Wednesday, November 17, 2010

Vishnusahasranama 585-590

ವಿಷ್ಣು ಸಹಸ್ರನಾಮ: ಸಂನ್ಯಾಸಕೃಚ್ಛಮಶ್ಯಾಂತೋ ನಿಷ್ಠಾ ಶಾಂತಿಃ ಪರಾಯಣಮ್
585) ಸಂನ್ಯಾಸಕೃತ್
ಸನತ್ ಕುಮಾರನಾಗಿ, ನರ-ನಾರಾಯಣ ರೂಪಿಯಾಗಿ ನಮಗೆ ನಿಜವಾದ ಸನ್ಯಾಸಿಯ ಬದುಕನ್ನು ಬದುಕಿ ತೋರಿಸಿದ ಭಗವಂತ ಸಂನ್ಯಾಸಕೃತ್. ನಿಜವಾದ ಸನ್ಯಾಸ ಎಂದರೆ ಕಾಮವನ್ನು ಹಾಗು ಕ್ರೋಧವನ್ನು ಸಂಪೂರ್ಣ ಬಿಡುವುದು. ಕಾಮವೇ ಕ್ರೋಧಕ್ಕೆ ಕಾರಣ. ಈಡೇರದ ಆಸೆಯಿಂದ ಮನಸ್ಸಿನಲ್ಲಿ ಉಂಟಾಗುವ ವಿಕಾರ 'ಕೋಪ'. ಪ್ರಪಂಚ ನಾವು ಬಯಸಿದಂತೆ ಎಂದೂ ಇರುವುದಿಲ್ಲ, ಹೀಗಿರುವಾಗ ಹೀಗೇ ಆಗಬೇಕು ಎಂದು ಬಯಸುವುದು ಮೂರ್ಖತನ.ಜಗತ್ತಿನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಹಾಗೇ ಸ್ವೀಕರಿಸುವುದು ಧರ್ಮ. ಸಮುದ್ರದಲ್ಲಿ ಅಲೆಗಳು, ತರಂಗಗಳು ನಿರಂತರ ಹಾಗು ಅನಿವಾರ್ಯ. ಆದ್ದರಿಂದ ತೆರೆಯ ಜೊತೆಗೆ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಬೇಕೇ ಹೊರತು ತೆರೆ ನಿಂತ ಮೇಲೆ ಸ್ನಾನ ಮಾಡುತ್ತೇನೆ ಎಂದರಾಗದು. ಬದುಕು ಕೂಡಾ ಅಷ್ಟೇ; ಪ್ರಪಂಚ ಸಮುದ್ರದ ಅಲೆಗಳಂತೆ, ಜೀವನದಲ್ಲಿ ಏನು ಘಟಿಸಿತೋ ಅದಕ್ಕೆ ಒಗ್ಗಿಕೊಂಡು ಬದುಕಬೇಕೇ ಹೊರತು ಜಗತ್ತನ್ನು ನಮ್ಮ ಇಚ್ಚೆಯಂತೆ ಬಯಸುವುದು ತಪ್ಪು. ಹೀಗೇ ಜಗತ್ತಿನ ಅಲೆಗಳಿಗೆ ಒಗ್ಗಿಕೊಂಡು ಬದುಕುವುದು ಒಬ್ಬ ಸಂಸಾರಿಯ ಸನ್ಯಾಸ! ಇಂತದ್ದು ಬೇಕು ಎಂದು ಬಯಸದೇ ಇದ್ದದ್ದರಲ್ಲಿ ಖುಷಿ ಪಡುವುದು, ಏನೇ ಬಂದರೂ ದೃತಿಗೆಡದೆ, ಬದುಕಿನ ಸಂಪೂರ್ಣ ಹೊಣೆಗಾರಿಕೆಯನ್ನು ಭಗವಂತನಿಗೆ ಬಿಟ್ಟುಬಿಡುವುದು ಸನ್ಯಾಸ. ಇಡೀ ಬದುಕನ್ನು, ಸರ್ವಸ್ವವನ್ನು, ಸರ್ವ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸನ್ಯಾಸ.   
586) ಶಮಃ
ಮನಸ್ಸನ್ನು  ಸದಾ ಭಗವಂತನಲ್ಲಿಡುವುದು, ಯಾವ ಚಿಂತೆ ಇಲ್ಲದೆ ನೆಮ್ಮದಿಯಿಂದಿರುವುದು, ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಧರ್ಮ.ಒಳ್ಳೆಯ ವ್ಯಕ್ತಿತ್ವ ಹೊಂದಿದ ಅಥವಾ ಒಳ್ಳೆಯ ಜೀವ ಸ್ವಭಾವವಿರುವವರಿಗೆ ಇಂತಹ ಗುಣಗಳನ್ನು ದಯಪಾಲಿಸುವ ಭಗವಂತ ಶಮಃ. ಇದಕ್ಕಾಗಿ ಸನ್ಯಾಸಿಯಾಗಬೇಕೆಂದಿಲ್ಲ, ಗೃಹಸ್ಥ ಕೂಡಾ ಅನುಸರಿಸಬುದಾದ ಗುಣವಿದು. ಇದಕ್ಕೆ ಉತ್ತಮ ಉದಾಹರಣೆ ಧರ್ಮ ವ್ಯಾದ, ಮಾಂಸ ಮಾರಿ ಜೀವಿಸುತ್ತಿದ್ದ ವ್ಯಾದನಲ್ಲಿ ಇಂತಹ ಗುಣವಿತ್ತು. ಲೋಕದಲ್ಲಿ ನಡೆಯುವ ಪ್ರತಿಯೊಂದು  ಘಟನೆಯ ಹಿಂದೆ ಒಂದು ಕಾರಣವಿರುತ್ತದೆ, ಭಗವಂತ ಎಂದೂ ಕೆಟ್ಟದ್ದನ್ನು ಕೊಡುವುದಿಲ್ಲ,ಆತ ಕೊಡುವುದೆಲ್ಲ ಪ್ರಸಾದ ಎಂದು ಸ್ವೀಕರಿಸುವ ಗುಣ ನಮ್ಮಲ್ಲಿರಬೇಕು ಅಷ್ಟೇ.      
587) ಶಾಂತಃ
'ಶಂ' ಎಂದರೆ ಆನಂದ; 'ಅಂತ' ಎಂದರೆ ತುತ್ತತುದಿ. ಆನಂದದ ಪರಾಕಾಷ್ಟೆಯಲ್ಲಿರುವ ಭಗವಂತ ಶಾಂತಃ 
588) ನಿಷ್ಠಾ
ಜಗತ್ತಿನಲ್ಲಿರುವ ಎಲ್ಲವೂ ಏಲ್ಲಿ ಕೊನೆಗೊಳ್ಳುತ್ತದೋ, ಯಾವುದು ಸರ್ವಾಧಾರವೋ ಅದು ನಿಷ್ಠಾ.
589) ಶಾಂತಿಃ
ಜ್ಞಾನಾನಂದ ಭಲದ ಪರಿಪೂರ್ಣ ಸಮಷ್ಟಿ ಭಗವಂತ ಶಾಂತಿಃ. ಈ ಕಾರಣಕ್ಕಾಗಿ ವೇದಗಳಲ್ಲಿ ಮೊದಲಿಗೆ ಶಾಂತಿ  ಮಂತ್ರ ಪಠನೆ ಮಾಡುತ್ತೇವೆ.
590) ಪರಾಯಣಮ್
ಪರಾಯಣಮ್ ಎಂದರೆ ಸರ್ವೋತ್ಕ್ರುಷ್ಟವಾದ ತುತ್ತ ತುದಿ, ಕೊನೆಯ ಆಸರೆ(last destination). ಎಲ್ಲಾ ಮೆಟ್ಟಿಲುಗಳನ್ನು ಹತ್ತಿ ಕೊನೆಗೆ ತಲುಪುವ ತುತ್ತ ತುದಿ. 

No comments:

Post a Comment