Vishnu Sahasranama ಉಪೇಂದ್ರ
151) ಉಪೇಂದ್ರ
ಉಪೇಂದ್ರ ಎನ್ನುವ ಭಗವಂತನ ನಾಮ ತುಂಬಾ ರೋಚಕವಾದ ಅರ್ಥವನ್ನು ಕೊಡುವ ನಾಮ.
ಹಿಂದೆ ನೋಡಿದಂತೆ(39ನೇ ನಾಮ ನೋಡಿ) ಅದಿತಿ-ಕಶ್ಯಪರ ಹನ್ನೆರಡು ಮಂದಿ ಮಕ್ಕಳಲ್ಲಿ ಒಬ್ಬ ಇಂದ್ರ ಹಾಗು ಕೊನೇಯ ಮಗ ವಾಮನ ರೂಪಿ ಭಗವಂತ. ಇಲ್ಲಿ ಇಂದ್ರನ ತಮ್ಮನಾಗಿ ಹುಟ್ಟಿದ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. "ಅಜಗನ್ಯಹ ಜಗನ್ಯಜಃ" ಅಂದರೆ ಯಾರಿಗೂ ಚಿಕ್ಕವನಲ್ಲ ಆದರೆ ಹುಟ್ಟಿನಲ್ಲಿ ಎಲ್ಲರಿಗಿಂತ ಚಿಕ್ಕವ ವಾಮನ.
ಚತುರ್ಮುಖನ ಒಂದು ದಿನ ಅಂದರೆ 432 ಕೋಟಿ ವರ್ಷಗಳ ಹಗಲು(ಸೃಷ್ಟಿ) ಹಾಗು 432 ಕೋಟಿ ವರ್ಷಗಳ ರಾತ್ರಿ (ಪ್ರಳಯ). ಈ 432 ಕೋಟಿ ವರ್ಷಗಳ ಹಗಲಿನಲ್ಲಿ 14 ಮನ್ವಂತರಗಳಿರುತ್ತವೆ. ಪ್ರತೀ ಮನ್ವಂತರಕ್ಕೆ ಒಬ್ಬ ಇಂದ್ರ. ಹಾಗು ಪ್ರತೀ ಮನ್ವಂತರಕ್ಕೆ ಒಮ್ಮೆ ಸಂಪೂರ್ಣ ದೇವಗಣ ಬದಲಾಗುತ್ತದೆ. ಪ್ರತೀ ಮನ್ವಂತರದಲ್ಲಿ ಇಂದ್ರನಿಗೆ ಸಹಾಯಕನಾಗಿ ಭಗವಂತ ಅವತರಿಸುತ್ತಾನೆ. ಹೀಗೆ ಇಂದ್ರನ ಬೆಂಬಲಕ್ಕಾಗಿ ಅವತರಿಸುವ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. ಮೊದಲನೇ ಮನ್ವಂತರದಲ್ಲಿ ಭಗವಂತ ಸ್ವತಃ ಇಂದ್ರನಾಗಿದ್ದದರಿಂದ ಅಲ್ಲಿ ಉಪೇಂದ್ರ ಕಾಣಸಿಗುವುದಿಲ್ಲ. ವೈವಸ್ವತ ಮನ್ವಂತರದ ಉಪೇಂದ್ರರೂಪ ವಾಮನ. ಆದ್ದರಿಂದ, ಇಂದ್ರನಿಂದ ಬಲಿ ರಾಜ್ಯವನ್ನು ಕಿತ್ತುಕೊಂಡಾಗ, ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿ, ಇಂದ್ರನ ಸಂಪತ್ತನ್ನೂ ಮರಳಿ ಇಂದ್ರನಿಗೆ ಕೊಟ್ಟವ ಉಪೇಂದ್ರನಾದ ವಾಮನ ರೂಪಿ ಭಗವಂತ.
ಇನ್ನು ಉಪೇಂದ್ರ ಎನ್ನುವ ನಾಮದಲ್ಲಿ 'ಉಪ' ಅಂದರೆ 'ಉಪರಿ' ಅಂದರೆ ಉತ್ಕೃಷ್ಟ ಎಂದರ್ಥ. ಈ ಸಂಸ್ಕೃತ ಶಬ್ದ ಇಂಗ್ಲೀಷಿನಲ್ಲಿ up ಅಥವಾ upper ಎಂದಾಯಿತು. ಜರ್ಮನ್ ಭಾಷೆಯಲ್ಲಿ Über (Ueber ) ಎಂದಾಯಿತು. ಹಿಂದಿಯಲ್ಲಿ ऊपर ಎಂದಾಯಿತು. ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಉಪ ಎಂದರೆ ಎತ್ತರ ಎನ್ನುವ ಅರ್ಥವನ್ನು ಅನೇಕ ಕಡೆ ಬಳಸುತ್ತೇವೆ. ಉದಾಹರಣೆಗೆ 'ಉಪನಿಷತ್ತು ' ಅಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ ಗ್ರಂಥ, 'ಉಪನಯನ' ಅಂದರೆ ಜ್ಞಾನಗಳಿಸಲು ಬೇಕಾದ ಎತ್ತರಕ್ಕೆ ಏರುವ ಕ್ರಿಯೆ, 'ಉಪವಾಸ 'ಅಂದರೆ ಮನಸ್ಸನ್ನು ಎತ್ತರಕ್ಕೇರಿಸಲು ನಮ್ಮ ಹೊಟ್ಟೆಯನ್ನು ಖಾಲಿ ಇಡುವುದು, ಇತ್ಯಾದಿ. ಆದ್ದರಿಂದ ಇಲ್ಲಿ ಉಪೇಂದ್ರ ಎಂದರೆ ಸ್ವರ್ಗದ ಒಡೆಯನಾದ ಇಂದ್ರನಿಗಿಂತ ಮೇಲಿರುವ, ಮೂರುಲೋಕದ ಒಡೆಯನಾದ, ಬ್ರಹ್ಮಾಂಡ ನಾಯಕ ಭಗವಂತ ಎಂದರ್ಥ.
No comments:
Post a Comment