Sunday, September 12, 2010
Vishnu sahasranama 337-339
337) ಅಶೋಕಃ
ಅ+ಶೋಕ; ಅಂದರೆ ದುಃಖವಿಲ್ಲದವನು ಹಾಗೂ ದುಃಖವಿಲ್ಲದಂತೆ ಮಾಡುವವನು. ಭಗವಂತನಿಗೆ ಸೃಷ್ಟಿಯಲ್ಲಾಗಲಿ-ಸಂಹಾರದಲ್ಲಾಗಲಿ ಹುಟ್ಟಿನಲ್ಲಾಗಲಿ-ಸಾವಿನಲ್ಲಾಗಲಿ ಯಾವುದೇ ರೀತಿಯ ಮೋಹವಿಲ್ಲ; ಆತ ಎಲ್ಲಾ ಮೋಹ ಪಾಶಗಳಿಂದ ಮುಕ್ತನಾದ ವಿರಕ್ತ. ರೈತ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿ ಕೊನೆಗೆ ಹೇಗೆ ಕತ್ತರಿಸುತ್ತನೋ ಅದೇ ರೀತಿ ಭಗವಂತನ ಸೃಷ್ಟಿ ಹಾಗೂ ಸಂಹಾರ ಕ್ರಿಯೆ. ಇಲ್ಲಿ ದುಃಖಕ್ಕೆ ಎಡೆಯಿಲ್ಲ. ಒಂದು ಪುಟ್ಟ ಮಗು ಹುಟ್ಟು ಹಾಗು ಸಾವನ್ನು ಹೇಗೆ ಸಮನಾಗಿ ಕಾಣುತ್ತದೋ ಹಾಗೆ. ಈ ರೀತಿ ಶೋಕ ರಹಿತನಾದ ಭಗವಂತ ಅಶೋಕಃ.
338) ತಾರಣಃ
ಭಗವಂತ ಈ ಸಂಸಾರದ ಬಂಧನದ ಕಡಲೆಂಬ ತಾಪತ್ರಯಗಳಿಂದ ನಮ್ಮನ್ನು ಪಾರುಮಾಡುವ ತಾರಣಃ.
339) ತಾರಃ
ಸರ್ವ ತಾರಕವಾದ; ಬ್ರಹ್ಮಾದಿ ದೇವತೆಗಳು ತಮ್ಮ ಉದ್ದಾರಕ್ಕೊಸ್ಕರ ಜಪಿಸುವ 'ಓಂಕಾರ' ಪ್ರತಿಪಾದ್ಯನಾದ ಭಗವಂತ ತಾರಃ.
Saturday, September 11, 2010
Vishnu sahasranama 334-336
ವಿಷ್ಣು ಸಹಸ್ರನಾಮ: ಬೃಹದ್ಭಾನುರಾದಿದೇವಃ ಪುರಂದರಃ
334) ಬೃಹದ್ಭಾನುಃ
ಈ ಜಗತ್ತಿನಲ್ಲಿ ಇರುವ ಎಲ್ಲಾ ಬೃಹತ್ತಾದ ಬೆಳಕುಗಳನ್ನು ಬೆಳಗಿಸುವವ ಬೃಹದ್ಭಾನು. ಹೊರಪ್ರಪಂಚದಲ್ಲಿ ಹಾಗು ನಮ್ಮೊಳಗೆ ಐದು ಪ್ರಮುಖವಾದ ಬೆಳಕುಗಳಿವೆ. (೧) ಮನುಷ್ಯನ ಕಣ್ಣಿಗೆ ಗೋಚರವಾಗುವ ಅತೀ ದೊಡ್ಡ ಬೆಳಕು ಸೂರ್ಯ; ಆತನೇ ನಮ್ಮ ಕಣ್ಣಿನ ಅಭಿಮಾನಿ ದೇವತೆ. (೨) ತಂಪಾದ ಆಹ್ಲಾದಕರ ಬೆಳದಿಂಗಳನ್ನೀಯುವ ಹಾಗು ನಮ್ಮ ಕಿವಿಯ ಅಭಿಮಾನಿ ದೇವತೆ ಚಂದ್ರ. (೩) ಭೂಮಿಯಲ್ಲಿರುವ ಅತ್ಯಂತ ಮಹತ್ತಾದ ಬೆಳಕು ಹಾಗು ನಮ್ಮ ಬಾಯಿಯ ಅಭಿಮಾನಿ ದೇವತೆ ಬೆಂಕಿ. (೪)ಚಂದ್ರನ ಸುತ್ತಲೂ ಇರುವ ನಕ್ಷತ್ರಗಳು; ನಾವು ನಮ್ಮ ಕಣ್ಣಿನಿಂದ ನೋಡುವ ಮುಖೇನ, ಕಿವಿಯಿಂದ ಕೇಳುವ ಮುಖೇನ ಹಾಗೂ ಬಾಯಿಯಿಂದ ಜ್ಞಾನವನ್ನು ಇನ್ನೊಬ್ಬರಿಗೆ ಹೇಳುವ ಮುಖೇನ, ನಮ್ಮೊಳಗೆ ತಿಳುವಳಿಕೆಯ ನಕ್ಷತ್ರಗಳು ಬೆಳಗುತ್ತವೆ. ಹೀಗೆ ಜ್ಞಾನ ವೃದ್ದಿಯಾಗಿ ನಮ್ಮಲ್ಲಿ ಅತ್ಯಂತ ಪ್ರಮುಖವಾದ ಐದನೇ ಬೆಳಕು ಚಿಮ್ಮುತ್ತದೆ. (೫) ಈ ಐದನೇ ಅತ್ಯಂತ ಪ್ರಮುಖ ಬೆಳಕು 'ಮಿಂಚು' ಅದೇ ನಮ್ಮೊಳಗಿನ ಸತ್ಯದ ಸ್ಪೂರಣ. ಹೀಗೆ ನಮ್ಮಲ್ಲಿನ ಕಣ್ಣು, ಕಿವಿ, ಬಾಯಿ,ಮನೋವೃತ್ತಿ ಮತ್ತು ಅಂತಃಸ್ಪೂರಣ ಹಾಗು ಹೊರಗಿನ ಸೂರ್ಯ, ಚಂದ್ರ, ಅಗ್ನಿ ನಕ್ಷತ್ರ ಮತ್ತು ಮಿಂಚನ್ನು ಬೆಳಗುವ ಭಗವಂತ ಬೃಹದ್ಭಾನುಃ.
335) ಆದಿದೇವಃ
ಸೃಷ್ಟಿಯ ಪೂರ್ವದಲ್ಲಿದ್ದವ, ಆದಿತ್ಯನೊಳಗೆ ಅಂತಃರ್ಯಮಿಯಾಗಿದ್ದು ಬೆಳಗುವ ಹಾಗು ಎಲ್ಲಕ್ಕೂ ಮೂಲಕಾರಣನಾದ ಭಗವಂತ ಆದಿದೇವಃ.
336) ಪುರಂದರಃ
ಚತುರ್ಮುಖನ ಪುರ ಈ ಬ್ರಹ್ಮಾಂಡ, ನಮ್ಮ ಪುರ ಈ ನಮ್ಮ ದೇಹ. ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡವನ್ನು ಬೇಧಿಸುವವನು; ನಮ್ಮ ಗತಿಗನುಗುಣವಾಗಿ ನಮ್ಮ ಶರೀರವೆಂಬ ಪುರವನ್ನು ಬೇಧಿಸುವವ; ಮೋಕ್ಷ ಯೋಗ್ಯರ ಸೂಕ್ಷ್ಮ ಶರೀರವನ್ನು ಭೇಧಿಸಿ ನಮ್ಮ ಸ್ವರೂಪ ರೂಪಿ ಆತ್ಮವನ್ನು ಧಾರಣೆ ಮಾಡುವವ; ಶತ್ರುಗಳ ಪುರವನ್ನು ಪುಡಿಗಟ್ಟುವ ಭಗವಂತ ಪುರಂದರಃ.
Friday, September 10, 2010
Vishnu sahasranama 333
333) ವಾಸುದೇವಃ
ಭಗವಂತನ ಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ (333, 699 ಮತ್ತು 713). ಈ ನಾಮವನ್ನು ಈ ರೀತಿ ಒಡೆದು ಅರ್ಥೈಸಬಹುದು. ವ+ಅಸು+ದೇವ. ಹಿಂದೆ ಹೇಳಿದಂತೆ 'ವ' ಅಂದರೆ ಜ್ಞಾನ; 'ಅಸು' ಎಂದರೆ ಪ್ರೇರಕ; ದೇವ ಎಂದರೆ ಆಟ. ಜ್ಞಾನ ಸ್ವರೂಪನಾದ ಭಗವಂತನಿಗೆ ಇಡೀ ವಿಶ್ವವನ್ನು ನಿಯಂತ್ರಿಸುವುದು ಒಂದು ಕ್ರೀಡೆ!. ಇಡೀ ವಿಶ್ವದ ಸೃಷ್ಟಿ-ಸ್ಥಿತಿ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಅವನಿಗೆ ಲೀಲಾಮಾತ್ರ. ಇದೇ ನಾಮವನ್ನು ಇನ್ನೊಂದು ರೀತಿಯಲ್ಲಿ ನೋಡಿದರೆ ವಾ+ಸೂ+ದೇ+ಅವ. ಇಲ್ಲಿ 'ವಾ' ಎಂದರೆ ಎಲ್ಲೆಡೆ ತುಂಬಿರುವವನು (ಸರ್ವಗತ-ಸರ್ವಜ್ಞ); 'ಸೂ' ಅಥವಾ 'ಸೂತೇ' ಎಂದರೆ ಎಲ್ಲವನ್ನೂ ಹೆತ್ತವನು (ಸರ್ವ ಸೃಷ್ಟಿಕರ್ತ); 'ದೇ' ಎಂದರೆ ಎಲ್ಲವನ್ನೂ ಕೊಡುವವನು(ಸರ್ವ ಧಾತಾ); 'ಅವ' ಎಂದರೆ ಎಲ್ಲರ ರಕ್ಷಕ (ಸರ್ವ ರಕ್ಷಕ).
ವಸುದೇವ ಎಂದರೆ 'ಬೆಳಗುವ ಸಂಪತ್ತು'; ಸಾತ್ವಿಕ ಮನಸ್ಸನ್ನು ಕೊಡುವ ಬೆಳಕು. ಕೇವಲ ಶುದ್ಧವಾದ ಸಾತ್ವಿಕ ಮನಸ್ಸಿಗೆ ಅಭಿವ್ಯಕ್ತವಾಗುವವ ವಾಸುದೇವ. ಅಷ್ಟವಸುಗಳಲ್ಲಿ ಪ್ರಧಾನನಾದ ಅಗ್ನಿ ಪ್ರತೀಕದಲ್ಲಿ ಉಪಾಸ್ಯನಾದವ ಹಾಗೂ ಎಲ್ಲೆಡೆ ನೆಲೆಸಿ ಎಲ್ಲವನ್ನೂ ಆವರಿಸಿ ವಿಹರಿಸುವ ಭಗವಂತ ವಾಸುದೇವಃ.