Wednesday, July 21, 2010

Vishnu sahasranama 177-180


ವಿಷ್ಣು ಸಹಸ್ರನಾಮ: ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್

177) ಅನಿರ್ದೇಶ್ಯವಪುಃ

ನಿರ್ದೇಶ ಅಂದರೆ "ಒಂದು ವಸ್ತು ಹೀಗಿದೆ ಎಂದು ಶಬ್ದಗಳ ಮೂಲಕ ಹೇಳಲು ಸಾಧ್ಯವಾದ ಸ್ವರೂಪ". ಆದರೆ ಭಗವಂತನನ್ನು ಶಬ್ಧಗಳ ಮೂಲಕ ಸಂಪೂರ್ಣವಾಗ ವರ್ಣಿಸಲು ಅಸಾದ್ಯ. ಭಗವಂತನಿಗೆ ನಾವು ಗ್ರಹಿಸಬಹುದಾದ ಆಕಾರವಿಲ್ಲ, ಆದರೆ ಸರ್ವಸಮರ್ಥನಾದ ಭಗವಂತ ತಾನು ಬಯಸಿದ ರೂಪ ಧಾರಣೆ ಮಾಡಬಲ್ಲ. ನಮಗೆ ಆತ್ಮಸಾಕ್ಷಾತ್ಕಾರವಾದಾಗ ಜ್ಞಾನಾನಂದಮಯನಾದ ಭಗವಂತನ ಆಕಾರದ ಕಿಂಚಿತ್ ರೂಪವನ್ನು ನಾವೂ ನೋಡಲು ಸಾದ್ಯ. ಈ ರೀತಿ ನಮ್ಮ ಜ್ಞಾನದ ಮಿತಿಯಿಂದಾಚೆಗಿನ ಶರೀರವುಳ್ಳ ಭಗವಂತ ಅನಿರ್ದೇಶ್ಯವಪುಃ
178) ಶ್ರೀಮಾನ್
ಭಗವಂತ ಶ್ರೀಮಾನ್. ಇಲ್ಲಿ ಶ್ರೀ ಅಂದರೆ ಸಂಪತ್ತು, ಚೆಲುವು ಅಥವಾ ಸೌಂದರ್ಯ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಚಲುವಿನ ಮೂರ್ತಿ. ಆತನ ಚಲುವಿಗೆ ಕೃಷ್ಣಾವಾತಾರವೇ ಸಾಕ್ಷಿ. ಕೃಷ್ಣನ ಚಲುವಿಗೆ ಆಕರ್ಷಕರಾಗದವರಿಲ್ಲ. ಭಾಗವತದಲ್ಲಿ ಹೇಳುವಂತೆ, ಗೋವುಗಳೂ ಕೂಡಾ ಹುಲ್ಲು ಮೇಯುವುದನ್ನು ನಿಲ್ಲಿಸಿ, ಸ್ಥಬ್ದವಾಗಿ ಆತನನ್ನೇ ನೋಡುತ್ತಿದ್ದವು! ಅಂತಹ ಚಲುವಿನ ಮೂರ್ತಿ ಆತ. ಇಂತಹ ಚಲುವ ಭಗವಂತ ಶ್ರೀಮಾನ್.
ಇನ್ನು ಭಗವಂತ ನಮ್ಮಲ್ಲಿರುವ ಐದು ಮಹಾನ್ ಸಂಪತ್ತಿನ ಒಡೆಯ. ಅವುಗಳೆಂದರೆ ಕಣ್ಣು, ಕಿವಿ, ಮೂಗು, ಮನಸ್ಸು,ಉಸಿರು. ಈ ಐದು ಅಮೂಲ್ಯವಾದ "ಶ್ರೀ"ಗಳನ್ನು ನಮಗೆ ಕರುಣಿಸಿದ,ಲಕ್ಷ್ಮೀಪತಿಯಾದ, ಸರ್ವ ವೇದ-ವಿದ್ಯೆಗಳ ಸ್ವಾಮಿಯಾದ ಭಗವಂತ ಶ್ರೀಮಾನ್.
179) ಅಮೇಯಾತ್ಮಾ
ಭಗವಂತ ನಮ್ಮ ಅಳತೆಗೆ ಎಟುಕುವವನಲ್ಲ. ಆತನನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲ. He is smaller than smallest and bigger than biggest! ಪ್ರಪಂಚ ಸೃಷ್ಟಿ ಮೊದಲು, ಸಂಹಾರದ ನಂತರ, ಎಲ್ಲಾ ಕಾಲದಲ್ಲಿರುವ ಭಗವಂತ ಅಮೇಯಾತ್ಮಾ.
180) ಮಹಾದ್ರಿಧೃಕ್
ಮಹಾದ್ರಿಧೃಕ್ ಅಂದರೆ ಮಹಾ ಪರ್ವತವನ್ನು ಹೊತ್ತವನು ಎಂದರ್ಥ. ಭಗವಂತ ಬೆಟ್ಟವನ್ನು ಹೊತ್ತಿರುವ ಪ್ರಸಂಗ ಆತನ ಕೂರ್ಮಾವತಾರದಲ್ಲಿ ಹಾಗು ಕೃಷ್ಣಾವತಾರದಲ್ಲಿ ನೋಡುತ್ತೇವೆ. ಸಮುದ್ರ ಮಂಥನ ಕಾಲದಲ್ಲಿ ಮಂದರ ಪರ್ವತವನ್ನು ಕೂರ್ಮಾವತಾರಿಯಾಗಿ ಎತ್ತಿ ಹಿಡಿದ ಭಗವಂತ ಮಹಾದ್ರಿಧೃಕ್. ಅದೇ ರೀತಿ, ಗೋವರ್ದನ ಗಿರಿಯನ್ನು ತನ್ನ ಕಿರಿಬೆರಳಲ್ಲಿ ಎತ್ತಿ, ಇಂದ್ರನ ಅಹಂಕಾರವನ್ನು ಮುರಿದು, ಗೂಪೂಜೆ ಮತ್ತು ಗಿರಿಪೂಜೆಯನ್ನು ಆಚರಣೆಗೆ ತಂದ ಭಗವಂತ ಮಹಾದ್ರಿಧೃಕ್.
ಸಮುದ್ರ ಮಂಥನ ನಮ್ಮ ಜೀವನಕ್ಕೆ ಸಂಬಂದಪಟ್ಟ ಕಥೆ ಕೂಡಾ ಹೌದು. ಮನಸ್ಸು ಎಂಬ ಮಂದರ ಪರ್ವತದಿಂದ, ಶಾಸ್ತ್ರವೆಂಬ ಕಡಲನ್ನು ಮಂಥನ ಮಾಡುವಾಗ, ನಮ್ಮ ಮನಸ್ಸು ಪತನವಾಗದಂತೆ ಭಗವಂತ ಎತ್ತಿ ಹಿಡಿಯುತ್ತಾನೆ. ಈ ರೀತಿ ಶಾಸ್ತ್ರಾದ್ಯಾಯನದಲ್ಲಿ ಮೊದಲು ಹೊರ ಬರುವ ವಿಷ "ಸಂಶಯ ಅಥವಾ ಅಪನಂಬಿಕೆ", ನಂತರ ಬರುವ ಕಾಮದೇನು ಕಲ್ಪವೃಕ್ಷ "ಸಂಪತ್ತು" . ಈ ಸಂಪತ್ತಿನ ಸೆಳೆತದಿಂದ ಆಚೆ ಬಂದು, ಶಾಸ್ತ್ರ ಮಂಥನ ಮುಂದುವರಿಸಿದಾಗ, ತತ್ವಜ್ಞಾನವೆಂಬ ಅಮೃತ ದೊರೆಯುತ್ತದೆ. ಸಂಶಯವೆಂಬ ವಿಷದಿಂದ ನಮ್ಮನ್ನು ಪಾರುಮಾಡುವವನು ಮನೋಭಿಮಾನಿ ಶಿವ . ನಮ್ಮ ಮನಸ್ಸನ್ನು ನಿರಂತರವಾಗಿ ಎತ್ತಿ ಹಿಡಿದು ನಿಲ್ಲಿಸುವ ಭಗವಂತ ಮಹಾದ್ರಿಧೃಕ್.
ನಮ್ಮಲ್ಲಿ ಗೋ(ವೇದ-ಜ್ಞಾನ) ವೃದ್ದಿ (ವರ್ಧನ) ಆದಾಗ ಭಗವಂತ ನಮ್ಮನ್ನು ಎತ್ತಿ ಹಿಡಿದು, ಅಹಂಕಾರದಿಂದ ಮುಕ್ತಿ ಕರುಣಿಸುತ್ತಾನೆ. ಇದು ಭಗವಂತನ ಗೋವರ್ಧನ ಗಿರಿಧಾರಣೆಯ ಮೂಲ ಸಂದೇಶ.

No comments:

Post a Comment