Saturday, July 31, 2010

Vishnusahasranama 222-224

ವಿಷ್ಣು ಸಹಸ್ರನಾಮ: ನ್ಯಾಯೋ ನೇತಾ ಸಮೀರಣಃ

222) ನ್ಯಾಯಃ

ನಿ+ಆಯ-ನ್ಯಾಯ. ಆಯವ್ಯಯ ಅನ್ನುವ ಪದ ಎಲ್ಲರಿಗೂ ತಿಳಿದ ಸಾಮಾನ್ಯ ಪದ. ಇಲ್ಲಿ ಆಯ ಎಂದರೆ ಲಾಭ. ಎಲ್ಲಾ ನೀತಿಗಳ ಮೂಲ ಪ್ರವರ್ತಕನಾದ ಭಗವಂತ ಭಕ್ತರ ದೊಡ್ಡ ಲಾಭ ಆದ್ದರಿಂದ ಆತ ನ್ಯಾಯಃ.

223) ನೇತಾ

ನೇತಾ ಎಂದರೆ ನೇತಾರ ಅಥವಾ ನಾಯಕ. ಸಮಸ್ತ ಚರಾಚರಾತ್ಮಕ ಪ್ರಪಂಚದ, ಬ್ರಹ್ಮಾದಿ ದೇವತೆಗಳ, ಇಂದ್ರಿಯಗಳ, ಪಂಚಭೂತಗಳ ಮತ್ತು ಪಂಚಭೂತಾತ್ಮಕ ಪ್ರಪಂಚದ ನಾಯಕನಾದ ಭಗವಂತ ನೇತಾ. ಅನೇಕ ಅವತಾರಗಳ ಮೂಲಕ ನೇತಾರನಾಗಿ ಭೂಮಿಯನ್ನು ಹಾಗು ನಮ್ಮನ್ನು ರಕ್ಷಿಸಿದ ಭಗವಂತ ನೇತಾ.

224) ಸಮೀರಣಃ

ಈರಣ ಎಂದರೆ ಪ್ರೇರಣೆಮಾಡುವವನು. ನಮ್ಮೊಳಗೆ ಅನೇಕ ಅಸುರ ಶಕ್ತಿಗಳು ಹಾಗು ದೇವತಾ ಶಕ್ತಿಗಳು ಪ್ರೇರಣೆ ಮಾಡುತ್ತಿರುತ್ತವೆ. ನಾವು ಈ ಶಕ್ತಿಗಳ ಪ್ರೇರಣೆಗೊಳಗಾಗುತ್ತೇವೆ. ಆದರೆ ಈ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ಒಬ್ಬ ಸಮೀರಣ ನಮ್ಮಲ್ಲಿದ್ದಾನೆ. "ಧಿಯೋ ಯೋನಃ ಪ್ರಚೋದಯಾತ್" ಅಂದರೆ ಯಾವ ಭಗವಂತ ಮನೋತತ್ವಗಳನ್ನು ಪ್ರೇರಣೆ ಮಾಡುತ್ತಾನೋ ಅವನು ನಮ್ಮನ್ನು ಒಳ್ಳೆಯ ದಾರಿಯತ್ತ ಪ್ರೇರೇಪಿಸಲಿ ಎಂದರ್ಥ.

Friday, July 30, 2010

Vishnu sahasranama 219-221

ವಿಷ್ಣು ಸಹಸ್ರನಾಮ: ಅಗ್ರಣೀರ್ಗ್ರಾಮಣೀಃ ಶ್ರೀಮಾನ್
219) ಅಗ್ರಣೀಃ
ಅಗ್ರ ಎಂದರೆ ಮುಂದಾಳು. ಅಗ್ರಣೀ ಎಂದರೆ ಎಲ್ಲರ ಮುಂದಾಳಾಗಿ ನಿಂತು, ಅಥವಾ ಮುಂದಾಳುವಿನ ಒಳಗೆ ಕುಳಿತು ದುಷ್ಟ ನಿಗ್ರಹ ಮಾಡುವವ. ಇದಕ್ಕೆ ಉತ್ತಮ ಉದಾಹರಣೆ ಮಹಾಭಾರತ ಯುದ್ದ. ಧರ್ಮ ಸಂಸ್ಥಾಪನೆಗಾಗಿ ಪಾಂಡವ ಸೇನೆಯ ಸಾರಥಿಯಾಗಿ, ನರನ ಆವೇಷವಿರುವ ಅರ್ಜುನನಲ್ಲಿ ವಿಶೇಷ ರೀತಿಯಲ್ಲಿ ಆವಿರ್ಭೂತನಾಗಿ, ದುಷ್ಟ ಸಂಹಾರ ಮಾಡಿ, ಪ್ರಪಂಚಕ್ಕೆ ಗೀತೆಯ ಮೂಲಕ ವಿಶೇಷ ಸಂದೇಶವನ್ನು ಕರುಣಿಸಿದ ಭಗವಂತ ಅಗ್ರಣೀಃ. ಮಹಾಭಾರತ ಮೇಲ್ನೋಟಕ್ಕೆ ಒಂದು ಮಹಾಯುದ್ದ. ಆದರೆ ಈ ಯುದ್ದಕ್ಕೂ ನಮ್ಮ ಜೀವನಕ್ಕೂ ನೇರ ಸಂಭಂಧವಿದೆ. ಜೀವನವೇ ಒಂದು ಹೋರಾಟ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿತಪ್ಪಿಸುವ ಕೌರವರೂ ಇದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಕಣ್ಣಿಲ್ಲದ ಧೃತರಾಷ್ಟ್ರ ಅಥವಾ ಕಣ್ಣಿದ್ದೂ ಕುರುಡಿಯಾದ ಗಾಂಧಾರಿಯಂತೆ ನಾವು ನಮ್ಮನ್ನು ದಾರಿ ತಪ್ಪಿಸುವ ಶಕ್ತಿಗಳ ಮೋಹಪಾಶಕ್ಕೆ ಬಲಿಯಾಗಿ, ನಮ್ಮಲ್ಲಿರುವ ಅಮೂಲ್ಯ ಸಂಪತ್ತಾದ ಇಂದ್ರಿಯಗಳನ್ನು ದುರುಪಯೋಗ ಮಾಡಿಕೊಂಡು ದಾರಿ ತಪ್ಪಿದಾಗ, ನಮ್ಮೊಳಗಿರುವ ಬಿಂಬ ರೂಪಿ ಭಗವಂತ ಅಗ್ರಣಿಯಾಗಿ ನಿಂತು ದುಷ್ಟಶಕ್ತಿಗಳ ನಿರ್ಮೂಲ ಮಾಡುತ್ತಾನೆ. ಭಗವಂತನ ಶರಣಾಗತಿಯೊಂದೇ ನಮ್ಮನ್ನು ಉದ್ದಾರ ಮಾಡಬಲ್ಲದು ಎನ್ನುವುದು ಮಹಾಭಾರತದ ಮೂಲ ಸಂದೇಶ.
220) ಗ್ರಾಮಣೀಃ
ಗ್ರಾಮ ಎಂದರೆ ಸಮುದಾಯ. ಗ್ರಾಮಣಿ ಎಂದರೆ ಸಮುದಾಯದ ಒಡೆಯನಾಗಿದ್ದು ದುಷ್ಟ ನಿಗ್ರಹ ಮಾಡುವ ಭಗವಂತ. ಎಲ್ಲಾ ಜೀವ ಸಮುದಾಯಕ್ಕೆ, ದೇವತೆಗಳ ಸಮುದಾಯಕ್ಕೆ, ಆತ ನಿಯಾಮಕ. ಅಮಿತವಾದ ಜ್ಞಾನಾನಂದಗಳಿಂದ ತುಂಬಿರುವ ಹಾಗು ಪ್ರಪಂಚದಲ್ಲಿ ಅತೀ ಹೆಚ್ಚು ಸಂಖ್ಯಯಲ್ಲಿರುವ, ಆಸ್ತಿಕತೆಯ ಸೋಗಿನಲ್ಲಿ ಬದುಕುವ ತಾಮಸರನ್ನು ನಿಗ್ರಹಿಸಿ, ಸಾತ್ವಿಕತೆಯ ರಕ್ಷಣೆ ಮಾಡುವ ಭಗವಂತ ಗ್ರಾಮಣೀಃ.
221) ಶ್ರೀಮಾನ್
ನಮ್ಮಲ್ಲಿ ಶ್ರೀಮಂತರು ಎಂದರೆ ಅತೀ ಹೆಚ್ಚು ಹಣವುಳ್ಳವರು ಎನ್ನುವುದು ಜನರ ಅಭಿಪ್ರಾಯ. ಆದರೆ ನಿಜವಾದ ಸಂಪತ್ತು ಹಣವಲ್ಲ! ಏಕೆಂದರೆ ಹಣ "ಕರಗುವ ಸಂಪತ್ತು". ಒಮ್ಮೆ ಕೋಟ್ಯಾಧಿಪತಿಯಾಗಿರುವ ವ್ಯಕ್ತಿಗಳು ಇಂದು ಭಿಕ್ಷಾಧಿಪತಿಯಾಗಿರುವ ಅನೇಕ ಘಟನೆಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ನೋಡುತ್ತೇವೆ. ಹಣ ಬರುವಾಗ ಹೇಗೆ ಬರುತ್ತದೆ ಎಂದು ತಿಳಿಯುವುದಿಲ್ಲ, ಹಾಗೆ ಹೋಗುವಾಗ ಕೂಡ ಹೇಗೆ ಹೋಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ನಾವು ನಿಜವಾದ ಶ್ರಿಮಂತರಾಗಬೇಕಾದರೆ ಎಂದೂ "ಕರಗದ" ಸಂಪತ್ತನ್ನೂ ನಮ್ಮದಾಗಿಸಿಕೊಳ್ಳಬೇಕು. ವೇದ ವಿದ್ಯೆಗಳು ಹಾಗು ಅದರಿಂದ ಬರುವ ಜ್ಞಾನ ಎಂದೂ ಕರಗದ ಅಪೂರ್ವ ಸಂಪತ್ತು.
ವಿದ್ಯಾದೇವತೆಯಾದ ಸರಸ್ವತಿ-ಭಾರತಿಯರಿಗೂ ಭಗವಂತ ನಿಯಾಮಕ ಆದ್ದರಿಂದ ಆತ ಶ್ರೀಮಾನ್.
ಈ ಹಿಂದೆ ಹೇಳಿದಂತೆ ಭಗವಂತ ನಮಗೆ ಅತ್ಯಂತ ಅಮೂಲ್ಯವಾದ ಐದು ಶ್ರೀಗಳನ್ನು ಕರುಣಿಸಿದ ಶ್ರೀಮಾನ್. ಅವುಗಳೆಂದರೆ ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು. ಇದಕ್ಕಿಂತ ಹೆಚ್ಚಿನ ಸಂಪತ್ತು ಮನುಷ್ಯನಿಗೆ ಇನ್ನೊಂದಿಲ್ಲ. ಈ ಸಂಪತ್ತನ್ನೂ ನಾವು ಎಂದೂ ದುರುಪಯೋಗ ಮಾಡಿಕೊಳ್ಳಬಾರದು. ಅದಕ್ಕಾಗಿ ಶಾಂತಿ ಮಂತ್ರದಲ್ಲಿ ಒಳ್ಳೆಯದನ್ನು ನೋಡೋಣ. ಒಳ್ಳೆಯದನ್ನು ಮಾಡೋಣ, ಒಳ್ಳೆಯದನ್ನು ಕೇಳೋಣ ಹಾಗು ಒಳ್ಳೆಯದನ್ನು ಯೋಚಿಸೋಣ ಎಂದು ಹೇಳಿದೆ.
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಂಗೈಃ ಸ್ತುಷ್ಟುವಾಂ ಸಸ್ತನೂಭಿಃ ವ್ಯಶೇಮ ದೇವಹಿತಂ ಯದಾಯುಃ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ಓಂ ಶಾಂತಿಃ ಶಾಂತಿಃ ಶಾಂತಿಃ
ಸಾಮಾನ್ಯವಾಗಿ ನಾವು ಜೀವನ ನಿರ್ವಹಣೆಯ ಹಾಗು ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುತ್ತಾ ಹಣದ ಹಿಂದೆ ಓಡುತ್ತಾ ಭಗವಂತನ ಅಭಯವನ್ನು ಮರೆತು ಬದುಕುತ್ತೇವೆ. ಗೀತೆಯಲ್ಲಿ ಭಗವಂತ ನಮಗೆ ರಕ್ಷಣೆಯ ಅಭಯವಿತ್ತಿದ್ದಾನೆ.
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ-೨೨)
ಅಂದರೆ ಚಿಂತೆಯನ್ನು ತೊರೆದು ಭಕ್ತಿಯಿಂದ ನನ್ನನ್ನು ಪೂಜಿಸುವ ಭಕ್ತರ ಯೋಗ-ಕ್ಷೇಮದ ಹೊಣೆ ನನ್ನದು. ಆದ್ದರಿಂದ ಅತ್ಯಂತ ಶ್ರೀಮಂತನಾದ ಭಗವಂತನ ಮುಂದೆ ಜುಜುಬಿ ಹಣದ ಅಭಿಷ್ಟವನ್ನು ವ್ಯಕ್ತಪಡಿಸದೆ, ಅವನನ್ನು ಸಂಪೂರ್ಣ ಭಕ್ತಿಯಿಂದ ನಂಬಿ ಬದುಕಿದರೆ, ನಮ್ಮ ಸಕಲ ಅಭಿಷ್ಟವನ್ನೂ ಆತ ಪೂರೈಸಿ ರಕ್ಷಿಸುತ್ತಾನೆ.

Thursday, July 29, 2010

Vishnu sahasranama 214-218

ವಿಷ್ಣು ಸಹಸ್ರನಾಮ: ನಿಮಿಷೋನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ
214) ನಿಮಿಷಃ

ನಿಮಿಷಃ ಎಂದರೆ ಕಣ್ಮುಚ್ಚಿ ನಿದ್ರಿಸುವವ.ಇಲ್ಲಿ ಭಗವಂತನ ಪ್ರಳಯಕಾಲದ ಯೋಗನಿದ್ರೆಯನ್ನು ನಿಮಿಷಃ ಎಂದಿದಾರೆ.

215)ಅನಿಮಿಷಃ

ಮೇಲಿನ ನಿಮಿಷಃ ಎನ್ನುವ ಪದದ ತದ್ವಿರುದ್ದ ನಾಮ ಅನಿಮಿಷಃ. ಅಂದರೆ ಭಗವಂತ ಎಂದೂ ನಿದ್ರಿಸುವುದಿಲ್ಲ! ಆತನಿಗೆ ನಿದ್ರೆಯೇ ಇಲ್ಲ. ಅಂದರೆ ಭಗವಂತ ನಮ್ಮಂತೆ ನಿದ್ರಿಸುವುದಿಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗ ನಿದ್ರೆ.

216)ಸ್ರಗ್ವೀ

ಸ್ರಗ್ವೀ ಎಂದರೆ ಮಾಲೆ ತೊಟ್ಟವನು ಎಂದರ್ಥ. ಭಗವಂತನನ್ನು ಪಂಕಜ-ನಾಭ, ಪಂಕಜ-ನೇತ್ರ, ಪಂಕಜ-ಅಂಗ್ರಿ ಪಂಕಜ-ಮಾಲಿ ಎನ್ನುತ್ತಾರೆ. ಈ ಬ್ರಹ್ಮಾಂಡವನ್ನು ನಾಭಿಯಲ್ಲಿ ಧರಿಸಿದವನು ಪಂಕಜ-ನಾಭ, ಈ ಜಗದ ನೇತಾರ ಪಂಕಜ-ನೇತ್ರ, ಈ ಬ್ರಹ್ಮಾಂಡ ಭಗವಂತನ ಕಾಲಿನ ಒಂದು ದೂಳಿನ ಕಣ ಅದ್ದರಿಂದ ಆತ ಪಂಕಜ-ಅಂಗ್ರಿ ಹಾಗು ಅನಂತ ಕೋಟಿ ಬ್ರಹ್ಮಾಂಡಗಳ ಸರಮಾಲೆಗಳ ಸೃಷ್ಟಾರ ಪಂಕಜ-ಮಾಲಿ ಅಥವಾ ಸ್ರಗ್ವೀ. ಸ್ರಗ್ವೀ ಅಂದರೆ ಇನ್ನೊಂದು ಅರ್ಥ ತುಳಸೀ ಮಾಲೆ ತೊಟ್ಟವ. ಭಗವಂತನಿಗೆ ಲಕ್ಷ್ಮೀ ಸಾನಿಧ್ಯವಿರುವ ತುಳಸಿಮಾಲೆ ಅತ್ಯಂತ ಪ್ರೀಯ. ಕೃಷ್ಣಾವತಾರದಲ್ಲಿ ಸದಾ ವನಮಾಲೆಯನ್ನು ತೊಟ್ಟ ಭಗವಂತನಿಗೆ ಭಕ್ತಿಯಿಂದ ಅರ್ಪಿಸಿದ ಯಾವ ಮಾಲೆಯೂ ಇಷ್ಟ.

217)ವಾಚಸ್ಪತಿಃ

ವಾಗ್ದೇವತೆಯ ಒಡೆಯ ಅಥವಾ ಎಲ್ಲಾ ವಾಕ್ ಗಳಿಗೆ ಪತಿ. ಅನೇಕ ಬಾಷೆಗಳನ್ನು ತಿಳಿದು ಮಾತನಾಡುವವ ವಾಚಸ್ಪತಿಯಲ್ಲ. ಪ್ರಾಣಿಗಳಿಗೂ ಅವುಗಳದ್ದೇ ಆದ ಭಾಷೆ ಇದೆ. ಆದರೆ ಅದು ನಮಗೆ ಅರ್ಥವಾಗುವುದಿಲ್ಲ. ಭಾಷೆ ನಾಲ್ಕು ಮಜಲುಗಳಿಂದ ಬೆಳೆದಿದೆ. ಪರಾಶರ, ಪಶ್ಯಂತಿ, ಮದ್ಯಮ ಹಾಗು ವೈಖರಿ. ಇಲ್ಲಿ ಪರಾಶರ ಅತ್ಯಂತ ಸೂಕ್ಷ್ಮವಾದ ಭಾಷೆಯ ಸ್ಥಿತಿ. ಮನಸ್ಸಿನ ಯೋಚನೆಗನುಗುಣವಾಗಿ ನಾಭಿಯಲ್ಲಿ ಉಂಟಾಗುವ ಕಂಪನ( Vibration)-'ಪರಾಶರ'. 'ಪಶ್ಯಂತಿ' ಎಂದರೆ ನಾಭಿಯಿಂದ ಹೊರಟ ಸೂಕ್ಷ್ಮ ಭಾಷೆ ಹೃದಯದಲ್ಲಿ ಅಭಿವ್ಯಕ್ತವಾಗುವ ಸ್ಥಿತಿ. ಆ ನಂತರ ಕುತ್ತಿಗೆ ಮೂಲಕ ಹೊರಹೊಮ್ಮುವ ಭಾಷೆಯ ಸ್ಥಿತಿ 'ಮದ್ಯಮ'. ಕೊನೆಯದಾಗಿ ಬಾಯಿಯ ಮೂಲಕ ಹೊರಹೊಮ್ಮುವ ಶಬ್ದ 'ವೈಖರಿ'. ಹೀಗೆ ಪ್ರಾಣಿ-ಪಕ್ಷಿಗಳಿಂದ ಹಿಡಿದು, ಭಾಷೆಯ ವಿವಿಧ ಮಜಲನ್ನು ತಿಳಿದಿರುವ ಭಗವಂತ ವಾಚಸ್ಪತಿಃ. ಈ ಕಾರಣಕ್ಕಾಗಿ ಭಗವಂತನನ್ನು ನಾವು ಯಾವ ಭಾಷೆಯಲ್ಲಿ ಕೂಡ ಉಪಾಸನೆ ಮಾಡಬಹುದು. ಆತ ನಮ್ಮ ನಾಭಿ-ಹೃದಯ ಭಾಷೆಯನ್ನೂ ಕೂಡ ಅರ್ಥೈಸಬಲ್ಲ.

218)ಉದಾರಧೀಃ

ಉದಾರಧೀಃ ಎಂದರೆ ಉತ್ಕೃಷ್ಟವಾದ ಅರಿವಿನ ಅಲೆ ಅಥವಾ ಸರ್ವೋತ್ಕೃಷ್ಟವಾದ ಜ್ಞಾನ. ಭಗವಂತ ಸರ್ವವನ್ನೂ ಬಲ್ಲ ಸರ್ವಜ್ಞ.

Wednesday, July 28, 2010

Vishnu sahasranama 209-213

ವಿಷ್ಣು ಸಹಸ್ರನಾಮ: ಗುರುರ್ಗುರುತಮೋ ಧಾಮಃ ಸತ್ಯಃ ಸತ್ಯಪರಾಕ್ರಮಃ
209) ಗುರುಃ
ಪ್ರತಿಯೊಬ್ಬ ಜ್ಞಾನಧಾತನ ಒಳಗೆ ಜ್ಞಾನ ಸ್ವರೂಪನಾಗಿದ್ದು, ಜ್ಞಾನ ಅಭಿವ್ಯಕ್ತ ಮಾಡುವ ಭಗವಂತ ಗುರು. ಎಲ್ಲಾ ವೇದ ವಿದ್ಯೆಗಳನ್ನು ಉಪದೇಶಿಸಿರುವ ಭಗವಂತ ಗುರುಃ.
210) ಗುರುತಮಃ
"ಕೃಷ್ಣಂ ವಂದೇ ಜಗದ್ಗುರುಂ". ಭಗವಂತನಿಗಿಂತ ದೊಡ್ಡ ಗುರು ಇನ್ನೊಬ್ಬನಿಲ್ಲ. ಬ್ರಹ್ಮಾದಿ ದೇವತೆಗಳಿಗೂ ಗುರುವಾದ ಭಗವಂತ ಗುರುತಮಃ.
211) ಧಾಮಃ
ಧಾಮ ಎಂದರೆ ಆಶ್ರಯ, ಮನೆ ಹಾಗು ತೇಜಸ್ಸು ಎನ್ನುವ ಅರ್ಥಗಳನ್ನು ಕೊಡುತ್ತದೆ.ನಾವೆಲ್ಲರೂ ಕೊನೆಗೆ ಒಂದು ದಿನ ಸೇರಬೇಕಾದ ಮನೆ ಭಗವಂತ. ಆತ ಎಲ್ಲರ ಆಶ್ರಯಧಾತ. ಅದಕ್ಕಾಗಿ ದಾಸವರೇಣ್ಯರು "ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ" ಎಂದಿದ್ದಾರೆ. ಈ ನಾಮವನ್ನು ಒಡೆದು ನೋಡಿದರೆ ಧಾ+ಅಮ=ಧಾಮ. ಇಲ್ಲಿ 'ಧಾ' ಎಂದರೆ ಧಾರಕ, 'ಅಮ' ಎಂದರೆ ಅಮಿತ ಅಥವಾ ಮಿತಿ ಇಲ್ಲದ. ಧಾರಕವಾದ ಅನೇಕ ಶಕ್ತಿಗಳು ಈ ಪ್ರಪಂಚದಲ್ಲಿವೆ. ದೇವತೆಗಳಿಗೆ ಇಂದ್ರ ಧಾರಕ, ಇಂದ್ರನಿಗೆ ಗರುಡ-ಶೇಷ-ರುದ್ರರು ಧಾರಕರು ಹಾಗು ಅವರಿಗೆ ಬ್ರಹ್ಮ-ವಾಯು ಧಾರಕರಾಗಿದ್ದಾರೆ. ಬ್ರಹ್ಮ-ವಾಯುವನ್ನು ಮಾತೆ ಲಕ್ಷ್ಮಿ ಧಾರಣೆ ಮಾಡಿದ್ದಾಳೆ. ಈ ಎಲ್ಲರ ಧಾರಕ ಶಕ್ತಿ ಮಿತವಾದದ್ದು. ಸರ್ವಾಧಾರಕನಾದ ಭಗವಂತ ಅಮಿತ ಧಾರಕನಾದ ಜ್ಞಾನಾನಂದ ಸ್ವರೂಪ.
212) ಸತ್ಯಃ
ಸತ್ಯ ನಾಮದ ಸ್ಥೂಲವಾದ ಅರ್ಥ "ಸದ್ಗುಣಗಳಿಂದ ಪರಿಪೂರ್ಣನಾದವ". ಭಗವಂತನೊಬ್ಬನೇ ಸಂಪೂರ್ಣ. ಅದಕ್ಕಾಗಿ ವೇದದಲ್ಲಿ ಬರುವ ಶಾಂತಿ ಮಂತ್ರಗಳಲ್ಲಿ ಹೀಗೆ ಹೇಳಿದ್ದಾರೆ:
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಅದೂ ಪೂರ್ಣ ಹಾಗು ಇದೂ ಪೂರ್ಣ. ಪೂರ್ಣದಿಂದ ಪೂರ್ಣಬರುತ್ತದೆ, ಪೂರ್ಣದಲ್ಲಿ ಪೂರ್ಣ ಸೇರಿ ಪೂರ್ಣವಾಗುತ್ತದೆ.
ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಭಗವಂತ ಸತ್ಯಃ. ಭಾಗವತ ಮಂಗಲಾಚರಣೆ ಯಲ್ಲಿ ಹೇಳುವಂತೆ:
ಧಾಮ್ನಾಸ್ವೇನ ಸದಾ ನಿರಸ್ತ-ಕುಹಕಂ ಸತ್ಯಂ ಪರಂ ಧೀಮಹೀ
ಅಂದರೆ ಭಗವಂತ ಸತ್-ಚಿತ್-ಆನಂದ ಸ್ವರೂಪ. ಅದಕ್ಕಾಗಿ ಭಗವಂತನನ್ನು
"ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ" ಎಂದಿದ್ದಾರೆ.
ಸೃಷ್ಟಿ, ಸ್ಥಿತಿ, ಸಂಹಾರ, ನಿಯಾಮನ, ಜ್ಞಾನ, ಅಜ್ಞಾನ, ಬಂಧ ಮತ್ತು ಮೋಕ್ಷ ಈ ಎಂಟು ಅಸಾಧಾರಣ ಕ್ರಿಯೆಯುಳ್ಳ ಭಗವಂತ ಸತ್ಯಃ.
213) ಸತ್ಯಪರಾಕ್ರಮಃ
ಇಲ್ಲಿ 'ಪರರು' ಎಂದರೆ ಶತ್ರುಗಳು ಅಥವಾ ದುಷ್ಟರು.ಪರಾಕ್ರಮ ಎಂದರೆ ಶತ್ರುಗಳನ್ನು ಬಗ್ಗುಬಡಿಯುವ ಸಾಮರ್ಥ್ಯ. ಭಗವಂತನ ಪರಾಕ್ರಮ ‘ಸಂಪೂರ್ಣ’ ಅಥವಾ ‘ಸತ್ಯ’. ನಮ್ಮೊಳಗಿರುವ ಕಾಮ-ಕ್ರೋಧ-ಮಧ-ಮತ್ಸರ ಇತ್ಯಾದಿ ಶತ್ರುಗಳನ್ನು ನಿರ್ಮೂಲ ಮಾಡಬೇಕಾದರೆ ನಾವು ಭಗವಂತನಲ್ಲಿ ಶರಣಾಗಬೇಕು. ಕುರಾನ್ ನಲ್ಲಿ ಹೇಳುವಂತೆ "Drive them out from where You have been driven out" ಅಂದರೆ ಆತ್ಮದ ಸಾಧನೆಯಲ್ಲಿ ಭಾಧಕರಾಗಿರುವ ಮನೋದೋಷಗಳನ್ನು ಹೊಡೆದೋಡಿಸಿ ಅಂತರಂಗದ ರಾಜ್ಯದಲ್ಲಿ ನೆಲೆಗೊಳ್ಳು ಎಂದರ್ಥ. ನಮ್ಮೊಳಗಿರುವ ಈ ಶತ್ರುಗಳು ನಮ್ಮ ಇಂದ್ರಿಯಗಳನ್ನು ಕೆಟ್ಟ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸುತ್ತವೆ. ಇದರಿಂದ ಕಣ್ಣು ಕೆಟ್ಟದ್ದನ್ನು ನೋಡುತ್ತದೆ, ಕಿವಿ ಕೆಟ್ಟದ್ದನ್ನು ಕೇಳಲು ಹಂಬಲಿಸುತ್ತದೆ, ಬಾಯಿ ಕೆಟ್ಟ ಮಾತನ್ನು ಆಡುತ್ತದೆ! ಹೀಗೆ ನಮ್ಮ ವ್ಯಕ್ತಿತ್ಟವನ್ನು ಈ ಶತ್ರುಗಳು ನಮ್ಮಿಂದ ದೂರ ತಳ್ಳುತ್ತವೆ. ನಾವು ನಮ್ಮೊಳಗಿರುವ ಈ ಶತ್ರುಗಳನ್ನು ಗೆಲ್ಲಬೇಕಾದರೆ ಸತ್ಯಪರಾಕ್ರಮಿಯಾದ ಭಗವಂತನಲ್ಲಿ ಶರಣಾಗಬೇಕು. "ನನಗೆ ನನ್ನೊಳಗಿರುವ ಶತ್ರುಗಳನ್ನು ಸೋಲಿಸುವ ಶಕ್ತಿ ಇಲ್ಲ, ನೀನೇ ಸರ್ವ ವಿಘ್ನಗಳನ್ನು ನಿವಾರಿಸಿ, ಈ ಶತ್ರುಗಳಿಂದ ನನ್ನನ್ನು ಪಾರುಮಾಡಿ, ಸತ್ಯದ ದಾರಿಯಲ್ಲಿ ಮುನ್ನೆಡೆಸು" ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. "ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ." ಭಗವಂತನೊಬ್ಬನೇ ಸರ್ವ ವಿಘ್ನಗಳ ನಾಶಕ ಹಾಗು ಸತ್ಯಪರಾಕ್ರಮಿ. ಈ ರೀತಿ ನಮ್ಮೊಳಗಿನ ಹಾಗು ಹೊರಗಿನ ದುಷ್ಟರನ್ನು ಬಗ್ಗು ಬಡಿಯಲು ನಾವು ಶರಣಾಗಬೇಕಾದ ಭಗವಂತ ಸತ್ಯಪರಾಕ್ರಮಃ

Tuesday, July 27, 2010

Vishnu sahasranama 204-208

ವಿಷ್ಣು ಸಹಸ್ರನಾಮ: ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ
204) ಅಜಃ
ಅಜಃ ಎಂದರೆ ಎಂದೂ ಹುಟ್ಟದವನು. ಎಲ್ಲರೂ ಭಗವಂತನ ಮಕ್ಕಳು, ಆದರೆ ಆತ ಯಾರಿಗೂ ಹುಟ್ಟಿದವನಲ್ಲ. ಭಗವಂತನ ಹುಟ್ಟಿನ ಬಗ್ಗೆ ಚರ್ಚೆ 'ಬೀಜ ಮೊದಲೋ ಮರ ಮೊದಲೋ' ಎನ್ನುವ ಚರ್ಚೆಯಂತೆ. ಆತನ ತಂದೆ ಯಾರೂ ಅಲ್ಲ ಏಕೆಂದರೆ ಅವನಿಗೆ ಹುಟ್ಟು-ಸಾವು ಎಂಬುದಿಲ್ಲ.ಇನ್ನು ಅಜಃ ಎಂದರೆ ಎಲ್ಲಾ ಕಡೆ ವ್ಯಾಪಿಸಿರುವವನು ಕೂಡಾ ಹೌದು. ಅ+ಜ-ಅಜಃ. ಇಲ್ಲಿ 'ಅ' ಎಂದರೆ 'ಅಲ್ಲ' ಅಥವಾ ಇಲ್ಲ! ಅಂದರೆ ಅವನು ನಾವು ತಿಳಿದ ಯಾವ ವಸ್ತುವೂ ಅಲ್ಲ, ಅವನಲ್ಲಿ ಯಾವ ದೋಷವೂ ಇಲ್ಲ. 'ಜ' ಎಂದರೆ 'ಜನಕ'. ಭಗವಂತ ಎಲ್ಲರ ತಂದೆ.
205) ದುರ್ಮರ್ಷಣಃ
'ಮರ್ಷಣ' ಎಂದರೆ ಎಂಥಹ ವಿರೋಧವನ್ನೂ ತಡೆಯಬಲ್ಲ ಶಕ್ತಿ. ದುರ್ಮರ್ಷಣ ಎಂದರೆ ಯಾರೂ ತಡೆಯಲು ಅಸಾಧ್ಯವಾದ ಶಕ್ತಿ. ಭಗವಂತನನ್ನು ತಡೆದು ನಿಲ್ಲುವ ಶಕ್ತಿ ಇನ್ನೊಂದಿಲ್ಲ. ಸರ್ವಜ್ಞನಾದ ಆತನ ಆನಂದ ಸ್ವರೂಪ ಎಲ್ಲಾಕಡೆ ತುಂಬಿ ತುಳುಕುತ್ತಿರುತ್ತದೆ ಹಾಗು ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.
206) ಶಾಸ್ತಾ
ಶಾಸ್ತಾ ಎಂದರೆ ಶಾಸನ ಮಾಡುವವನು,ಕರ್ಮಕ್ಕೆ ತಕ್ಕಂತೆ ಜೀವರ ನಿಯಮನ ಮಾಡುವವವನು. ಭಗವಂತನ ನಿಯಮದಲ್ಲಿ ಸತ್ಯ, ಅಸತ್ಯ, ಹಿಂಸೆ,ಅಹಿಂಸೆ, ಧರ್ಮ-ಅಧರ್ಮಗಳಿಗೆ ವಿಶಿಷ್ಟವಾದ ವಿವರಣೆಯಿದೆ. ಇನ್ನೊಬ್ಬರ ಕ್ಷೇಮಕ್ಕೋಸ್ಕರ ಹೇಳುವ ಸುಳ್ಳು ಸತ್ಯ! ನಮ್ಮ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ತೊಂದರೆಯಾಗುವಂತೆ ಹೇಳುವ ಸತ್ಯ ಸುಳ್ಳು! ಸದ್ಭಾವನೆಯಿಂದ ಮಾಡಿದ ಕಾರ್ಯ ಧರ್ಮ. ಸ್ವರಕ್ಷಣೆ, ದೇಶ ರಕ್ಷಣೆ ಕಾರ್ಯದಲ್ಲಿ ನಮ್ಮಿಂದ ನಡೆಯುವ ಹಿಂಸೆ ಅಹಿಂಸೆ! ಭಗವಂತನ ಈ ವಿಶಿಷ್ಟ ನಿಯಮಗಳ ಅನೇಕ ದೃಷ್ಟಾಂತಗಳನ್ನು ಮಹಾಭಾರತ ಅಥವಾ ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಕೃಷ್ಣ ಸುಳ್ಳು ಹೇಳಿಸಿದ, ಮೋಸ ಮಾಡಿಸಿದ ಎನ್ನುವಂತೆ ಕಾಣುವ ಅನೇಕ ಘಟನೆಗಳ ಹಿಂದೆ ಭಗವಂತನ ಕಾರುಣ್ಯಪೂರ್ಣ ಉದ್ದೇಶ ಅಡಗಿದೆ. ಹೀಗೆ ಶಾಸನಗಳನ್ನು ಭೋಧನೆ ಮತ್ತು ನೈಜ ಘಟನೆಗಳ ಮೂಲಕ ನಮ್ಮ ಮುಂದೆ ಇರಿಸಿದ ಭಗವಂತ ಶಾಸ್ತಾ.
207) ವಿಶ್ರುತಾತ್ಮಾ
ವಿಶ್ರುತ ಎಂದರೆ ಎಲ್ಲರಿಂದ ಶ್ರುತನಾದವನು. ಸರ್ವ ಶಾಸ್ತ್ರಗಳಲ್ಲಿ ಖ್ಯಾತನಾದ, ಜ್ಞಾನಿಗಳಿಗೆ ಆತ್ಮೀಯನಾದ ಭಗವಂತ ವಿಶ್ರುತಾತ್ಮಾ.
208) ಸುರಾರಿಹಾ
ಸುರರು ಎಂದರೆ ಆನಂದದ ಅರಿವಿನಲ್ಲಿ ಅಥವಾ ಭಗವಂತನ ಅರಿವಿನಲ್ಲಿ ಬದುಕುವವರು. ಸುರರಿಗೆ ಅರಿಗಳು ಸುರಾರಿಗಳು. ಭೋಗ ಭಾಗ್ಯಗಳಿಂದ ಆಚೆಗೆ ಏನೂ ಇಲ್ಲ ಎಂದು ತಿಳಿದು, ನಿಜವಾದ ಆನಂದದ ಅರಿವಿಲ್ಲದೆ ಬದುಕುವವರು ಸುರಾರಿಗಳು. ಇಂತಹ ದೇವತೆಗಳ ಹಗೆಗಳನ್ನು ಸಾವಿನ ಕಡೆಗೆ ತಳ್ಳುವ ಭಗವಂತ ಸುರಾರಿಹಾ.

Monday, July 26, 2010

Vishnu sahasranama 201-203

ವಿಷ್ಣು ಸಹಸ್ರನಾಮ: ಸಂಧಾತಾ ಸಂಧಿಮಾನ್ ಸ್ಥಿರಃ
201) ಸಂಧಾತಾ
ಧಾತಾ, ವಿಧಾತಾ, ಸಂಧಾತ ಇತ್ಯಾದಿ ನಾಮಗಳನ್ನು ವೇದಗಳಲ್ಲಿ ಕಾಣಬಹುದು. ಇಲ್ಲಿ 'ಧಾತಾ' ಎಂದರೆ ನಮ್ಮನ್ನು ಪೋಷಣೆ ಮಾಡುವ ಶಕ್ತಿ. ಸಂಧಾತ ಎಂದರೆ ಸರ್ವರನ್ನು ಧಾರಣೆ ಮಾಡಿ, ಸರ್ವರನ್ನು ಪೋಷಣೆ ಮಾಡುವ ಮಹಾ ಕರುಣಾ ಮೂರ್ತಿ.
ಇನ್ನು
ಸಂಧಾತಾ ಎಂದರೆ ಜೋಡಿಸುವುದು ಎನ್ನುವ ಅರ್ಥವನ್ನೂ ಕೊಡುತ್ತದೆ. ಈ ಬ್ರಹ್ಮಾಂಡದಲ್ಲಿ ಜ್ಯೋತಿರ್ವರ್ಷದಿಂದಲೂ ಅಳೆಯಲು ಸಾಧ್ಯವಾಗದಷ್ಟು ದೂರದ ವರೆಗೆ, ನಮ್ಮ ಕಣ್ಣಿಗೆ ಕಾಣುವ, ಕಾಣದಿರುವ ಎಲ್ಲಾ ಗ್ರಹ-ಗೊಲಗಳನ್ನು ನಿರಾಲಂಬ ಆಕಾಶದಲ್ಲಿ ನಿಯಮಿತವಾಗಿ ಜೋಡಿಸಿ ಹಿಡಿದಿಟ್ಟಿರುವ ಶಕ್ತಿಭಗವಂತ ಸಂಧಾತಾ.
202) ಸಂಧಿಮಾನ್
ನಮ್ಮ ದೇಹದಲ್ಲಿರುವ 360 ಮೂಳೆಗಳ ಅಪೂರ್ವ ಜೋಡಣೆ, ಅಸ್ತಿ ಸಂಧಿಯಲ್ಲಿನ ಚಲನೆ ಮತ್ತು ನಿರ್ವಹಣೆಯ ಅಪೂರ್ವ ವಿನ್ಯಾಸಕಾರ ಭಗವಂತ
ಸಂಧಿಮಾನ್. ಅನೇಕ ವರ್ಣಗಳ ಸಂಧಿಯಿಂದ ಶಬ್ದಗಳ ರಚನೆ, ಶಬ್ದಗಳ ಸಂಧಿಯಿಂದ ವಾಕ್ಯದ ರಚನೆ, ವಾಕ್ಯಗಳ ಸಂಧಿಯಿಂದ ಗ್ರಂಥಗಳ ರಚನೆ, ಹೀಗೆ ಅಕ್ಷರಗಳ ಸಮಾಗಮದಿಂದ ಹೊಸ ಅರ್ಥದ ಪದ ಹಾಗು ಗ್ರಂಥ ಸೃಷ್ಟಿಮಾಡುವ ಭಗವಂತ ಸಂಧಿಮಾನ್. ಇಷ್ಟೇ ಅಲ್ಲದೆ ಗಂಡು ಹೆಣ್ಣುಗಳ ಸಮಾಗಮದಲ್ಲಿ ಸನ್ನಿಹಿತನಾಗಿದ್ದು, ಜೀವದ ಸೃಷ್ಟಿಗೆ ಕಾರಣನಾದ ಭಗವಂತ ಸಂಧಿಮಾನ್.
203)ಸ್ಥಿರಃ
ಭಗವಂತ ಬದಲಾಗದವನು,ಅವನಿಗೆ ಬಾಲ್ಯ-ಯೌವನ-ಮುದಿತನವೆನ್ನುವುದಿಲ್ಲ.ಅವನು ಅಚಲ. ಹೀಗೆ ಅಚಲ ಮತ್ತು ಅನಂದಮಯನಾಗಿ ಎಲ್ಲೆಡೆ ತುಂಬಿರುವ ಭಗವಂತ
ಸ್ಥಿರಃ

Sunday, July 25, 2010

ವಿಷ್ಣು ಸಹಸ್ರನಾಮ 198-200

ವಿಷ್ಣು ಸಹಸ್ರನಾಮ: ಅಮೃತ್ಯುಃ ಸರ್ವದೃಕ್ ಸಿಂಹಃ
198) ಅಮೃತ್ಯುಃ
ಭಗವಂತ ಮೃತ್ಯು ಇಲ್ಲದವನು. ಮೃತ್ಯುವಿಗೆ ಇನ್ನೊಂದು ಹೆಸರು 'ಅಪಸ್ಮೃತಿ', ಅಂದರೆ ನೆನಪನ್ನು ಅಳಿಸುವುದು. ಭಗವಂತ ಮೃತ್ಯುವನ್ನು ದಾಟಿನಿಂತವ. ಇತರ ದೇವಾದಿ ದೇವತೆಗಳಿಗೂ ಕೂಡ ಮೋಕ್ಷಕ್ಕೆ ಮೊದಲು ಮೃತ್ಯುವಿದೆ. ನಮಗೆ ಮೃತ್ಯುವೇ ಮೋಕ್ಷದ ಮಾರ್ಗ. ಅನೇಕ ಮೃತ್ಯುವಿನ ಬಳಿಕ, ಮೃತ್ಯು ರಹಿತ ಭಗವಂತನ ಸಾನಿದ್ಯವಾದ ಮೋಕ್ಷ ದೊರೆಯುತ್ತದೆ.
199) ಸರ್ವದೃಕ್
ಭಗವಂತನಿಗೆ ತಿಳಿಯಲಾಗದ್ದು ಯಾವುದೂ ಇಲ್ಲ. ಅವನು ಎಲ್ಲವನ್ನೂ ಕಾಣುವವನು. ನಮಗೆ ಈ ಪ್ರಪಂಚವನ್ನು ನೋಡುವ ಶಕ್ತಿಯನ್ನು ಕರುಣಿಸಿದವನು. ಸಾಕ್ಷಿ ಮತ್ತು ಸರ್ವದೃಕ್ ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತದೆ. ಹೀಗೆ ಸರ್ವವನ್ನೂ ಕಾಣಬಲ್ಲ ಭಗವಂತ ಸರ್ವದೃಕ್.
200) ಸಿಂಹಃ
ಸಿಂಹಃ ಎಂದರೆ ಸರ್ವ ಸಂಹಾರಕ! ಯಾವುದೂ ನಮಗೆ ಬೇಡವಾಗಿದೆಯೋ ಅದನ್ನು ಸಂಹಾರ ಮಾಡುವವನು. ನಮಗೆ ನಿಜವಾಗಿ ಏನು ಬೇಕು ಎನ್ನುವ ಅರಿವು ಕೂಡಾ ನಮಗಿರುವುದಿಲ್ಲ. ಭಗವಂತನಲ್ಲಿ ನಮ್ಮ ಬೇಕು ಬೇಡಗಳ ಪಟ್ಟಿಯಿರುತ್ತದೆ ಹಾಗು ಅದು ನಮ್ಮ ಪಟ್ಟಿಗಿಂತ ತೀರ ಭಿನ್ನವಾಗಿರಬಹುದು. ನಾವು ಅನೇಕ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ನಮಗೆ ಬದುಕಬೇಕು ಎನ್ನುವ ಆಸೆ ಇರುತ್ತದೆ. ಆದರೆ ಈ ಸ್ಥಿತಿಯಲ್ಲಿ ಸಾವು ನಿಜವಾದ ವರ. ಈ ಸ್ಥೂಲ ಶರೀರದಲ್ಲಿದ್ದು ಒದ್ದಾಡುತ್ತಿರುವ ಜೀವ ತನ್ನ ಸ್ವಾತಂತ್ರ್ಯಕ್ಕಾಗಿ ಕಾದು ಕುಳಿತಿರುತ್ತದೆ. ಏಕೆಂದರೆ ಕಾಯಿಲೆ ಮತ್ತು ಅಂಗ ಹೀನತೆ ಕೇವಲ ಸ್ಥೂಲ ಶರೀರಕ್ಕೆ ಸಂಬಂಧಪಟ್ಟಿದ್ದೇ ಹೊರತು, ಸೂಕ್ಷ್ಮ ಶರೀರಕ್ಕಲ್ಲ. ಆದ್ದರಿಂದ ಸಾವು ಜೀವವನ್ನು ಅದರ ಸಹಜ ಸ್ಥಿತಿಗೆ ಕೊಂಡೋಯ್ಯವ ಸಹಜ ಕ್ರಿಯೆ. ಪಾಂಚಭೌತಿಕವಾದ ಈ ಶರೀರದ ಸಂಹಾರವಾಗದೆ, ನಮಗೆ ಮುಕ್ತಿಯಿಲ್ಲ. ಆದರೆ ಆತ್ಮಹತ್ಯೆ ಮಹಾ ಪಾಪ. ಹಿಮಾಲಯದಲ್ಲಿರುವ ಮಹಾತ್ಮ ಸಾಧುಗಳಿಗೆ ದೇಹ ತ್ಯಾಗ ಎನ್ನುವುದು ತೀರಾ ಸಹಜ ಮತ್ತು ಆನಂದದ ಕ್ರಿಯೆ, ಅವರಿಗೆ ತಮ್ಮ ಸಾವಿನ ದಿನಾಂಕ ಗೊತ್ತಿರುತ್ತದೆ. ಸ್ವಾಮಿರಾಮ್ ಅವರು ಬರೆದ "ಲಿವಿಂಗ್ ವಿಥ್ ಹಿಮಾಲಯನ್ ಮಾಸ್ಟರ್ಸ್" ಎನ್ನುವ ಪುಸ್ತಕದಲ್ಲಿ ಈ ಬಗ್ಗೆ ದಾಖಲೆಗಳಿವೆ. ನಮ್ಮಲ್ಲಿರುವ ದೋಷದ ನಿವಾರಣೆಗಾಗಿ ನರಸಿಂಹ ಸ್ವರೂಪವನ್ನು ಉಪಾಸನೆ ಮಾಡುವುದು ಶಾಸ್ತ್ರೋಕ್ತ. ಹೀಗೆ ಎಲ್ಲಾ ದೋಷಗಳ ಸಂಹಾರಕ, ಜೀವದ ಸಂಹಾರಕ ಮತ್ತು ಪೌರುಷದ ಗಣಿಯಾದ ಸರ್ವಶ್ರೇಷ್ಠ ಭಗವಂತ ಸಿಂಹಃ.

Saturday, July 24, 2010

Vishnu sahasranama 194-197

ವಿಷ್ಣು ಸಹಸ್ರನಾಮ: ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ
194) ಹಿರಣ್ಯನಾಭಃ
ಹಿರಣ್ಯ ಅಂದರೆ ಚಿನ್ನ. ಆದ್ದರಿಂದ ಹಿರಣ್ಯನಾಭ ಎಂದರೆ ಚಿನ್ನದ ಮೊಟ್ಟೆಯಂತಿರುವ ಈ ಬ್ರಹ್ಮಾಂಡವನ್ನು ತನ್ನ ಹೊಕ್ಕುಳಲ್ಲಿ ಹೊತ್ತವನು ಎಂದರ್ಥ. ಬ್ರಹ್ಮಾಂಡದ ಇನ್ನೊಂದು ಹೆಸರು ವಿರಾಟ, ಅಂದರೆ ಥಳ-ಥಳ ಹೊಳೆಯುವ ಚಿನ್ನದ ಮೊಟ್ಟೆ. ಭೂಮಿಯಿಂದ ಅತೀ ದೂರದಲ್ಲಿ ನಿಂತು ಭೂಮಿಯನ್ನು ನೋಡಿದರೆ, ಭೂಮಿ ಕೂಡಾ ನಕ್ಷತ್ರದಂತೆ ಹೊಳೆಯುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಚಿನ್ನದ ಮೊಟ್ಟೆಯಂತಹ ಈ ಬ್ರಹ್ಮಾಂಡದ ನಿರ್ಮಾಣ ಮಾಡಿದ ಭಗವಂತ ಹಿರಣ್ಯನಾಭಃ ಇನ್ನು ಹಿರಣ್ಯ ಎಂದರೆ ಹಿತವೂ, ರಮಣೀಯವೂ ಎಂದರ್ಥ. ಭಗವಂತ ಎಲ್ಲರಿಗೂ ಹಿತವೂ ರಮಣೀಯವೂ ಆಗಿ ಎಲ್ಲರೊಳಗೆ ಬಿಂಬ ರೂಪನಾಗಿದ್ದಾನೆ.
195) ಸುತಪಾಃ
ಸುತಪಾಃ ಅಂದರೆ ಸಮೀಚೀನವಾದ ತಪಸ್ಸು ಮಾಡುವವ. ಇಲ್ಲಿ ತಪಸ್ಸು ಎಂದರೆ ಒಂದು ಸಂಗತಿಯನ್ನು ಆಳವಾಗಿ ಚಿಂತಿಸಿ ಅದರ ತಳಸ್ಪರ್ಶಿ ಚಿಂತನ ಮಾಡುವುದು ಎಂದರ್ಥ. ಎಲ್ಲಾ ವಿಷಯಗಳನ್ನು ಗ್ರಹಿಸುವ, ತಳಸ್ಪರ್ಶಿಯಾದ ಜ್ಞಾನವುಳ್ಳವ ಸುತಪಾಃ. ಇನ್ನು ಈ ನಾಮವನ್ನು ಒಡೆದು ನೋಡಿದಾಗ ಸುತ+ಪಾ, ಇಲ್ಲಿ ಸುತ ಅಂದರೆ ಮಕ್ಕಳು, ಪಾ ಅಂದರೆ ಪಾಲಿಸುವವನು. ಎಲ್ಲರೂ ಭಗವಂತನ ಮಕ್ಕಳೇ. ಭಗವಂತನಿಗೆ ಮೇಲು ಕೀಳು ಎನ್ನುವ ಬೇದವಿಲ್ಲ. ತನ್ನೆಲ್ಲಾ ಮಕ್ಕಳನ್ನು ನಿಷ್ಪಕ್ಷಪಾತವಾಗಿ ಅವರವರ ಪೂರ್ವ ಕರ್ಮಕ್ಕನುಸಾರವಾಗಿ ಫಲಕೊಟ್ಟು ಸಲಹುವವನು ಸುತಪಾಃ ಇನ್ನೂ ಸು+ತ+ಪಾ-ಸುತಪಾ. ಇಲ್ಲಿ ಸು ಅಂದರೆ ಸಮೀಚೀನವಾದ ಆನಂದ ಸ್ವರೂಪ, ತ ಅಂದರೆ ತತಿ ಅಂದರೆ ಹಬ್ಬುವುದು(ಜ್ಞಾನದ ಮೂಲಕ) , ಪಾ ಅಂದರೆ ಸರ್ವ ಪಾಲಕನಾದ ಆನಂದ ಸ್ವರೂಪ. ಆದ್ದರಿಂದ ಸುತಪಾಃ ಅಂದರೆ ಸತ್, ಚಿತ್, ಆನಂದ - ಸಚ್ಚಿದಾನಂದ ರೂಪಿ ಭಗವಂತ.
196) ಪದ್ಮನಾಭಃ
ಈ ಬ್ರಹ್ಮಾಂಡವನ್ನು ತಾವರೆಗೆ ಹೋಲಿಸಿದ್ದಾರೆ. ಯಾರ ನಾಭಿಯಿಂದ ಈ ಪದ್ಮಾಕಾರವಾದ ಭುವನ ಸೃಷ್ಟಿಯಾಯಿತೋ ಅವನು ಪದ್ಮನಾಭಃ.
197) ಪ್ರಜಾಪತಿಃ
ಪ್ರಜಾಪತಿ ಎಂದರೆ ಸಮಸ್ತ ಜೀವಜಾತಗಳ ಪತಿ ಎನ್ನುವುದು ಒಂದು ಅರ್ಥ. ಇಲ್ಲಿ 'ಪತಿ' ಎಂದರೆ 'ರಕ್ಷಕ'. ಚತುರ್ಮುಖ ಬ್ರಹ್ಮನಿಗೂ ಪ್ರಜಾಪತಿ ಎನ್ನುತ್ತಾರೆ. ಜೀವ ಸ್ವರೂಪದ ಅಭಿಮಾನಿ ದೇವತೆಯಾದ ಬ್ರಹ್ಮ ಪ್ರಜಾಪತಿ ಹೌದು, ಆದರೆ ಚತುರ್ಮುಖನೂ ಕೂಡ ಒಬ್ಬ ಪ್ರಜೆ. ಸಮಸ್ತ ಜೀವಜಾತಗಳೊಂದಿಗೆ ಚತುರ್ಮುಖನನ್ನೂ ರಕ್ಷಿಸುವ ಭಗವಂತ ಪ್ರಜಾಪತಿಃ ಇನ್ನು 'ಪ್ರಜಾ' ಎಂದರೆ 'ಜ್ಞಾನ' , ಭಗವಂತ ಜ್ಞಾನದ ರಕ್ಷಕ. ನಮ್ಮಲ್ಲಿ "ಸಂತಾನವಿಲ್ಲದವರಿಗೆ ವೇದಶಾಸ್ತ್ರ ಹೇಳಬಾರದು" ಎನ್ನುವ ಅಪನಂಬಿಕೆ ಇದೆ. ಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖ ಇರುವುದು ನಿಜ. ಆದರೆ ಅಲ್ಲಿ ಮಕ್ಕಳು ಎಂದರೆ ಶಿಷ್ಯ ವರ್ಗ. ಯಾರು ತಾನು ಕಲಿತಿದ್ದನ್ನು ಇನ್ನೊಬ್ಬರಿಗೆ ಹೇಳಲಾರರೋ, ಅಂಥವರಿಂದ ಜ್ಞಾನದ ರಕ್ಷಣೆ ಆಗದು, ಅವರಿಗೆ ವೇದ ಶಾಸ್ತ್ರ ಪಾಠ ಹೇಳಬಾರದು ಎಂದರ್ಥ. ನಮಗೆ ಸಂತಾನವಿದ್ದಾಕ್ಷಣ ಸದ್ಗತಿ ದೊರೆಯುವುದಿಲ್ಲ. ಸದ್ಗತಿ ನಾವು ಮಾಡುವ ಕರ್ಮದ ಮೇಲೆ ನಿರ್ಧಾರವಾಗುತ್ತದೆ. ಇನ್ನು ಪುರಾಣದಲ್ಲಿ "ಅಪುತ್ರಸ್ಯ ಗತಿರ್ನಾಸ್ತಿ" ಎಂದಿದೆ, ಇದನ್ನು "ಸಂತಾನವಿಲ್ಲದವರಿಗೆ ಮೋಕ್ಷವಿಲ್ಲ" ಎಂದು ಅಪಾರ್ಥ ಮಾಡುತ್ತಾರೆ. ಆದರೆ ನಿಜವಾದ ಅರ್ಥ " ನಾವು ಗಳಿಸಿದ ಜ್ಞಾನವನ್ನು ಮುಂದಿನ ಪೀಳಿಗೆಯ ಪ್ರಜಾ ಅಥವಾ ಪ್ರಜ್ಞೆಉಳ್ಳವರಿಗೆ ಕೊಡದೇ ಸತ್ತರೆ ಅಂತವರಿಗೆ ಸದ್ಗತಿ ಸಿಗದು" ಎಂಬುದಾಗಿದೆ. ಭಗವಂತ ಪ್ರಜಾ(ಜ್ಞಾನ) ರಕ್ಷಕ, ಹಾಗು ಜ್ಞಾನವನ್ನು
ದಾನ ಮಾಡುವವರನ್ನು ಆತ ಉದ್ದಾರ ಮಾಡುತ್ತಾನೆ. ಜ್ಞಾನ ದಾನ ಭಗವಂತನ ಜ್ಞಾನ ರಕ್ಷಣೆಯ ಅವಿಭಾಜ್ಯ ಅಂಗ. ಜ್ಞಾನ ರಕ್ಷಣೆಗಾಗಿ ಶ್ರೀಕೃಷ್ಣ, ಶವ ಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರಿಂದ, ಧರ್ಮರಾಯನಿಗೆ ಜ್ಞಾನದ ಉಪದೇಶ ಮಾಡಿಸಿ, ಜ್ಞಾನದ ರಕ್ಷಣೆ ಹಾಗು ಭೀಷ್ಮಾಚಾರ್ಯರ ಉದ್ದಾರ ಮಾಡುತ್ತಾನೆ. ಈ ರೀತಿ ಜ್ಞಾನದ ಒಡೆಯ ಹಾಗು ಜ್ಞಾನದ ರಕ್ಷಕನಾದ ಭಗವಂತ ಪ್ರಜಾಪತಿಃ .

Friday, July 23, 2010

Vishnu ಸಹಸ್ರನಾಮ 185-193

ವಿಷ್ಣು ಸಹಸ್ರನಾಮ: ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂಪತಿಃ 185) ಅನಿರುದ್ಧಃ ಈ ಹಿಂದೆ ನಾವು ಭಗವಂತನ ಚತುರ್ಮೂರ್ತಿ ರೂಪದ ಬಗ್ಗೆ ವಿಶ್ಲೇಷಿಸಿದ್ದೇವೆ. ಸೃಷ್ಟಿಯ ಆರಂಭದಲ್ಲಿ ಭಗವಂತ ನಾಲ್ಕು ಕ್ರಿಯೆಗಳನ್ನು ಪ್ರತಿನಿಧಿಸುವ ನಾಲ್ಕು ರೂಪದಲ್ಲಿ ವ್ಯಕ್ತವಾಗುತ್ತಾನೆ. ಅವುಗಳೆಂದರೆ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ. ವಾಸುದೇವ ಮೊಕ್ಷಪ್ರದವಾದ ರೂಪ, ಸಂಕರ್ಷಣ ಸಂಹಾರಪ್ರದವಾದ ರೂಪ, ಪ್ರದ್ಯುಮ್ನ ಸೃಷ್ಟಿ ಕಾರಣ ರೂಪ ಹಾಗು ಅನಿರುದ್ದ ಸ್ಥಿತಿ ಕಾರಣ ರೂಪ. ಜಗತ್ತಿನ ಸ್ಥಿತಿ ಅಥವಾ ರಕ್ಷಣೆಗೆ ಭಗವಂತ ತಾಳಿದ ರೂಪ ಅನಿರುದ್ದ ರೂಪ. ಬಾಹ್ಯ ಪ್ರಜ್ಞೆಯ ತಡೆ ಇಲ್ಲದೆ, ಬಾಹ್ಯ ಪ್ರಜ್ಞೆಯನ್ನು ಅನುಭವಿಸುವ ಭಗವಂತನ ರೂಪ ಅನಿರುದ್ದ ರೂಪ. ಹೀಗೆ ನಮ್ಮ ದೇಹದಲ್ಲಿರುವ ಪಂಚಪ್ರಾಣಗಳ ಚಲನೆಗೆ ಕಾರಣ ಶಕ್ತಿಯಾದ ಭಗವಂತ ಅನಿರುದ್ದ. 186) ಸುರಾನಂದಃ ಸುರರು ಅಂದರೆ ದೇವತೆಗಳು. ದೇವತೆಗಳ ಒಳಗಿದ್ದು ಅವರಿಗೆ ನಿರಂತರ ದುಃಖ ಸ್ಪರ್ಶವಿಲ್ಲದ ಆನಂದವನ್ನು ಕೊಡುವವನು. ಮುಕ್ತರಿಗೆ, ಮುಕ್ತಿ ಯೋಗ್ಯರಾದವರಿಗೆ ಆನಂದವನ್ನು ಕೊಡುವ ಭಗವಂತ ಸುರಾನಂದಃ 187) ಗೋವಿಂದಃ ಎಚ್ಚರ ಸ್ಥಿತಿಯಲ್ಲಿ ನಮ್ಮ ಆಜ್ಞಾ ಚಕ್ರದಲ್ಲಿ ಮೂರನೇ ಕಣ್ಣಾಗಿ ಕುಳಿತವ ಗೋವಿಂದಃ. ಒಳಗಣ್ಣಿನಿಂದ ನಮಗೆ ಮಾರ್ಗದರ್ಶನ ಮಾಡುವ ಶಕ್ತಿ. ಅದಕ್ಕಾಗಿ ಪ್ರಾತಃಕಾಲದಲ್ಲಿ "ಉತ್ತಿಷ್ಟೋತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ " ಎಂದು ಪ್ರಾರ್ಥನೆ ಮಾಡುತ್ತೇವೆ. ಅಂದರೆ "ನಮ್ಮ ಆಜ್ಞಾ ಚಕ್ರದಲ್ಲಿ ಕುಳಿತು ನಮಗೆ ಮಾರ್ಗದರ್ಶನ ಮಾಡು" ಎಂದರ್ಥ. ಊಟದ ಸಮಯದಲ್ಲಿ ನಮ್ಮ ಅಂತಃಕರಣ ಜಾಗೃತಿಗಾಗಿ "ಗೋವಿಂದ" ಸ್ಮರಣೆ ಮಾಡುತ್ತೇವೆ. ಇಂದ್ರ ಗೋವರ್ಧನ ಪರ್ವತವನ್ನೆತ್ತಿದ ಭಗವಂತನನ್ನು, ಗೋವಿಂದ ಎಂದು ಕರೆಯುತ್ತಾನೆ. ಭೂಮಿಯ ಮೇಲೆ ಅನಂತ ರೂಪದಲ್ಲಿ ಇಳಿದು ಬಂದ ಭಗವಂತ ಗೋವಿಂದಃ 188) ಗೋವಿದಾಂಪತಿಃ ವೇದಗಳನ್ನು ತಿಳಿದವನು, ವೇದಗಳನ್ನು ಸಲಹುವವನು, ದೇವತೆಗಳ ಅಧಿಪತಿಯಾದ ಭಗವಂತ ಗೋವಿದಾಂಪತಿಃ ವಿಷ್ಣು ಸಹಸ್ರನಾಮ: ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ 189) ಮರೀಚಿಃ ಸೂರ್ಯ ಕಿರಣಗಳಲ್ಲಿದ್ದು, ಪ್ರಾಣ ಶಕ್ತಿಯನ್ನು ವಿಶ್ವದ ಜೀವ ಜಾತಕ್ಕೆ ಕೊಡುವವ ಮರೀಚಿಃ. ಇನ್ನು 'ಮರಿ' ಎಂದರೆ ನೀರು ತುಂಬಿದ ಮೋಡ. ಮೋಡಗಳಿಗೆ ಚಲನೆಯನ್ನು ಕೊಟ್ಟು ಮಳೆ ಬರಿಸುವವ ಮರೀಚಿಃ . ಗೀತೆಯಲ್ಲಿ ಹೇಳುವಂತೆ: ಯದಾದಿತ್ಯ ಗತಂ ತೇಜೋ ಜಗದ್ ಭಾಸಯತೇsಖಿಲಮ್ ಯಚ್ಚಂದ್ರ ಮಸಿ ಯಚ್ಚ ಗೌನ ತತ್ ತೇಜೋ ವಿದ್ದಿ ಮಾಮಕಮ್ (ಅ-೧೫, ಶ್ಲೋ-೧೨) ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೇ ಬೆಳಕೆಂದು ತಿಳಿ". ಈ ರೀತಿ ಜೀವರಲ್ಲಿ ತುಂಬಿರುವ ಬೆಳಕಿನ ಕುಡಿಯಾದ ಭಗವಂತ ಮರೀಚಿಃ 190) ದಮನಃ ಮೇಲೆ ಹೇಳಿದ ಸೂರ್ಯಕಿರಣ ರೂಪಿ ಭಗವಂತ, ಮೋಡಗಳ ರೂಪದಲ್ಲಿ ನೀರನ್ನು ಕೊಡುವ ಭಗವಂತ, ಪ್ರಳಯ ಕಾಲದಲ್ಲಿ ಅದೇ ಸೂರ್ಯ ಕಿರಣದ ಮೂಲಕ, ನೀರಿನ ಮೂಲಕ (ಜಲಪ್ರಳಯ) ಎಲ್ಲವನ್ನು ದಮನ ಮಾಡಿ ಯೋಗ ನಿದ್ರೆಯನ್ನು ಅನುಭವಿಸುತ್ತಾನೆ. ಸಜ್ಜನರಿಗೆ ಭಗವಂತ 'ದಮ'. ಅಂದರೆ ಇಂದ್ರಿಯ ನಿಗ್ರಹ ಶಕ್ತಿಯನ್ನು ಕರುಣಿಸುವವ. ದುರ್ಜನರ ದಮನ (ನಾಶ) ಮಾಡುವ ಭಗವಂತ ದಮನಃ 
191) ಹಂಸಃ
ದೋಷಹೀನ; ಸಾರರೂಪ; ಸಂಸಾರವನ್ನು ನಾಶಗೊಳಿಸುವವನು; ಎಲ್ಲರೊಳಗೂ ಅಂತರ್ಯಾಮಿಯಾಗಿರುವವನು; ಎಲ್ಲೆಡೆಯೂ ತುಂಬಿರುವವನೂ ಆದ ಭಗವಂತ ಹಂಸಃ.
192) ಸುಪರ್ಣಃ
ಗರುಡನಲ್ಲಿ ಅಂತರ್ಯಾಮಿಯಾಗಿರುವವನು; ದುಃಖವಿರದ ಪರಿಪೂರ್ಣಾನಂದ ಸ್ವರೂಪನು; ಜೀವರಿಗೆ ಸಾಧನೆಯಿಂದ ಪೂರ್ಣತೆಯನ್ನೀಯುವವನು; ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣಾನಂದವನ್ನೀಯುವವನು ಸುಪರ್ಣಃ .

192) ಸುಪರ್ಣಃ ಗರುಡನಲ್ಲಿ ಅಂತರ್ಯಾಮಿಯಾಗಿರುವವನು; ದುಃಖವಿರದ ಪರಿಪೂರ್ಣಾನಂದ ಸ್ವರೂಪನು; ಜೀವರಿಗೆ ಸಾಧನೆಯಿಂದ ಪೂರ್ಣತೆಯನ್ನೀಯುವವನು; ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣಾನಂದವನ್ನೀಯುವವನು ಸುಪರ್ಣಃ . 193) ಭುಜಗೋತ್ತಮಃ ಗರುಡನ ಹೆಗಲೇರಿ ಸಾಗುವ ಹಿರಿಯ ತತ್ವ ; ಹಾವುಗಳಲ್ಲಿ ಸನ್ನಿಹಿತನಾದ ಪುರುಷೋತ್ತಮ.

Thursday, July 22, 2010

Vishnu sahasranama 181-184


ವಿಷ್ಣು ಸಹಸ್ರನಾಮ : ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿಃ
181) ಮಹೇಷ್ವಾಸಃ

ಮಹೇಷ್ವಾಸ(ಮಹಾ+ಇಷು+ಆಸ) ಅಂದರೆ ಮಹಾನ್ ಬಿಲ್ಲು ಹೊತ್ತ ಬಿಲ್ಲೋಜ. ಭಗವಂತನ ಅವತಾರದಲ್ಲಿ ಈ ನಾಮಕ್ಕೆ ಸಂಬಂಧಪಟ್ಟ ಕೆಲವು ನಿದರ್ಶನಗಳನ್ನು ಕಾಣುತ್ತೇವೆ. ಸೀತಾ ಸ್ವಯಂವರದಲ್ಲಿ ಶ್ರೀರಾಮ ಶಿವನ ಧನುಸ್ಸನ್ನು ಮುರಿದಿರುವುದು, ಬಿಲ್ಲ ಹಬ್ಬದಲ್ಲಿ ಶ್ರೀಕೃಷ್ಣ ಕಂಸ ಪೂಜಿಸುತ್ತಿದ್ದ ಶಿವಧನುಸ್ಸನ್ನು ಮುರಿದು, ಕಂಸನ ಸಂಹಾರ ಮಾಡಿರುವುದು, ಶ್ರೀರಾಮ ಪರಶುರಾಮನಿಂದ ಪಡೆದ ವೈಷ್ಣವ ಧನುಸ್ಸನ್ನು ಧರಿಸಿ, ರಾವಣ-ಕುಂಭಕರ್ಣರ ಸಂಹಾರ ಮಾಡಿರುವುದು, ಇತ್ಯಾದಿ.
ಈ ಮೇಲಿನ ಸಂದರ್ಭಗಳಲ್ಲಿ ಯಾರೂ ಎತ್ತಲು ಆಗದ ಶಿವ ಧನುಸ್ಸನ್ನು ಹರಿ ಹೇಗೆ ಎತ್ತಿದ ? ಆ ಬಿಲ್ಲು ಎಷ್ಟು ದೊಡ್ಡದಿತ್ತು ? ಇತ್ಯಾದಿ ಪ್ರಶ್ನೆಗಳು ನಮಗೆ ಬರುತ್ತದೆ. ಬಿಲ್ಲು ಸಾಮಾನ್ಯವಾಗೇ ಇದ್ದರೂ, ಅದರಲ್ಲಿ ಶಿವಶಕ್ತಿ ಸನ್ನಿಧಾನವಿದ್ದದರಿಂದ, ಯಾರಿಂದಲೂ ಅದನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹಿಂದೆ ಹೇಳಿದಂತೆ, ಶಿವಶಕ್ತಿ-ವಿಷ್ಣುಶಕ್ತಿಗಳು ಹಾಲಿನಲ್ಲಿರುವ ಬೆಣ್ಣೆಯಂತೆ, ಎರಡು ಅನ್ಯೋನ್ಯ ಶಕ್ತಿಗಳು. ಧನುರ್ಧಾರಣೆ ಈ ಶಕ್ತಿಗಳ ಸಮಾಗಮದ ಸಂಕೇತ.
ಈ ರೀತಿ ಮಹಾನ್ ಧನುಸ್ಸನ್ನು ಮುರಿದವ, ಮಹಾನ್ ಧನುಸ್ಸನ್ನು ಹಿಡಿದು ದುಷ್ಟಶಕ್ತಿಗಳ ಸಂಹಾರ ಮಾಡಿದವ, ಅರ್ಜುನನ ಒಳಗೆ ನರನಾಮಕನಾಗಿದ್ದು, ಗಾಂಡೀವ ಧನುಸ್ಸಿನಿಂದ ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ಮಹೇಷ್ವಾಸಃ.
182) ಮಹೀಭರ್ತಾ
ಇಲ್ಲಿ ಮಹೀ ಎಂದರೆ ಭೂಮಿ. ಭರ್ತಾ ಎಂದರೆ ಧರಿಸಿದವ ಅಥವಾ ಪತಿ.
ಭಗವಂತನನ್ನು ಭೂ ಮಾತೆಯ ಪತಿ ಎನ್ನುತ್ತಾರೆ. ಈ ಭೂಮಿಯನ್ನು ಸಂಕರ್ಷಣ ಶಕ್ತಿಯ (Gravitational force) ಮೂಲಕ ಹಿಡಿದಿಟ್ಟು ನಿರಂತರ ಸಲಹುವವನು ಮಹೀಭರ್ತಾ.
183) ಶ್ರೀನಿವಾಸಃ
'ಶ್ರೀ' ಅಂದರೆ ಸಿರಿ, ಸಂಪತ್ತು, ಮಾತೆ ಲಕ್ಷ್ಮಿ , ವೇದ ವಿದ್ಯೆಗಳು, ಇತ್ಯಾದಿ. ಭಗವಂತ ಮಾತೆ ಶ್ರೀಲಕ್ಷ್ಮಿಯನ್ನು ನಿರಂತರ ತನ್ನ ಹೃದಯದಲ್ಲಿ ಧರಿಸಿರುತ್ತಾನೆ. ಎಲ್ಲಾ ಸಂಪತ್ತುಗಳ, ಅಮೂಲ್ಯವಾದ ವೇದ-ವಿದ್ಯೆಗಳ ನೆಲೆಯಾದ ಭಗವಂತ-ಶ್ರೀನಿವಾಸಃ
184) ಸತಾಂಗತಿಃ
ಸಾತ್ವಿಕರಿಗೆ ಸಜ್ಜನರಿಗೆ ಸದಾ ಆಶ್ರಯದಾತನಾದ ಭಗವಂತ ಸತಾಂಗತಿಃ .
ಭಗವಂತ ಎಲ್ಲರಿಗೂ ಆಶ್ರಯದಾತ, ಆದರೆ ಆಶ್ರಯದ ಅರಿವು ಇರುವುದು ಕೇವಲ ಸಜ್ಜನರಿಗೆ ಮಾತ್ರ. ಅರಿವೇ ಇರವು. ಆಶ್ರಯದ ಅರಿವಿಲ್ಲದಿದ್ದರೆ ನಾವು ಅಭದ್ರತೆಯ ಭಯದಲ್ಲಿ ಬದುಕುತ್ತೇವೆ. ಆದರೆ ಜ್ಞಾನಿಗಳು ಭಗವಂತನ ಆಶ್ರಯವನ್ನು ಸದಾ ಅನುಭವಿಸುತ್ತಿರುತ್ತಾರೆ. ಏನೇ ಬಂದರು ಭಗವಂತನಿದ್ದಾನೆ ಎನ್ನುವ ಅಚಲ ವಿಶ್ವಾಸದಲ್ಲಿ ಸಂತೋಷವಾಗಿ ಬದುಕುತ್ತಾರೆ.

Wednesday, July 21, 2010

Vishnu sahasranama 177-180


ವಿಷ್ಣು ಸಹಸ್ರನಾಮ: ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್

177) ಅನಿರ್ದೇಶ್ಯವಪುಃ

ನಿರ್ದೇಶ ಅಂದರೆ "ಒಂದು ವಸ್ತು ಹೀಗಿದೆ ಎಂದು ಶಬ್ದಗಳ ಮೂಲಕ ಹೇಳಲು ಸಾಧ್ಯವಾದ ಸ್ವರೂಪ". ಆದರೆ ಭಗವಂತನನ್ನು ಶಬ್ಧಗಳ ಮೂಲಕ ಸಂಪೂರ್ಣವಾಗ ವರ್ಣಿಸಲು ಅಸಾದ್ಯ. ಭಗವಂತನಿಗೆ ನಾವು ಗ್ರಹಿಸಬಹುದಾದ ಆಕಾರವಿಲ್ಲ, ಆದರೆ ಸರ್ವಸಮರ್ಥನಾದ ಭಗವಂತ ತಾನು ಬಯಸಿದ ರೂಪ ಧಾರಣೆ ಮಾಡಬಲ್ಲ. ನಮಗೆ ಆತ್ಮಸಾಕ್ಷಾತ್ಕಾರವಾದಾಗ ಜ್ಞಾನಾನಂದಮಯನಾದ ಭಗವಂತನ ಆಕಾರದ ಕಿಂಚಿತ್ ರೂಪವನ್ನು ನಾವೂ ನೋಡಲು ಸಾದ್ಯ. ಈ ರೀತಿ ನಮ್ಮ ಜ್ಞಾನದ ಮಿತಿಯಿಂದಾಚೆಗಿನ ಶರೀರವುಳ್ಳ ಭಗವಂತ ಅನಿರ್ದೇಶ್ಯವಪುಃ
178) ಶ್ರೀಮಾನ್
ಭಗವಂತ ಶ್ರೀಮಾನ್. ಇಲ್ಲಿ ಶ್ರೀ ಅಂದರೆ ಸಂಪತ್ತು, ಚೆಲುವು ಅಥವಾ ಸೌಂದರ್ಯ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಚಲುವಿನ ಮೂರ್ತಿ. ಆತನ ಚಲುವಿಗೆ ಕೃಷ್ಣಾವಾತಾರವೇ ಸಾಕ್ಷಿ. ಕೃಷ್ಣನ ಚಲುವಿಗೆ ಆಕರ್ಷಕರಾಗದವರಿಲ್ಲ. ಭಾಗವತದಲ್ಲಿ ಹೇಳುವಂತೆ, ಗೋವುಗಳೂ ಕೂಡಾ ಹುಲ್ಲು ಮೇಯುವುದನ್ನು ನಿಲ್ಲಿಸಿ, ಸ್ಥಬ್ದವಾಗಿ ಆತನನ್ನೇ ನೋಡುತ್ತಿದ್ದವು! ಅಂತಹ ಚಲುವಿನ ಮೂರ್ತಿ ಆತ. ಇಂತಹ ಚಲುವ ಭಗವಂತ ಶ್ರೀಮಾನ್.
ಇನ್ನು ಭಗವಂತ ನಮ್ಮಲ್ಲಿರುವ ಐದು ಮಹಾನ್ ಸಂಪತ್ತಿನ ಒಡೆಯ. ಅವುಗಳೆಂದರೆ ಕಣ್ಣು, ಕಿವಿ, ಮೂಗು, ಮನಸ್ಸು,ಉಸಿರು. ಈ ಐದು ಅಮೂಲ್ಯವಾದ "ಶ್ರೀ"ಗಳನ್ನು ನಮಗೆ ಕರುಣಿಸಿದ,ಲಕ್ಷ್ಮೀಪತಿಯಾದ, ಸರ್ವ ವೇದ-ವಿದ್ಯೆಗಳ ಸ್ವಾಮಿಯಾದ ಭಗವಂತ ಶ್ರೀಮಾನ್.
179) ಅಮೇಯಾತ್ಮಾ
ಭಗವಂತ ನಮ್ಮ ಅಳತೆಗೆ ಎಟುಕುವವನಲ್ಲ. ಆತನನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲ. He is smaller than smallest and bigger than biggest! ಪ್ರಪಂಚ ಸೃಷ್ಟಿ ಮೊದಲು, ಸಂಹಾರದ ನಂತರ, ಎಲ್ಲಾ ಕಾಲದಲ್ಲಿರುವ ಭಗವಂತ ಅಮೇಯಾತ್ಮಾ.
180) ಮಹಾದ್ರಿಧೃಕ್
ಮಹಾದ್ರಿಧೃಕ್ ಅಂದರೆ ಮಹಾ ಪರ್ವತವನ್ನು ಹೊತ್ತವನು ಎಂದರ್ಥ. ಭಗವಂತ ಬೆಟ್ಟವನ್ನು ಹೊತ್ತಿರುವ ಪ್ರಸಂಗ ಆತನ ಕೂರ್ಮಾವತಾರದಲ್ಲಿ ಹಾಗು ಕೃಷ್ಣಾವತಾರದಲ್ಲಿ ನೋಡುತ್ತೇವೆ. ಸಮುದ್ರ ಮಂಥನ ಕಾಲದಲ್ಲಿ ಮಂದರ ಪರ್ವತವನ್ನು ಕೂರ್ಮಾವತಾರಿಯಾಗಿ ಎತ್ತಿ ಹಿಡಿದ ಭಗವಂತ ಮಹಾದ್ರಿಧೃಕ್. ಅದೇ ರೀತಿ, ಗೋವರ್ದನ ಗಿರಿಯನ್ನು ತನ್ನ ಕಿರಿಬೆರಳಲ್ಲಿ ಎತ್ತಿ, ಇಂದ್ರನ ಅಹಂಕಾರವನ್ನು ಮುರಿದು, ಗೂಪೂಜೆ ಮತ್ತು ಗಿರಿಪೂಜೆಯನ್ನು ಆಚರಣೆಗೆ ತಂದ ಭಗವಂತ ಮಹಾದ್ರಿಧೃಕ್.
ಸಮುದ್ರ ಮಂಥನ ನಮ್ಮ ಜೀವನಕ್ಕೆ ಸಂಬಂದಪಟ್ಟ ಕಥೆ ಕೂಡಾ ಹೌದು. ಮನಸ್ಸು ಎಂಬ ಮಂದರ ಪರ್ವತದಿಂದ, ಶಾಸ್ತ್ರವೆಂಬ ಕಡಲನ್ನು ಮಂಥನ ಮಾಡುವಾಗ, ನಮ್ಮ ಮನಸ್ಸು ಪತನವಾಗದಂತೆ ಭಗವಂತ ಎತ್ತಿ ಹಿಡಿಯುತ್ತಾನೆ. ಈ ರೀತಿ ಶಾಸ್ತ್ರಾದ್ಯಾಯನದಲ್ಲಿ ಮೊದಲು ಹೊರ ಬರುವ ವಿಷ "ಸಂಶಯ ಅಥವಾ ಅಪನಂಬಿಕೆ", ನಂತರ ಬರುವ ಕಾಮದೇನು ಕಲ್ಪವೃಕ್ಷ "ಸಂಪತ್ತು" . ಈ ಸಂಪತ್ತಿನ ಸೆಳೆತದಿಂದ ಆಚೆ ಬಂದು, ಶಾಸ್ತ್ರ ಮಂಥನ ಮುಂದುವರಿಸಿದಾಗ, ತತ್ವಜ್ಞಾನವೆಂಬ ಅಮೃತ ದೊರೆಯುತ್ತದೆ. ಸಂಶಯವೆಂಬ ವಿಷದಿಂದ ನಮ್ಮನ್ನು ಪಾರುಮಾಡುವವನು ಮನೋಭಿಮಾನಿ ಶಿವ . ನಮ್ಮ ಮನಸ್ಸನ್ನು ನಿರಂತರವಾಗಿ ಎತ್ತಿ ಹಿಡಿದು ನಿಲ್ಲಿಸುವ ಭಗವಂತ ಮಹಾದ್ರಿಧೃಕ್.
ನಮ್ಮಲ್ಲಿ ಗೋ(ವೇದ-ಜ್ಞಾನ) ವೃದ್ದಿ (ವರ್ಧನ) ಆದಾಗ ಭಗವಂತ ನಮ್ಮನ್ನು ಎತ್ತಿ ಹಿಡಿದು, ಅಹಂಕಾರದಿಂದ ಮುಕ್ತಿ ಕರುಣಿಸುತ್ತಾನೆ. ಇದು ಭಗವಂತನ ಗೋವರ್ಧನ ಗಿರಿಧಾರಣೆಯ ಮೂಲ ಸಂದೇಶ.

Tuesday, July 20, 2010

Vishnu Sahasranama 166-176


Vishnu Sahasranama ವೀರಹಾ ಮಾಧವೋ ಮಧುಃ , ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ

166) ವೀರಹಾ
ನಮಗೆ ಪೌರುಷ ಕೊಡುವವನು, ಹಾಗು ನಾವು ಪೌರುಷದ ಅಹಂಕಾರ ತೋರಿಸಿದಾಗ, ಅದನ್ನು ಮುರಿಯುವ ಭಗವಂತ, ಪ್ರತೀ ವೀರರ ಒಳಗೆ ಬಲ ದೇವತೆಯಾಗಿ ನಿಂತಿದ್ದಾನೆ. ಹಿಂದೆ ಹೇಳಿದಂತೆ 'ವೀ' ಅಂದರೆ ಪಕ್ಷಿ 'ಇರ' ಎಂದರೆ ಪ್ರಾಣದೇವರು. ಪಕ್ಷಿ ವಾಹನನಾಗಿ, ವಾಯು ದೇವರಲ್ಲಿದ್ದು, ವಿಹರಿಸುವ ಸರ್ವವೀರ ಭಗವಂತ ವೀರಹಾ.
167) ಮಾಧವಃ
ಈ ನಾಮ ಹಿಂದೊಮ್ಮೆ ಬಂದಿದೆ. ಲಕ್ಷ್ಮಿಪತಿ, ಮಧು ವಂಶದಲ್ಲಿ ಅವತರಿಸಿದವ, ಸರ್ವ ಶಬ್ದ ವಾಚ್ಯ, ಸರ್ವ ವೇದ ವಾಚ್ಯ ಇತ್ಯಾದಿ ಅರ್ಥಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಇನ್ನು ಮಾ ಎಂದರೆ ಜ್ಞಾನ. ಭಗವಂತ ಎಲ್ಲಾ ಜ್ಞಾನಗಳ ಸ್ವಾಮಿ. ಸಮಸ್ತ ದೇವತೆಗಳಿಗೆ ಆತನೇ ಲೋಕ ಗುರು. ಅದಕ್ಕಾಗಿ ನಾವು "ಕೃಷ್ಣಂ ಒಂದೇ ಜಗದ್ಗುರು" ಎನ್ನುತ್ತೇವೆ. ನಾವು ಯಾವುದೇ ಗ್ರಂಥ ಅದ್ಯಯನ ಮಾಡುವ ಮೊದಲು "ಸಹನಾವವತು ಸಹನೌಭುನಕ್ತು" ಎನ್ನುತ್ತೇವೆ. ಅಂದರೆ ಗುರು ಶಿಷ್ಯರ ಒಳಗೆ ಭಗವಂತ ಪ್ರವೇಶಿಸಲಿ ಎಂದರ್ಥ. ಹೀಗೆ ಎಲ್ಲಾ ಜ್ಞಾನಗಳ ಸ್ವಾಮಿ, ಜಗದ್ಗುರು, ಭಗವಂತ ಮಾಧವಃ .
168) ಮಧುಃ
ಮಧು ಅಂದರೆ ಆನಂದ. ಭಗವಂತ ಆನಂದದ ಕಡಲು. ಕಡಲಿಗಾದರೂ ಸೀಮೆ ಇದೆ, ಆದರೆ ಭಗವಂತ ಅನಂತ ಆನಂದ ಸ್ವರೂಪ.
169) ಅತೀಂದ್ರಿಯಃ
ಭಗವಂತ ಎಲ್ಲಾಕಡೆ ಇದ್ದರೂ, ಆತ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದಿಲ್ಲ. ಏಕೆಂದರೆ ಆತನದು ನಮ್ಮ ಮಾತು-ಮನಗಳಿಗೆ ನಿಲುಕದ ಸ್ವರೂಪ. ನಾವು ಸಮುದ್ರದ ಜೊತೆಗಿದ್ದೂ ಸಮುದ್ರವನ್ನು ಗ್ರಹಿಸಲಾರದ ಮರಳಿನ ಕಣದಂತೆ. ಯಾವಾಗಲೂ ಭಗವಂತನ ಜೊತೆಗಿದ್ದರೂ ನಮ್ಮ ಇಂದ್ರಿಯ ಆತನನ್ನು ಗ್ರಹಿಸಲು ಸಾಧ್ಯವಿಲ್ಲ. ಇಂತಹ ಭಗವಂತ ಅತೀಂದ್ರಿಯಃ .
170) ಮಹಾಮಾಯಃ
ಭಗವಂತ ಮಹಾನ್ ಮೋಡಿಗಾರ ! ಭಗವಂತ ಪಾಪಿಗಳ ಎದುರೇ ನಿಂತಿದ್ದರೂ, ಅವರು ಆತನನ್ನು ತಿಳಿಯಲಾರರು. ಪ್ರಕೃತಿಮಾತೆ ಲಕ್ಷ್ಮಿ ಮಾಯೆ. ಭಗವಂತ ಮೂಲಪ್ರಕೃತೀಶ್ವರ. ಮಾಯ ಅಂದರೆ ಮಹಿಮೆ, ಇಚ್ಚೆ ಎನ್ನುವ ಅರ್ಥ ಕೂಡ ಪ್ರಚಲಿತದಲ್ಲಿದೆ. ಭಗವಂತನ ಸಂಕಲ್ಪ ಎಂದೂ ಹುಸಿಯಾಗದು. ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಅಖಂಡವಾದ ಇಚ್ಚೆಯುಳ್ಳ ಭಗವಂತ ಮಹಾಮಾಯಃ .
171) ಮಹೋತ್ಸಾಹಃ
ಭಗವಂತ ಎಂದೂ ಬತ್ತದ ಉತ್ಸಾಹದ ಚಿಲುಮೆ. ಆತನ ಕಾರ್ಯತತ್ಪರತೆ ಅನಂತವಾದುದು. ಎಂತಹ ವಿಘ್ನ ಬಂದರೂ, ಕೈ ಬಿಡದ ಕಾರ್ಯೋತ್ಸವ.ಯಾವ ಕಾರ್ಯ ಯಾವಾಗ ಆಗಬೇಕೋ, ಅದು ಆತನ ಸಂಕಲ್ಪದಂತೆ ಆಗುತ್ತದೆ. ಚತುರ್ಮುಖ ಕೂಡಾ ಒಮ್ಮೊಮ್ಮೆ ನಿರುತ್ಸಾಹ ತೋರಿಸಬಹುದು, ಆದರೆ ಭಗವಂತ ಮಾತ್ರ ಎಂದೂ ನಿರುತ್ಸಾಹಿ ಅಲ್ಲ. ಆದ್ದರಿಂದ ಆತ ಮಹೋತ್ಸಾಹಃ
172) ಮಹಾಬಲಃ
ಉತ್ಸಾಹ ಮತ್ತು ಬಲ ಒಟ್ಟಿಗಿರುತ್ತದೆ. ಭಗವಂತ ಅಮಿತಬಲ. ಭಗವಂತನಲ್ಲಿ ಬಯಸಿದ್ದನ್ನು ಮಾಡುವ ಅಪಾರ ಶಕ್ತಿಯಿದೆ. ಭಗವಂತನ ಬಯಕೆ ಮತ್ತು ಕ್ರಿಯೆ ಬೇರೆ ಬೇರೆ ಅಲ್ಲ. ಅವನ ಬಯಕೆಯೇ ಅವನ ಕ್ರಿಯೆ.
173) ಮಹಾಬುದ್ಧಿಃ
ಬುದ್ಧಿ ಎಂದರೆ ಜ್ಞಾನ. ಒಂದು ವಸ್ತು ನಿರ್ಮಾಣವಾಗಬೇಕಾದರೆ, ಇಚ್ಚಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಬೇಕು. ಈ ಅಪೂರ್ವವಾದ ಸೃಷ್ಟಿಯನ್ನು ನಿರ್ಮಾಣ ಮಾಡಿದ ಆ ಸರ್ವಜ್ಞ, ಬುದ್ಧಿವಂತರಿಗೆಲ್ಲಾ ಹಿರಿಯ ಬುದ್ಧಿವಂತ. ಇಂತಹ ಮಹಾನ್ ಬುದ್ದಿಶಾಲಿ ಭಗವಂತ ಮಹಾಬುದ್ಧಿಃ
174) ಮಹಾವೀರ್ಯಃ
ಮಹಾವೀರ್ಯ ಎಂದರೆ ಮಹಾನ್ ಪರಾಕ್ರಮಶಾಲಿ. ಸೃಷ್ಟಿ ನಿರ್ಮಾಣ ಮಾಡುವಾಗ ಅನೇಕ ದುಷ್ಟ ಶಕ್ತಿಗಳೂ ನಿರ್ಮಾಣವಾಗುತ್ತವೆ. ಇಡೀ ವಿಶ್ವ ನಿರ್ಮಾಣಕ್ಕೆ ಬೇಕಾದ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ತುಂಬಿರುವವ ಮಹಾವೀರ್ಯಃ
175) ಮಹಾಶಕ್ತಿಃ
ನಮ್ಮಲ್ಲಿರುವ ವೀರ್ಯ (ತಾಕತ್ತು) ಅಭಿವ್ಯಕ್ತವಾಗುವುದನ್ನು ಶೌರ್ಯ ಎನ್ನುತ್ತಾರೆ. ಸೃಷ್ಟಿ ನಿರ್ಮಾಣ ಕಾರ್ಯದಲ್ಲಿ ಅಡ್ಡಿ ಬಂದ ದುಷ್ಟ ಶಕ್ತಿಗಳನ್ನು ಬಗ್ಗು ಬಡಿದ ಭಗವಂತ ಮಹಾಶಕ್ತಿಃ (ವರಾಹ ಅವತಾರ ಇದಕ್ಕೊಂದು ನಿದರ್ಶನ).
176) ಮಹಾದ್ಯುತಿಃ
ಇಡೀ ಜಗತ್ತಿನ ಎಲ್ಲಾ ಬೆಳುಕುಗಳ ಬೆಳಕು ಭಗವಂತ. ಎಲ್ಲಾ ಬೆಳಕುಗಳ ಹಿಂದೆ ಬೆಳಕಾಗಿ ನಿಂತ, ಜ್ಯೋತಿರ್ಮಯ, ಪ್ರಕಾಶ ಸ್ವರೂಪ ಭಗವಂತ, ಮಹಾದ್ಯುತಿಃ.

Monday, July 19, 2010

Vishnu Sahasranama 163-165

Vishnu Sahasranama ವೇದ್ಯೋ ವೈದ್ಯಃ ಸದಾಯೋಗೀ
163) ವೇಧ್ಯಃ
ವೇಧ್ಯಃ ಅಂದರೆ ಎಲ್ಲರೂ ತಿಳಿಯಬೇಕಾದವನು. ಜಗತ್ತಿನಲ್ಲಿ ಪ್ರತಿಯೊಂದು ಶಬ್ದ ಭಗವಂತನನ್ನು ಹೇಳುತ್ತದೆ. ಭಗವಂತನ ಹೆಸರಿಲ್ಲದ ನಾದವಿಲ್ಲ. ನಾವು ಜಗತ್ತನ್ನು ತಿಳಿಯಬೇಕಾದರೆ ಜಗತ್ತಿನ ತಂದೆಯಾದ ಆ ಭಗವಂತನನ್ನು ತಿಳಿಯಬೇಕು. ಅನಾದಿ ಕಾಲದಿಂದ ನಮ್ಮ ತಂದೆಯಾಗಿ ಪಾಲಿಸುತ್ತಿರುವವ ಆ ಭಗವಂತ. ಯಾರನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ,ಅವನೇ ಎಲ್ಲದರಿಂದ ವೇದ್ಯನಾದ ಭಗವಂತ. ಅವನ ಅರಿವಿಲ್ಲದ ಯಾವುದೇ ಅರಿವು ಈ ಪ್ರಪಂಚದಲ್ಲಿಲ್ಲ.
164) ವೈದ್ಯಃ
ಎಲ್ಲಾ ವಿದ್ಯೆಗಳಿಂದ ಪ್ರತಿಪಾದನಾದವನು ವೈದ್ಯ. ಸಮಸ್ತ ವಿದ್ಯೆಗಳೂ ಅವನಿಗೆ ವೇದ್ಯ ಹಾಗು ಸಮಸ್ತ ವಿದ್ಯೆಗಳಿಂದ ಅವನೇ ವೇದ್ಯ. ಸದಾ ವೇದ ವಿದ್ಯೆಯ ಅಭಿಮಾನಿ ದೇವಿಯಾದ ಶ್ರೀ ತತ್ವದ ಜೊತೆಗಿರುವ ಲಕ್ಷ್ಮೀಪತಿ ಭಗವಂತ ವೈದ್ಯಃ
165) ಸದಾಯೋಗೀ:
ಭಗವಂತ ಸರ್ವ ಯೋಗದಿಂದ ಗಮ್ಯನಾದವನು. ಆತ ಯೋಗ ಸಾಧನೆಯಲ್ಲಿ ಸದಾ ಗೋಚರಿಸುತ್ತಾನೆ. ಯೋಗಗಳಲ್ಲಿ ಅನೇಕ ವಿಧ.
೧) ಜ್ಞಾನಯೋಗ : ಭಗವಂತನನ್ನು ಜ್ಞಾನ ಯೋಗದಿಂದ ತಿಳಿಯಬಹುದು, ತಿಳಿದು ಪಡೆಯಬಹುದು.
೨) ಭಕ್ತಿ ಯೋಗ: ಭಗವಂತ ಸದಾ ಭಕ್ತಿಗೆ ಅದೀನ. ಭಕ್ತಿ ಪೂರ್ವಕವಲ್ಲದ ಜ್ಞಾನ ಅಹಂಕಾರವಾಗುತ್ತದೆ. ಅನನ್ಯ, ನಿರಂತರ ಭಕ್ತಿ, ಸಾದಕನ ಅತ್ಯಂತ ಶ್ರೇಷ್ಠ ಗುಣ. ನಾವು ಈ ಹಿಂದೆ ನೋಡಿದ ನಿಯಮ ಮತ್ತು ಯಮಗಳ ಜೊತೆಗೆ ಅದ್ಯಾತ್ಮ ಭಕ್ತಿ ಇಲ್ಲದಿದ್ದರೆ, ಯಮವೂ ಕೂಡ ದ್ವೇಷವಾಗಬಹುದು, ನಿಯಮ ಕೂಡಾ ಸ್ವಾರ್ಥವಾಗಬಹುದು!! ಪ್ರಾಮಾಣಿಕತೆ ಬರಬೇಕೆಂದರೆ ಸಾಮಾಜಿಕ ಕಾಳಜಿ (Horizontal line) ಜೊತೆಗೆ ಅದ್ಯಾತ್ಮಿಕ ಭಕ್ತಿ (Vertical line) ಅತೀ ಮುಖ್ಯ. ಈ Horizontal ಮತ್ತು Vertical line ನ ಸಮಾಗಮದ ಚಿನ್ನೆಯೇ ನಮ್ಮಲ್ಲಿ ಸ್ವಸ್ತಿಕ್ (卐) ಹಾಗು ಕ್ರಿಶ್ಚನ್ ಜನಾಗದಲ್ಲಿ ಕ್ರಾಸ್ (†) ಆಗಿ ಬಳಕೆಯಲ್ಲಿದೆ.
೩) ಕರ್ಮಯೋಗ : ಭಗವಂತನ ನಿಯಮದಂತೆ, ಭಗವಂತ ಮೆಚ್ಚುವಂತೆ ನಡೆಯುವುದು ಜ್ಞಾನಿಗಳ ದೊಡ್ಡ ಹೊಣೆಗಾರಿಕೆ. ಜ್ಞಾನಿಗಳು ಇಟ್ಟ ಹೆಜ್ಜೆಯನ್ನು ಎಲ್ಲರೂ ಹಿಂಬಾಲಿಸುತ್ತಾರೆ. ಆದ್ದರಿಂದ ಜ್ಞಾನಿ ಮಾಡುವ ಕರ್ಮಗಳಾದ ವ್ರತ, ನೇಮ, ಧ್ಯಾನ, ನಿಷ್ಠೆ, ಉಪಾಸನೆ, ಇತ್ಯಾದಿಗಳು ನಿಯಮಬದ್ದವಾಗಿರಬೇಕು.
೪)ವೈರಾಗ್ಯಯೋಗ ಮತ್ತು ಐಶ್ವರ್ಯಯೋಗ : ಈ ಎರಡು ಯೋಗಗಳು ಒಟ್ಟಿಗೆ ಇರುವುದು ಅತೀ ವಿರಳ. ಕೇವಲ ಭಗವಂತನಲ್ಲಿ ಹಾಗು ಭಗವಂತನ ಸಾನಿಧ್ಯವಿರುವ ಯೋಗಿಗಳಲ್ಲಿ ಈ ಗುಣವನ್ನು ನೋಡುತ್ತೇವೆ.
ಈ ರೀತಿ ಸದಾ ಯೋಗದಿಂದ ತಿಳಿಯಲ್ಪಡುವ ಹಾಗು ಸದಾ ವಿಯೋಗವಿಲ್ಲದೆ ಶ್ರೀತತ್ವದೊಂದಿಗಿರುವ ಭಗವಂತ ಸದಾಯೋಗೀ.

Sunday, July 18, 2010

Vishnu Sahasranama 161-162

Vishnu Sahasranama ನಿಯಮಃ ಯಮಃ
161) ನಿಯಮಃ
ಭಗವಂತನನ್ನು ತಿಳಿಯಬೇಕಾದರೆ ನಾವು ನಮ್ಮಲ್ಲಿ ಐದು ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಅವುಗಳೆಂದರೆ:
೧) ಶೌಚ, ೨) ತಪಃ , ೩) ತೃಪ್ತಿಃ, ೪) ಸ್ವಾಧ್ಯಾಯ ಮತ್ತು ೫) ಪುರುಷಾರ್ಚನ.

೧)ಶೌಚ : ಕೊಳಕು ತುಂಬಿದ ಮೈ, ಕೊಳಕು ತುಂಬಿದ ಮನಸ್ಸಿಗೆ ಎಂದೂ ಭಗವಂತ ಗೋಚರಿಸುವುದಿಲ್ಲ. ನಮ್ಮ ದೇಹ-ಮನಸ್ಸು-ಮನೆ ಎಲ್ಲವೂ ಸ್ವಚ್ಛವಾಗಿರಬೇಕು. ನಾವು ನಮ್ಮ ತಲೆ ಮೇಲೆ ಒಂದು ಕೊಡ ನೀರು ಹಾಕಿ ಕೊಂಡಾಗ ಮಡಿಯಾಗುವುದಿಲ್ಲ. ಭಗವಂತನ ನೆನಪಿಗೆ ಪೋಷಕವಾದ ನಡೆ "ಮಡಿ". ನಿಜವಾದ ಮಡಿ ಅಂದರೆ ಏನೆಂದು ಈಗ ನೋಡೋಣ.
ಅಥಃ ಪ್ರಾತಃ ಸಂಧ್ಯಾ ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ
ಅಂದರೆ ನೀನು ಯಾವುದೇ ಸ್ಥಿತಿಯಲ್ಲಿರು, ಕೆಂದಾವರೆಯ ಅರಳಿದ ಎಸಳಿನಂತೆ, ನಸುಗೆಂಪಾಗಿ, ಪ್ರೀತಿಯ ಕಾರುಣ್ಯದ ರಸಪೂರವನ್ನು ಹರಿಸುತ್ತಿರುವ, ಅರಳುಗಣ್ಣಿನ ಭಗವಂತನನ್ನು ನೆನೆಸಿಕೂ. ಆತನ ರಸಧಾರೆ ನಿನ್ನ ಮೇಲೆ ಬೀಳುತ್ತಿದೆ ಎಂದು ಯೋಚಿಸು. ಆಗ ನೀನು ಮಡಿಯಾಗುತೀಯ. ಈ ಸ್ಥಿತಿಯಲ್ಲಿ ನೀನು ಮೈಲಿಗೆಯಾಗಲು ಸಾಧ್ಯವಿಲ್ಲ. ನಿನ್ನನ್ನು ಮುಟ್ಟಿದವರೂ ಕೂಡ ನಿನ್ನಿಂದ ಮಡಿಯಾಗುತ್ತಾರೆ! ನೀನು ಧರಿಸಿರುವ ಬಟ್ಟೆಯಾಗಲಿ, ಇತರ ಯಾವುದೇ ವಸ್ತು ನಿನ್ನನ್ನು ಮೈಲಿಗೆ ಮಾಡಲಾರದು. ಭಗವಂತನ ಚಿಂತನೆ, ಭಗವಂತನ ಪ್ರಜ್ಞೆಯನ್ನು ಜಾಗೃತಗೊಳಿಸುವ ನೆಡೆಯೇ 'ಮಡಿ'. ಭಗವಂತನಿಂದ ದೂರ ಸರಿಸುವ ಅಜ್ಞಾನವೇ ಮೈಲಿಗೆ.
ಇತರರನ್ನು ಮೈತ್ರಿಭಾವದಿಂದ ಕಾಣುವುದು. ಸಕಲವೂ ಪರಮಾತ್ಮನಸ್ವರೂಪವೇ ಎಂದು ಭಾವಿಸುವುದು ಶೌಚ. ಈ ಮನಃಸ್ಥಿತಿಯಿಂದ ನಿಜವಾದ ಸುಖ ದೊರೆಯುವುದು. (ಸಂತೋಷಾದನುತ್ತಮಸುಖಲಾಭಃ -ಪತಂಜಲಿ).
೨) ತಪಃ : ನಮ್ಮ ದೇಹ ಮತ್ತು ಮನಸ್ಸಿನ ಕಯಾಲಿಗಳಿಗೆ ಒಳಗಾಗದೆ, ನಮ್ಮ ಇಷ್ಟಕ್ಕೆ ತಕ್ಕಂತೆ ನಮ್ಮ ದೇಹ ಮನಸ್ಸನ್ನು ಮಣಿಸುವ ಕ್ರಿಯೆ ತಪಸ್ಸು.ಇವುಗಳ ಆಚರಣೆಯಿಂದ ಅಶುದ್ಧಿ ನಾಶವಾಗಿ ಅಂತಃಕರಣವು ಶುದ್ಧವಾಗುತ್ತದೆ. (ಕಾರ್ಯೇಂದ್ರಿಯಸಿದ್ಧಿರಶುದ್ಧಿಕ್ಷಯಾಸ್ತಪಸಃ-ಪತಂಜಲಿ).
೩) ತೃಪ್ತಿಃ : ಇದ್ದದರಲ್ಲಿ ತೃಪ್ತಿಪಟ್ಟು, ಹರಿಯ ಚರಣದ ಅರಿವಿನಿಂದ ನಮ್ಮ ಪಾಲಿನ ಕರ್ಮ ನಾವು ಮಾಡುವುದು.
೪) ಸ್ವಾಧ್ಯಾಯ: : ಅಂದರೆ ನಿರಂತರ ಅಧ್ಯಯನ. ವೈದಿಕಮಂತ್ರಗಳ ಅರ್ಥಾನುಸಂಧಾನದಿಂದ ಮಂತ್ರಾಭಿಮಾನಿ ದೇವತೆಗಳು ಸಿದ್ಧಿಯನ್ನು ಕೊಡುವರು. ಮಂತ್ರರಹಸ್ಯ ಅರಿಯಲು ಸದ್ಗುರುವಿನ ಆಶ್ರಯ ಅವಶ್ಯ. (ಸ್ವಾಧ್ಯಾಯಾದಿಷ್ಟದೇವತಾ ಸಂಪ್ರಯೋಗಃ-ಪತಂಜಲಿ).
೫) ಪುರುಷಾರ್ಚನ : ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾದನೆ, ಹರಿಯ ಪೂಜೆ ಎನ್ನುವ ಎಚ್ಚರ.ಸಕಲಕ್ರಿಯಾದಿಗಳ ಫಲವನ್ನು ಅಪೇಕ್ಷಿಸದೇ ಈಶ್ವರನಲ್ಲಿ ಅರ್ಪಣೆ ಮಾಡುವುದು. "ಕಾಮತೋಕಾಮತೋವಾಪಿ ಯತ್ಕರೋಮಿ ಶುಭಾಶುಭಂ ತತ್ಸರ್ವಂ ತ್ವಯಿ ವಿನ್ಯಸ್ಯ ತ್ವತ್ಪ್ರಯುಕ್ತಃ ಕರೋಮ್ಯಹಂ " ಅಂದರೆ, ಆಸೆಯಿಂದಲೋ ಆಥವಾ ಆಸೆ ಇಲ್ಲದೆಯೋ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಅವೆಲ್ಲವನ್ನೂ ಅವನಲ್ಲಿ ಅರ್ಪಿಸಿ ಅವನ ಪ್ರಯುಕ್ತವೇ ಅಂದರೆ ಭಗವಂತನಿಗಾಗಿಯೇ ನಾನು ಎಲ್ಲ ಕರ್ಮಗಳನ್ನೂ ಮಾಡುತ್ತೇನೆ ಎಂದು ಈಶ್ವರನಲ್ಲಿ ಕಾಯಾ, ವಾಚಾ, ಮನಸಾ ಅರ್ಪಣೆ ಮಾಡುವುದು.
ಈ ರೀತಿ ಮೇಲಿನ ಐದು ನಿಯಮಗಳಿಂದ ತಿಳಿಯಲ್ಪಡುವವನು, ಹಾಗು ನಮ್ಮ ಅಭಿವೃದ್ದಿಗಾಗಿ ಈ ಐದು ನಿಯಮಗಳನ್ನು ನಿಯಮಿಸಿದವನು ನಿಯಮಃ
162) ಯಮಃ
ಯಮಃ ಅಂದರೆ ಯಮನೊಳಗಿದ್ದು, ಪಾಪಿಗಳಿಗೆ ಶಿಕ್ಷೆ ಕೊಡುವವ, ಎಲ್ಲರನ್ನು ನಿಯಂತ್ರಿಸುವವ ಎನ್ನುವುದು ಸಾಮಾನ್ಯ ಅರ್ಥ. ಯಮಃ ಅನ್ನುವುದಕ್ಕೆ "ಯಮಗಳಿಂದ ವೇದ್ಯನಾದವನು" ಎನ್ನುವ ವಿಶೇಷ ಅರ್ಥವಿದೆ. ನಮ್ಮ ಅಭಿವೃದ್ದಿಗೊಸ್ಕರ, ಸಮಾಜದ ಸ್ವಾಸ್ಥ್ಯಕ್ಕೋಸ್ಕರ ನಾವು ಬಿಡಬೇಕಾದ ಐದು ದುರ್ಗುಣಗಳನ್ನು ಯಮಗಳು ಎನ್ನುತ್ತಾರೆ. ಅವುಗಳೆಂದರೆ ೧) ಹಿಂಸೆ , ೨) ಸುಳ್ಳು ಹೇಳುವುದು , ೩) ಕಳ್ಳತನ ಮಾಡುವುದು , ೪) ಅನಗತ್ಯ ಇನ್ನೊಬ್ಬರ ಮುಂದೆ ಕೈ ಚಾಚುವುದು ಮತ್ತು ೫) ಅತೀ ಕಾಮುಕತೆ.
ಸಮಾಜಜೀವಿಯಾಗಿ ನಾವು ಅನುಸರಿಸಬೇಕಾದ ಐದು ನೀತಿ ಸಂಹಿತೆಗಳೆಂದರೆ: ೧) ಅಹಿಂಸಾ, ೨) ಸತ್ಯ, ೩)ಅಸ್ತೇಯ, ೪) ಬ್ರಹ್ಮಚರ್ಯ ಮತ್ತು ೫) ಅಪರಿಗ್ರಹ
೧) ಅಹಿಂಸ: ಇನ್ನೊಬ್ಬರಿಗೆ ನೋವುಂಟುಮಾಡದಂತೆ ಬದುಕುವುದು.
೨) ಸತ್ಯ : ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ಸುಳ್ಳು ಹೇಳದೇ, ಪ್ರಾಮಾಣಿಕನಾಗಿ ಬದುಕುವುದು. ಇನ್ನೊಬ್ಬರ ಮನ ನೋಯಿಸುವ ಸತ್ಯ ನುಡಿಯಬಾರದು.(ಸತ್ಯ ಪ್ರತಿಷ್ಠಾಯಾಂ ಕ್ರಿಯಾ ಫಲಾಶ್ರಯತ್ವಂ- ಪತಂಜಲಿ)
೩) ಅಸ್ತೇಯ : ಕಳ್ಳತನ ಮಾಡದೇ ಇರುವುದು ನಮ್ಮ ನೀತಿಯಾಗಿರಬೇಕು.
೪) ಬ್ರಹ್ಮಚರ್ಯ: ಅತೀ ಕಾಮುಕನಾಗದೇ ಬದುಕುವುದು. (ಇಲ್ಲಿ ಬ್ರಹ್ಮಚರ್ಯ ಎಂದರೆ ಮದುವೆಯಾಗದೇ ಇರುವುದು ಎನ್ನುವ ಅರ್ಥವಲ್ಲ. ಸಂಸಾರಿಯಾಗಿದ್ದು ಕೂಡಾ ಬ್ರಹ್ಮಚರ್ಯ ಪಾಲಿಸಬಹುದು. ಆದರೆ ಕಾಮುಕನಾಗಿರಬಾರದು. )
೫) ಅಪರಿಗ್ರಹ : ಎಂದರೆ ಭೋಗವಸ್ತುಗಳನ್ನು ಬಯಸದಿರುವುದು. ನಮಗೆ ಬೇಕಾದ್ದನ್ನು ಇನ್ನೊಬ್ಬರಲ್ಲಿ ಒತ್ತಾಯ ಪೂರ್ವಕವಾಗಿ ಬಯಸದೇ, ಇನ್ನೊಬ್ಬರು ಕೊಟ್ಟಿದ್ದರಲ್ಲಿ ತೃಪ್ತಿ ಪಡುವುದು.
ಈ ರೀತಿ ಐದು ಯಮಗಳೆಂಬ ನೀತಿ ಸಂಹಿತೆಯನ್ನು ಸೃಷ್ಟಿಸಿದ ಭಗವಂತ ಯಮಃ

Saturday, July 17, 2010

Vishnu sahasranama 158-160


Vishnu sahasranama ಸಂಗ್ರಹಃ ಸರ್ಗೋ ಧೃತಾತ್ಮಾ

158) ಸಂಗ್ರಹಃ
ನಮ್ಮ ಮನಸ್ಸಿನ ಶಕ್ತಿ ಸೀಮಿತ. ನಮಗೆ ಕೇವಲ ಸತ್ಯವನ್ನು ಮಾತ್ರ ಗ್ರಹಿಸುವ ಶಕ್ತಿ ಇಲ್ಲ. ಕೆಲವೊಮ್ಮೆ ನಾವು ಅಸತ್ಯವನ್ನು ಸತ್ಯವನ್ನಾಗಿ ಗ್ರಹಿಸುತ್ತೇವೆ. ಆದರೆ ಯಾವುದೇ ವಿಷಯವನ್ನು ನಿಶ್ಚಿತವಾಗಿ, ತದ್ವತ್ತಾಗಿ, ವಿಪರೀತ ಜ್ಞಾನದ ಸ್ಪರ್ಶವಿಲ್ಲದೆ, ಯಥಾರ್ತವಾಗಿ ಗ್ರಹಿಸಬಲ್ಲ ಭಗವಂತ ಸಂಗ್ರಹಃ
ನಮಗೆ ಗ್ರಹಣ ಶಕ್ತಿಯನ್ನು ದಯಪಾಲಿಸಿದ, ನಾವು ಜಾರಿ ಬಿದ್ದಾಗ, ಕೈಹಿಡಿದು ನಮ್ಮನ್ನು ಮೇಲಕ್ಕೆತ್ತಿ, ಆತ್ಮೀಯವಾಗಿ ಸ್ವೀಕರಿಸಿ, ಅಜ್ಞಾನವನ್ನು ತೊಲಗಿಸಿ, ಜ್ಞಾನವನ್ನು ಕೊಡುವ ಭಗವಂತ ಸಂಗ್ರಹಃ
ಪ್ರಳಯ ಕಾಲದಲ್ಲಿ ಎಲ್ಲಾ ಜೀವರನ್ನು ತನ್ನ ಉದರದಲ್ಲಿ ಸಂಗ್ರಹಿಸಿ, ಸೃಷ್ಟಿ ಕಾಲದಲ್ಲಿ ಪುನಃ ಆಯಾ ಜೀವಗಳ ಕರ್ಮಾನುಸಾರವಾಗಿ ಮರುಸೃಷ್ಟಿ ಮಾಡುವ ಭಗವಂತ ಸಂಗ್ರಹಃ.
159) ಸರ್ಗಃ
ಸರ್ಗ ಎಂದರೆ ಎಲ್ಲವನ್ನು ಸೃಷ್ಟಿಮಾಡುವ ಶಕ್ತಿ. ಸೃಷ್ಟಿ ಎಂದರೆ ಸ್ವರೂಪೋತ್ಪತಿ, ಆಕಾಶದ ಸೃಷ್ಟಿ ಎಂದರೆ ಏನೂ ಇಲ್ಲದ ಆಕಾಶದಲ್ಲಿ ಎಲ್ಲವನ್ನು ತುಂಬಿ ಹೊಸ ರೂಪ ಕೊಡುವುದು. ಕಾಲದ ಸೃಷ್ಟಿ ಎಂದರೆ, ಕಾಲ ಎನ್ನುವ ಅಖಂಡವಾದದ್ದನ್ನು ಸೂರ್ಯ ಚಂದ್ರರ ಸೃಷ್ಟಿ ಮುಖೇನ, ಅನೇಕ ಭಾಗಗಳನ್ನಾಗಿ ಮಾಡಿ ಹೊಸ ರೂಪ ಕೊಡುವುದು. ಹೀಗೆ ಇಡೀ ವಿಶ್ವದ ಸೃಷ್ಟಿಕರ್ತ ಭಗವಂತ ಸರ್ಗಃ
160) ಧೃತಾತ್ಮಾ
ಧೃತಾತ್ಮಾ ಎಂದರೆ ಎಲ್ಲವನ್ನು ಧರಿಸಿದವನು ಎಂದರ್ಥ. ಆತ ಬಿಂಬ ರೂಪನಾಗಿ, ಅನೇಕರೂಪಿಯಾಗಿ, ನಮ್ಮೊಳಗೇ ಇದ್ದಾನೆ. ಈ ದೇಹದ ಪಂಚ ಕೋಶಗಳಲ್ಲಿ, ಪಂಚ ಜ್ಞಾನೇಂದ್ರಿಯಗಳಲ್ಲಿ, ಪಂಚ ಕರ್ಮೇಂದ್ರಿಯಗಳಲ್ಲಿ, ಪಂಚ ರೂಪನಾಗಿ ಭಗವಂತನಿದ್ದಾನೆ.ಸಪ್ತ ಧಾತುಗಳಲ್ಲಿ ಸಪ್ತರೂಪನಾಗಿ, 360 ಅಸ್ಥಿಗಳಲ್ಲಿ , 72,000 ನಾಡಿಗಳಲ್ಲಿ, ಅನಂತ ರೂಪನಾಗಿ ವ್ಯಾಪಿಸಿದ್ದಾನೆ. ಪ್ರತಿಯೊಂದು ಮಾನವ ಶರೀರದಲ್ಲೂ ಭಗವಂತನ ಅನಂತ ರೂಪವಡಗಿದೆ. ಆದ್ದರಿಂದ ಇಂತಹ ದೇವಾಲಯವನ್ನು ಚಿದ್ರಗೊಳಿಸುವ ಆತ್ಮಹತ್ಯೆ ಮಹಾ ಪಾಪ. ಜಗತ್ತಿನ ಇತರ ಜೀವ ಜಂತುಗಳಲ್ಲಿ ಭಗವಂತನಿದ್ದರೂ ಕೂಡಾ, ಪೂರ್ಣತೆ ಪಡೆಯದ ಇತರ ಜೀವಗಳಿಗಿಂತ, ಮನುಷ್ಯನಲ್ಲಿ ಆತನ ಅಭಿವ್ಯಕ್ತ ಅತೀ ಹೆಚ್ಚು. ಈ ರೀತಿ ನಮ್ಮೊಳಗಿದ್ದು ಎಲ್ಲಾ ದೇವತೆಗಳನ್ನು ಧಾರಣೆ ಮಾಡಿ, ಎಲ್ಲಾ ಕಡೆ ತುಂಬಿರುವ ಆ ಭಗವಂತ ಧೃತಾತ್ಮಾ

Friday, July 16, 2010

Vishnu sahasranama 155-157


Vishnu sahasranama ಶುಚಿರೂರ್ಜಿತಃ ಅತೀಂದ್ರಃ

155) ಶುಚಿಃ
ಶುಚಿಃ ಅಂದರೆ "Ever Pure", ದೋಷದ ಸ್ಪರ್ಶವೇ ಇಲ್ಲದೆ, ನಿರ್ಮಲವಾಗಿರುವ ಬೆಳಕಿನ ಪುಂಜ. ಭಗವಂತ ಬೆಂಕಿಯಂತೆ. ಬೆಂಕಿಗೆ ಏನನ್ನೇ ಹಾಕಿ, ಅದು ಕೊಳೆಯಾಗುವುದಿಲ್ಲ. ಆದರೆ ನೀರು, ಗಾಳಿ ಕೊಳೆಯಾಗುತ್ತದೆ. ಬೆಂಕಿಗೆ ಹಾಕಿದ ಕೊಳೆ ಕೂಡ ಶುಚಿಯಾಗುತ್ತದೆ. ಭಗವಂತ ಕೂಡ ಅಗ್ನಿಯಂತೆ ಶುಚಿ. ಆತ ಸ್ವಯಂ ಬೆಳಕು ಹಾಗು ಎಲ್ಲರಿಗೂ ಬೆಳಕನ್ನು ಕೊಡುವವ. ಅಧರ್ಮಿಗಳಿಗೆ 'ಶೋಚ' ಅಥವಾ 'ದುಃಖ' ಕೊಡುವವನೂ ಅವನೇ . ಇಂತಹ ಭಗವಂತ ಶುಚಿಃ.
156) ಊರ್ಜಿತಃ
ಭಗವಂತ ಎಲ್ಲವುದರಲ್ಲೂ ಪೂರ್ಣತೆ ಪಡೆದ, ಅನಂತವಾದ, ಅತ್ಯಂತ ಬಲಶಾಲಿ. ಆದ್ದರಿಂದ ಆತ ಊರ್ಜಿತಃ
157) ಅತೀಂದ್ರಃ
ಅತೀಂದ್ರ ಎಂದರೆ ಇಂದ್ರನನ್ನು ಮೀರಿನಿಂತವನು ಹಾಗು ಬ್ರಹ್ಮ- ವಾಯುವನ್ನೂ ಮೀರಿ ನಿಂತವನು ಎಂದರ್ಥ. ಇಂದ್ರ ಎಂದರೆ ಸರ್ವಸಮರ್ಥ. ಜಗತ್ತಿನಲ್ಲಿ ನಾವು ಯಾವುದನ್ನು ಸರ್ವಸಮರ್ಥ ಎಂದು ತಿಳಿದಿದ್ದೇವೋ, ಆ ಎಲ್ಲಾ ಶಕ್ತಿಗಳನ್ನು ಮೀರಿನಿಂತ ಶಕ್ತಿಯಾದ ಭಗವಂತ ಅತೀಂದ್ರ. ಇಂದ್ರ ಎಂದರೆ ದೇವೇಂದ್ರ ಕೂಡಾ ಹೌದು. ಭಗವಂತ ದೇವೇಂದ್ರನನ್ನು ಮೀರಿ ನಿಂತ ಶಕ್ತಿ ಎಂದು ನಿರೂಪಿಸುವ ಕಥೆ, ಶ್ರೀ ಕೃಷ್ಣ ನಮಗೆ ಗೋವರ್ದನ ಪರ್ವತ ಎತ್ತಿ ತೋರಿಸಿಕೊಟ್ಟಿದ್ದಾನೆ. ಈ ರೀತಿ ಇಂದ್ರನನ್ನು, ಪ್ರಾಣ-ವಾಯುವನ್ನು, ಬ್ರಹ್ಮಾದಿ ದೇವತೆಗಳನ್ನು ಮೀರಿನಿಂತ, ಓಂಕಾರ ನಾಮಕ ಭಗವಂತ ಅತೀಂದ್ರಃ

Thursday, July 15, 2010

Vishnu Sahasranama 152-154


Vishnu Sahasranama ವಾಮನಃ ಪ್ರಾಂಶುರಮೋಘಃ

152) ವಾಮನಃ
ಬಲಿ ಚಕ್ರವರ್ತಿಯನ್ನು ವಾಮನರೂಪಿ ಭಗವಂತ ಮೂರು ಹೆಜ್ಜೆ ಭೂಮಿ ಕೇಳಿ, ಸೋಲಿಸಿ ಉದ್ದಾರ ಮಾಡಿದ ಕಥೆಯನ್ನು ನಾವು ಭಗವಂತನ ವಿಕ್ರಮೀ ಎನ್ನುವ ನಾಮ(75 ನೇ ನಾಮ)ದಲ್ಲಿ ನೋಡಿದ್ದೇವೆ.
ಇಲ್ಲಿ ವಾಮನ ಎಂದರೆ ಚಿಕ್ಕ ಗಾತ್ರದವ ಎಂದರ್ಥ. ಭಗವಂತ ಅಣುವಿಗಿಂತ ಅಣುವಾಗಿ ನಮ್ಮ ಹೃದಯಕಮಲದಲ್ಲಿ ತುಂಬಿದ್ದಾನೆ.
ಇನ್ನು 'ವಾಮ' ಅಂದರೆ ಸೌಂದರ್ಯ. ವಾಮನ ಎಂದರೆ ಸೌಂದರ್ಯವನ್ನು ಕೊಡುವವನು. ಸೌಂದರ್ಯದ ಕೇಂದ್ರಬಿಂದು ಕಣ್ಣು. ಭಗವಂತನ ಸನ್ನಿದಾನ ಕಣ್ಣಿನಲ್ಲಿರುತ್ತದೆ. ಎಷ್ಟೇ ಸೌಂದರ್ಯವಿದ್ದರೂ, ಕಣ್ಣಿಲ್ಲದವ ಕುರೂಪಿಯಾಗಿರುತ್ತಾನೆ. ಈ ರೀತಿ ಸೌಂದರ್ಯಸಾರಭೂತನಾದ ಭಗವಂತ ವಾಮನ.
ಈ ಪದವನ್ನು ವಾ+ಅಮ+ನ ಎಂದು ಒಡೆದು ಅರ್ಥೈಸಬಹುದು. ಇಲ್ಲಿ 'ವಾ' ಅಂದರೆ ಜ್ಞಾನ, 'ಅಮ' ಅಂದರೆ ಅಜ್ಞಾನ ಹಾಗು 'ನ' ಎಂದರೆ ನಯತಿ. ಆದ್ದರಿಂದ ಜ್ಞಾನವನ್ನಾಗಲಿ, ಅಜ್ಞಾನವನ್ನಾಗಲಿ, ಅವರವರ ಯೋಗ್ಯತೆಗೆ ತಕ್ಕಂತೆ ಕರುಣಿಸುವ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ, ಆದ ಭಗವಂತ ವಾಮನ.
153) ಪ್ರಾಂಶುಃ
ಪ್ರಾಂಶುಃ ಅಂದರೆ ಪ್ರಕೃಷ್ಟವಾದ ಕಿರಣಗಳುಳ್ಳವ, ಹಾಗು ಎತ್ತರದಲ್ಲಿರುವವ ಎಂದರ್ಥ. ಸೂರ್ಯನಲ್ಲಿ, ಚಂದ್ರನಲ್ಲಿ, ಎಲ್ಲಾ ಜೀವರಲ್ಲಿ, ಎಲ್ಲೆಲ್ಲೂ ತುಂಬಿರುವ ಭಗವಂತ ಪ್ರಾಂಶುಃ. ಬಲಿ ಚಕ್ರವರ್ತಿ ಭಗವಂತನ ಈ ರೂಪವನ್ನು ತಿಳಿದ ಮರುಕ್ಷಣದಲ್ಲಿ ಭಗವಂತನ ಪಾದಕಮಲಕ್ಕೆ ತಲೆಯೊಡ್ಡಿ ಶರಣಾಗುತ್ತಾನೆ.
154) ಅಮೋಘಃ
ಮೋಘ ಅಂದರೆ ವ್ಯರ್ಥ ಎಂದರ್ಥ. ಭಗವಂತನ ಯಾವ ಕ್ರಿಯೆಯೂ ವ್ಯರ್ಥವಲ್ಲ ಅದು ಅಮೋಘ. ಭಗವಂತನಿಗೆ ಅರ್ಪಿಸಿ ನಾವು ಮಾಡುವ ಯಾವ ಕೆಲಸವೂ ಎಂದೂ ವ್ಯರ್ಥವಲ್ಲ. ಗೀತೆಯಲ್ಲಿ ಹೇಳುವಂತೆ:
ನೇಹಾಭಿಕ್ರ ಮನಾಶೋsಸ್ತಿ ಪ್ರತ್ಯವಾಯೋ ನ ವಿದ್ಯತೇ (ಅ-೨ ಶ್ಲೋ-೪೦)
ಎಂದರೆ "ಭಗವದ್ಸಾಧನೆಯ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ" .
ನಾವು ಕೋಟ್ಯಾಧಿಪತಿಯಾಗಬೇಕು ಎಂದು ದೇವರನ್ನು ಮರೆತು, ಜೀವನ ಪರ್ಯಂತ ಸಾಧನೆ ಮಾಡಿ, ಗಳಿಸಿದ ಹಣ ನಮ್ಮೊಂದಿಗೆ ಬರುವುದಿಲ್ಲ. ಆದರೆ ಭಗವಂತನ ಜ್ಞಾನ ಅಥವಾ ಭಗವಂತನನ್ನು ತಿಳಿಯುವ ಇಚ್ಚೆ, ನಮ್ಮ ಮುಂದಿನ ಜನ್ಮದ ಮೆಟ್ಟಿಲಾಗಿ ನಮ್ಮೊಂದಿಗೆ ಬರುತ್ತದೆ. ನಾವು ಮಾಡಿದ ಯಾವ ಕರ್ಮವಿರಲಿ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ಅದು ಮೋಘವಾಗದೆ, ಮುಂದಿನ ಜನ್ಮದಲ್ಲಿ ಫಲಿಸಿಯೇ ತೀರುವಂತೆ ನೋಡಿಕೊಳ್ಳುವ ಭಗವಂತ ಅಮೋಘಃ

Wednesday, July 14, 2010

Vishnu Sahasranama 151


Vishnu Sahasranama ಉಪೇಂದ್ರ

151) ಉಪೇಂದ್ರ
ಉಪೇಂದ್ರ ಎನ್ನುವ ಭಗವಂತನ ನಾಮ ತುಂಬಾ ರೋಚಕವಾದ ಅರ್ಥವನ್ನು ಕೊಡುವ ನಾಮ.
ಹಿಂದೆ ನೋಡಿದಂತೆ(39ನೇ ನಾಮ ನೋಡಿ) ಅದಿತಿ-ಕಶ್ಯಪರ ಹನ್ನೆರಡು ಮಂದಿ ಮಕ್ಕಳಲ್ಲಿ ಒಬ್ಬ ಇಂದ್ರ ಹಾಗು ಕೊನೇಯ ಮಗ ವಾಮನ ರೂಪಿ ಭಗವಂತ. ಇಲ್ಲಿ ಇಂದ್ರನ ತಮ್ಮನಾಗಿ ಹುಟ್ಟಿದ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. "ಅಜಗನ್ಯಹ ಜಗನ್ಯಜಃ" ಅಂದರೆ ಯಾರಿಗೂ ಚಿಕ್ಕವನಲ್ಲ ಆದರೆ ಹುಟ್ಟಿನಲ್ಲಿ ಎಲ್ಲರಿಗಿಂತ ಚಿಕ್ಕವ ವಾಮನ.
ಚತುರ್ಮುಖನ ಒಂದು ದಿನ ಅಂದರೆ 432 ಕೋಟಿ ವರ್ಷಗಳ ಹಗಲು(ಸೃಷ್ಟಿ) ಹಾಗು 432 ಕೋಟಿ ವರ್ಷಗಳ ರಾತ್ರಿ (ಪ್ರಳಯ). ಈ 432 ಕೋಟಿ ವರ್ಷಗಳ ಹಗಲಿನಲ್ಲಿ 14 ಮನ್ವಂತರಗಳಿರುತ್ತವೆ. ಪ್ರತೀ ಮನ್ವಂತರಕ್ಕೆ ಒಬ್ಬ ಇಂದ್ರ. ಹಾಗು ಪ್ರತೀ ಮನ್ವಂತರಕ್ಕೆ ಒಮ್ಮೆ ಸಂಪೂರ್ಣ ದೇವಗಣ ಬದಲಾಗುತ್ತದೆ. ಪ್ರತೀ ಮನ್ವಂತರದಲ್ಲಿ ಇಂದ್ರನಿಗೆ ಸಹಾಯಕನಾಗಿ ಭಗವಂತ ಅವತರಿಸುತ್ತಾನೆ. ಹೀಗೆ ಇಂದ್ರನ ಬೆಂಬಲಕ್ಕಾಗಿ ಅವತರಿಸುವ ಭಗವಂತನನ್ನು ಉಪೇಂದ್ರ ಎನ್ನುತ್ತಾರೆ. ಮೊದಲನೇ ಮನ್ವಂತರದಲ್ಲಿ ಭಗವಂತ ಸ್ವತಃ ಇಂದ್ರನಾಗಿದ್ದದರಿಂದ ಅಲ್ಲಿ ಉಪೇಂದ್ರ ಕಾಣಸಿಗುವುದಿಲ್ಲ. ವೈವಸ್ವತ ಮನ್ವಂತರದ ಉಪೇಂದ್ರರೂಪ ವಾಮನ. ಆದ್ದರಿಂದ, ಇಂದ್ರನಿಂದ ಬಲಿ ರಾಜ್ಯವನ್ನು ಕಿತ್ತುಕೊಂಡಾಗ, ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿ, ಇಂದ್ರನ ಸಂಪತ್ತನ್ನೂ ಮರಳಿ ಇಂದ್ರನಿಗೆ ಕೊಟ್ಟವ ಉಪೇಂದ್ರನಾದ ವಾಮನ ರೂಪಿ ಭಗವಂತ.
ಇನ್ನು ಉಪೇಂದ್ರ ಎನ್ನುವ ನಾಮದಲ್ಲಿ 'ಉಪ' ಅಂದರೆ 'ಉಪರಿ' ಅಂದರೆ ಉತ್ಕೃಷ್ಟ ಎಂದರ್ಥ. ಈ ಸಂಸ್ಕೃತ ಶಬ್ದ ಇಂಗ್ಲೀಷಿನಲ್ಲಿ up ಅಥವಾ upper ಎಂದಾಯಿತು. ಜರ್ಮನ್ ಭಾಷೆಯಲ್ಲಿ Über (Ueber ) ಎಂದಾಯಿತು. ಹಿಂದಿಯಲ್ಲಿ ऊपर ಎಂದಾಯಿತು. ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಉಪ ಎಂದರೆ ಎತ್ತರ ಎನ್ನುವ ಅರ್ಥವನ್ನು ಅನೇಕ ಕಡೆ ಬಳಸುತ್ತೇವೆ. ಉದಾಹರಣೆಗೆ 'ಉಪನಿಷತ್ತು ' ಅಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ ಗ್ರಂಥ, 'ಉಪನಯನ' ಅಂದರೆ ಜ್ಞಾನಗಳಿಸಲು ಬೇಕಾದ ಎತ್ತರಕ್ಕೆ ಏರುವ ಕ್ರಿಯೆ, 'ಉಪವಾಸ 'ಅಂದರೆ ಮನಸ್ಸನ್ನು ಎತ್ತರಕ್ಕೇರಿಸಲು ನಮ್ಮ ಹೊಟ್ಟೆಯನ್ನು ಖಾಲಿ ಇಡುವುದು, ಇತ್ಯಾದಿ. ಆದ್ದರಿಂದ ಇಲ್ಲಿ ಉಪೇಂದ್ರ ಎಂದರೆ ಸ್ವರ್ಗದ ಒಡೆಯನಾದ ಇಂದ್ರನಿಗಿಂತ ಮೇಲಿರುವ, ಮೂರುಲೋಕದ ಒಡೆಯನಾದ, ಬ್ರಹ್ಮಾಂಡ ನಾಯಕ ಭಗವಂತ ಎಂದರ್ಥ.

Tuesday, July 13, 2010

Vishnu Sahasranama 149-150

Vishnu Sahasranama ವಿಶ್ವಯೋನಿಃ ಪುನರ್ವಸುಃ
149) ವಿಶ್ವಯೋನಿಃ
ಈ ನಾಮ ಹಿಂದೊಮ್ಮೆ ಬಂದಿದೆ. ಇಲ್ಲಿ 'ವಿ' , 'ಶ್ವ' ಅಂದರೆ ಹಕ್ಕಿಯ ಮೇಲೆ ಕೂರುವವ, ಹಾಗು ಯೋನಿ ಎಂದರೆ ಎಲ್ಲಕ್ಕೂ ಕಾರಣಕರ್ತ, ಜಗದ ಜನಕ ಎಂದರ್ಥ.
ಗೀತೆಯಲ್ಲಿ ಹೇಳುವಂತೆ:
ಮಮ ಯೋನಿರ್ಮಹದ್ ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ (ಅ-೧೪, ಶ್ಲೋ ೩)
ಬ್ರಹ್ಮ ಶಬ್ದ ವಾಚ್ಯಳಾದ ಚಿತ್ತ್ ಪೃಕೃತಿ ಯಾರ ಪತ್ನಿಯೋ, ಇಡೀ ವಿಶ್ವವು ಯಾರ ಅಭಿವ್ಯಕ್ತಿಗೆ ಕಾರಣವೋ, ಅವನು ವಿಶ್ವಯೋನಿ. ಈ ರೀತಿ ಮುಖ್ಯಪ್ರಾಣಾಂತರ್ಗತನಾದ ನಾರಾಯಣನನ್ನು ವಿಶ್ವಯೋನಿ ಎನ್ನುತ್ತಾರೆ.
150) ಪುನರ್ವಸುಃ
ಇಲ್ಲಿ ವಸು ಅಂದರೆ ಸಂಪತ್ತು. ಭಗವಂತ ಒಮ್ಮೆ ಬಡತನ ಕೊಟ್ಟರೆ ಪುನಃ ಸಂಪತ್ತನ್ನು ಕೊಡುತ್ತಾನೆ. ದೇವತೆಗಳ ಸಂಪತ್ತನ್ನೆಲ್ಲಾ ಅಪಹಾರ ಮಾಡಿದ ಬಲಿಯನ್ನು ಸೋಲಿಸಿ, ದೇವತೆಗಳಿಗೆ ಅವರ ಸಂಪತ್ತನ್ನು ಪುನಃ ಹಿಂತಿರುಗಿಸಿದ ಭಗವಂತ, ತಲೆಯನ್ನು ತನ್ನ ಪಾದ ಪೀಠವನ್ನಾಗಿ ಮಾಡಿದ ಬಲಿಯನ್ನು ಮುಂದಿನ ಮನ್ವಂತರದಲ್ಲಿ ಇಂದ್ರನನ್ನಾಗಿ ಮಾಡಿದ.ಹೀಗೆ ಒಮ್ಮೆ ಜ್ಞಾನವನ್ನೂ, ಇನ್ನೂಮ್ಮೆ ಅಜ್ಞಾನವನ್ನು, ಒಮ್ಮೆ ಸಂಪತ್ತನ್ನೂ, ಇನ್ನೊಮ್ಮೆ ಬಡತನವನ್ನು ಕೊಟ್ಟು, ನಮ್ಮನ್ನು ಪರಿಣತರನ್ನಾಗಿ ಮಾಡುವ ಭಗವಂತ ಪುನರ್ವಸುಃ

Monday, July 12, 2010

Vishnu Sahasranama 146-148


Vishnu Sahasranama: ಅನಘೋ ವಿಜಯೋ ಜೇತಾ

146) ಅನಘಃ
ಅಘ ಅಂದರೆ ಪಾಪ, ದುಃಖ, ವ್ಯಸನ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಇಲ್ಲಿ ವ್ಯಸನ ಎಂದರೆ ಚಾಳಿ ಅಥವಾ ಚಟ. ಭಗವಂತನಿಗೆ ಯಾವ ಪಾಪದ ಲೇಪವೂ ಇಲ್ಲ. ಆತ ಸಂಹಾರ ಮಾಡುವುದು ಕಾರುಣ್ಯದಿಂದ ಹೊರತು ದ್ವೇಷದಿಂದಲ್ಲ. ಉದಾಹರಣೆಗೆ ಕೃಷ್ಣ ದ್ರೋಣಾಚಾರ್ಯರನ್ನು "ಅಶ್ವತ್ತಾಮ ಸತ್ತ" ಎಂದು ಧರ್ಮರಾಯನಲ್ಲಿ ಹೇಳಿಸಿ ಕೊಲ್ಲುತ್ತಾನೆ. ಇದರ ಹಿಂದಿರುವ ಕಾರುಣ್ಯ ಅಪಾರವಾದದ್ದು. ದುರ್ಯೋದನನಂತಹ ದುಷ್ಟ, ಸಮಾಜಕಂಟಕ, ದ್ರೋಹಿಯ- ಅನ್ನದ ಋಣಕ್ಕೊಸ್ಕರ, ಪ್ರತಿದಿನ ಹತ್ತು ಸಾವಿರ ಸೈನಿಕರನ್ನು ಸಾಯಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ದ್ರೋಣರನ್ನು, ಪಾಪದ ಕಡಲಿನಿಂದ ರಕ್ಷಿಸಲು ಭಗವಂತ ಆತನನ್ನು ಸಾಯಿಸಿ ರಕ್ಷಿಸುತ್ತಾನೆ. ಇಲ್ಲಿ ಭಗವಂತ ನಿರ್ವಿಕಾರ ಹಾಗು ನಿರ್ಲಿಪ್ತ. ಆತನಿಗೆ ಸಾಯಿಸುವುದು ವ್ಯಸನವಲ್ಲ ಹಾಗು ದುಃಖ-ಪಾಪದ ಲೇಪ ಅವನಿಗಿಲ್ಲ. ಇಂತಹ ಭಗವಂತ ಅನಘ.
147)ವಿಜಯಃ
ಅರ್ಜುನನನ್ನು 'ವಿಜಯ'ಎಂದು ಕರೆಯುತ್ತಾರೆ. ಹೆಚ್ಚು ಯುದ್ದಗಳಲ್ಲಿ ಪಾಲ್ಗೊಂಡು ಕಪ್ಪ-ಕಾಣಿಕೆ ಸಂಗ್ರಹಿಸಿದ್ದರಿಂದ ಆತನಿಗೆ ಈ ಅನ್ವರ್ಥ ನಾಮ. ಸೂಕ್ಷ್ಮವಾಗಿ ನೋಡಿದರೆ ಅತೀ ಹೆಚ್ಚು ಸಂಪತ್ತು ಹಾಗು ಅತಿದೊಡ್ಡ ವಿಜಯ ಪಾಂಡವರಿಗೆ ಭೀಮಸೇನನಿಂದ-ಜರಾಸಂದನ ವದೆಯಿಂದ ಬಂದಿರುವುದು. ಆದರೂ ರೂಢಿಯಲ್ಲಿ ಅರ್ಜುನನನ್ನು 'ವಿಜಯ', 'ಧನಂಜಯ' ಎಂದು ಕರೆಯುತ್ತಾರೆ. ಅರ್ಜುನನಲ್ಲಿ 'ನರ' ನಾಮಕ ಭಗವಂತನ ಸನ್ನಿಧಾನವಿದ್ದದರಿಂದ, ಆಂಜನೇಯ ರೂಪಿ ಪ್ರಾಣದೇವರು ಆತನ ರಥದ ದ್ವಜದಲ್ಲಿದ್ದದರಿಂದ, ಅರ್ಜುನ ವಿಜಯನಾದ. ಭಾಗವತದಲ್ಲಿ ಹೇಳುವಂತೆ ಅರ್ಜುನನ ಹಾಗು ಭೀಮನ ಒಳಗೆ ಕುಳಿತು, ವಿಜಯ ಸಾರಥಿಯಾಗಿ, ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ನಿಜವಾದ ವಿಜಯ. ಪಾಂಡವರನ್ನು ಹೆಜ್ಜೆ ಹೆಜ್ಜೆಗೂ ವಿಜಯ ಪಥದತ್ತ ಕೊಂಡೊಯ್ದ ಭಗವಂತ ವಿಜಯ.
ಇಷ್ಟೇ ಅಲ್ಲದೆ, ರಾಮಾವತಾರದಲ್ಲಿ ರಾವಣ-ಕುಂಭಕರ್ಣನನ್ನು, ನರಸಿಂಹ ಅವತಾರಿಯಾಗಿ ಹಿರಣ್ಯಕಷಿಪುವನ್ನು, ವರಾಹ ಅವತಾರದಲ್ಲಿ ಹಿರಣ್ಯಾಕ್ಷನನ್ನು, ಹೀಗೆ ಅನೇಕ ರಾಕ್ಷಸರನ್ನು ವಿಶಿಷ್ಟವಾದ ರೂಪದಲ್ಲಿ ಜಯಿಸಿದ ಭಗವಂತ ವಿಜಯ.
148 ) ಜೇತಾ
ಜೇತೃ ಎಂದರೆ ಎಲ್ಲವನ್ನು ಗೆದ್ದವನು. ಮೇಲೆ ವಿಜಯ ನಾಮದಲ್ಲಿ ನೋಡಿದಂತೆ ಭಗವಂತ ಎಲ್ಲರನ್ನೂ ಗೆದ್ದವನು. ಎಲ್ಲರನ್ನೂ ಗೆದ್ದು, ಎಲ್ಲರಿಗಿಂತ ಎತ್ತರದಲ್ಲಿದ್ದು, ನಮ್ಮನ್ನು ಎತ್ತರಕ್ಕೇರಿಸುವವನು, ಅರಿಗಳನ್ನು ಗೆದ್ದವನು ಜೇತಾ.

Sunday, July 11, 2010

Vishnu Sahasranama 145


Vishnu Sahasranama:

145)ಜಗದಾದಿಜಃ
ಜಗದಾದಿಜ ಎಂದರೆ ಸೃಷ್ಟಿಯ ಮೊದಲು ಇದ್ದವ ಹಾಗು ಜಗತ್ತನ್ನು ಸೃಷ್ಟಿಸುವ ಮೊದಲು ಚತುರ್ವ್ಯೂಹ ಮೂರ್ತಿಗಳಾದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ ಎನ್ನುವ ನಾಲ್ಕು ರೂಪದಲ್ಲಿ ತನ್ನನ್ನು ತಾನು ಸೃಷ್ಟಿ ಮಾಡಿಕೊಂಡವ. ಇಲ್ಲಿ ಸೃಷ್ಟಿಯಾಗುವುದು ಎಂದರೆ ಇದ್ದದ್ದು ಕಾಣುವ ರೂಪತಳೆಯುವುದು ಎಂದರ್ಥ. ಭಗವಂತ ಮೊದಲು ಪುರುಷನಾಮಕ ರೂಪವನ್ನು ಧರಿಸಿ , ನಂತರ ಮಹಾತತ್ವದ ಸೃಷ್ಟಿ ಮಾಡಿದ. ಆನಂತರ ಅಹಂಕಾರ ತತ್ವದ ಸೃಷ್ಟಿಯಾಯಿತು. ಅಹಂಕಾರ ತತ್ವದಿಂದ ಪಂಚಭೂತಗಳ ಸೃಷ್ಟಿಯಾಯಿತು. ಪಂಚಭೂತಗಳಿಂದ ಪ್ರಪಂಚ ಪುರುಷನ ಸೃಷ್ಟಿ, ಹಾಗು ಬ್ರಹ್ಮಾಂಡ ಸೃಷ್ಟಿಯಾಯಿತು. ಬ್ರಹ್ಮಾಂಡದಿಂದ ಪಿಂಡಾಂಡ ಸೃಷ್ಟಿಯಾಯಿತು. ಭಗವಂತ ಒಂದೊಂದು ಪಿಂಡಾಂಡದಲ್ಲಿ ಬಿಂಬ ರೂಪಿಯಾಗಿ ನೆಲೆಸಿದ.
ಸೂಕ್ಷ್ಮ ಸೃಷ್ಟಿ ಭಗವಂತನ ನಾಭಿ ಕಮಲ. ಈ ಸೂಕ್ಷ್ಮ ಪ್ರಪಂಚವನ್ನು ಚತುರ್ಮುಖ ಮಹಾತತ್ವದಿಂದ ವಿಸ್ತಾರಗೊಳಿಸಿ, ಸ್ಥೂಲ ಪ್ರಪಂಚ ಸೃಷ್ಟಿ ಮಾಡಿದ. ಮಹಾತತ್ವದಿಂದ ಅಹಂಕಾರ ತತ್ವದ ಒಡೆಯನಾಗಿ ಶಿವ ಬಂದ. ಶಿವನಿಂದ ಅಹಂಕಾರ ತತ್ವದ ಮೂರು ರೂಪಗಳ ಸೃಷ್ಟಿಯಾಯಿತು. ಅವುಗಳೆಂದರೆ: ೧. ಸಾತ್ವಿಕ ಅಹಂಕಾರ ತತ್ವ ೨.ರಾಜಸ ಅಹಂಕಾರ ತತ್ವ ೩.ತಾಮಸ ಅಹಂಕಾರ ತತ್ವ.
ಸಾತ್ವಿಕ ಮತ್ತು ರಾಜಸ ಅಹಂಕಾರತತ್ವದಿಂದ ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ ಹಾಗು ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ತಾಮಸ ಅಹಂಕಾರತತ್ವದಿಂದ ಪಂಚ ಭೂತಗಳ ಹಾಗು ಅದರ ತತ್ವಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. ಈ ರೀತಿ ನಮಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಯಿತು.
ಈ ಜಗತ್ತಿಗೆ ಮೂಲ ಕಾರಣನಾಗಿ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾಗಿರುವ ಎಲ್ಲರ ಜನಕನಾದ ಭಗವಂತ ಜಗದಾದಿಜ.

Saturday, July 10, 2010

Vishnu Sahasranama 144


Vishnu Sahasranama: ಸಹಿಷ್ಣು

144) ಸಹಿಷ್ಣು
ಸಹಿಷ್ಣು ಅಂದರೆ ಸಹನೆ ಉಳ್ಳವನು ಎಂದರ್ಥ. ಯಾವುದಕ್ಕೂ ಮಣಿಯದ, ತಾಕತ್ತಿದ್ದರೂ ಇನ್ನೊಬ್ಬರ ತಪ್ಪನ್ನು ಕ್ಷಮಿಸುವ, ಮಹತ್ತಾದ ಗುಣ ಸಹಸ್ಸು. ನಾವು ಮಾಡುವ ಕಾರ್ಯದ ಹಿಂದಿನ ಭಾವ- ಪಾಪ ಅಥವಾ ಪುಣ್ಯಗಳನ್ನು ನಿರ್ದರಿಸುತ್ತದೆ. ಸಾಮಾಜಿಕವಾಗಿ ಕಾಣುವ ಕೆಟ್ಟ ಕೆಲಸವನ್ನು ಮಾಡಿದ ನಮ್ಮ ಭಾವಕ್ಕನುಗುಣವಾಗಿ, ನಮ್ಮನ್ನು ಭಗವಂತ ಕ್ಷಮಿಸಿ, ಪಾಪದ ಲೇಪದಿಂದ ವಿಮುಕ್ತನಾಗಿಸುತ್ತಾನೆ. ಭಗವಂತ 'ಸರ್ವ ಭಕ್ತಾಪರಾದ ಸಹಿಷ್ಣು' ಆತನ ಕ್ಷಮಾಗುಣಕ್ಕೆ ಅಜಾಮಿಳನ ಕಥೆ ಉತ್ತಮ ದೃಷ್ಟಾಂತ.

ಅಜಾಮಿಳ ಒಬ್ಬ ಬ್ರಾಹ್ಮಣ. ಸರಳ, ಮಿತಭಾಷಿ, ಸಾತ್ತ್ವಿಕ, ವಿದ್ವಾಂಸನಿದ್ದ. ಗುರು, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ತನ್ನ ಕೈ ಹಿಡಿದ ಹೆಂಡತಿಯನ್ನೂ ಪ್ರೀತಿಸುತ್ತಿದ್ದ. ಒಂದು ದಿನ ಆತ ಕಾಡಿನಲ್ಲಿ ಸುಂದರಿಯಾದ ಒಬ್ಬಳು ಹೆಣ್ಣನ್ನು, ಅರೆನಗ್ನ ಸ್ಥಿತಿಯಲ್ಲಿ ನೋಡಿ ಆಕರ್ಷಣೆಗೊಳಪಟ್ಟ, ತನ್ನ ಹೆಂಡತಿ ಮತ್ತು ತಂದೆ ತಾಯಿಯರನ್ನು ಮರೆತು, ತಾನು ಕಂಡ ಕಾಡಿನ ಹುಡುಗಿಯ ಸಂಗದಲ್ಲಿ, ಲೋಕವನ್ನು ಮರೆತ. ಆಕೆಯನ್ನು ಸಂತೋಷಪಡಿಸಲು ಮಾಡಬಾರದ ಕೆಲಸವನ್ನೆಲ್ಲಾ ಮಾಡಿದ. ಕುಡುಕನಾದ, ಕಳ್ಳತನ ಮಾಡಿದ, ಜೂಜಾಡಿದ. ಕಾಡಿನಲ್ಲಿ ಆಕೆಯೊಂದಿಗೆ ಸಂಸಾರ ಬೆಳೆಯಿತು, ಮಕ್ಕಳಾದವು. ಕೊನೆಯ ಮಗನ ಹೆಸರು 'ನಾರಾಯಣ'. ಒಂದಿರುಳು ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾಯಿತು. ಅವರ ಕೈಯಲ್ಲಿ ಯಮಪಾಶ! ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗ 'ನಾರಾಯಣ' ನನ್ನು ಕೂಗಿ ಕರೆದ! - ಆಗ ಮಗನ ಬದಲು ಪ್ರತ್ಯಕ್ಷರಾದ ವಿಷ್ಣು ದೂತರು, ಹಳಿತಪ್ಪಿ ಚಲಿಸುತ್ತಿದ್ದ ಆತನನ್ನು ಪುನಃ ಸರಿಯಾದ ದಾರಿಯಲ್ಲಿ ತಂದು ಉದ್ದಾರ ಮಾಡುತ್ತಾರೆ. ನಂತರದ ದಿನಗಳಲ್ಲಿ ಆತ ಮಹಾತ್ಮನಾಗಿ ಬದುಕುತ್ತಾನೆ.
ನಮ್ಮಲ್ಲಿ ಸಾತ್ವಿಕತೆ ಮತ್ತು ಜ್ಞಾನ ಅನೇಕ ಜನ್ಮಗಳ ಫಲದಿಂದ ಬಂದಿರುತ್ತದೆ. ಯಾವೊದೋ ಕೆಟ್ಟ ಕಾರಣದಿಂದ ನಾವು ದಾರಿತಪ್ಪಿದಾಗ, ಕರುಣಾಮಯನಾದ ಭಗವಂತ ನಮ್ಮನ್ನು ಶಿಕ್ಷಿಸುವ ಬದಲು ಕ್ಷಮಿಸಿ ಉದ್ದಾರ ಮಾಡುತ್ತಾನೆ. ಎಂತಹ ತಪ್ಪನ್ನೂ ಕೂಡ ಕ್ಷಮಿಸುವ ಕಾರುಣ್ಯಮೂರ್ತಿ ಆ ಭಗವಂತ. ಭಗವಂತ ನಮಗೆ ಕೊಡುವ ದುಃಖ- ತಾಯಿ ತನ್ನ ಮಗುವನ್ನು ತಿದ್ದಲು ಕೊಡುವ ಶಿಕ್ಷೆಯಂತೆ. ಆತನ ಶಿಕ್ಷೆ ಕಾರುಣ್ಯದ ರಕ್ಷೆ. ಆತ ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲರ ಅಪರಾಧವನ್ನೂ ಸಹಿಸುವ ಭಗವಂತ ಸಹಿಷ್ಣು.

Friday, July 9, 2010

Vishnu Sahasranama 142-143


Vishnu Sahasranama: ಭೋಜನಂ ಭೋಕ್ತಾ

142 -143) ಭೋಜನಂ ಭೋಕ್ತಾ
ಭಗವಂತ ಅನ್ನವೂ ಹೌದು, ಉಣ್ಣುವವನೂ ಹೌದು!!
ಗೀತೆಯಲ್ಲಿ ಹೇಳುವಂತೆ:
ಬ್ರಹ್ಮಾರ್ಪಣಂ ಬ್ರಹ್ಮಹವಿಃ, ಬ್ರಹ್ಮಾಗ್ನೌಬ್ರಹ್ಮಣಾ ಹುತಮ್
ಬ್ರಹ್ಮೈವತೇನ ಗಂತವ್ಯಂ, ಬ್ರಹ್ಮಕರ್ಮ ಸಮಾಧಿನಾ (ಅ-೪,ಶ್ಲೋ-೨೪)
ಅಂದರೆ ಅರ್ಪಣವೂ ಭಗವಂತ, ಅರ್ಪಿಸುವ ಹವಿಸ್ಸೂ ಭಗವಂತ.
ಭಗವಂತನ ಸನ್ನಿಧಾನವಿಲ್ಲದ ಯಾವ ವಸ್ತುವೂ ಇಲ್ಲ. ಅನ್ನವೂ ಭಗವಂತ, ಅನ್ನವನ್ನು ತಿನ್ನುವವನೂ ಭಗವಂತ. ನಮಗೆ ತಿನ್ನುವ ಯೋಗ ಬಂದಿದ್ದೂ ಭಗವಂತನಿಂದ.
Note: ಇಲ್ಲಿ ಅನ್ನ ಎಂದರೆ ಅಕ್ಕಿಯಿಂದ ಮಾಡಿದ ಅನ್ನ ಮಾತ್ರವಲ್ಲ. ಸಂಸ್ಕೃತದಲ್ಲಿ ಅನ್ನ ಎಂದರೆ ತಿನ್ನುವಂತಹ ವಸ್ತು (Eatables) ಎಂದರ್ಥ. (ಈ ವಿಷಯವನ್ನು ಏಕಾದಶಿ ಉಪವಾಸ ಆಚರಣೆಯಲ್ಲಿ ನೆನಪಿನಲ್ಲಿಟ್ಟಿರಬೇಕು!!! )

ಭೋಕ್ತಾ ಅಂದರೆ ಆಹಾರವನ್ನು ಸ್ವೀಕರಿಸುವವ, ಜಗತ್ತಿನ ಎಲ್ಲಾ ಸಾರವನ್ನೂ ಸ್ವೀಕರಿಸುವವ.
ಗೀತೆಯಲ್ಲಿ ಹೇಳುವಂತೆ :
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ (ಅ-೯ ಶ್ಲೋ ೨೪)
ಯಜ್ಞದಲ್ಲಿ ನಾವು ಮಾಡುವ ಎಲ್ಲಾ ಆಹುತಿಯನ್ನು ಸ್ವೀಕರಿಸುವವ ಆ ಭಗವಂತ. ಆದ್ದರಿಂದ ಆತ ಯಜ್ಞ, ಯಜ್ಞಪುರುಷ ,ಯಜ್ಞಭಾವನ, ಯಜ್ಞಭೋಕ್ತ. ನಾವು ದೇವರಿಗೆ ಅರ್ಪಿಸುವ ನೈವೇದ್ಯ/ಹವಿಸ್ಸನ್ನು ನಮಗೆ ಕೊಟ್ಟವನೂ ಅವನೇ, ಸ್ವೀಕರಿಸುವವನೂ ಅವನೇ.
ಈ ರೀತಿ ಎಲ್ಲರಿಗೂ ಆನಂದವನ್ನು ಕೊಡುವವನು (ಭೋಜಯತಿ) ಹಾಗು ಸ್ವಯಂ ಆನಂದ ಭೋಕ್ತ ನಾದ ಭಗವಂತನನ್ನು ನಾವು ಭೋಜನಂ ಮತ್ತು ಭೋಕ್ತಾ ಎನ್ನುವ ನಾಮದಿಂದ ಉಪಾಸನೆ ಮಾಡುತ್ತೇವೆ.

Thursday, July 8, 2010

Vishnu Sahasranama 141


Vishnu Sahasranama : ಭ್ರಾಜಿಷ್ಣು

141)ಭ್ರಾಜಿಷ್ಣು
ಭ್ರಾಜಿಷ್ಣು ಅಂದರೆ ಬೆಳಕಿನ ಪುಂಜವಾಗಿ ಪ್ರಕಾಶಿಸುವವನು ಎಂದರ್ಥ.
ಗೀತೆಯಲ್ಲಿ ಕೃಷ್ಣ ಹೇಳುವಂತೆ ,
ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ (ಅ-೧೦, ಶ್ಲೋ-೨೧)
ಅಂದರೆ ರವಿಯಲ್ಲಿ ರವಿಯಾಗಿ ಪ್ರತೀ ಕಿರಣದಲ್ಲಿ ನಾನಿದ್ದೇನೆ ಎಂದರ್ಥ.
ಇನ್ನು ಈ ಪದವನ್ನು ಒಡೆದರೆ ಭ್ರಾ+ವಿಷ್ಣು, ಇಲ್ಲಿ 'ಭ್ರಾ' ಅಂದರೆ 'ಭರಣ'. ಆದ್ದರಿಂದ ಭ್ರಾಜಿಷ್ಣು ಅಂದರೆ ಎಲ್ಲವನ್ನೂ ಧರಿಸಿದವನು,
ಇನ್ನೂ ಈ ಪದವನ್ನು ಮುಂದಕ್ಕೆ ಒಡೆದರೆ, ಭ+ಆಜಿ+ಷ್ಣು. ಇಲ್ಲಿ ಆಜಿ ಅಂದರೆ ಯುದ್ದ, ಭ ಅಂದರೆ ಗೆಲ್ಲುವಂತೆ ಮಾಡುವವನು, ಷ್ಣು ಅಂದರೆ ಎಲ್ಲರ ಒಳಗೆ ನಿಂತು ಪ್ರೇರಣೆ ಮಾಡುವವ. ಆದ್ದರಿಂದ ಭ್ರಾಜಿಷ್ಣು ಅಂದರೆ , ನಾವು ನಮ್ಮ ಒಳಗೇ ಇರುವ ವೈರಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಇತ್ಯಾದಿ ವೈರಿಗಳ ವಿರುದ್ದ ಹೋರಾಟದಲ್ಲಿ ನಮಗೆ ಗೆಲುವನ್ನು ತಂದು ಕೊಡುವವನು. ಇದು ನಮಗೆ ಭಗವಂತ ಕೊಡುವ ಶಿಕ್ಷಣ. ದೇವತೆಗಳು ನಮ್ಮನ್ನು ಪರೀಕ್ಷೆಗೆ ಒಡ್ಡಿ ನಮಗೆ ಶಿಕ್ಷಣ ಕೊಡುತ್ತಾರೆ. ಇಂತಹ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿ ಹೊರಬರಲು ಭಗವಂತ ನಮಗೆ ಸದಾ ಸಹಕಾರವನ್ನು ಕೊಡುತ್ತಾನೆ. ಆದ್ದರಿಂದ ಇದು ಶಿಕ್ಷೆ ಅಲ್ಲ ಶಿಕ್ಷಣ. ಇಂತಹ ಭಗವಂತ ಭ್ರಾಜಿಷ್ಣು

Wednesday, July 7, 2010

Vishnu Sahasranama 140


ಚತುರ್ಭುಜಃ

140)ಚತುರ್ಭುಜಃ
ಸಾಮಾನ್ಯವಾಗಿ ದೇವರ ಮೂರ್ತಿಗಳಲ್ಲಿ ನಾವು ನಾಲ್ಕು ಕೈ ಹಾಗು ನಾಲ್ಕು ಆಯುಧವನ್ನು ನೋಡುತ್ತೇವೆ. ಉದಾಹರಣೆಗೆ ವಿಷ್ಣು- ಶಂಖ, ಚಕ್ರ, ಗಧಾ, ಪದ್ಮಧಾರಿ. ಹಾಗೇ ಗಣಪತಿ-ಪಾಶ, ದಂತ, ಅಂಕುಶ ಮತ್ತು ಅಭಯಧಾರಿ. ಏನಿದು ? ಏನಿದರ ಅರ್ಥ?
೧. ಚಕ್ರ: ಚಕ್ರ 'ಧರ್ಮದ' ಸಂಕೇತ. ಅಧರ್ಮವನ್ನು ಸಂಹಾರಮಾಡುವ, ನಿರಂತರ ತಿರುಗುವ ವಿಷ್ಣು ಚಕ್ರ, ಸಂಹಾರಶಕ್ತಿ ಮಾತೆ ದುರ್ಗೆಯ ಸಂಕೇತ.
೨. ಶಂಖ: ಧರ್ಮದ ಪಂಚಾಂಗದಲ್ಲಿ ನಮ್ಮ ಬದುಕು ಸಮೃದ್ದಿಯಾಗಿರುವ 'ಅರ್ಥದ' ಸಂಕೇತ.
೩.ಗಧಾ: ಭಗವಂತನ ಗದೆ ಸ್ವಚ್ಚಂದ 'ಕಾಮದ ನಿಯಂತ್ರಣದ' ಸಂಕೇತ.
೪. ಪದ್ಮ: 'ಶಾಂತಿಯ ಮತ್ತು ಮೋಕ್ಷದ' ಸಂಕೇತ
ಇದೇ ರೀತಿ ಗಣಪತಿಯನ್ನು ನೋಡಿದರೆ:
೧. ಪಾಶ: ನಮ್ಮ ಬದುಕಿಗೆ ಬೇಕಾದ ಧರ್ಮದ ಬಿಗಿ (ಪಾಶ).
೨.ದಂತ: ಸಂಪತ್ತಿನ ಜೊತೆಗೆ ಆತ್ಮ ಸಂಯಮ (ತನ್ನ ಧಾಡೆಯನ್ನು ಮುರಿದು ಹಿಡಿದಿರುವುದು).
೩. ಅಂಕುಶ: ಸ್ವಚ್ಚಂದ ಕಾಮಕ್ಕೆ ಅಂಕುಶ.
೪. ಅಭಯ: ಈ ಮೇಲಿನ ಮೂರನ್ನು ಪಾಲಿಸಿದರೆ ಮೋಕ್ಷದ ಅಭಯ.
ವಿಷ್ಣುವಿನ ಕೈಯಲ್ಲಿನ ನಾಲ್ಕು ಆಯುದಗಳನ್ನು ಇಪ್ಪತ್ನಾಲ್ಕು ವಿಧದಲ್ಲಿ ಇಡಲು ಬರುತ್ತದೆ. ಚಕ್ರ-ಶಂಖ-ಗಧಾ-ಪದ್ಮಧಾರಿ-ಜನಾರ್ದನ ಮೂರ್ತಿಯಾದರೆ, ಶಂಖ-ಚಕ್ರ-ಗಧಾ-ಪದ್ಮದಾರಿ-ಕೇಶವ ಮೂರ್ತಿ. ಈ ರೀತಿ ವಿಷ್ಣುವಿನ ಇಪ್ಪತ್ನಾಲ್ಕು ಮೂರ್ತಿಗಳಿವೆ. ಅವುಗಳೆಂದರೆ ೧. ಕೇಶವ ೨. ನಾರಾಯಣ ೩. ಮಾದವ ೪. ಗೋವಿಂದ. ೫. ಮದುಸೂದನ ೬. ತ್ರಿವಿಕ್ರಮ ೭. ವಿಷ್ಣು ೮. ಶ್ರೀಧರ ೯. ಹೃಷೀಕೇಶ ೧೦. ಪದ್ಮನಾಭ ೧೧. ದಾಮೋದರ ೧೨. ಸಂಕರ್ಷಣ ೧೩. ವಾಮನ ೧೪. ವಾಸುದೇವ ೧೫. ಪ್ರದ್ಯುಮ್ನ ೧೬. ಅನಿರುದ್ದ ೧೭. ಪುರುಷೋತ್ತಮ ೧೮.ಅದೊಕ್ಷಜ ೧೯. ನಾರಸಿಂಹ ೨೦.ಅಚ್ಚುತ ೨೧. ಜನಾರ್ದನ ೨೨. ಉಪೇಂದ್ರ ೨೩. ಹರಿ ೨೪. ಕೃಷ್ಣ.
ಈ ರೀತಿ ವಿಶಿಷ್ಟವಾದ ನಾಲ್ಕು ಬಾಹುವುಳ್ಳ ಭಗವಂತನನ್ನು ಚತುರ್ಭುಜ ಎನ್ನುತ್ತಾರೆ.

ಭುಜ ಎನ್ನುವುದಕ್ಕೆ ಭೋಜನ ಎನ್ನುವ ಅರ್ಥ ಕೂಡಾ ಇದೆ. ನಾಲ್ಕು ವಿಧದಲ್ಲಿ ತಿನ್ನುವವನು ಹಾಗು ತಿನ್ನಿಸುವವನು ಚತುರ್ಭುಜ. ಭಗವಂತನು ಗೀತೆಯಲ್ಲಿ ಹೇಳಿರುವಂತೆ-


ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ
ಪ್ರಾಣಾಪಾನಸಮಾಯುಕ್ತಃ
ಪಚಾಮ್ಯನ್ನಂ ಚತುರ್ವಿಧಮ್ (ch15-Sl14)

ಇಲ್ಲಿ 'ಪಚಾಮ್ಯನ್ನಂ ಚರ್ತುವಿಧಮ್' ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ.
ಅನ್ನವೆಂದರೆ ಎಲ್ಲಾ ರೀತಿಯ 'ಆಹಾರ’. "ಪ್ರಾಣಿನಾಂ ದೇಹಮಾಶ್ರಿತಃ" ಎಂದರೆ 'ಪ್ರಾಣಿ’ಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.
ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು)
ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು).
ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು.
ಚೋಷ್ಯ = ಕುಡಿಯಲು ಯೋಗ್ಯವಾದುದು.
ಈ ನಾಲ್ಕು ವಿಧದ ’ಅನ್ನ’ವನ್ನು ಸೇವಿಸುವ ಎಲ್ಲಾ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವನು ಚತುರ್ಭುಜ.
ಎಲ್ಲಾ ಆಹಾರ ಮಣ್ಣು-ನೀರು-ಬೆಂಕಿಯಿಂದ ಆಗಿರುತ್ತದೆ. ಆಹಾರದ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗು ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ ಹಾಗು ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ.
ಈ ರೀತಿ ಚಿನ್ನದ ಗಣಿಯಿಂದ ಚಿನ್ನವನ್ನು ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ತಿತ ರೀತಿಯಲ್ಲಿ ಮಾಡಿ , ನಾಲ್ಕು ಬಗೆಯ ಆಹಾರವನ್ನು ಮೇಲಿನ ಮೂರು ರೀತಿಯಲ್ಲಿ ವಿನಿಯೋಗ ಮಾಡುವ ಭಗವಂತ ಚತುರ್ಭುಜ.

Tuesday, July 6, 2010

Vishnu Sahasranama 138-139


Vishnu Sahasranama: ಚತುರ್ವ್ಯೂಹಶ್ಚತುರ್ದಂಷ್ಟ್ರ

138)ಚತುರ್ವ್ಯೂಹ
ಭಗವಂತ ನಾಲ್ಕು ವ್ಯೂಹ(ಗುಂಪು ಅಥವಾ ಸಮುದಾಯ)ದಿಂದ ಉಪಾಸ್ಯನಾಗಿದ್ದಾನೆ.
೧. ಸೃಷ್ಟಿಗೆ ಕಾರಣನಾದ ಪ್ರದ್ಯುಮ್ನ,
೨.ಸ್ಥಿತಿಗೆ ಕಾರಣನಾದ ಅನಿರುದ್ದ,
೩. ಸಂಹಾರಕ್ಕೆ ಕಾರಣನಾದ ಸಂಕರ್ಷಣ,
೪. ಮೊಕ್ಷಪ್ರದನಾದ ವಾಸುದೇವ.
ಜೀವವು ಮೊದಲು ಅನಿರುದ್ದನನ್ನು ಸೇರಿ ಅನ್ನಮಯಕೋಶದಿಂದ ಸಂಬಂಧವನ್ನು ಕಳಚಿಕೊಳ್ಳುತ್ತದೆ. ನಂತರ ಪ್ರದ್ಯುಮ್ನನನ್ನು ಸೇರಿ ಮನೋಮಯ ಕೋಶದ ಸಂಬಂಧವನ್ನು ಕಳಚಿಕೊಂಡು, ಸಂಕರ್ಷಣನಿಂದ ವಿಜ್ಞಾನಮಯಕೋಶದ ಬಿಡುಗಡೆಯನ್ನು ಪಡೆದು, ಕೊನೆಗೆ ವಾಸುದೇವನನ್ನು ಸೇರಿ ಸ್ವಯಂ ಆನಂದಮಯನಾಗುತ್ತಾನೆ . ಈ ರೀತಿ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ ಎನ್ನುವ ನಾಲ್ಕು ವ್ಯೂಹಗಳಿಂದ ಉಪಾಸ್ಯನಾದ ಭಗವಂತ ಚತುರ್ವ್ಯೂಹ.
ಭಗವಂತ ಪ್ರಪಂಚದಲ್ಲಿ ನಾಲ್ಕು ವರ್ಣದ ಸೃಷ್ಟಿಗೆ ಕಾರಣಕರ್ತ. ಇಲ್ಲಿ ವರ್ಣ ಎಂದರೆ ಜಾತಿ ಅಲ್ಲ. ಜಾತಿ ಪದ್ಧತಿ ಜನರಿಂದ ಬಂದ ಪದ್ಧತಿ. ಆದರೆ ವರ್ಣ ಭಗವಂತನ ಸೃಷ್ಟಿ. ನಾಲ್ಕು ವರ್ಣವನ್ನು ನಾವು ಪ್ರಪಂಚದ ಎಲ್ಲಾ ಭಾಗದಲ್ಲಿ ಕಾಣಬಹುದು. ಅವುಗಳೆಂದರೆ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ.
೧. ಬ್ರಾಹ್ಮಣ: ಅದ್ಯಯನ ಮಾಡಿ ಅದ್ಯಾಪನ ಮತ್ತು ಸಂಶೋದನೆ ಮಾಡುವ ಜ್ಞಾನಿಗಳು (Intellects)
೨. ಕ್ಷತ್ರಿಯ: ರಕ್ಷಣೆ ಮತ್ತು ವ್ಯವಸ್ಥಾಪಕ ಗುಣ ಇರುವವರು (Defence & Administrators)
೩. ವೈಶ್ಯ: ಉತ್ಪಾದನೆ ಮತ್ತು ವಿತರಣೆಯಲ್ಲಿ ಚಾಣಾಕ್ಷರು (Production and Sale)
೪. ಶೂದ್ರ: ಶುಶ್ರೂಷೆ ಅಥವಾ ಸೇವೆಯಲ್ಲಿ ಚಾಣಾಕ್ಷರು (Service)
ಈ ಮೇಲಿನ ನಾಲ್ಕು ವರ್ಣಗಳನ್ನು ಒಂದೇ ಕುಟುಬದಲ್ಲಿ ನೋಡಬಹುದು. ಹಾಗು ಅವರವರ ಜೀವ ಗುಣಕ್ಕೆ ಸರಿಹೊಂದುವ ಕೆಲಸವನ್ನು ಮಾಡುವವರು ಶೀಘ್ರ ಯಶಸ್ಸನ್ನು ಕೂಡ ಕಾಣುತ್ತಾರೆ.ಈ ರೀತಿ ಈ ಪ್ರಪಂಚ ನಡೆಯಲು ಅನಿವಾರ್ಯವಾಗಿ ಬೇಕಾಗುವ ನಾಲ್ಕು ವರ್ಣಗಳನ್ನು ನಿರ್ಮಿಸಿದ ಭಗವಂತ ಚತುರ್ವ್ಯೂಹ.
139)ಚತುರ್ದಂಷ್ಟ್ರ
ಭಗವದ್ಗೀತೆಯ ವಿಶ್ವರೂಪ ದರ್ಶನದಲ್ಲಿ ಅರ್ಜುನನು ಹೇಳುವಂತೆ:
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ
ದೃಷ್ಟ್ವೈವ ಕಾಲಾನಲಸನ್ನಿಭಾನಿ
ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ (11-25)
ಅಂದರೆ “ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೋರೆಗಳನ್ನು ಕಂಡದ್ದೇ ದಿಕ್ಕು ತಿಳಿಯದಾಗಿದೆ. ನೆಮ್ಮದಿ ಇಲ್ಲವಾಗಿದೆ. ಓ ಸಗ್ಗಿಗರೊಡೆಯನೆ, ಜಗದ ಆಸರೆಯೇ ದಯೆ ತೋರು”ಎಂದರ್ಥ. ಇಲ್ಲಿ ಯುದ್ದನಿರತ ಕೌರವಸೇನೆ ಭಗವಂತನ ಕೋರೆದಾಡೆಗಳ ಮದ್ಯ ಸಿಕ್ಕಿ ನುಚ್ಚು ನೂರಾಗುವುದನ್ನು ಕಂಡ ಅರ್ಜುನ, ತಾನು ಕೇವಲ ನೆಪಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾನೆ.
ಇಲ್ಲಿ ದಂಷ್ಟ್ರ ಅಂದರೆ ಕೋರೆದಂತ ಉಳ್ಳವನು ಎಂದರ್ಥ. ಚತುರ್ದಂಷ್ಟ್ರ ಎಂದರೆ ನಾಲ್ಕು ಕೋರೆ ಹಲ್ಲುಗಳಿರುವವನು ಎಂದರ್ಥ.

ಭಗವಂತನು ವರಾಹ ಅವತಾರಿಯಾಗಿ ಹಿರಣ್ಯಾಕ್ಷನನ್ನು ಹಾಗು ನರಸಿಂಹ ಅವತಾರಿಯಾಗಿ ಹಿರಣ್ಯಕಶಿಪುವನ್ನು ತನ್ನ ಕೋರೆ ಹಲ್ಲುಗಳಿಂದ ಸಂಹಾರ ಮಾಡಿದವನು. ನಮ್ಮೊಳಗೆ ಕೂಡಾ ಈ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಿದ್ದಾರೆ!! ಇಲ್ಲಿ ಹಿರಣ್ಯ ಅಂದರೆ ಚಿನ್ನ, ಅಂದರೆ ದುಡ್ಡು ಅಥವಾ ಸಂಪತ್ತು. ಯಾವಾಗಲೂ ದುಡ್ಡಿನ ಮೇಲೆ ಕಣ್ಣನ್ನಿಟ್ಟು, ಅದರಿಂದಾಚೆಗೆ ಏನನ್ನೂ ಯೋಚಿಸದೆ, ದುಡ್ಡಿನ ಆಸೆಯಲ್ಲಿ ಇರುವ ಮನುಷ್ಯನ ಗುಣವೇ ಆತನಲ್ಲಿರುವ ಹಿರಣ್ಯಾಕ್ಷ. ಇನ್ನು ಒಮ್ಮೆ ದುಡ್ಡು ಬಂದಿತು, ಅದನ್ನು ತನ್ನ ತಲೆದಿಂಬನ್ನಾಗಿ(ಕಶಿಪು) ಇಟ್ಟುಕೊಂಡು ದುಡ್ಡಿನ ಲೋಭದಲ್ಲಿ ಮುಳುಗುವ, ಹಾಗು ತಮ್ಮ ಲೋಭಕ್ಕೆ ಅಡ್ಡಿ ಆದಾಗ, ಕ್ರೋಧಗೊಳ್ಳುವ ಮನುಷ್ಯ ಗುಣವೇ ಆತನಲ್ಲಿರುವ ಹಿರಣ್ಯಕಶಿಪು. ನಮ್ಮಲ್ಲಿರುವ ಈ ಕಾಮ-ಕ್ರೋಧ-ಲೋಭವನ್ನು ಸಂಹಾರ ಮಾಡಬಲ್ಲ ಭಗವಂತ ಚತುರ್ದಂಷ್ಟ್ರ.

Monday, July 5, 2010

Vishnu Sahasranama 137

ಚತುರಾತ್ಮಾ
137)ಚತುರಾತ್ಮಾ
ಭಗವಂತನು ನಾಲ್ಕು ರೂಪಗಳಲ್ಲಿ ಈ ಜಗತ್ತನ್ನು ನಿಯಂತ್ರಿಸುತ್ತಾನೆ. ನಮ್ಮ ಬದುಕಿನಲ್ಲಿ ಸಹಜವಾದ ಸ್ಥಿತಿ ಮೂರು. ಎಚ್ಚರ-ಕನಸು-ನಿದ್ದೆ. ಈ ಮೂರು ಸ್ಥಿತಿಗಳನ್ನು ಎಲ್ಲರೂ ನಿರಂತರ ಅನುಭವಿಸುತ್ತಾರೆ. ಆದರೆ ಈ ಮೂರನ್ನೂ ಮೀರಿದ ನಾಲ್ಕನೇ ಸ್ಥಿತಿ ತುಂಬಾ ಪ್ರಮುಖವಾದದ್ದು. ಅದೇ ತುರೀಯ ಸ್ಥಿತಿ.
೧.ಎಚ್ಚರ ನಿಯಂತ್ರಣಕ್ಕಾಗಿ ನಮ್ಮ ಆಜ್ಞಾಚಕ್ರದಲ್ಲಿ ವಿಶ್ವ ನಾಮಕನಾಗಿ ಕುಳಿತ ಭಗವಂತ ಓಂಕಾರದ ಮೊದಲ ಅಕ್ಷರನಾಮಕ (ಆ-ಆಪ್ತಿ) ವಿಶ್ವಾತ್ಮ.
೨.ವಿಶುದ್ಧಿಚಕ್ರದ ತುದಿಯಲ್ಲಿ ಕಿರುನಾಲಿಗೆಯ ಕೆಳಗೆ ಇಂದ್ರಯೋನಿಯಲ್ಲಿ, ಎಚ್ಚರಾವಸ್ಥೆಯಲ್ಲಿ ಸೆರೆ ಹಿಡಿದ ಪಡಿಯಚ್ಚನ್ನು, ನಾವು ಮಲಗಿದ್ದಾಗ ನಮಗೆ ಕನಸಿನ ಮೂಲಕ ತೋರಿಸುವ ಭಗವಂತ ತೈಜಸಾತ್ಮ.
೩.ಮನಸ್ಸಿನ ನಿಯಂತ್ರಣದಿಂದ ಆಚೆಗೆ ಇರುವ ನಿದ್ರಾವಸ್ಥೆಯನ್ನು ನಿಯಂತ್ರಿಸುವ ಭಗವಂತ ಪ್ರಾಜ್ಞಾತ್ಮ.
೪.ನಮ್ಮ ಎಚ್ಚರ-ಕನಸು ಮನಸ್ಸಿನ ವ್ಯವಹಾರವಾದರೆ, ನಿದ್ದೆ ಮನಸ್ಸಿನ ನಿಯಂತ್ರಣವಿಲ್ಲದೆ,ಆತ್ಮವೇ ತನ್ನನ್ನು ತಾನು ಅನುಭವಿಸುವ ಸ್ಥಿತಿ. ಎಚ್ಚರದಲ್ಲೂ,ಕನಸಿನಲ್ಲೂ, ಎಲ್ಲಾ ಸ್ಥಿತಿಯಲ್ಲೂ, ಮನಸ್ಸಿನ ಹತೋಟಿಯನ್ನು ದಾಟಿನಿಲ್ಲುವ ನಾಲ್ಕನೇ ಸ್ಥಿತಿ ತುರೀಯಾವಸ್ಥೆ. ಈ ಸ್ಥಿತಿಯಲ್ಲಿ ನಾವು ನಮ್ಮನ್ನು ಬಂಧಿಸಿದ ಆ ಹದಿನೈದು ಬೇಲಿಗಳನ್ನು ದಾಟಿ ನಿಂತು ಜ್ಞಾನಾನಂದಮಯವಾದ ನಮ್ಮ ಸ್ವರೂಪವನ್ನು ನೋಡುತ್ತೇವೆ. ಈ ಸ್ಥಿತಿಯಲ್ಲಿ ನಾವು ಕೇವಲ ಪ್ರತಿಬಿಂಬ ಎನ್ನುವ ಸತ್ಯವನ್ನು ತಿಳಿಯುತ್ತೇವೆ, ಹಾಗು ಮೂಲಬಿಂಬ ಭಗವಂತ ಎನ್ನುವ ಸತ್ಯದ ಅರಿವಾಗುತ್ತದೆ. ಈ ಸ್ಥಿತಿಯಲ್ಲಿ ನಾವು ದೇವರನ್ನು ನೋಡಬಹುದು ಹಾಗು ದೇವರಲ್ಲಿ ಮಾತನಾಡಬಹುದು. ನಮ್ಮ ಸ್ವರೂಪ ದ್ರಷ್ಟಿಯಿಂದ ಭಗವಂತನನ್ನು ಕಾಣುವ ಈ ನಾಲ್ಕನೇ ಸ್ಥಿತಿಯನ್ನು ತುರೀಯಾವಸ್ಥೆ ಎನ್ನುತ್ತೇವೆ.ಈ ರೀತಿ ವಿಶ್ವ, ತೈಜಸ, ಪ್ರಾಜ್ಞ, ತುರೀಯ ಈ ನಾಲ್ಕು ಸ್ಥಿತಿಗಳಲ್ಲಿ ನಮ್ಮನ್ನು ನಿಯಂತ್ರಿಸುವ ಭಗವಂತ ಚತುರಾತ್ಮಾ.

ಇದಲ್ಲದೆ ಪ್ರಪಂಚದ ಅನುಭವಕ್ಕಾಗಿ ನಾಲ್ಕು ಬಗೆಯ ದೇಹವನ್ನು ಭಗವಂತ ಜೀವರಿಗೆ ಕರುಣಿಸಿದ್ದಾನೆ.
೧. ಕಣ್ಣಿಗೆಕಾಣುವ ಪಂಚ ಭೂತಗಳಿಂದಾದ ಸ್ಥೂಲ ಶರೀರ.
೨. ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ (Arial body). ಮಾನವ ಸತ್ತ ನಂತರ ಈ ಸೂಕ್ಷ್ಮ ಶರೀರ ಸ್ಥೂಲ ದೇಹವನ್ನು ತ್ಯೆಜಿಸುತ್ತದೆ.
೩. ಸೃಷ್ಟಿಗೆ ಮೊದಲು ಅನಾದಿಯಾಗಿ ಬಂದ ಲಿಂಗರೂಪಿ ಶರೀರ.
೪. ಸ್ವರೂಪಭೂತವಾದ ಶರೀರ.
ಈ ರೀತಿ ಪ್ರಪಂಚದ ಅನುಭವಕ್ಕಾಗಿ ಸ್ಥೂಲ, ಸೂಕ್ಷ್ಮ, ಲಿಂಗ ಹಾಗು ಸ್ವರೂಪ ಎನ್ನುವ ನಾಲ್ಕು ಬಗೆಯ ಶರೀರವನ್ನು ಕೊಟ್ಟ ಭಗವಂತ ಚತುರಾತ್ಮಾ.

ಜೀವ ಸೃಷ್ಟಿಯಲ್ಲಿ ಚತುರ್ವಿಧ.
೧. ಜರಾಯುಜ: ಗರ್ಭದಲ್ಲಿ ಸಂಪೂರ್ಣ ಬೆಳವಣಿಗೆಯಾಗಿ ಹುಟ್ಟುವುದು (ಉದಾ: ಮನುಷ್ಯ ,ಹಸು ಇತ್ಯಾದಿ)
೨. ಅಂಡಜ: ಮೊಟ್ಟೆಯ ರೂಪದಲ್ಲಿ ಭೂಮಿಗೆ ಬಂದು, ನಂತರ ಮೊಟ್ಟೆಗೆ ಕಾವು ಕೊಟ್ಟಾಗ ಸಂಪೂರ್ಣ ಬೆಳೆದು, ಮೊಟ್ಟೆಯೊಡೆದು ಹುಟ್ಟುವುದು (ಉದಾ: ಕೋಗಿಲೆ,ಕೋಳಿ, ಇತ್ಯಾದಿ)
೩. ಸ್ವೇದಜ: ನೀರಿನ ಪಸೆ, ಬೆವರಿನಿಂದ ಹುಟ್ಟುವುದು (ಉದಾ: ವೈರಸ್, ಬ್ಯಾಕ್ಟೀರಿಯ ಇತ್ಯಾದಿ).
೪.ಉದ್ಬಿಜ : ಬೀಜ ರೂಪದಲ್ಲಿದ್ದು, ಬೀಜ ಒಡೆದು ಬೆಳೆಯುವವು (ಉದಾ: ವೃಕ್ಷ)
ಈ ರೀತಿ ಅಂಡಜ-ಸ್ವೇದಜ-ಉದ್ಬಿಜ ಮತ್ತು ಜರಾಯುಜ ಎನ್ನುವ ನಾಲ್ಕು ಬಗೆಯಲ್ಲಿ ಜೀವಜಾತದ ಸೃಷ್ಟಿ ಮಾಡುವ ಭಗವಂತ ಚತುರಾತ್ಮಾ

Sunday, July 4, 2010

Vishnu Sahasranama 133-136

ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ

ಈ ಶ್ಲೋಕದಲ್ಲಿ ಭಗವಂತನನ್ನು ಅಧ್ಯಕ್ಷ ಎನ್ನುತ್ತಾರೆ. ಇಲ್ಲಿ ಅಧ್ಯಕ್ಷ ಎಂದರೆ ಎಲ್ಲರನ್ನೂ ನೋಡುವವ, ಎಲ್ಲರ ಮೇಲೆ ನಿಗಾ ಇರಿಸುವವ, ಪ್ರತಿಯೊಂದು ಕ್ರಿಯೆಯನ್ನು ನಿರ್ವಹಿಸುವವ ಎಂದರ್ಥ.
133)ಲೋಕಾಧ್ಯಕ್ಷಃ
ಭಗವಂತ ಲೋಕಾಧ್ಯಕ್ಷ. ಇಲ್ಲಿ ಲೋಕ ಅಂದರೆ ಈ ಭೂಲೋಕ, ಈ ಬ್ರಹ್ಮಾಂಡ, ಈ ಪಿಂಡಾ೦ಡ. ಆತ ಎಲ್ಲವುದರ ಅಧ್ಯಕ್ಷ.
134)ಸುರಾಧ್ಯಕ್ಷ
ಸುರರು ಅಂದರೆ ದೇವತೆಗಳು. ಈ ಬ್ರಹ್ಮಾಂಡ ಹಾಗು ಪಿಂಡಾ೦ಡದಲ್ಲಿ ಅನೇಕ ದೇವತೆಗಳಿದ್ದಾರೆ.
ಈ ಹಿಂದೆ ಹೇಳಿದಂತೆ, ನಮ್ಮ ದೇಹದ ಒಳಗೆ ಹಾಗು ಹೊರಗೆ ದೇವತೆಗಳು ಭಗವಂತನ ನಿಯಮದಂತೆ ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೆ. ದೇಹದ ಹೊರಗೆ ಸೂರ್ಯ ಬೆಳಕಿನ ದೇವತೆಯಾದರೆ, ಆತನೇ ದೇಹದಲ್ಲಿ ಕಣ್ಣಿನ ದೇವತೆ. ಸೋಮ ದೇಹದ ಹೊರಗೆ ಶಬ್ದದ ದೇವತೆ ಹಾಗು ದೇಹದಲ್ಲಿ ಕಿವಿಯ ದೇವತೆ. ವರುಣ ನೀರಿನ ದೇವತೆ ಹಾಗು ಬಾಯಲ್ಲಿ ನೀರೂರಿಸುವ ನಾಲಗೆಯ ಅಭಿಮಾನಿ ದೇವತೆ. ಇದೇ ರೀತಿ ಅಗ್ನಿ-ಮಾತಿನ,ಇಂದ್ರ-ಕೈಯ, ಇಂದ್ರನ ಮಗ ಯಜ್ಞ-ಕಾಲಿನ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ ಸಂತಾನಕ್ಕೆ ಸಂಭಂದಪಟ್ಟ ಅಂಗದ ದೇವತೆ.
ಇವರಲ್ಲದೆ ಇಂದ್ರ ಮತ್ತು ಕಾಮರು ಮನಸ್ಸಿನ, ಗರುಡ-ಶೇಷ-ರುದ್ರರು ಮನಸ್ಸು-ಬುದ್ದಿ-ಅಹಂಕಾರದ ದೇವತೆಗಳು. ಸರಸ್ವತಿ-ಭಾರತಿ-ಪಾರ್ವತಿಯರು ವಾಕ್ ದೇವಿಯರು. ಇನ್ನು ಬ್ರಹ್ಮ-ವಾಯು ಚಿತ್ತದ ದೇವತೆಗಳು. ಈ ರೀತಿ ದೇಹದ ಪ್ರತಿಯೊಂದು ಇಂದ್ರಿಯ ನಿರ್ವಹಣೆ ಒಬ್ಬೊಬ್ಬ ದೇವತೆಗಳ ಅದೀನ. ಇಂತಹ ಸುರರ ಅದಿಪತಿಯಾದ ಭಗವಂತ ಸುರಾಧ್ಯಕ್ಷ.
135)ಧರ್ಮಾಧ್ಯಕ್ಷಃ
ಭಗವಂತನ ಪ್ರತೀ ಅವತಾರ ಈ ಭೂಮಿಯಲ್ಲಿ ಧರ್ಮಸಂಸ್ಥಾಪನೆಗಾಗಿ ಆಗಿದೆ. ಇಡೀ ಲೋಕವನ್ನು ಧಾರಣೆ ಮಾಡಿ ಈ ಭೂಮಿಯಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ಧರ್ಮಾಧ್ಯಕ್ಷ.
ಇನ್ನು ಆದಿಶೇಷ ಮತ್ತು ಪ್ರಾಣದೇವರನ್ನೂ ಕೂಡ ಧರ್ಮ ಎನ್ನುತ್ತಾರೆ. ದೇಹದ ಒಳಗೆ ಪ್ರಾಣಶಕ್ತಿಯಾಗಿ, ದೇಹದ ಹೊರಗೆ ವಾತಾವರಣದಲ್ಲಿ ತುಂಬಿರುವ ಪ್ರಾಣದೇವರು, ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ(ಶೇಷ). ಇವರಿಬ್ಬರ ಮುಖಾಂತರ ಈ ಭೂಮಿಯನ್ನು ಧಾರಣೆ ಮಾಡಿರುವ ಭಗವಂತ ಧರ್ಮಾಧ್ಯಕ್ಷ.
136)ಕೃತಾಕೃತಃ
ಎರಡು ತದ್ವಿರುದ್ದ ಅರ್ಥವಿರುವ ಪದಗಳಿಂದ ಈ ನಾಮವಾಗಿದೆ. ಒಂದು ಕೃತ(ಕರ್ತ) ಹಾಗು ಇನ್ನೊಂದು ಅಕೃತ (ಅಕರ್ತ). ಭಗವಂತ ಸೃಷ್ಟಿಕರ್ತ, ಆದರೆ ಆತನಿಗೆ ಯಾವುದೇ ಪುಣ್ಯ ಪಾಪಗಳ ಲೇಪವಿಲ್ಲ. ಎಲ್ಲವನ್ನೂ ಮಾಡುವವ ಆತ, ಆದರೆ ಯಾವುದರ ಲೇಪವೂ ಅವನಿಗಿಲ್ಲ. ನಮ್ಮೊಳಗಿದ್ದು, ನಮ್ಮಿಂದ ಎಲ್ಲವನ್ನೂ ಮಾಡಿಸಿ, ಪುಣ್ಯ-ಪಾಪಗಳಿಗೆ ನಮ್ಮನ್ನು ಭಾದ್ಯರನ್ನಾಗಿ ಮಾಡಿ, ತಾನು ನಿರ್ಲಿಪ್ತನಾಗಿ ದೂರ ನಿಲ್ಲುವ ಭಗವಂತ ಕೃತಾಕೃತಃ. ಭಗವಂತನಿಗೆ ಸ್ವಯಂ ಕೃತದ ಅಗತ್ಯವಿಲ್ಲ, ಆದರೆ ಭಕ್ತರ ಅಭಿಲಾಷೆಗಾಗಿ ಅವತಾರವನ್ನು ಧರಿಸುತ್ತಾನೆ, ಭಕ್ತರ ಅಭಿಷ್ಟವನ್ನು ಪೂರೈಸುತ್ತಾನೆ. ಇಂತಹ ಭಗವಂತ ಕೃತಾಕೃತಃ.

Saturday, July 3, 2010

Vishnu Sahasranama 132

ಕವಿಃ

132)ಕವಿಃ

ನಾವು ದೇವರ ಪೂಜೆ ಪ್ರಾರಂಭದಲ್ಲಿ ಗಣಪತಿ ಸ್ತೋತ್ರ ಮಾಡುತ್ತೇವೆ.
"ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ" ಎನ್ನುವ ಗಣಪತಿ ಸ್ತೋತ್ರದಲ್ಲಿ ಗಣಪತಿಯನ್ನು ಕವಿಗಳ ಕವಿ ಎಂದು ವರ್ಣಿಸಿದ್ದಾರೆ. ಅದೇ ರೀತಿ "ಗಣಗಳಲ್ಲಿ ಶ್ರೇಷ್ಟನಾದ, ಕವಿಗಳ ಕವಿಯಾದ ನೀನು ನನ್ನಲ್ಲಿ ಬಂದು ಕೂಡು" ಎಂದು ಪೂಜೆ ಪ್ರಾರಂಭದಲ್ಲಿ ಹೇಳುತ್ತೇವೆ. ಏನಿದರ ಅರ್ಥ ? ಭಗವಂತನನ್ನು ಗಣಪತಿ ಎಂದು ಕರೆಯಲು ಕಾರಣವೇನು? ಪೂಜೆಯನ್ನು ಗಣಪತಿ ಸ್ತೋತ್ರದಿಂದ ಯಾಕೆ ಪ್ರಾರಂಭಿಸಬೇಕು?
ಗಣಪತಿ ಆಕಾಶ ತತ್ವ ದೇವತೆ. ಆತ ಜೀವಗಣ, ಇಂದ್ರಿಯಗಣ, ಜ್ಞಾನಗಣ ಮತ್ತು ಭೂತಗಣ. ಇಡೀ ವಿಶ್ವ ಆಕಾಶದಿಂದ ಪ್ರಾರಂಭವಾಗುತ್ತದೆ. ಗಣಪತಿ ಪಂಚಭೂತಗಳ ಒಡೆಯ. ಪಂಚಭೂತಗಳಿಂದಾದ ಈ ನಮ್ಮ ದೇಹ ಮತ್ತು ಇಂದ್ರಿಯಗಳ ಅದಿಪತಿ ಆತ. ಇಂದ್ರಿಯಗಳ ಒಡೆಯನಾದ ಆತನನ್ನು ಮೊದಲು ಸ್ಮರಿಸಿ, "ಬಾರಯ್ಯ , ನನ್ನ ಇಂದ್ರಿಯಗಳಲ್ಲಿ ಕುಳಿತು, ನನ್ನ ಕೈಯಿಂದ ನಿನ್ನ ಪೂಜೆಯನ್ನು ಮಾಡುವಂತೆ, ನನ್ನ ಕಣ್ಣಿನಿಂದ ನಿನ್ನನ್ನು ನೋಡುವಂತೆ, ನನ್ನ ಬಾಯಿಯಿಂದ ನಿನ್ನ ಗುಣಗಾನ ಮಾಡುವಂತೆ ಮಾಡು. ಎಂದು ಪ್ರಾರ್ಥಿಸಿ ಕೊಳ್ಳುತ್ತೇವೆ. ಭಗವಂತ ಅನಾದಿಕವಿ. ಇಲ್ಲಿ ಕವಿ ಎಂದರೆ ಎಲ್ಲವನ್ನೂ ಬಲ್ಲವನು (omniscient) ಎಂದರ್ಥ.
ಇದಲ್ಲದೆ ಇನ್ನೂ ಅನೇಕ ಅರ್ಥ ಕವಿ ಎನ್ನುವ ಪದಕ್ಕಿದೆ. ಶಬ್ದ ಸೃಷ್ಟಿಮಾಡುವವನು, ಶಬ್ದಾರ್ಥ ಸಂಬಂಧ ತಿಳಿದವನು, ಶಬ್ದಗಳಿಗೆ ಹೊಸ ಆಯಾಮ ಕೊಡುವವನು ಇತ್ಯಾದಿ. ಜನಸಾಮಾನ್ಯರಾದ ನಾವು ದೈನಂದಿನ ಕಾರ್ಯದಲ್ಲಿ ಅನೇಕ ಶಬ್ದಗಳನ್ನು ಅರ್ಥ ತಿಳಿಯದೇ ಉಪಯೋಗಿಸುತ್ತೇವೆ. ನಮ್ಮ ಈಗಿನ ಶಿಕ್ಷಣ ಪದ್ದತಿ ಕೂಡ ಇದಕ್ಕೆ ಮೂಲ ಕಾರಣ. ಉದಾಹರಣೆಗೆ ಪತ್ರ ಬರೆಯುವಾಗ, "ನಾನು ಕ್ಷೇಮ, ನಿಮ್ಮ ಯೋಗ-ಕ್ಷೇಮದ ಬಗ್ಗೆ ತಿಳಿಸಿ" ಎಂದು ಬರೆಯುತ್ತೇವೆ. ಇಲ್ಲಿ ಯೋಗ-ಕ್ಷೇಮ ಎಂದರೆ ಏನು ಎನ್ನುವುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದೇ ಇಲ್ಲ!! ಇಲ್ಲದ್ದನ್ನು ಪಡೆಯುವುದು ಯೋಗ (ಅಪ್ರಾಪ್ತಂ ಪ್ರಾಪ್ತಿಹೀ ಯೋಗಃ ). ಪಡೆದದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಶಬ್ದದ ಅಂತರಾಳದ ಅರ್ಥವನ್ನು ಅರಿತು ಮಾತನಾಡುವವರು ಕವಿಗಳು. ಭಗವಂತ ಕವಿಗಳ ಕವಿ, ಸರ್ವನಾಮರೂಪಾತ್ಮಕನಾದ ಸರ್ವಜ್ಞ.
ಸಂಸ್ಕೃತದ ಏಕಾಕ್ಷರ ಕೋಶದಲ್ಲಿ ನೋಡಿದರೆ ಆ ,ಕ, ಯ, ಪ್ರ, ವಿ, ಸಂ, ಭೂ, ಮಾ, ಸಾ , ಹಾ .. ಇತ್ಯಾದಿ ಏಕಾಕ್ಷರಗಳು ಭಗವಂತನ ಗುಣವನ್ನು ವರ್ಣಿಸುತ್ತವೆ. ಇಲ್ಲಿ 'ಕ' ಎಂದರೆ ಆನಂದ, 'ವ' ಎಂದರೆ ಜ್ಞಾನ, 'ವಿ' ಎಂದರೆ ವಿಶಿಷ್ಟವಾದ ಜ್ಞಾನ. ಆದ್ದರಿಂದ ಕವಿ ಎಂದರೆ 'ವಿಶಿಷ್ಟವಾದ ಜ್ಞಾನಾನಂದ ಸ್ವರೂಪ' ಎಂದರ್ಥ.

Friday, July 2, 2010

Vishnu Sahasranama 127-131

ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್

127)ವೇದೋ

ಭಗವಂತ ಸಮಸ್ತ ವೇದಗಳಿಂದ ಪ್ರತಿಪಾದ್ಯನಾದವನು. ಅವನು ಆನಾದಿನಿತ್ಯ, ಎಲ್ಲವನ್ನೂ ತಿಳಿದವನು, ಎಲ್ಲವನ್ನು ನಮಗೆ ತಿಳಿಯುವಂತೆ ಮಾಡುವವನು, ನಮಗೆ ಜ್ಞಾನದ ಜೊತೆಗೆ ಸ್ಮರಣಶಕ್ತಿ ದಯಪಾಲಿಸುವ ಭಗವಂತ ವೇದಃ

128)ವೇದವಿತ್

ಭಗವಂತ ಗೀತೆಯಲ್ಲಿ ತಾನೇ ಹೇಳುವಂತೆ "ಆತ ಮಾತ್ರ ವೇದದ ಸಂಪೂರ್ಣ ಅರ್ಥವನ್ನು ತಿಳಿದವನು". ವೇದಗಳಲ್ಲಿ ಭಗವಂತನ ಅನಂತ ಗುಣಗಳನ್ನು ಹೇಳಿದ್ದಾರೆ. ಆದರೆ ನಮಗೆ ಎಲ್ಲವೂ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ಬುದ್ದಿ ಸೀಮಿತ ಮತ್ತು ಅನುಭವವಿಲ್ಲದೆ ಯಾವುದೂ ಅರ್ಥವಾಗುವುದಿಲ್ಲ. ವೇದಮಂತ್ರಗಳಿಗೆ ಕನಿಷ್ಠ ಮೂರು ಅರ್ಥಗಳಿವೆ. ಆದರೆ ಎಲ್ಲವನ್ನೂ ತಿಳಿದವನು ಕೇವಲ ಭಗವಂತನೊಬ್ಬನೆ . ಸಾಮಾನ್ಯರಾದ ನಾವು ನಮ್ಮ ಜೀವಿತ ಕಾಲದಲ್ಲಿ ವೇದದ ಅಲ್ಪ-ಸ್ವಲ್ಪ ಅರ್ಥವನ್ನು ಮಾತ್ರ ತಿಳಿಯಲು ಸಾದ್ಯ. ಅಂತಹ ಭಗವಂತ ವೇದವಿತ್

129)ಅವ್ಯಂಗೋ

ಮೇಲ್ನೋಟಕ್ಕೆ ಅವ್ಯಂಗ ಅಂದರೆ ಪರಿಪೂರ್ಣವಾದ ಅಂಗ ಎಂದರ್ಥ. ಇಲ್ಲಿ ವ್ಯಂಗ ಎಂದರೆ ವಿಕಲಾಂಗ. ಭಗವಂತನ ಒಂದೊಂದು ಅಂಗವೂ ಅವನ ಸ್ವರೂಪ, ಆದ್ದರಿಂದ ಆತ ಅವ್ಯಂಗ.ಇನ್ನು 'ಅವಿ' ಎಂದರೆ ಸೂರ್ಯ, 'ಅವಿಹಿ' ಎಂದರೆ ಅಗ್ನಿ. ಸೂರ್ಯ ಆಕಾಶದಲ್ಲಿ , ವಾಯು ಉಸಿರಿನಲ್ಲಿ ಹಾಗು ಅಗ್ನಿ ಭೂಮಿಯಲ್ಲಿ ಭಗವಂತನ ಮೂರು ಜ್ಯೋತಿರ್ಮಯ ಸ್ವರೂಪಗಳು. ಹಿಂದೆ ಋಷಿಗಳು ಸಾಮಾನ್ಯವಾಗಿ ಭಗವಂತನನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತಿದ್ದರು. ಅಗ್ನಿ ಮುಖೇನ ಉಪಾಸನೆ ಸರ್ವೇ ಸಾಮಾನ್ಯ. ಆದ್ದರಿಂದ ಗಾಯತ್ರಿ ಹೀಗೆ ಹೇಳುತ್ತದೆ: ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್. ಹೀಗೆ ಮೂರು ರೂಪದಲ್ಲಿ ಜಗತ್ತನ್ನು ರಕ್ಷಣೆ ಮಾಡುವ ಭಗವಂತ ಅವ್ಯಂಗಃ .

130)ವೇದಾಂಗೋ

ವೇದಗಳ ಅಂಗಗಳು ಯಾರನ್ನು ಪ್ರತಿಪಾದಿಸುತ್ತವೆಯೋ ಅವನು ವೇದಾಂಗ. ಈಗ ವೇದದ ಆರು ಮುಖ್ಯ ಅಂಗಗಳನ್ನು ನೋಡೋಣ.

೧. ಶಿಕ್ಷಾ : ಶಿಕ್ಷಾ ಎಂದರೆ ಶಿಕ್ಷಣ. ನಮ್ಮ ಧ್ವನಿಯಿಂದ ನಮ್ಮ ಅನುಭವದಿಂದ ವೇದಮಂತ್ರಗಳನ್ನು ಉಚ್ಚರಿಸುವುದು ಹೇಗೆ ಎಂದು ತಿಳಿಸುವ ಶಾಸ್ತ್ರ ಶಿಕ್ಷಾ. ಸಂಸ್ಕೃತದಲ್ಲಿ ನಾವು ಉಚ್ಚಾರವನ್ನು ಸ್ವಲ್ಪ ತಪ್ಪಾಗಿ ಹೇಳಿದರೆ ಅದು ವ್ಯತಿರಿಕ್ತ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ ಫಲ ಮತ್ತು ಪಲ. ಇಲ್ಲಿ ಫಲ ಅಂದರೆ ಹಣ್ಣು, ಪಲ ಅಂದರೆ ಮಾಂಸ. ಆದ್ದರಿಂದ ನಾವು ತುಂಬಾ ಎಚ್ಚರವಾಗಿ ವೇದಮಂತ್ರಗಳನ್ನು ಉಚ್ಚರಿಸಬೇಕು. ಇದಕ್ಕಾಗಿ ನಾವು ಪ್ರಾಯಶ್ಚಿತ ಮಂತ್ರವನ್ನು ಜಪದ ಕೊನೆಗೆ ತಪ್ಪನ್ನು ಕ್ಷಮಿಸುವಂತೆ ಭಗವಂತನಲ್ಲಿ ಈ ಕೆಳಗಿನಂತೆ ಪ್ರಾರ್ಥಿಸುತ್ತೇವೆ ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ-ಎಂದು ಹೇಳಿ ಈ ಕೆಳಗಿನಂತೆ ಮೂರು ಬಾರಿ ಹೇಳುತ್ತೇವೆ. ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋ ನಮಃ .

೨. ಕಲ್ಪ: ಕಲ್ಪ ಯಾವ ಮಂತ್ರವನ್ನು ಯಾವ ವಿಧಾನದಲ್ಲಿ ಉಪಯೋಗಿಸಿ ಆರಾದನೆ ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ.

೩. ವ್ಯಾಕರಣ: ಶಬ್ದವನ್ನು ಸರಿಯಾಗಿ ಉಚ್ಚಾರ ಮಾಡುವುದಕ್ಕೆ ಬೇಕಾದ ಅಂಶಗಳನ್ನು ವ್ಯಾಕರಣ ತಿಳಿಸುತ್ತದೆ.

೪. ನಿರುಕ್ತ: ಶಬ್ದವನ್ನು ಒಡೆದಾಗ ಅದು ಯಾವ ಯಾವ ಧಾತುವಿನಿಂದ ಹುಟ್ಟಿದೆ, ಅದರ ಅರ್ಥ ವಿಸ್ತಾರ ಏನು ಎನ್ನುವುದನ್ನು ನಿರುಕ್ತ ತಿಳಿಸುತ್ತದೆ.

೫. ಜ್ಯೋತಿಷ: ಪುಣ್ಯ ಕರ್ಮ ಮಾಡಲು ಯಾವ ಕಾಲ ಹೆಚ್ಚು ಪ್ರಾಶಸ್ತ್ಯವಾದ ಕಾಲ ಎಂದು ಜ್ಯೋತಿಷ ತಿಳಿಸುತ್ತದೆ. ವಾತಾವರಣದಲ್ಲಿ ಕೆಲವೊಮ್ಮೆ ಪ್ರತಿಬಂದಕ ಶಕ್ತಿಗಳಿರುತ್ತವೆ ಹಾಗು ಇನ್ನು ಕೆಲವೊಮ್ಮೆ ಅನುಕೂಲಕರ ಶಕ್ತಿಗಳಿರುತ್ತವೆ. ವಾತಾವರಣದಲ್ಲಿ ಅನುಕೂಲಕರ ಶಕ್ತಿಗಳಿರುವಾಗ ಮಾಡಿದ ಕರ್ಮ ಕೈಗೂಡುತ್ತದೆ. ಇದನ್ನು ತಿಳಿಸುವ ಶಾಸ್ತ ಜ್ಯೋತಿಷ.

೬. ಛಂದಸ್ಸು: ಭಗವಂತನ ಗುಣಗಾನ ಮಾಡುವ ಮಂತ್ರಗಳು ಶ್ರುತಿಬದ್ದವಾಗಿ, ಲಯಬದ್ದವಾಗಿ ಹೇಗೆ ಹೇಳಬೇಕು ಎನ್ನುವುದನ್ನು ಛಂದಸ್ಸು ತಿಳಿಸುತ್ತದೆ. ಆದ್ದರಿಂದ ಈ ಮೇಲಿನ ಆರು ಅಂಶಗಳು ವೇದದಲ್ಲಿ ಯಾರಿಗೋಸ್ಕರ ಇವೆಯೋ ಅವನು ವೇದಾಂಗಾ.

131)ವೇದವಿತ್

ಈ ನಾಮ ಒಂದೇ ಶ್ಲೋಕದಲ್ಲಿ ಎರಡನೇ ಬಾರಿ ಬಂದಿದೆ. ಇಲ್ಲಿ ವೇದ ಅಂದರೆ ಜ್ಞಾನ, ಹಾಗು ವಿತ್ ಅಂದರೆ ಜ್ಞಾನಿ. ಭಗವಂತ ಜ್ಞಾನವುಳ್ಳವನೂ ಹೌದು, ಹಾಗು ಜ್ಞಾನ ಸ್ವರೂಪನೂ ಹೌದು. ಜ್ಞಾನವೂ ಅವನೇ ಜ್ಞಾನಿಯೂ ಅವನೇ. ವೇದವನ್ನು ನಮಗೆ ಋಷಿ-ಮುನಿಗಳ ಮೂಲಕ ಕೊಟ್ಟವನು ಮತ್ತು ವೇದಗಳಿಂದ ಪ್ರತಿಪಾದ್ಯನಾದವನು ವೇದವಿತ್.

Thursday, July 1, 2010

Vishnu Sahasranama 123-126

ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ

123) ಸರ್ವಗಃ
ಸರ್ವಗಃ ಅಂದರೆ ಎಲ್ಲಾ ಕಡೆ ಇರುವ, ಪರಿಪೂರ್ಣ ಜ್ಞಾನವುಳ್ಳ, ಎಲ್ಲವನ್ನೂ ತಿಳಿದಿರುವ, ಕೊನೆಗೆ ಎಲ್ಲವನ್ನೂ ಸಂಹಾರ ಮಾಡುವ ಭಗವಂತ.
124) ಸರ್ವವಿದ್ಭಾನು
ಸರ್ವವಿತ್+ಭಾನು. ಇಲ್ಲಿ ಸರ್ವವಿತ್ ಅಂದರೆ ಎಲ್ಲವನ್ನೂ ಪಡೆದ ಸತ್ಯಸಂಕಲ್ಪ ಆಪ್ತಕಾಮ.
ಭಾನು ಅಂದರೆ ಎಲ್ಲಾ ಬೆಳಕನ್ನು ಬೆಳಗಿಸುವ ಮೂಲ ಕಾರಣನಾದ, ಸೂರ್ಯನೊಳಗಿದ್ದು, ಎಲ್ಲಾ ಬೆಳಕನ್ನು ಪ್ರೇರೇಪಿಸುವ ಮೂಲ ಬೆಳಕು.(Note: ಎರಡು ನಾಮವಾಗಿ ಕೂಡ ಅರ್ಥೈಸಬಹುದು)
125) ವಿಷ್ವಕ್ಸೇನೋ
ಭಗವಂತನ ಕಣ್ಣು ತಪ್ಪಿಸಿ ಏನನ್ನೂ ಮಾಡಲು ಸಾದ್ಯವಿಲ್ಲ. ಏಕೆಂದರೆ ಆತನ ಸೇನೆ ಪ್ರಪಂಚದ ಮೂಲೆ ಮೂಲೆಗಳಲ್ಲಿ, ಅಂಡಾ೦ಡ-ಪಿಂಡಾ೦ಡಗಳಲ್ಲಿ, ಇಡೀ ಬ್ರಹ್ಮಾಂಡದಲ್ಲಿ ವ್ಯಾಪಿಸಿ ನಿಂತಿದೆ. ಭಗವಂತ ನಮ್ಮ ಹೃತ್ಕಮಲದಲ್ಲಿ ನೆಲೆಸಿದ್ದಾನೆ, ಹಾಗು ಆತನ ಸುತ್ತ ಅವನ ಪರಿವಾರ ದೇವತೆಗಳು ವ್ಯಾಪಿಸಿದ್ದಾರೆ. ಕಣ್ಣಿನಲ್ಲಿ ಸೂರ್ಯ, ಕಿವಿಯಲ್ಲಿ ಚಂದ್ರ , ಮೂಗಿನಲ್ಲಿ ವಾಯು, ನಾಲಿಗೆಯಲ್ಲಿ ವರುಣ, ಬಾಯಲ್ಲಿ ಅಗ್ನಿ, ಕೈಯಲ್ಲಿ ಇಂದ್ರ, ಕಾಲಲ್ಲಿ ಜಯಂತ, ಹೀಗೆ ಸಮಸ್ತ ಇಂದ್ರಿಯಗಳಲ್ಲಿ ಭಗವಂತನ ಸೇನೆ ತುಂಬಿದೆ. ಪಂಚಭೂತಗಳಿಂದ(ಮಣ್ಣು,ನೀರು,ಬೆಂಕಿ,ಗಾಳಿ,ಆಕಾಶ) ಮತ್ತು ಪಂಚ ಕೋಶಗಳಿಂದ (ಅನ್ನಮಯ ಕೋಶ, ಪ್ರಾಣಮಯ ಕೋಶ ,ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗು ಆನಂದಮಯ ಕೋಶ) ಆದ ನಮ್ಮ ದೇಹದಲ್ಲಿ ನೆಲೆಸಿರುವ ಎಲ್ಲಾ ದೇವತೆಗಳನ್ನು, ಪುಂಡರೀಕಾಕ್ಷನಾಗಿ, ಲಕ್ಷ್ಮಿ ಜೊತೆಗಿದ್ದು, ಆ ಭಗವಂತ ನಿಯಂತ್ರಿಸುತ್ತಿರುತ್ತಾನೆ. ಇನ್ನು ಸೂರ್ಯಮಂಡಲದಲ್ಲಿದ್ದು, ಸೂರ್ಯ ಕಿರಣದೊಂದಿಗೆ ಈ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಭಗವಂತನನ್ನು ವಿಷ್ವಕ್ಸೇನಾ ಎನ್ನುತ್ತಾರೆ.
126) ಜನಾರ್ದನಃ
ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಅಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ.
'ಜನ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ.
೧. ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ.
೨. ಜನ ಅಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ.
೩. ಜನ ಅಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು.

೪. ಜನ ಅಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ ಪ್ರಾರ್ಥನೆ ಸ್ವೀಕರಿಸಿ ಅವರ ಅಭಿಷ್ಟವನ್ನು ಪೂರೈಸುವವನು.