Sunday, November 14, 2010

Vishnusahasranama 541-544

ವಿಷ್ಣು ಸಹಸ್ರನಾಮ: ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ
541) ಮಹಾವರಾಹಃ
ವರಾಹ ಅಂದರೆ ನಮಗೆ ಗೊತ್ತಿರುವ ಅರ್ಥ 'ಹಂದಿ'; ಆದರೆ ಪ್ರಾಚೀನ ಸಂಸ್ಕೃತದಲ್ಲಿ ಬೇರೆ ಅರ್ಥವಿದೆ. ಶ್ರೇಷ್ಠನಾದವ, ಮೋಡ ಎನ್ನುವ ಅರ್ಥ ವೇದಕಾಲದಲ್ಲಿತ್ತು, ಆದರೆ ಈಗ ಪ್ರಚಲಿತದಲ್ಲಿಲ್ಲ. ವರಾಹ ಎಂದರೆ ಎಲ್ಲರೂ ವರ್ಣನೆ ಮಾಡತಕ್ಕ ಎಲ್ಲರಿಗಿಂತ ಎತ್ತರದಲ್ಲಿರುವ ವಸ್ತು, ಎಲ್ಲರೂ ಆಶ್ರಯಿಸುವ ವಸ್ತು. ಅದಕ್ಕಾಗಿ  ಎಲ್ಲರಿಗೂ ಬೇಕಾದ ಮಳೆಯನ್ನು ಕೊಡುವ ಎತ್ತರದಲ್ಲಿರುವ ಮೋಡವನ್ನು ಸಹ ವರಾಹ ಎಂದು ಕರೆಯುತ್ತಾರೆ. ಆದರೆ ನಿಜವಾಗಿ ಎತ್ತರದಲ್ಲಿರುವ ವಸ್ತು ಮೋಡವಲ್ಲ ಭಗವಂತ. ಮಹಾವರಾಹ ಎಂದರೆ ಎಲ್ಲಕ್ಕಿಂತಲೂ ಶ್ರೇಷ್ಠ ಹಾಗು ಎತ್ತರದಲ್ಲಿರುವ ಭಗವಂತ.
ಸಂಸ್ಕೃತದ ಮಂತ್ರಶಾಸ್ತ್ರದಲ್ಲಿ 'ವರಾಹಮಂತ್ರಕ್ಕೆ'  ಬಹಳ ಮಹತ್ವವಿದೆ. ಸಾಮಾನ್ಯವಾಗಿ ವರಾಹ ಮಂತ್ರವನ್ನು ಭೂ ಪ್ರಾಪ್ತಿಗಾಗಿ ಉಪಾಸನೆ ಮಾಡುತ್ತಾರೆ. ಆದರೆ ವಾಸ್ತವಿಕವಾಗಿ ನಾವು ಈ ಮಂತ್ರದಿಂದ ಪಡೆಯುವುದು ಭೂಮಿಯಲ್ಲ 'ಭೂ-ಪತಿತ್ವ', ಅಂದರೆ ಪೂರ್ಣತೆಯನ್ನು ಪಡೆಯುವುದು. ನಮ್ಮ ವ್ಯಕ್ತಿತ್ವದ ಪೂರ್ಣ ವಿಕಾಸವೇ ಭೂ-ಪತಿತ್ವ. ಇಂತಹ ಸರ್ವ ಶ್ರೇಷ್ಠವಾದ ವರಾಹ ಮಂತ್ರದಲ್ಲಿ ಸನ್ನಿಹಿತನಾಗಿರುವ ಭಗವಂತ ಮಹಾವರಾಹಃ.   
542) ಗೋವಿಂದಃ
ಈ ಹಿಂದೆ ವಿಶ್ಲೇಶಿಸಿದಂತೆ ಗೋವು ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಭೂಮಿ, ನೀರು, ಕೂದಲು, ಕಿರಣ, ವೇದ, ಪ್ರಕಾಶ, ಇತ್ಯಾದಿ. ಗೋವಿಂದಃ ಎಂದರೆ ವೇದವನ್ನು ರಕ್ಷಿಸುವುದಕ್ಕೊಸ್ಕರ ಪ್ರಳಯ ಜಲದಲ್ಲಿ ಮತ್ಸ್ಯನಾಗಿ ಸಂಚರಿಸಿದವ; ಭೂಮಿ ಹಿರಣ್ಯಾಕ್ಷನಿಂದ ತನ್ನ ಕಕ್ಷೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ವರಾಹನಾಗಿ ರಕ್ಷಣೆ ಮಾಡಿದವ ಗೋವಿಂದಃ; ಗೋವುಗಳ ಜೊತೆಗೆ ಗೋಪಾಲಕನಾಗಿ ಆಟವಾಡಿದ ಭಗವಂತ, ವೇದವ್ಯಾಸನಾಗಿ ವೇದಗಳನ್ನು ಕೊಟ್ಟ ವೇದವೇಧ್ಯ. ಹೀಗೆ ಗೋವಿಂದಃ ಎನ್ನುವ ನಾಮಕ್ಕೆ ಅನೇಕ ಅರ್ಥಗಳಿವೆ.
543) ಸುಷೇಣಃ
ಸು+ಸೇನಾ; ಸೇನಾ ಎಂದರೆ  ಸೇನೆ. ಸಮರ್ಥವಾದ ಸೇನೆ ಉಳ್ಳವ ಸುಷೇಣಃ. ಸು ಅಂದರೆ ಸುಗ್ರೀವ, ಸಮರ್ಥವಾದ ಕಪಿ ಸೇನೆಯೊಂದಿಗೆ ಲಂಕೆಗೆ ಹೋದವ ಸುಷೇಣಃ. ಜಗತ್ತಿನಲ್ಲಿರುವ ಸೇನೆಗಳಿಗೆ ಧರ್ಮದ ಪರ  ಗೆಲ್ಲುವ ಶಕ್ತಿಯನ್ನು ಕೊಟ್ಟ ಭಗವಂತ ಸುಷೇಣಃ. 
544) ಕನಕಾಂಗದೀ
'ಅಂಗದ' ಎಂದರೆ 'ತೊಳ್ಭಂದಿ', ತೋಳಿನಲ್ಲಿ ತೊಡುವ ಬಳೆ, ಗಂಡಸರು ಹಾಗು ಹೆಂಗಸರು ತೊಡುವ ಆಭರಣ. ಚಿನ್ನದ ತೊಳ್ಭಂದಿ ತೊಟ್ಟ ಭಗವಂತ
ಕನಕಾಂಗದೀ. ಇದು ಮೇಲ್ನೋಟಕ್ಕೆ ಕಾಣುವ ಅರ್ಥ. ಹಿಂದಿನವರು ತಮ್ಮ ದೇಹವನ್ನು ಭಗವಂತನ ಪ್ರತಿಮೆ ಇದರೊಳಗೆ ಬಿಂಬ ರೂಪಿ ಭಗವಂತನಿದ್ದಾನೆ ಎನ್ನುವ ಭಾವನೆಯಿಂದ ಆಭರಣಗಳನ್ನು ಧರಿಸುತ್ತಿದ್ದರು. ಚಿನ್ನದ ವರ್ಣದ ಮಯ್ಯವನು, ಉದಿಸುವ ಸೂರ್ಯನ ಬಣ್ಣದವನು,ಭಕ್ತರ ದುರಿತವನ್ನು ನಾಶಮಾಡುವವನು ಆದ ಭಗವಂತ ಕನಕಾಂಗದೀ. 'ಕನಕ' ಅಂದರೆ 'ಅಂತರಂಗದ ಆನಂದ'. ಜ್ಞಾನಾನಂದಮಯವಾದ ಶರೀರವುಳ್ಳ ಭಗವಂತ ಕನಕಾಂಗದೀ.

No comments:

Post a Comment