Friday, November 12, 2010

Vishnu sahasranama 519-522

ಅಂಭೋನಿಧಿರನಂತಾತ್ಮಾ ಮಹೋದಧಿಶಯೋಂತಕಃ
519) ಅಂಭೋನಿಧಿಃ
'ಅಂಭೋನಿಧಿ' ಎಂದರೆ ನೀರಿನ ನೆಲೆ, ಅಂದರೆ ಸಮುದ್ರ. ಸಮುದ್ರದಷ್ಟು ವಿಶಾಲವಾದ ನೀರಿನ ನೆಲೆ ಇನ್ನೊಂದಿಲ್ಲ, ಇಂತಹ ಕಡಲಿನಲ್ಲಿ ಸನ್ನಿಹಿತನಾಗಿರುವ ಭಗವಂತ ಅಂಭೋನಿಧಿಃ. ಆದರೆ ಇದು ಕೇವಲ ಮೇಲ್ನೋಟದ ಅರ್ಥ. ಎಲ್ಲಕ್ಕಿಂತ ವಿಲಕ್ಷನಾದ, ಎಲ್ಲಾ ದೋಷಗಳಿಂದ ದೂರವಾದ, ಸರ್ವಗುಣಪೂರ್ಣ, 'ಅ'ಕಾರ ವಾಚ್ಯ ಭಗವಂತನನ್ನು ಹೃದಯದಲ್ಲಿ ಭರಿಸಿದವರು 'ಅಂಭಸ್ಸುಗಳು' (ದೇವತೆಗಳು, ಋಷಿಗಳು, ಪಿತೃಗಳು, ಮಾನವರು ಮತ್ತು ಅಸುರರು). ಹೀಗೆ ತಮ್ಮ ಹೃದಯದಲ್ಲಿ ಭಗವಂತನನ್ನು ಹೊತ್ತ ಅಂಭಸ್ಸುಗಳಿಗೆ 'ನಿಧಿ'ಯಾದ  ಭಗವಂತ ಅಂಭೋನಿಧಿಃ.
ವಿಶೇಷವಾಗಿ ಭಗವಂತನನ್ನು ಹೃದಯದಲ್ಲಿ ಧರಿಸಿದವನು ಆಂಜನೇಯ.ಇದನ್ನೇ ಕಲಾವಿದರು ಆಂಜನೇಯನ ಎದೆ ಬಿಚ್ಚಿ ಅದರೊಳಗೆ ರಾಮ-ಸೀತೆಯನ್ನು ತೋರಿಸುವಂತೆ ಚಿತ್ರಿಸುತ್ತಾರೆ. ಇಂತಹ ಆಂಜನೇಯ 'ಅಂಭ'. ಆತನ ನಿಧಿ, ಲಕ್ಷ್ಮಿಯ ಅತಿದೊಡ್ಡ ಸಂಪತ್ತು, ಕ್ಷೀರ ಸಾಗರವಾಸಿ ಭಗವಂತ ಅಂಭೋನಿಧಿಃ.
520) ಅನಂತಾತ್ಮಾ
ಭಗವಂತನ ಸ್ವರೂಪ ಅನಂತವಾದದ್ದು. ಏಕೆಂದರೆ ಆತ ಪ್ರಪಂಚದಲ್ಲಿ ಕಾಲತಃ, ದೇಶತಃ, ಗುಣತಃ ಅನಂತ. ಎಲ್ಲಾ ಕಾಲದಲ್ಲೂ 'ಇರುವಿನ ಅರಿವಿನೊಂದಿಗೆ' ಅನಾದಿ ಅನಂತ ಕಾಲದಲ್ಲಿರುವ ಭಗವಂತ ಸರ್ವವ್ಯಾಪಿ, ಸರ್ವಶಕ್ತ  ಹಾಗು ಸರ್ವ ಗುಣಪೂರ್ಣ. ಅನಂತ ಜೀವರನ್ನು ನಿಯಾಮಿಸುವ,ಅನಂತ ಜೀವರ ಒಡೆಯ, ಮುಕ್ತರ(ಅನಂತರು) ಸ್ವಾಮಿ ಭಗವಂತ ಅನಂತಾತ್ಮಾ.
521) ಮಹೋದಧಿಶಯಃ
'ಮಹೋದಧಿ' ಎಂದರೆ ದೊಡ್ಡ ಸಮುದ್ರ. ಸಪ್ತಸಾಗರ(ಉಪ್ಪು, ಕಬ್ಬಿನಹಾಲು, ಸುರ, ಬೆಣ್ಣೆ/ತುಪ್ಪ, ಮೊಸರು, ಕ್ಷೀರ ಹಾಗು ಅಮೃತ)ಗಳಲ್ಲಿ ಒಂದಾದ ಕ್ಷೀರಸಾಗರಶಾಹಿ ಭಗವಂತ, ಪ್ರಳಯ ಸಮುದ್ರದಲ್ಲಿ ಪವಡಿಸುವ ಹೃತ್ಕಮಲ(ಹೃದಯ ಸಮುದ್ರ) ಮಧ್ಯ ನಿವಾಸಿ.
ಇನ್ನು ನಮ್ಮ ಪಿಂಡಾಂಡವನ್ನು ನೋಡಿದಾಗ, ಇಲ್ಲಿ ಏಳು ಶಕ್ತಿಚಕ್ರಗಳಿವೆ(spiritual centers). ಇದರಲ್ಲಿ ಮೊದಲನೆಯದ್ದು ನಮ್ಮ ಮಲ-ಮೂತ್ರದ್ವಾರದ ಮದ್ಯದಲ್ಲಿರುವ 'ಮೂಲಾಧಾರಚಕ್ರ', ಇದೇ 'ಉಪ್ಪಿನ ಸಮುದ್ರ'.ಎರಡನೆಯದ್ದು  ಹೊಕ್ಕುಳಿನಿಂದ ಸ್ವಲ್ಪ ಕೆಳಗಿರುವ 'ಸ್ವಾಧಿಷ್ಟಾನಚಕ್ರ'; ಇದು 'ಕಬ್ಬಿನಹಾಲಿನ ಸಮುದ್ರ'. ಇದು ಬದುಕಿನಲ್ಲಿ ಐಹಿಕ ಸುಖದ ಖುಷಿ ಕೊಡುವ ಚಕ್ರ. ಇದಕ್ಕೂ ಮೇಲೆ ಹೊಕ್ಕುಳಿನ ಭಾಗದಲ್ಲಿ 'ಮಣಿಪುರ ಚಕ್ರವಿದೆ. ಇದು ಕಾಮದ ಅಮಲಿನ ಸುಖ ಕೊಡುವ 'ಸುರ ಸಮುದ್ರ'. ಇದಕ್ಕೂ ಮೇಲೆ 'ಅನಾಹತ ಚಕ್ರ'. ಇದನ್ನೇ ತುಪ್ಪ/ಬೆಣ್ಣೆಯ ಸಮುದ್ರ ಅಥವಾ ಹೃದಯ ಸಮುದ್ರ ಎನ್ನುತ್ತಾರೆ. ಇಲ್ಲಿಂದ ಮೇಲೆ ಅಧ್ಯಾತ್ಮದ ವಿಶ್ವ (Spiritual world)  ತೆರೆದುಕೊಳ್ಳುತ್ತದೆ. ಮೊತ್ತ ಮೊದಲು ಭಕ್ತಿಯ ನವನೀತವನ್ನು ಹೃದಯದಲ್ಲಿ ತುಂಬಿ ಭಗವಂತನಿಗೋಸ್ಕರ ಕಾಯುವ  ಸಾಧನೆ ಪ್ರಾರಂಭವಾಗುವುದೇ ಇಲ್ಲಿಂದ. ಈ ಹೃದಯ ಸಮುದ್ರ ಶಾಹಿ ಭಗವಂತನನ್ನು ಮಹೋದಧಿಶಯಃ ಎಂದು ಕರೆದಿದ್ದಾರೆ. ಇನ್ನೂ ಮೇಲಕ್ಕೆ ಹೋದರೆ 'ವಿಶುದ್ಧಿಚಕ್ರ'. ಅಥವಾ ಮೊಸರಿನ ಸಮುದ್ರ. ಇಲ್ಲಿ ಜ್ಞಾನಿಯು ತ್ರಿಕಾಲದರ್ಶಿಯಾಗುತ್ತಾನೆ. ಅದರಿಂದಾಚೆಗೆ ಕ್ಷೀರಸಾಗರ ಅಥವಾ ಆಜ್ಞಾಚಕ್ರ. ಇದು ಭ್ರೂ- ಮಧ್ಯದಲ್ಲಿ ಭಗವಂತನನ್ನು ಕಾಣುವಂತದ್ದು. ಇದೇ ಕ್ಷೀರ ಶಾಯಿಯಾದ ಭಗವಂತನ ದರ್ಶನ. ಆತನೇ ಮಹೋದಧಿಶಯಃ. ಇದರಿಂದಾಚೆಗೆ ಸಹಸ್ರಾರ ಅಥವಾ ಅಮೃತಸಾಗರ. ಇವು ಮನುಷ್ಯನ ಬದುಕನ್ನು ನಿರ್ಧರಿಸುವ ಏಳು ಮಹಾಸಮುದ್ರಗಳು.ಇಂತಹ ಅಂತರಂಗದ ಸಮುದ್ರದಲ್ಲಿ ನೆಲೆಸಿ ನಮ್ಮನ್ನು ಎತ್ತರಕ್ಕೇರಿಸುವ ಭಗವಂತ ಮಹೋದಧಿಶಯಃ.
522) ಅಂತಕಃ
ಸಮಸ್ತ  ವಿಶ್ವವನ್ನು ಸಂಹಾರ ಮಾಡಿ ಪ್ರಳಯ ಸಮುದ್ರದಲ್ಲಿ ಪವಡಿಸುವ ಆನಂದಪ್ರದ ಭಗವಂತ ಅಂತಕಃ.

No comments:

Post a Comment