Thursday, November 11, 2010

Vishnu sahasranama 505-509

ವಿಷ್ಣು ಸಹಸ್ರನಾಮ: ಸೋಮಪೋಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ
505) ಸೋಮಪಃ
ಹಿಂದೆ ಯಜ್ಞದಲ್ಲಿ ಸೋಮಲತೆ ಎನ್ನುವ ಬಳ್ಳಿಯಿಂದ ತಯಾರಿಸಿದ ಸೋಮರಸವನ್ನು ಆಹುತಿಯಾಗಿ ಕೊಡುತ್ತಿದ್ದರು. ಹೀಗೆ ಸೋಮರಸವನ್ನು ಆಹುತಿಯಾಗಿ ಕೊಟ್ಟು ಮಾಡುವ ಯಾಗವನ್ನು ಸೋಮಯಾಗ ಎನ್ನುತ್ತಾರೆ. ಆದರೆ ಈಗ ಸೋಮಲತೆ ಎನ್ನುವ ಬಳ್ಳಿಯ ಪರಿಚಯವೇ ಮರೆತು ಹೋಗಿದೆ.ನದಿ ತೀರದಲ್ಲಿ ಹೇರಳವಾಗಿ ಬೆಳೆಯುವ ಈ ಲತೆಗೆ ಅತ್ಯಂತ ಅಮೂಲ್ಯವಾದ  ಔಷಧೀಯ ಗುಣವಿದೆ. ವೇದ ಕಾಲದಲ್ಲಿ ಇದಕ್ಕೆ ಸರಿಸಾಟಿಯಾದ ಔಷಧವೇ ಇರಲಿಲ್ಲ. ಈ ಕಾರಣಕ್ಕಾಗಿ ಹಿಂದೆ ಈ ಲತೆಯನ್ನು ಯಜ್ಞದಲ್ಲಿ ಬಳಸುತ್ತಿದ್ದರು. ಯಜ್ಞದಲ್ಲಿ ಬಳಸಿ ಉಳಿದ ಸೋಮರಸವನ್ನು ಪಾನ ಮಾಡುತ್ತಿದ್ದರು. ಇದನ್ನು ಸೋಮಪಾನ ಎನ್ನುತ್ತಾರೆ. ಇಲ್ಲಿ ಸೋಮಪಾನ ಮತ್ತು ಸುರಪಾನ ಒಂದೇ ಅಲ್ಲ. "ಸೋಮಪಾನ ಮಾಡು ಆದರೆ ಎಂದೂ ಸುರಪಾನ ಮಾಡಬೇಡ" ಎಂದು ವೇದಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಸೋಮಯಜ್ಞವನ್ನು ಯಜಮಾನನಲ್ಲಿ ಕುಳಿತು ಮಾಡಿಸುವ ಹಾಗು ಅಗ್ನಿಯಲ್ಲಿ ಸನ್ನಿಹಿತನಾಗಿ ಸೋಮರಸ ಪಾನಮಾಡುವ ಭಗವಂತ ಸೋಮಪಃ.
ಚಂದ್ರನನ್ನು ಸೋಮ ಎನ್ನುತ್ತಾರೆ. ಆತ ಎಲ್ಲಾ ಲತೆಗಳ ಒಡೆಯ. ಚಂದ್ರನ ಮುಖೇನ ಲತೆಗೆ ಇಂತಹ ಅಮೂಲ್ಯ ಗುಣವನ್ನು ದಯಪಾಲಿಸಿದ ಭಗವಂತ ಸೋಮಪಃ.
ಸೋಮ ಎಂದರೆ 'ರಸ' ಎನ್ನುವ ಅರ್ಥವಿದೆ. ನಾವು ನಿತ್ಯ ಪೂಜೆ ಮಾಡುವಾಗ ಹೇಳುವ ಒಂದು ಮಂತ್ರವಿದೆ. "ವಾಯ ವಾಯಾಹಿ ದರ್ಶತೇಮೇ ಸೋಮಾಲಂಕೃತಾಃ ತೇಷಾಂ ಪಾಹಿ ಶುಚೀ ಭವಂ" ಅಂದರೆ " ಓ ವಾಯುದೇವನೇ ಬಾ, ನಿನಗೆ ಇಲ್ಲಿ ಸೋಮವನ್ನಿಟ್ಟಿದೇನೆ,ನಮ್ಮ ಕರೆಯನ್ನು ಮನ್ನಿಸಿ ಬಾ. ಬಂದು ಈ ಸೋಮವನ್ನು ಪಾನ ಮಾಡು". ಯಾರೂ ಪೂಜೆಯಲ್ಲಿ ಸೋಮರಸವನ್ನಿಡುವುದಿಲ್ಲ ಆದರೆ ಪೂಜೆಯ ಪ್ರಾರಂಭದಲ್ಲಿ ಈ ಮಂತ್ರವನ್ನು ಹೇಳುತ್ತಾರೆ! ಇಲ್ಲಿ ಸೋಮರಸ ಎಂದರೆ ಭಕ್ತಿಯಿಂದ ಕರಗಿ ಭಗವಂತನ ಕಡೆಗೆ ಹರಿಯುವ ಮನಸ್ಸು. ಸೋಮಪಃ ಎಂದರೆ ಭಕ್ತಿಯಿಂದ ಕರಗಿದ, ಭಕ್ತಿ ರಸವಾದ ನಮ್ಮ ಮನಸ್ಸಿನ ಪೂಜೆಯನ್ನು ಸ್ವೀಕರಿಸಿ ರಕ್ಷಣೆ ಮಾಡುವ ಭಗವಂತ.
ಮನೋಭಿಮಾನಿ ದೇವತೆಯಾದ ಶಿವ ಕೂಡಾ ಸೋಮ. ಏಕೆಂದರೆ ಆತ 'ಉಮೆಯಿಂದ ಸಹಿತನಾದವನು' ಅದಕ್ಕಾಗಿ ಆತನನ್ನು ಸೋಮೇಶ್ವರ ಎನ್ನುತ್ತಾರೆ. ಉಮಾಪತಿ ಶಿವ ಮನಸ್ಸನ್ನು ರಕ್ಷಣೆ ಮಾಡುವವ. ಮನಸ್ಸಿನ ಅಭಿಮಾನಿಯಾದ ರುದ್ರ-ಚಂದ್ರಾದಿಗಳನ್ನು ರಕ್ಷಣೆ ಮಾಡುವ ಶಕ್ತಿಯಾದ ಭಗವಂತ ಸೋಮಪಃ.
'ಸೋಮರು' ಎಂದರೆ ಉತ್ಕೃಷ್ಟವಾದ ಜ್ಞಾನ ಉಳ್ಳವರು. ಇಂತಹ ಜ್ಞಾನಿಗಳಲ್ಲಿ ಸದಾ ಸನ್ನಿಹಿತನಾಗಿದ್ದು ರಕ್ಷಣೆ ಮಾಡುವ ಭಗವಂತ ಸೋಮಪಃ. 
506) ಅಮೃತಪಃ
ಸಮುದ್ರ ಮಥನ ಕಾಲದಲ್ಲಿ ಅಮೃತಪಾನಕ್ಕೆ ದೇವತೆಗಳಿಗೆ ನೆರವು ಮಾಡಿ, ದುಷ್ಟ ರಾಕ್ಷಸರ ಸಂಹಾರ ಮಾಡಿದ ಭಗವಂತ ಮೃತಪಃ. ದೇವತಗಳನ್ನು, ಮುಕ್ತರನ್ನು, ಬ್ರಹ್ಮ-ವಾಯುವನ್ನು ಸಲಹುವ ಭಗವಂತ ಮೃತಪಃ.
507) ಸೋಮಃ
ಅರಿವಿನ ನೆಲೆ ಹಾಗು ಸೌಮ್ಯ ಸ್ವಭಾವದ ಭಗವಂತ ಸೋಮಃ, ಸೋಮರಸದಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮನೋನಿಯಾಮಕ ಚಂದ್ರ ಹಾಗು ರುದ್ರರಲ್ಲಿ ಸನ್ನಿಹಿತನಾಗಿದ್ದಾನೆ. ಪವಮಾನನೊಳಗೆ(ಉತ್ಕೃಷ್ಟ ಜ್ಞಾನ ಸ್ವರೂಪನೊಳಗೆ) ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಸೋಮಃ. 
508) ಪುರುಜಿತ್
ಅತ್ಯಂತ ಬಲಿಷ್ಠವಾದ ಸಂಗತಿಗಳನ್ನು(ಭಲ ಮತ್ತು ಜ್ಞಾನ) ಗೆದ್ದು, ಎಲ್ಲಕ್ಕಿಂತ ಎತ್ತರದಲ್ಲಿರುವ, ಧರ್ಮಕ್ಕೆ ವಿರುದ್ಧವಾಗಿ ನಿಲ್ಲುವ ತಾಮಸ ಶಕ್ತಿಯಾದ ಅಸುರ ವೃಂದವನ್ನು ಸೋಲಿಸಿ, ಧರ್ಮ ಸ್ಥಾಪನೆ ಮಾಡಿದ ಭಗವಂತ ಪುರುಜಿತ್.
509) ಪುರುಸತ್ತಮಃ
ಪುರು ಎಂದರೆ ದೇಹ. ದೇಹದೊಳಗಿರುವ ಎಲ್ಲಾ ಶ್ರೇಷ್ಠ ಶಕ್ತಿಗಳನ್ನು (ಪುರುಗಳು ಅಂದರೆ ತತ್ವಾಭಿಮಾನಿ ದೇವತೆಗಳು) ನಿಯಂತ್ರಿಸುವ, ಅವರಲ್ಲಿ ಸತ್ತಮನಾಗಿರುವ, ಜ್ಞಾನಿಗಳಲ್ಲಿ ಶ್ರೇಷ್ಠ  ಜ್ಞಾನಿ ಭಗವಂತ ಪುರುಸತ್ತಮಃ.

No comments:

Post a Comment