತೆ ಶ್ರೀಲಕ್ಷ್ಮಿಯನ್ನು ನಿರಂತರ ತನ್ನ ಹೃದಯದಲ್ಲಿ ಧರಿಸಿರುತ್ತಾನೆ. ಎಲ್ಲಾ ಸಂಪತ್ತುಗಳ, ಅಮೂಲ್ಯವಾದ ವೇದ-ವಿದ್ಯೆಗಳ ನೆಲೆಯಾದ ಭಗವಂತ-ಶ್ರೀನಿವಾಸಃ
184) ಸತಾಂಗತಿಃ
ಸಾತ್ವಿಕರಿಗೆ ಸಜ್ಜನರಿಗೆ ಸದಾ ಆಶ್ರಯದಾತನಾದ ಭಗವಂತ ಸತಾಂಗತಿಃ .
ಭಗವಂತ ಎಲ್ಲರಿಗೂ ಆಶ್ರಯದಾತ, ಆದರೆ ಆಶ್ರಯದ ಅರಿವು ಇರುವುದು ಕೇವಲ ಸಜ್ಜನರಿಗೆ ಮಾತ್ರ. ಅರಿವೇ ಇರವು. ಆಶ್ರಯದ ಅರಿವಿಲ್ಲದಿದ್ದರೆ ನಾವು ಅಭದ್ರತೆಯ ಭಯದಲ್ಲಿ ಬದುಕುತ್ತೇವೆ. ಆದರೆ ಜ್ಞಾನಿಗಳು ಭಗವಂತನ ಆಶ್ರಯವನ್ನು ಸದಾ ಅನುಭವಿಸುತ್ತಿರುತ್ತಾರೆ. ಏನೇ ಬಂದರು ಭಗವಂತನಿದ್ದಾನೆ ಎನ್ನುವ ಅಚಲ ವಿಶ್ವಾಸದಲ್ಲಿ ಸಂತೋಷವಾಗಿ ಬದುಕುತ್ತಾರೆ.

No comments:

Post a Comment