Monday, November 22, 2010

Vishnu Sahasranama 665-674

ವಿಷ್ಣು ಸಹಸ್ರನಾಮ:
ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ
665) ಬ್ರಹ್ಮಣ್ಯಃ
ಚತುರ್ಮುಖ ಬ್ರಹ್ಮನಿಗೆ ಬಹಳ ಪ್ರಿಯವಾದವನು (ಹಿತನಾದವನು) ಬ್ರಹ್ಮಣ್ಯಃ, ಬ್ರಹ್ಮ ಎನ್ನುವುದಕ್ಕೆ 'ಜೀವರು', 'ವೇದ' ಎನ್ನುವ ಇತರ ವಿಶೇಷ ಅರ್ಥಗಳಿವೆ. ಸಮಸ್ತ ಜೀವಜಾತಕ್ಕೂ ಹಿತನಾಗಿ, ಸದಾ ಜೊತೆಗೆ ಇರತಕ್ಕ ಗೆಳೆಯ ಭಗವಂತ ಬ್ರಹ್ಮಣ್ಯಃ;  ಸಮಸ್ತ ವೇದಗಳಿಂದ ಪ್ರತಿಪಾಧ್ಯನಾದ ಭಗವಂತ ಬ್ರಹ್ಮಣ್ಯಃ   
666) ಬ್ರಹ್ಮಕೃತ್
ಸೃಷ್ಟಿಯ ಆರಂಭದಲ್ಲಿ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಸಿ ವೇದೊಪದೇಶ ಮಾಡಿದ ಭಗವಂತ, ಸಮಸ್ತ ಜೀವ ಜಾತಗಳಿಗೆ ಆಯಾ ಜೀವದ ಕರ್ಮಕ್ಕೆ ತಕ್ಕಂತೆ, ಸ್ವರೂಪಕ್ಕೆ ತಕ್ಕಂತೆ, ದೇಹವನ್ನು ಕೊಟ್ಟು ಬದುಕನ್ನು ಕೊಟ್ಟ ಬ್ರಹ್ಮಕೃತ್.
667) ಬ್ರಹ್ಮಾ
ಸೃಷ್ಟಿಗೆ  ಕಾರಣನಾದ ಚತುರ್ಮುಖನೊಳಗಿದ್ದು ಸೃಷ್ಟಿ ಮಾಡುವ ಭಗವಂತ ಬ್ರಹ್ಮಾ (ಈ ನಾಮ ಪುರುಷ ರೂಪದಲ್ಲಿದೆ ಅಥವಾ ಪುಲ್ಲಿಂಗ) 
668) ಬ್ರಹ್ಮ
ಭಗವಂತ ಎಲ್ಲಕ್ಕಿಂತ ದೊಡ್ಡ ತತ್ವ (ಬ್ರಹ್ಮ-ನಪುಂಸಕ ಲಿಂಗ; ಇದು ಸಂಸ್ಕೃತದಲ್ಲಿರುವ ವಿಶೇಷ, ಗಂಡು-ಹೆಣ್ಣಿನ ದೌರ್ಬಲ್ಯದ ಲೇಪವಿಲ್ಲದೆ ನಮ್ಮನ್ನು ಪೂರ್ಣತೆಗೆ ಒಯ್ಯುವ ಎಲ್ಲಕ್ಕಿಂತ ದೊಡ್ಡ ತತ್ವ )  
669) ಬ್ರಹ್ಮವಿವರ್ಧನಃ
ಜೀವಜಾತದ ಭೌದ್ಧಿಕ ಬೆಳವಣಿಗೆಗೆ ಬೇಕಾದ ದೇಹವನ್ನು ಕೊಟ್ಟು ಬೆಳೆಸಿದ ಭಗವಂತ ಬ್ರಹ್ಮವಿವರ್ಧನಃ. ಎಲ್ಲಕ್ಕಿಂತ ದೊಡ್ಡ ಜೀವ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಮಾಡಿ, ವೇದ ವಿಜ್ಞಾನವನ್ನು ಬೆಳೆಸಿ, ವಿಸ್ತಾರ ಮಾಡಿದ ಭಗವಂತ ಬ್ರಹ್ಮವಿವರ್ಧನಃ
670) ಬ್ರಹ್ಮವಿತ್
ವೇದವನ್ನು ಪೂರ್ಣವಾಗಿ ತಿಳಿದವನು ಬ್ರಹ್ಮವಿತ್. ಭಾರತೀಯ ನಂಬಿಕೆಯ ಪ್ರಕಾರ ವೇದವನ್ನು ಯಾರೂ ನಿರ್ಮಾಣ ಮಾಡಿಲ್ಲ. ಹಾಗಿದ್ದರೆ ವೇದ ಹೇಗೆ ನಿರ್ಮಾಣ ಆಯಿತು ? ಪ್ರಾಚೀನರು ಹೇಳುವಂತೆ ವೇದ ನಮ್ಮ intellectual compilation ಅಲ್ಲ ಅದು intuitional compilation.  ಅಂದರೆ ಜ್ಞಾನಿಗಳಿಗೆ ತನ್ನಷ್ಟಕ್ಕೆ ಹೊಳೆಯುತ್ತದೆ, ಅದರಂತೆ ಹೇಳುತ್ತಾರೆ. ಇದನ್ನೇ ಕುಮಾರವ್ಯಾಸ "ನಾನು ಕೇವಲ ಲಿಪಿಗಾರ, ಭಗವಂತ ಹೇಳಿದ್ದನ್ನು ನಾನು ಬರೆದೆ" ಎಂದಿದ್ದಾನೆ. ನ್ಯೂಟನ್  ಬೀಳುತ್ತಿರುವ ಹಣ್ಣನ್ನು ನೋಡಿ ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದಂತೆ. ಇದೆಲ್ಲವೂ intuitional flash.
ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ವೇದೈಸ್ಚ ಸರ್ವೈರಹಮೇವ ವೇದ್ಯೋ  ವೇದಾಂತಕೃದ್ ವೇದವಿದೇವ ಚಾಹಮ್ || (ಅ-೧೫, ಶ್ಲೋ-೧೫)
ಅಂದರೆ " ವೇದಾಂತ ಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ" ಆದ್ದರಿಂದ ವೇದವನ್ನು ಸಂಪೂರ್ಣ ತಿಳಿದವನು ಭಗವಂತನೊಬ್ಬನೆ.ಇಂತಹ ಭಗವಂತ ಬ್ರಹ್ಮವಿತ್.
671) ಬ್ರಾಹ್ಮಣಃ
ನಮ್ಮಲ್ಲಿ ಜನಿವಾರ ಹಾಕಿದವರು ಬ್ರಾಹ್ಮಣರು. ಆದರೆ ನಿಜವಾದ ಬ್ರಾಹ್ಮಣ ಎಂದರೆ ವೇದವೇಧ್ಯ. (He who knows Brahman). ವೇದವನ್ನು, ಭಗವಂತನನ್ನು ತಿಳಿದವ ಬ್ರಾಹ್ಮಣ. ಆದರೆ ಭಗವಂತನನ್ನು ಮತ್ತು ವೇದವನ್ನು ಪೂರ್ಣವಾಗಿ ತಿಳಿದವ ಭಗವಂತನೊಬ್ಬನೇ! ವೇದದ ಪೂರ್ಣ ಅರ್ಥ ಭಗವಂತನನ್ನು ಬಿಟ್ಟರೆ ಇನ್ಯಾರಿಗೂ   ತಿಳಿದಿಲ್ಲ. ಆದ್ದರಿಂದ ಭಗವಂತ ಬ್ರಾಹ್ಮಣಃ 
672) ಬ್ರಹ್ಮೀ
ಬ್ರಹ್ಮ ಉಳ್ಳವನು ಬ್ರಹ್ಮೀ. ಎಲ್ಲಕ್ಕಿಂತ ಬೃಹತ್ ಆದ ಈ ವಿಶ್ವದ ಬ್ರಹ್ಮ ಭಗವಂತ ಬ್ರಹ್ಮೀ. ಈ ವಿಶ್ವವನ್ನು ನಿರ್ಮಿಸಿದ ಚತುರ್ಮುಖನ ತಂದೆ, ಇಡೀ ಜಗತ್ತಿನ ಎಲ್ಲಾ ರಹಸ್ಯಗಳನ್ನು ಸೆರೆಹಿಡಿದ ವೇದ ವಾಗ್ಮಯ ಭಗವಂತ ಬ್ರಹ್ಮೀ.  
673) ಬ್ರಹ್ಮಜ್ಞಃ
ಬ್ರಹ್ಮ (ವೇದ)ವನ್ನು ತಿಳಿದವ, ಇಡೀ ವಿಶ್ವವನ್ನು, ಜೀವಜಾತವನ್ನು ತಿಳಿದ ಭಗವಂತ ಬ್ರಹ್ಮಜ್ಞಃ.
674) ಬ್ರಾಹ್ಮಣಪ್ರಿಯಃ
ಬ್ರಹ್ಮ ಜ್ಞಾನಿಗಳಿಗೆ ಪ್ರಿಯನಾದವ ಹಾಗು ಬ್ರಹ್ಮಜ್ಞಾನಿಗಳನ್ನು ಪ್ರೀತಿಸುವ ಭಗವಂತ
ಬ್ರಾಹ್ಮಣಪ್ರಿಯಃ.

No comments:

Post a Comment