Tuesday, November 23, 2010

Vishnusahasranama 689-693

ವಿಷ್ಣು ಸಹಸ್ರನಾಮ:  ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ
689) ಪೂರ್ಣಃ
ನಾವು ಶಾಂತಿ ಮಂತ್ರಗಳಲ್ಲಿ ಈ ರೀತಿ ಹೇಳುತ್ತೇವೆ:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ. ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ ! ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ "ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" ಎಂದರ್ಥ.  ಭಗವಂತ ನಮ್ಮೊಳಗೂ ಇದ್ದಾನೆ ಹೊರಗೂ ಇದ್ದಾನೆ, ಆತ ಒಳಗೂ ಪೂರ್ಣ, ಹೊರಗೂ ಪೂರ್ಣ. ಆತ ಅವತಾರದಲ್ಲೂ ಪೂರ್ಣ, ಅವತಾರದ ನಂತರವೂ ಪೂರ್ಣ. ಆತ ಹಣತೆಯಂತೆ. ಒಂದು ಹಣತೆಯಿಂದ ಇನ್ನೊಂದು, ಇನ್ನೊಂದರಿಂದ ಮತ್ತೊಂದು ಹೀಗೆ ಸಹಸ್ರಾರು ಹಣತೆಗಳನ್ನು ಹಚ್ಚಿದರೂ, ಮೂಲ ಹಣತೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಸರ್ವ ಶಬ್ಧವಾಚ್ಯ  ಭಗವಂತ ಪೂರ್ಣಃ.    
690) ಪೂರಯಿತಾ
ನಮಗೆ ಯಥಾರ್ಥ ಜ್ಞಾನ ಕೊಟ್ಟು ಮೊಕ್ಷದತ್ತ ಕೊಂಡೊಯ್ಯುವ ಭಗವಂತ ಪೂರಯಿತಾ.ಭಗವಂತ ಸೂರ್ಯನಾದರೆ ನಾವು ಮಿಂಚು ಹುಳದಂತೆ, ಆತ ಕಡಲಾದರೆ ನಾವು ಕೊಡದಂತೆ. ಕಡಲಿನಿಂದ ನಾವು ನಮ್ಮ ನಮ್ಮ ಕೊಡವನ್ನು ತುಂಬಿಸಿಕೊಳ್ಳಬೇಕು, ಅವರವರ ಯೋಗ್ಯತೆಗೆ ತಕ್ಕಂತೆ ಇದನ್ನು ಮಾಡಿಸುವವನೂ ಅವನೇ.
691) ಪುಣ್ಯಃ
ಪುಣ್ಯ ಎಂದರೆ ಪವಿತ್ರ ಅಥವಾ ಪಾವನ. ಭಗವಂತನ ಜ್ಞಾನ ನಮ್ಮನ್ನು, ನಮ್ಮ ಮನಸ್ಸನ್ನು ಪಾವನ ಗೊಳಿಸುವ ಏಕೈಕ ಸಾಧನ. ಮಾನಸಿಕವಾಗಿ ಗೊಂದಲ, ದುಃಖ, ನಿರಾಶೆಗೊಳಗಾದ ಮನಸ್ಸನ್ನು  ಭಗವಂತನತ್ತ ಹರಿಸಿದಾಗ ಮನಸ್ಸು ನೆಮ್ಮದಿಯಿಂದಿರುತ್ತದೆ. ಇದೇ ಪುಣ್ಯ ಅಥವಾ ಪಾವಿತ್ರ್ಯ. ಲೋಕೋತ್ತರವಾದ ಸುಂದರ ಭಗವಂತನ ಚಿಂತನೆಯಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಬಾಡುವುದಿಲ್ಲ, ಮುದುಡುವುದಿಲ್ಲ. ಹೀಗೆ ಪವಿತ್ರನೂ ಪರಮ ಸುಂದರನೂ ಆದ ಭಗವಂತ ಪುಣ್ಯಃ
692) ಪುಣ್ಯಕೀರ್ತಿಃ
ಕೀರ್ತನ ಮಾತ್ರದಿಂದ ಎಲ್ಲಾ ಪಾಪಗಳನ್ನು ಕಳೆಯುವ ಭಗವಂತ ಪುಣ್ಯಕೀರ್ತಿಃ. ಅವನ ಗುಣಗಾನ ನಮ್ಮ ಬದುಕನ್ನು ಪಾವನಗೊಳಿಸುತ್ತದೆ. ಭಗವನ್ನಾಮ ನಮ್ಮನ್ನು ಉದ್ಧಾರ ಮಾಡುತ್ತದೆ.
693) ಅನಾಮಯಃ
'ಆಮಯ' ಎಂದರೆ ದೋಷಗಳು. ಬೆಂಕಿಯ ಜೊತೆಗೆ ಹೊಗೆ ಇರುವಂತೆ ನಮ್ಮಲ್ಲಿ ದೋಷಗಳು ಇದ್ದೇ ಇರುತ್ತದೆ. ಆದರೆ ಭಗವಂತನಿಗೆ ಯಾವುದೇ ದೋಷದ ಲೇಪವಿಲ್ಲ. ಆತ ಪೂರ್ಣ ನಿರ್ದೋಷ. ಇಂತಹ ಭಗವಂತ ಅನಾಮಯಃ

No comments:

Post a Comment