Saturday, November 20, 2010

Vishnu sahasranama 637-645

ವಿಷ್ಣು ಸಹಸ್ರನಾಮ:
ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ
ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋಮಿತವಿಕ್ರಮಃ
637) ಅರ್ಚಿಷ್ಮಾನ್ 
ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆಯೋ ಅದರ ಮೂಲ ಭಗವಂತ ಅರ್ಚಿಷ್ಮಾನ್. ಆತ ಬೆಳಕಿನ ಜ್ವಾಲೆಗಳಿಂದ ಸುತ್ತುವರಿದವನು.
638) ರ್ಚಿತಃ
ಎಲ್ಲರಿಂದ ಪೂಜಿಸಲ್ಪಡುವವನು.
639) ಕುಂಭಃ
ಕುಂಭ ಎಂದರೆ ಮಡಕೆ. ಸ್ವತ್ತನ್ನು ಮುಚ್ಚಿಡುವ ಪಾತ್ರೆ. ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನೊಳಗೆ ಮುಚ್ಚಿಡುವ ಕುಂಭಃ. ಕುಂಭ ಎನ್ನುವುದಕ್ಕೆ ಭೂಮಿ ಎನ್ನುವ ವಿಶೇಷ ಅರ್ಥ ಕೂಡಾ ಇದೆ. ಭೂಮಿಯನ್ನು ನಿರ್ಮಿಸಿ ಬೆಳಗುವ ಭಗವಂತ ಕುಂಭಃ.
640) ವಿಶುದ್ಧಾತ್ಮಾ
ಭಗವಂತ ಮತ್ಸ್ಯ, ಕೂರ್ಮ, ವರಾಹ ರೂಪದಲ್ಲಿ ಭೂಮಿಗಿಳಿದು ಬಂದರೂ ಕೂಡಾ, ಎಲ್ಲಾ ರೂಪದಲ್ಲೂ ಆತ ಪರಿಶುದ್ಧ ಸ್ವರೂಪ. ಎಲ್ಲಾ ಜೀವರೊಳಗಿರುವ ಭಗವಂತನಿಗೆ ಯಾವ ರೂಪದಲ್ಲೂ ಕೊಳೆಯ ಸ್ಪರ್ಶವಿಲ್ಲ.
641) ವಿಶೋಧನಃ
ವಿಶೋಧನಃ ಎಂದರೆ ಪರಿಶುದ್ಧಗೊಳಿಸುವವನು. ನಮ್ಮ ಮನಸ್ಸಿನ ತುಂಬಾ ಭಗವಂತನನ್ನು ತುಂಬಿಕೊಂಡಾಗ ನಾವು ಶುದ್ಧರಾಗುತ್ತೇವೆ. ಸ್ನಾನ ಮಾಡುವುದರಿಂದಾಗಲಿ, ಒದ್ದೆ ಬಟ್ಟೆಯಿಂದಾಗಲಿ ಮೈಲಿಗೆ ಹೋಗುವುದಿಲ್ಲ, ವಿಶೋಧನನಾದ ಭಗವಂತನನ್ನು ಸದಾ ನೆನೆಯುವುದರಿಂದ ನಾವು ಪಾವನರಾಗುತ್ತೇವೆ.
642) ಅನಿರುದ್ಧಃ
ಅನಿರುದ್ಧಃ ಎಂದರೆ ತಡೆಯಿಲ್ಲದವನು. ಭಗವಂತ ಇಲ್ಲದ ತಾಣವಿಲ್ಲ. ಎಲ್ಲಿಯೂ ಕೂಡಾ ತಡೆ ಇಲ್ಲದೆ ಇರುವ ಅವನಿಗೆ ಪ್ರವೇಶವಿಲ್ಲದ ತಾಣವಿಲ್ಲ. ಆದರೆ ಭಕ್ತವತ್ಸಲನಾದ ಭಗವಂತನನ್ನು 'ಅನಿಗಳು' (ಪ್ರಾಣ ತತ್ವವನ್ನು ಉಪಾಸನೆ ಮಾಡುವ ಸಾಧಕರು) ತಡೆ ಹಿಡಿಯಬಲ್ಲರು.ಆತ ಭಕ್ತರಾಧೀನ. 
643) ಅಪ್ರತಿರಥಃ
ಭಗವಂತನನ್ನು ಎದುರಿಸುವ ಇನ್ನೊಂದು ಶಕ್ತಿಯಿಲ್ಲ. ಆತ ಅಪ್ರತಿರಥಃ
644) ಪ್ರದ್ಯುಮ್ನಃ
'ದ್ಯುಮ್ನ' ಎಂದರೆ ಬೆಳಕು/ಜ್ಞಾನ/ಸಂಪತ್ತು.  ಪ್ರದ್ಯುಮ್ನಃ ಎಂದರೆ ಎಲ್ಲಾ ಸಂಪತ್ತುಗಳ ಸ್ವಾಮಿ, ಸರ್ವಜ್ಞ, ಸರ್ವೇಶ್ವರ, ಜ್ಯೋತಿರ್ಮಯನಾದ ಭಗವಂತ. 
645) ಅಮಿತವಿಕ್ರಮಃ
ಭಗವಂತ ಎಣೆಯಿರದ ಪೌರುಷದವನು, ಅವನ ವಿಕ್ರಮ ಅಮಿತ. ನಾಶವಿಲ್ಲದ,  ಅಳತೆಗೆ ಎಟುಕದ, ನಶ್ವರವಲ್ಲದ, ಅನಂತವಾದ ಪೌರುಷದ ಖನಿಯಾದ ಭಗವಂತ
ಅಮಿತವಿಕ್ರಮಃ.

No comments:

Post a Comment