Tuesday, August 3, 2010

Vishnu sahasranama 233-236

ವಿಷ್ಣು ಸಹಸ್ರನಾಮ: ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ
233) ಅಹಃಸಂವರ್ತಕಃ

ಅಹಃ ಎನ್ನುವುದನ್ನು 'ಅಹಹ' ಹಾಗು ಅಹಂ ಎಂದು ಎರಡು ರೂಪದಲ್ಲಿ ಅರ್ಥೈಸಬಹುದು. ಬೆಳಕು ಹಾಗು ಬೆಳಕಿಗೆ ಕಾರಣಕರ್ತ ಸೂರ್ಯ 'ಅಹಹ' ಹಾಗು ನಾವು ಯಾವುದನ್ನು ಬಿಟ್ಟು ಇರಲು ಅಸಾದ್ಯವೋ ಅದು 'ಅಹಂ'. ಗೀತೆಯಲ್ಲಿ ಹೇಳುವಂತೆ:
ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಂ (ಅ-೧೦, ಶ್ಲೋ-೩೯)
ಅಂದರೆ "ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ-ತಾನಾಗಿ ಇಲ್ಲ".
ಹೀಗೆ ಪಿಂಡಾಂಡ ಹಾಗು ಬ್ರಹ್ಮಾಂಡದಲ್ಲಿರುವ ಪ್ರವರ್ತಕ ಭಗವಂತ ಅಹಃಸಂವರ್ತಕಃ.
234) ವಹ್ನಿ
ವಹ್ನಿ ಎಂದರೆ ವಾಹನ ಅಥವಾ ಕೊಂಡೋಯ್ಯುವವ. ನಮ್ಮ ಪಾಪ ಪುಣ್ಯಕ್ಕನುಸಾರವಾಗಿ ನಾವು ಯಾವ ಎತ್ತರಕ್ಕೇರಬೇಕೋ ಅಲ್ಲಿಗೆ ಕೊಂಡೋಯ್ಯುವವ. ಮೋಕ್ಷ ಯೋಗ್ಯ ಜೀವರನ್ನು ಮೋಕ್ಷಕ್ಕೆ ಕೊಂಡೋಯ್ಯುವ ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳ ನಿಯಾಮಕನಾದ ಭಗವಂತ ವಹ್ನಿ.
235) ಅನಿಲಃ
ಅನಿಲ ಎಂದರೆ ಪಂಚಭೂತಗಳಲ್ಲಿ ಒಂದಾದ "ಗಾಳಿ" ಎನ್ನುವುದು ರೂಡಾರ್ಥ. ಆದರೆ ಇದರ ಶಬ್ದನಿಷ್ಪತ್ತಿ (Etymological meaning) ತೀರಾ ಭಿನ್ನವಾದ ಅರ್ಥವನ್ನು ಕೊಡುತ್ತದೆ. "ನಿಲ" ಎಂದರೆ "ನಿಲಯನ". ಅಂದರೆ ನೆಲೆ ಅಥವಾ ಆಶ್ರಯ. ಭಗವಂತ "ಅ-ನಿಲ", ಎಂದರೆ ಸರ್ವರಿಗೂ ನೆಲೆಯಾಗಿ ಕಾಪಾಡುವ ಭಗವಂತ ಸ್ವಯಂ ಇನ್ನೊಬ್ಬರ ಆಶ್ರಯದಲ್ಲಿರುವವನಲ್ಲ. ಆತ ಅನಿಲಃ.
236) ಧರಣೀಧರಃ
ಧರಣೀಧರ ಎಂದರೆ ಭೂಮಿಯನ್ನು ಹೊತ್ತವನು. ಭಗವಂತ ವಾಮನಾವತಾರದಲ್ಲಿ ಕಕ್ಷೆ ತಪ್ಪಿದ್ದ ಭೂಮಿಯನ್ನು ಪುನಃ ಕಕ್ಷೆಯಲ್ಲಿಟ್ಟು ರಕ್ಷಿಸಿದ ಕರುಣಾಮಯಿ. ಸರ್ವ ಗ್ರಹ-ಗೋಲವನ್ನು ನಿರ್ದಿಷ್ಟವಾಗಿ ಹಿಡಿದಿಟ್ಟು ನಡೆಸುವ ಭಗವಂತ ಧರಣೀಧರಃ.

Monday, August 2, 2010

Vishnu sahasranama 229-232

ವಿಷ್ಣು ಸಹಸ್ರನಾಮ : ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ
229) ಆವರ್ತನಃ

ಆವರ್ತನ ಎಂದರೆ ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುತ್ತಿರುವವನು ಎಂದರ್ಥ. ಈ ವಿಶ್ವ ಎಂದೋ ಒಮ್ಮೆ ಸೃಷ್ಟಿಯಾಯಿತು, ಇನ್ನು ಎಷ್ಟೋ ಕೋಟಿ ವರ್ಷಗಳ ನಂತರ ಪ್ರಳಯವಾಗಿ ನಾಶವಾಗುತ್ತದೆ. ಯಾವುದಕ್ಕೆ ಆದಿ ಇದೆಯೋ ಅದಕ್ಕೆ ಅಂತ್ಯ ಕೂಡಾ ಇದೆ. ೩೧,೧೦೪ ಸಾವಿರ ಕೋಟಿ ವರ್ಷಗಳಿಗೊಮ್ಮೆ ಮಹಾ ಪ್ರಳಯವಾಗುತ್ತದೆ. ಆಗ ಈ ಕಣ್ಣಿಗೆ ಕಾಣುವ ಸೃಷ್ಟಿ ನಾಶವಾಗುತ್ತದೆ. ಪುನಃ ೩೧,೧೦೪ ಸಾವಿರ ಕೋಟಿ ವರ್ಷಗಳ ನಂತರ ಮರು ಸೃಷ್ಟಿಯಾಗುತ್ತದೆ. ಈ ಸೃಷ್ಟಿ-ಪ್ರಳಯ ಎನ್ನುವ ಕ್ರಿಯೆ ನಿರಂತರ. ಈ ಮಹಾ ಪ್ರಳಯವಲ್ಲದೆ ೪೩೨ ಕೋಟಿ ವರ್ಷಕ್ಕೊಮ್ಮೆ ಮದ್ಯಮ ಪ್ರಳಯ ಹಾಗು ಸುಮಾರು ೩೧ ಕೋಟಿ ವರ್ಷಕ್ಕೊಮ್ಮೆ ಚಿಕ್ಕ ಪ್ರಳಯ. ಈ ರೀತಿ ಸೃಷ್ಟಿ-ಪ್ರಳಯಗಳು ಆವರ್ತನಗೊಳ್ಳುತ್ತವೆ. ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುವ ಭಗವಂತ ಆವರ್ತನಃ. ಈ ಕಾರಣಕ್ಕಾಗಿ ಭಗವಂತನನ್ನು “ಅನಂತ ಕೋಟಿ ಬ್ರಹ್ಮಾಂಡ ನಾಯಕ” ಎನ್ನುತ್ತಾರೆ. ಈ ಸೃಷ್ಟಿಯ ನಿಯಾಮಕ ಶಕ್ತಿಗಳು ನಿವೃತ್ತಿಯಾದ ಮೇಲೆ ನಿರಂತರವಾಗಿ ಅನಾದಿ ಅನಂತಕಾಲದವರೆಗೆ ಆವೃತ್ತಿಯಾಗುತ್ತಿರುತ್ತಾರೆ. ಪ್ರತಿಯೊಂದು ಶಕ್ತಿಯೊಳಗೆ ಭಗವಂತ ನಿಯಾಮಕನಾಗಿ ಆವರ್ತನಾಗುತ್ತಿರುತ್ತಾನೆ. ಆವರ್ತ ಎಂದರೆ "ಸುಳಿ" ಎನ್ನುವ ಇನ್ನೊಂದು ಅರ್ಥವಿದೆ. ಬದುಕಿನಲ್ಲಿ ಆಗಾಗ ನಾವು ಆಪತ್ತಿನ ಸುಳಿಗೆ ಸಿಕ್ಕಿಹಾಕಿಕೊಂಡಾಗ, ಮುಂದಾಳಾಗಿ ನಮ್ಮನ್ನು ಪಾರುಮಾಡುವ ("ಆವರ್ತ-ನಯತಿ") ಭಗವಂತ ಆವರ್ತನಃ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಯ ಸುಳಿ ಇದ್ದೇ ಇರುತ್ತದೆ. ದೇವಾದಿ ದೇವತೆಗಳಿಗೂ ಇದು ತಪ್ಪಿದ್ದಲ್ಲ. ಇದಕ್ಕೆ ಉತ್ತಮ ಉದಾಹರಣೆ ಯುದಿಷ್ಟಿರ ಹಾಗು ದ್ರೌಪದಿ. ಸ್ವತಃ ಧರ್ಮರಾಯನ ಅವತಾರಿಯಾದ ಯುದಿಷ್ಟಿರ, ಭಾರತಿಯ ಅವತಾರಿಣಿ ದ್ರೌಪದಿ ಪಟ್ಟ ಕಷ್ಟ ನಮಗೆಲ್ಲ ಗೊತ್ತೇ ಇದೆ. ಭಗವಂತ ನಮ್ಮ ಜೀವಿತ ಕಾಲದಲ್ಲಿ ನಮಗೆ ಕೊಡುವ ಪಾತ್ರವನ್ನು ನಾವು ನಮ್ಮ ಕರ್ತವ್ಯವೆಂದು ನಿಭಾಯಿಸಬೇಕು. ಜೀವನದಲ್ಲಿ ಏನು ಬರುತ್ತದೋ ಅದನ್ನು ಆಸ್ವಾದಿಸಬೇಕು. ಅದನ್ನು ಹೊಂದಿಸಿಕೊಂಡು ನೆಡೆಯುವುದೇ ಜೀವನ. ಆವರ್ತನನಾದ ಭಗವಂತ ಸದಾ ನಮ್ಮ ರಕ್ಷಣೆ ಮಾಡುತ್ತಿರುತ್ತಾನೆ ಎನ್ನುವ ನಂಬಿಕೆ ‘ಭಗವಂತನ ಶ್ರೀರಕ್ಷೆ’
230) (ಅ)ನಿವೃತ್ತಾತ್ಮಾ
ಈ ನಾಮವನ್ನು ನಿವೃತ್ತಾತ್ಮಾ ಹಾಗು ಅನಿವೃತ್ತಾತ್ಮಾ ಎನ್ನುವ ಎರಡು ರೂಪದಲ್ಲಿ ಉಚ್ಚರಿಸಬಹುದು. ಯಾವ ನಂಟೂ ಇಲ್ಲದೆ ಯಾವುದಕ್ಕೂ ಅಂಟಿಕೊಳ್ಳದ ನಿಷ್ಪಕ್ಷಪಾತಿ ಹಾಗು ಯಾರಿಂದ ನಾವು ನಿವೃತ್ತಿ ಕಡೆ ತಿರುಗಬಹುದೋ ಅವನು ನಿವೃತ್ತಾತ್ಮಾ.ಇನ್ನು ಅನಿವೃತ್ತಾತ್ಮಾ ಅನ್ನುವ ನಾಮದಲ್ಲಿ 'ಅನಿ' ಎಂದರೆ 'ಜೀವಿ'. ಸರ್ವ ಜೀವಿಗಳಲ್ಲಿ ಅಂತರ್ಯಾಮಿಯಾಗಿ ಕುಳಿತಿರುವ ಭಗವಂತ ಅನಿವೃತ್ತಾತ್ಮಾ. ಪ್ರಾಣದೇವರನ್ನು 'ಅನಿ' ಎಂದು ಕರೆಯುತ್ತಾರೆ. ಯಾವಾಗಲೂ ಪ್ರಾಣದೇವರನ್ನು ತನ್ನ ಅಂತರಂಗದ ಸಚಿವನಾಗಿರಿಸಿಕೊಂಡಿರುವ ಭಗವಂತ ಅನಿವೃತ್ತಾತ್ಮಾ.

231) ಸಂವೃತಃ

ಹೃದಯಗುಹೆಯೊಳಗೆ ಅಡಗಿ ಕುಳಿತವನು; ಸಮೀಚೀನವಾದ ಸದ್ಗುಣಗಳ ಸಾಗರನಾದ ಭಗವಂತ ಸಂವೃತಃ.

232) ಸಂಪ್ರಮರ್ದನಃ

ಸಂ+ಪ್ರ+ಮರ್ದನ-ಸಂಪ್ರಮರ್ದನ; ಏಕಾಕ್ಷರ ಕೋಶದಲ್ಲಿ ವಿಷ್ಣುವಾಚಕ ಹನ್ನೊಂದು ನಾಮಗಳಿವೆ; ಅವುಗಳೆಂದರೆ: ಅ,ಕಾ, ಯ, ಪ್ರ, ವಿ, ಸಂ, ಭೂ, ಮಾ, ಸ, ಕ ಮತ್ತು ಹ. ಈ ಪ್ರತಿಯೊಂದು ಪದಕ್ಕೂ ವಿಶಿಷ್ಟವಾದ ಅರ್ಥವಿದೆ. ಸಾಮಾನ್ಯವಾಗಿ ಉಪಸರ್ಗ ಧಾತುವಿನೊಂದಿಗೆ ಸೇರಿದಾಗ ಧಾತುವಿನಲ್ಲಿ ನಿಗೂಡವಾಗಿ ಅಡಗಿರುವ ಅರ್ಥ ವ್ಯಂಜನವಾಗುತ್ತದೆ. ಉದಾಹರಣೆಗೆ "ಹಾರ" ಇದಕ್ಕೆ 'ಸಂ' ಸೇರಿದರೆ ಸಂಹಾರ, 'ಪ್ರ' ಸೇರಿದರೆ ಪ್ರಹಾರ, ವಿ ಸೇರಿದರೆ ವಿಹಾರ! ಹೀಗೆ ಇಲ್ಲಿ 'ಸಂ' ಎಂದರೆ ಸಂಪೂರ್ಣವಾದ, ಸಮಾನವಾದ ಎನ್ನುವ ಅರ್ಥವನ್ನು ಕೊಡುತ್ತದೆ. 'ಪ್ರ' ಎಂದರೆ ಪ್ರಕೃಷ್ಟವಾದ ಅರಿವು. ಆದ್ದರಿಂದ ಸಂಪ್ರಮರ್ದನಃ ಎಂದರೆ ನಮಗೆ ಯಾವುದೇ ತಾರತಮ್ಯವಿಲ್ಲದೆ, ಪರಿಪೂರ್ಣವಾದ ಅರಿವನ್ನು ಕೊಟ್ಟು, ತರಬೇತಿಗೊಳಿಸಿ ಕೊನೆಗೆ ಈ ಬೌದ್ದಿಕ ಶರೀರವನ್ನು "ಮರ್ದನ" ಮಾಡಿ ಮುಕ್ತಿಯನ್ನು ಕರುಣಿಸುವವ.

Sunday, August 1, 2010

Vishnu sahasranama 225-228

ವಿಷ್ಣು ಸಹಸ್ರನಾಮ: ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್
ಈ ಶ್ಲೋಕದ ಈ ಮೇಲಿನ ಸಾಲು ಸರ್ವವ್ಯಾಪಿ ಭಗವಂತನ ಸಹಸ್ರ ರೂಪವನ್ನು ಹೇಳುತ್ತದೆ. ಪುರುಷ ಸೂಕ್ತದಲ್ಲಿ ಹೇಳುವಂತೆ:
ಓಂ ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್
ಸ ಭೂಮಿಂ ವಿಶ್ವತೋ ವ್ರತ್ವಾsತ್ಯತಿಷ್ಠದ್ದಶಾಂಗುಲಮ್
ಇಲ್ಲಿ 'ಸಹಸ್ರ' ಎಂದರೆ 'ಅನಂತ'. ಅದೇ ರೀತಿ ಶೀರ್ಷಾ, ಅಕ್ಷ, ಪಾತ್ ಪದಗಳು ಸರ್ವವ್ಯಾಪಿ, ಸರ್ವಸಮರ್ಥ ಭಗವಂತನ 'ವಿಶ್ವವ್ಯಾಪಕತೆ' ಯ ಕಲ್ಪನೆ. ಭಗವದ್ಗೀತೆಯಲ್ಲಿ ಅರ್ಜುನನಿಗೆ ಭಗವಂತನ ವಿಶ್ವರೂಪ ಕಾಣಿಸಿಕೊಂಡ ಬಗೆ ಹೀಗಿದೆ:
ಸರ್ವತಃಪಾಣಿಪಾದಂ ತತ್ ಸರ್ವತೋsಕ್ಷಿಶಿರೋಮುಖಮ್
ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ (ಅ-೧೩, ಶ್ಲೋ-೧೩)
ಅಂದರೆ "ಎಲ್ಲೆಡೆಯು ಕೈ-ಕಾಲುಗಳು; ಎಲ್ಲೆಡೆಯು ಕಣ್ಣು-ತಲೆ-ಬಾಯಿಗಳು; ಎಲ್ಲೆಡೆಯು ಕಿವಿ; ಲೋಕದೊಳಗೆಲ್ಲವನ್ನು ಆವರಿಸಿ ನಿಂತ ಅನಂತ ರೂಪ" ಅಂದರೆ ಪರಮಾತ್ಮ ಬ್ರಹ್ಮಾಂಡದಲ್ಲೆಲ್ಲ ಹಾಸುಹೊಕ್ಕಾಗಿದ್ದಾನೆ. ಬ್ರಹ್ಮಾಂಡದ ಪ್ರತಿಯೊಂದು ಅಣುಅಣುವಿನಲ್ಲೂ ಪರಮಾತ್ಮನ ಅಂಶವಿದೆ, ಪರಮಾತ್ಮನಿಲ್ಲದ ಸ್ಥಳ ಈ ಬ್ರಹ್ಮಾಂಡದಲ್ಲಿ ಎಲ್ಲೂ ಇಲ್ಲ! ತಸ್ಯ ಇದಮೇವ ಶಿರಃ ಅಯಂ ದಕ್ಷಿಣಪಕ್ಷಃ ಅಯಂ ಉತ್ತರಪಕ್ಷಃ ಅಯಂ ಆತ್ಮಾ ಇದಂ ಪುಚ್ಚಂ ಪ್ರತಿಷ್ಟಾ ಅಂದರೆ ಸರ್ವ ಜೀವ ಜಂತುವಿನಲ್ಲಿ ಅಂತರ್ಯಾಮಿಯಾಗಿರುವ ಭಗವಂತ ಇರದ ಸ್ಥಳವಿಲ್ಲ, ಕಾಣದ ಸಂಗತಿಯಿಲ್ಲ, ಅವನು ಹೋಗದ ಜಾಗವಿಲ್ಲ. ಎಲ್ಲಾ ಪಿಂಡಾಂಡದೊಳಗೂ ಅವನೇ ತುಂಬಿರುವುದರಿಂದ ಎಲ್ಲಾ ಪ್ರಾಣಿಗಳ ತಲೆಯೊಳಗೆ ಅವನ ತಲೆ; ಕಾಲೊಳಗೆ ಕಾಲು.ಆದ್ದರಿಂದ ಅವನಿಗೆ ಅನಂತ ತಲೆಗಳು; ಅನಂತ ಕಣ್ಣುಗಳು; ಅನಂತ ಕಾಲುಗಳು. ಅವನ ಅನಂತ ಗುಣಗಳೇ ಅವನ ಅನಂತ ರೂಪಗಳು; ಅನಂತ ಅವಯವಗಳು. ಅವನು ಬೇರೆ ಅಲ್ಲ , ಅವನ ಅವಯವಗಳು ಬೇರೆ ಅಲ್ಲ.ಅವನೂ ಜ್ಞಾನಾನಂದಮಯ; ಅವನ ಶರೀರವಯಗಳೂ ಜ್ಞಾನಾನಂದಮಯ. ಕಣ್ಣುಗಳು ಎಲ್ಲಾ ಜ್ಞಾನೇಂದ್ರಿಯಗಳಿಗೆ ಉಪಲಕ್ಷಣ. ಕಾಲುಗಳು ಕರ್ಮೆಂದ್ರಿಯಗಳಿಗೆ. ಅವನಿಗೆ ಅನಂತ ಜ್ಞಾನೇಂದ್ರಿಯಗಳು; ಅನಂತ ಕರ್ಮೆಂದ್ರಿಯಗಳು. ಹೀಗೆ ಸರ್ವ ಜೀವಗಳ ಅನ್ನಮಯಕೋಶ ಮತ್ತು ಪ್ರಾಣಮಯಕೋಶದಲ್ಲಿ ತುಂಬಿರುವ ಭಗವಂತ "ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ "

ಈ ಮೇಲಿನ ಅರ್ಥದೊಂದಿಗೆ ಈ ಶ್ಲೋಕದಲ್ಲಿರುವ ನಾಲ್ಕು ನಾಮಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ಅರ್ಥೈಸಬಹುದು:
225) ಸಹಸ್ರಮೂರ್ಧಾ
ಸಾವಿರಾರು ತಲೆಯವನು; ಅಂದರೆ ಸರ್ವ ಜೀವ-ಜಂತುವಿನಲ್ಲಿ ಅಂತರ್ಯಾಮಿ.
226) ವಿಶ್ವಾತ್ಮಾ
ಜಗದ ಅಂತರ್ಯಾಮಿ; ಎಲ್ಲೆಡೆ ವ್ಯಾಪಿಸಿರುವವನು; ಬ್ರಹ್ಮಾದಿ ಪ್ರಾಣದೇವರಿಗೂ ಅಂತರ್ಯಾಮಿ.
227) ಸಹಸ್ರಾಕ್ಷಃ
ಸಾವಿರಾರು ಕಣ್ಣುಳ್ಳವನು; ಅಂದರೆ ಅವನು ಕಾಣದ ಸಂಗತಿಯಿಲ್ಲ
228) ಸಹಸ್ರಪಾತ್
ಸಾವಿರಾರು ಕಾಲುಗಳುಳ್ಳವನು; ಅಂದರೆ ಅವನು ಹೋಗದ ಜಾಗವಿಲ್ಲ.