Saturday, July 17, 2010

Vishnu sahasranama 158-160


Vishnu sahasranama ಸಂಗ್ರಹಃ ಸರ್ಗೋ ಧೃತಾತ್ಮಾ

158) ಸಂಗ್ರಹಃ
ನಮ್ಮ ಮನಸ್ಸಿನ ಶಕ್ತಿ ಸೀಮಿತ. ನಮಗೆ ಕೇವಲ ಸತ್ಯವನ್ನು ಮಾತ್ರ ಗ್ರಹಿಸುವ ಶಕ್ತಿ ಇಲ್ಲ. ಕೆಲವೊಮ್ಮೆ ನಾವು ಅಸತ್ಯವನ್ನು ಸತ್ಯವನ್ನಾಗಿ ಗ್ರಹಿಸುತ್ತೇವೆ. ಆದರೆ ಯಾವುದೇ ವಿಷಯವನ್ನು ನಿಶ್ಚಿತವಾಗಿ, ತದ್ವತ್ತಾಗಿ, ವಿಪರೀತ ಜ್ಞಾನದ ಸ್ಪರ್ಶವಿಲ್ಲದೆ, ಯಥಾರ್ತವಾಗಿ ಗ್ರಹಿಸಬಲ್ಲ ಭಗವಂತ ಸಂಗ್ರಹಃ
ನಮಗೆ ಗ್ರಹಣ ಶಕ್ತಿಯನ್ನು ದಯಪಾಲಿಸಿದ, ನಾವು ಜಾರಿ ಬಿದ್ದಾಗ, ಕೈಹಿಡಿದು ನಮ್ಮನ್ನು ಮೇಲಕ್ಕೆತ್ತಿ, ಆತ್ಮೀಯವಾಗಿ ಸ್ವೀಕರಿಸಿ, ಅಜ್ಞಾನವನ್ನು ತೊಲಗಿಸಿ, ಜ್ಞಾನವನ್ನು ಕೊಡುವ ಭಗವಂತ ಸಂಗ್ರಹಃ
ಪ್ರಳಯ ಕಾಲದಲ್ಲಿ ಎಲ್ಲಾ ಜೀವರನ್ನು ತನ್ನ ಉದರದಲ್ಲಿ ಸಂಗ್ರಹಿಸಿ, ಸೃಷ್ಟಿ ಕಾಲದಲ್ಲಿ ಪುನಃ ಆಯಾ ಜೀವಗಳ ಕರ್ಮಾನುಸಾರವಾಗಿ ಮರುಸೃಷ್ಟಿ ಮಾಡುವ ಭಗವಂತ ಸಂಗ್ರಹಃ.
159) ಸರ್ಗಃ
ಸರ್ಗ ಎಂದರೆ ಎಲ್ಲವನ್ನು ಸೃಷ್ಟಿಮಾಡುವ ಶಕ್ತಿ. ಸೃಷ್ಟಿ ಎಂದರೆ ಸ್ವರೂಪೋತ್ಪತಿ, ಆಕಾಶದ ಸೃಷ್ಟಿ ಎಂದರೆ ಏನೂ ಇಲ್ಲದ ಆಕಾಶದಲ್ಲಿ ಎಲ್ಲವನ್ನು ತುಂಬಿ ಹೊಸ ರೂಪ ಕೊಡುವುದು. ಕಾಲದ ಸೃಷ್ಟಿ ಎಂದರೆ, ಕಾಲ ಎನ್ನುವ ಅಖಂಡವಾದದ್ದನ್ನು ಸೂರ್ಯ ಚಂದ್ರರ ಸೃಷ್ಟಿ ಮುಖೇನ, ಅನೇಕ ಭಾಗಗಳನ್ನಾಗಿ ಮಾಡಿ ಹೊಸ ರೂಪ ಕೊಡುವುದು. ಹೀಗೆ ಇಡೀ ವಿಶ್ವದ ಸೃಷ್ಟಿಕರ್ತ ಭಗವಂತ ಸರ್ಗಃ
160) ಧೃತಾತ್ಮಾ
ಧೃತಾತ್ಮಾ ಎಂದರೆ ಎಲ್ಲವನ್ನು ಧರಿಸಿದವನು ಎಂದರ್ಥ. ಆತ ಬಿಂಬ ರೂಪನಾಗಿ, ಅನೇಕರೂಪಿಯಾಗಿ, ನಮ್ಮೊಳಗೇ ಇದ್ದಾನೆ. ಈ ದೇಹದ ಪಂಚ ಕೋಶಗಳಲ್ಲಿ, ಪಂಚ ಜ್ಞಾನೇಂದ್ರಿಯಗಳಲ್ಲಿ, ಪಂಚ ಕರ್ಮೇಂದ್ರಿಯಗಳಲ್ಲಿ, ಪಂಚ ರೂಪನಾಗಿ ಭಗವಂತನಿದ್ದಾನೆ.ಸಪ್ತ ಧಾತುಗಳಲ್ಲಿ ಸಪ್ತರೂಪನಾಗಿ, 360 ಅಸ್ಥಿಗಳಲ್ಲಿ , 72,000 ನಾಡಿಗಳಲ್ಲಿ, ಅನಂತ ರೂಪನಾಗಿ ವ್ಯಾಪಿಸಿದ್ದಾನೆ. ಪ್ರತಿಯೊಂದು ಮಾನವ ಶರೀರದಲ್ಲೂ ಭಗವಂತನ ಅನಂತ ರೂಪವಡಗಿದೆ. ಆದ್ದರಿಂದ ಇಂತಹ ದೇವಾಲಯವನ್ನು ಚಿದ್ರಗೊಳಿಸುವ ಆತ್ಮಹತ್ಯೆ ಮಹಾ ಪಾಪ. ಜಗತ್ತಿನ ಇತರ ಜೀವ ಜಂತುಗಳಲ್ಲಿ ಭಗವಂತನಿದ್ದರೂ ಕೂಡಾ, ಪೂರ್ಣತೆ ಪಡೆಯದ ಇತರ ಜೀವಗಳಿಗಿಂತ, ಮನುಷ್ಯನಲ್ಲಿ ಆತನ ಅಭಿವ್ಯಕ್ತ ಅತೀ ಹೆಚ್ಚು. ಈ ರೀತಿ ನಮ್ಮೊಳಗಿದ್ದು ಎಲ್ಲಾ ದೇವತೆಗಳನ್ನು ಧಾರಣೆ ಮಾಡಿ, ಎಲ್ಲಾ ಕಡೆ ತುಂಬಿರುವ ಆ ಭಗವಂತ ಧೃತಾತ್ಮಾ

No comments:

Post a Comment