Friday, November 12, 2010

Vishnu sahasranama 510-514

ವಿಷ್ಣು ಸಹಸ್ರನಾಮ:  ವಿನಯೋ ಜಯಃ ಸತ್ಯಸಂಧೋ ದಾಶಾರ್ಹಸ್ಸಾತ್ವತಾಂ ಪತಿಃ
510) ವಿನಯಃ
ವಿ+ನಯ-ವಿನಯ; ಇಲ್ಲಿ 'ವಿ' ಎಂದರೆ ವಿವಿಧ ಅಥವ ವಿಶಿಷ್ಟ; ನಯ ಎಂದರೆ ನೀತಿ(Principle). ಪ್ರಪಂಚದಲ್ಲಿ ವಿವಿಧವಾದ ನೀತಿಯನ್ನು ನೆಲೆಗೊಳಿಸಿದ ಭಗವಂತ ವಿನಯಃ. ಒಬ್ಬೊಬ್ಬರಿಗೆ ಒಂದೊಂದು ನೀತಿ, ಪ್ರತಿಯೊಬ್ಬ ವ್ಯಕ್ತಿಗೂ  ಅವನ ವೈಯಕ್ತಿಕ ನೀತಿಯನ್ನು ನಿಯಮಿಸುವವನು. ಏಕೆಂದರೆ ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಆ ಸ್ವಭಾವಕ್ಕೆ ತಕ್ಕಂತೆ ಆತನ ಜೀವನದ ನೆಡೆ. ಆದ್ದರಿಂದ ಒಬ್ಬೊಬ್ಬರ ನೆಡೆ ಒಂದೊಂದು ವಿಧ. ಹೀಗೆ ವಿವಿಧವಾದ ಜೀವನದ ನೆಡೆಯನ್ನು ನಿಯಂತ್ರಿಸುವ, ಅನಂತ ಜೀವಗಳಿಗೆ ಅನಂತ ರೀತಿಯ ಬದುಕನ್ನು ನೀಡಿದ ಭಗವಂತ ವಿನಯಃ. ಈ ಕಾರಣಕ್ಕಾಗಿ ಭಗವಂತನ ಸೃಷ್ಟಿಯಲ್ಲಿ ನೂರಕ್ಕೆ ನೂರು ಒಂದೇ ರೀತಿಯಾದ ಎರಡು ವಸ್ತುವಿಲ್ಲ, ಒಬ್ಬರಂತೆ ಇನ್ನೊಬ್ಬರಿಲ್ಲ. ಇಂತಹ ಭಗವಂತನ  ವಿನಯಪೂರ್ಣತೆಗೆ 'ಶ್ರೀ ರಾಮಚಂದ್ರನ' ಜೀವನದ ನಡೆಯೇ ಸಾಕ್ಷಿ. .   
511) ಜಯಃ
ಜಯಃ ಎಂದರೆ ಎಲ್ಲವನ್ನೂ ಜಯಿಸಿದವನು. ಮಹಾಭಾರತಕ್ಕೆ 'ಜಯ' ಎನ್ನುತ್ತಾರೆ. ಮಹಾಭಾರತದಿಂದ ಪ್ರತಿಪಾಧ್ಯನಾದ ಭಗವಂತ ಜಯಃ.
ಇನ್ನು ಸಂಖ್ಯಾಶಾಸ್ತ್ರವನ್ನು ನೋಡಿದಾಗ, ಅಕ್ಷರಾಂಕದ ಪದ್ದತಿಯಲ್ಲಿ 18  ಎಂದರೆ ಜಯ; ಜ=8 ಯ=1.  ಅಕ್ಷರಾಂಕದಲ್ಲಿ ಮೊದಲನೆಯದು ಏಕ ಸ್ಥಾನ; ಎರಡನೆಯದು ದಶಕ ಸ್ಥಾನ. ಆದ್ದರಿಂದ  ಜ-ಯ ಎಂದರೆ 81 ಅಲ್ಲ; 18.ಈ ಕಾರಣಕ್ಕಾಗಿ ಜಯ ನಾಮಕ ಭಾರತದಲ್ಲಿ ಹದಿನೆಂಟು ಪರ್ವಗಳು, ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನಗಳು,ಯುದ್ಧದಲ್ಲಿ ಪಾಲ್ಗೊಂಡ ಸೇನೆ ಹದಿನೆಂಟು ಅಕ್ಷೋಹಿಣಿ, ಜಯದ ಸಾರವಾದ  ಗೀತೆಯಲ್ಲಿ ಹದಿನೆಂಟು ಅಧ್ಯಾಯ. ಹಿಂದೆ ಹೇಳಿದಂತೆ ಜೀವನಿಗೆ 15 ಬೇಲಿ, ಆ 15 ಬೇಲಿಯೊಳಗೆ 16ನೇ ಜೀವ. ಹೀಗೆ ಜೀವವನ್ನು ಕಟ್ಟಿ ಹಾಕಿದವಳು 17ನೇ ಪೃಕೃತಿ. ಜೀವದ ಬಂಧವನ್ನು ಕಳಚುವವನು 18ನೇ ಜಯಃ ನಾಮಕ ಭಗವಂತ.     
512) ಸತ್ಯಸಂಧಃ
ಎಂದೂ ಹುಸಿಯಾಗದ ಪ್ರತಿಜ್ಞೆಯವನು. ಭಗವಂತನ ನುಡಿ ಎಂದೂ ಹುಸಿಯಾಗುವುದಿಲ್ಲ. ಆದರೂ ಕೆಲವೊಮ್ಮೆ ತನ್ನ ಭಕ್ತರ ಅಭೀಷ್ಟ ಪೂರೈಸುವುದಕ್ಕೊಸ್ಕರ ಹುಸಿಯಾದಂತೆ ತೋರಿಸುತ್ತಾನೆ! ಇಂತಹ ಭಕ್ತವಾತ್ಸಲ ಭಗವಂತ  ಸತ್ಯಸಂಧಃ
513) ದಾಶಾರ್ಹಃ
ಮನುಷ್ಯ ಎಂದೂ ಸಂಪೂರ್ಣ ಸ್ವಾತಂತ್ರ್ಯವನ್ನು ಇಷ್ಟ ಪಡುವುದಿಲ್ಲ. ಯಾರ್ಯಾರಿಗೋ ದಾಸನಾಗುವ ಬದಲು ಭಗವಂತನಿಗೆ ದಾಸನಾಗುವುದು ನಮ್ಮ ಗುರಿಯಾಗಬೇಕು.ನಮ್ಮ ಸರ್ವಸ್ವವನ್ನೂ ಅರ್ಪಿಸಲು ತಕ್ಕ ತಾಣವಾದ ಭಗವಂತ ದಾಶಾರ್ಹಃ. 
514) ಸಾತ್ವತಾಂಪತಿಃ
ಸಾತ್ವತರು ಎಂದು ಯಾದವರ ಒಂದು ಕವಲಿತ್ತು, ಇಂತಹ ಕವಲಿನಲ್ಲಿ ಜನಿಸಿದ ಭಗವಂತನನ್ನು ಸಾತ್ವತಾಂಪತಿಃ ಎನ್ನುತ್ತಾರೆ. ಆದರೆ ಇದು ಕೇವಲ ಲೌಕಿಕ ಅರ್ಥ. ಇದಕ್ಕೊಂದು ಆಂತರಿಕ ಅರ್ಥವಿದೆ. 'ಸಾತ್ವತರು' ಎಂದರೆ-'ಸಾತ್ವತ' ಎನ್ನುವ  ಸಂಹಿತೆ ಒಂದಿದೆ, ಸಾತ್ವಿಕವಾದ ತಂತ್ರಶಾಸ್ತ್ರದ ಪರಂಪರೆ. ಆ ಪರಂಪರೆಯನ್ನು ಜಗತ್ತಿಗೆ ಕೊಟ್ಟವನು ಕಪಿಲ ರೂಪಿ ಭಗವಂತ. ಸಾತ್ವತ ರೂಪನಾದ ಭಗವಂತನನ್ನು ಉಪಾಸನೆಯಲ್ಲಿ ಬಳಸಿ ಅವನನ್ನು ಆರಾಧನೆ ಮಾಡುವ ಸಾತ್ವಿಕರಿಗೆ ಪಾಲಕನಾಗಿ ಮೋಕ್ಷ ಕರುಣಿಸುವ ಭಗವಂತ ಸಾತ್ವತಾಂಪತಿಃ.

2 comments:

  1. ಜಯ ಎ೦ಬುದರ ಅರ್ಥ ಸ೦ಖ್ಯಾ ಶಾಸ್ತ್ರದ ಪ್ರಕಾರ ಹೀಗಿದೆ..ಎ೦ದು ತಿಳಿದಿರಲಿಲ್ಲ.ವಿವರಣೆ ತು೦ಬಾ ಚೆನ್ನಾಗಿದೆ. ತು೦ಬಾ ಧನ್ಯವಾದಗಳು..

    ReplyDelete