Wednesday, November 10, 2010

Vishnu sahasranama 501-504

ವಿಷ್ಣು ಸಹಸ್ರನಾಮ:  ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ
501) ಶರೀರಭೂತಭೃತ್
ಭಗವಂತ ಶರೀರದಂತಿರುವ ಈ ಚರಾಚರ ಪ್ರಪಂಚವನ್ನು ಹೊತ್ತವನು. ಇನ್ನು ಪಿಂಡಾಂಡವನ್ನು ನೋಡಿದಾಗ, ಈ ಶರೀರ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಹಾಗು ಆನಂದಮಯಕೋಶ ಎಂಬ ಪಂಚಕೋಶಗಳಿಂದಾಗಿದೆ. ಶರೀರದಲ್ಲಿ ಪಂಚಭೂತಗಳ ಸೂಕ್ಷ್ಮಾತಿ-ಸೂಕ್ಷ್ಮ ಸ್ಥಿತಿಯಲ್ಲಿ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ, ಆಗಿ ಪಂಚಕೋಶಗಳಾಗಿವೆ. ಇದನ್ನೇ 'ಶರೀರಭೂತ' ಎನ್ನುತ್ತೇವೆ.ಈ ಪಂಚಕೋಶಾತ್ಮಕ ಶರೀರದಲ್ಲಿ ಭಗವಂತ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ನಾರಾಯಣನಾಗಿ ಪಂಚರೂಪದಲ್ಲಿ ನೆಲೆಸಿದ್ದರೆ, ಪ್ರಾಣದೇವರು ಪ್ರಾಣಾಪಾನವ್ಯಾನೋದಾನಸಮಾನ (ಪ್ರಾಣ ಅಪಾನ ವ್ಯಾನ ಉದಾನ ಮತ್ತು ಸಮಾನ) ರೂಪದಲ್ಲಿ ನೆಲೆಸಿದ್ದಾರೆ. ಹೀಗೆ ಪಂಚರೂಪನಾದ ಪ್ರಾಣನ ಜೊತೆಗೆ ಪಂಚರೂಪನಾದ ಭಗವಂತ ಪಂಚಕೊಶಗಳಲ್ಲಿ ನೆಲೆಸಿದ್ದಾನೆ. ಆದ್ದರಿಂದ ಆತನನ್ನು ಶರೀರಭೂತಭೃತ್ ಎಂದು ಉಪಾಸನೆ ಮಾಡುತ್ತಾರೆ.
502) ಭೋಕ್ತಾ
 ಎಲ್ಲ ವಿಷಯಗಳನ್ನು ಭೋಗಿಸುವುದು, ಭೋಗಿಸಿ ಆನಂದಿಸುವುದು ಆತನ ಲೀಲೆ. ಈ ಪಂಚ ಭೂತಾತ್ಮಕವಾದ, ಪಂಚಕೋಶಾತ್ಮಕ ಶರೀರದೊಳಗಿದ್ದು, ಶರೀರದ ಎಲ್ಲಾ ಭೂಗಗಳನ್ನು  ಭಗವಂತ ತಾನೂ ಉಂಡು, ನಮಗೆ ಉಣ್ಣಿಸಿ, ನಮಗೆ ವಿಷಯ ಭೋಗಗಳನ್ನು ಕೊಡುತ್ತಾನೆ. ಹೀಗೆ ಚರಾಚರಾತ್ಮಕವಾದ ಪ್ರಪಂಚದಲ್ಲಿ, ಬ್ರಹ್ಮಾಂಡ ಪಿಂಡಾಂಡದಲ್ಲಿ, ಪಂಚ ಕೋಶಗಳಲ್ಲಿ, ಒಂದೊಂದು ಕೋಶದ ಕ್ರಿಯೆಯನ್ನು ಮಾಡಿ, ನಮಗೆ ಆನಂದವನ್ನು ಉಣ್ಣಿಸುವ, ತಾನು ನಿರಂತರ ಆನಂದಮೂರ್ತಿಯಾಗಿರುವ ಭಗವಂತ ಭೋಕ್ತಾ.    
503) ಕಪೀಂದ್ರಃ
ಯಾವ ಯಾವ ವಸ್ತುವಿನಲ್ಲಿ ಭಗವಂತ ವಿಶೇಷವಾಗಿ ನೆಲೆಸಿದ್ದಾನೆ ಅ ವಸ್ತುವಿನ ಹೆಸರು ಭಗವಂತನ ಹೆಸರೂ ಕೂಡಾ ಹೌದು. ಆದ್ದರಿಂದ ತತ್ತದ್ವಸ್ತುವಿನಲ್ಲಿ ಇರತಕ್ಕ ಭಗವಂತನ ರೂಪವನ್ನು ತತ್ತನ್ನಾಮದಿಂದ ಉಪಾಸನೆ ಮಾಡುವುದು ವಾಡಿಕೆ. ಈ ರೀತಿ ನೋಡಿದಾಗ ಭಗವಂತನ ಕಪೀಂದ್ರಃ ನಾಮದ ಮೇಲ್ನೋಟದ ಅರ್ಥ-  ರಾಮಾವತಾರದಲ್ಲಿ ಸೂರ್ಯ ಪುತ್ರನಾದ ಸುಗ್ರೀವ ಹಾಗು ವಾಯು ತನಯ ಆಂಜನೇಯನಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದ ಭಗವಂತ.
ಇನ್ನು ಈ ನಾಮದ etymological (ಶಬ್ದ ನಿಷ್ಪತ್ತಿ) ಅರ್ಥವನ್ನು ನೋಡಿದರೆ 'ಕಪಿ' ಎಂದರೆ 'ಹಂದಿ' ಅಥವಾ 'ವರಾಹ'. ವರಾಹ ರೂಪದಲ್ಲಿ ಭೂಮಿಯನ್ನು ರಕ್ಷಿಸಿದ ಭಗವಂತ ಕಪೀಂದ್ರಃ.  'ಕಂ' ಎಂದರೆ ಆನಂದ. 'ಕಪಿ' ಎಂದರೆ ಆನಂದ ಪಾನ ಮಾಡುವವರು ಅಂದರೆ 'ಮುಕ್ತರು'. ಭಗವಂತ ಮುಕ್ತರಿಗೆ ಇಂದ್ರ (ಒಡೆಯ) ಆದ್ದರಿಂದ ಆತ ಕಪೀಂದ್ರಃ.
504) ಭೂರಿದಕ್ಷಿಣಃ
ಈ ನಾಮದ ಅರ್ಥ ವಿಶ್ಲೇಷಣೆಗೆ ಮೊದಲು 'ದಕ್ಷಿಣೆ' ಎಂದರೆ ಏನು ಎನ್ನುವುದನ್ನು ತಿಳಿಯೋಣ. ಹಿಂದಿನ ಕಾಲದಲ್ಲಿ ವೈದಿಕ ವೃತ್ತಿಯಲ್ಲಿದ್ದವರಿಗೆ ಸಂಬಳವಿರಲಿಲ್ಲ. ಏಕೆಂದರೆ ಪಾಠ ಹೇಳುವವರು ಸಂಬಳ ತೆಗೆದುಕೊಳ್ಳಬಾರದು ಎನ್ನುವ ನಿಯಮವಿತ್ತು. ಅಂತವರನ್ನು ಸಮಾಜವೇ ಸಾಕಿ ಸಲಹುತ್ತಿತ್ತು. ಪ್ರತಿದಿನ ಒಬ್ಬೊಬ್ಬರು ಇಂತಹ ಪಂಡಿತರನ್ನು ಮನೆಗೆ ಕರೆದು ಊಟ ಹಾಕಿ ನಂತರ ಅವರ ಕುಟುಂಬಕ್ಕಾಗಿ 'ದಕ್ಷಿಣೆ' ಕೊಡುತ್ತಿದ್ದರು. ಹೀಗೆ ಕೊಟ್ಟ ದಕ್ಷಿಣೆ ಅವರ ಮನೆ ಖರ್ಚಿಗಾಗಿ ಬಳಕೆಯಾಗುತ್ತಿತ್ತು. ಈ ಕಾರಣಕ್ಕಾಗಿ ದಕ್ಷಿಣೆ ಕೊಡದೇ ಊಟ ಹಾಕಬಾರದು ಎನ್ನುವ ಸಂಪ್ರದಾಯವಿತ್ತು. ಇನ್ನು ಯಜ್ಞದ  ಪೌರೋಹಿತ್ಯ ಮಾಡುವವರಿಗೆ ವಿಶೇಷ ದಕ್ಷಿಣೆ ಕೊಡುತ್ತಿದ್ದರು. ಎಲ್ಲವನ್ನೂ ಕೊಡುವವನು ಭಗವಂತ. ಶ್ರೀಮಂತರೊಳಗಿದ್ದು ಕೈತುಂಬಾ ಕೊಡಿಸುವ ಭಗವಂತ ಭೂರಿದಕ್ಷಿಣಃ.
'ದಕ್ಷಿಣ'  ಎಂದರೆ ಲಕ್ಷ್ಮಿ ಎನ್ನುವುದು ಒಂದು ಅರ್ಥ. ಇನ್ನೊಂದು ಅರ್ಥ 'ಶಿವ-ಪಾರ್ವತಿ'. ಹಿಂದಿನ ಕಾಲದಲ್ಲಿ ಒಂದು ಕ್ರಮವಿತ್ತು, ಗಂಡ ಹೆಂಡತಿ ಕುಳಿತುಕೊಳ್ಳುವ ಕ್ರಮ. ಅವರು ಕುಳಿತ ರೀತಿಯಲ್ಲೇ ಅವರು ಗಂಡ ಹೆಂಡತಿ ಎಂದು ತಿಳಿಯುತ್ತಿತ್ತು. ತಂದೆ-ಮಗಳು ಕುಳಿತುಕೊಳ್ಳುವಾಗ ಮಗಳು ತಂದೆಯ ಬಲ ಭಾಗದಲ್ಲಿ ಕುಳಿತು ಕೊಳ್ಳಬೇಕು, ಹೆಂಡತಿ ಗಂಡನ ಎಡಭಾಗದಲ್ಲೇ ಕುಳಿತು ಕೊಳ್ಳಬೇಕು, ಇದು ಸಂಪ್ರದಾಯ. ತನ್ನ ಬಲಭಾಗದಲ್ಲಿ ಗಂಡ ಇರುವ ಲಕ್ಷ್ಮಿ 'ದಕ್ಷಿಣ'; ಇಂತಹ ಶ್ರೀಲಕ್ಷ್ಮಿ ಎಲ್ಲಕ್ಕಿಂತ ಶ್ರೇಷ್ಠ ಪರಿವಾರವಾಗಿ ಇರುವ ಭಗವಂತ ಭೂರಿದಕ್ಷಿಣಃ.

No comments:

Post a Comment