Wednesday, November 17, 2010

Vishnu sahasranama 579-584

ವಿಷ್ಣು ಸಹಸ್ರನಾಮ:  ತ್ರಿಸಾಮಾ ಸಾಮಗಃ ಸಾಮ ನಿರ್ಬಾಣಂ ಭೇಷಜಂ ಭಿಷಕ್
579) ತ್ರಿಸಾಮಾ
ಈ ಹಿಂದೆ ಹೇಳಿದಂತೆ ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಮೂರು ಹೊತ್ತು ಆಹುತಿ ಕೊಡುತ್ತಿದ್ದರು. ಮೂರು ಹೊತ್ತು ದೇವರನ್ನು ಋಗ್ವೇದದ ಮಂತ್ರಗಳಿಂದ ಸ್ತೋತ್ರ ಮಾಡುತ್ತಿದ್ದರು, ಅದಕ್ಕೆ 'ಶಸ್ತ್ರ' ಎಂದು ಹೆಸರು. ಬೆಳಿಗ್ಗೆ  ಅಷ್ಟ ವಸುಗಳಿಗೆ ಸಂಬಂಧಪಟ್ಟ 'ವಾಸವಸಾಮ'; ಮಧ್ಯಾಹ್ನ   ಹನ್ನೊಂದು ರುದ್ರರಿಗೆ ಸಂಬಂಧಪಟ್ಟ 'ರೌದ್ರಸಾಮ'. ಸಂಜೆ  ಹನ್ನೆರಡು ಮಂದಿ ಆದಿತ್ಯರಿಗೆ ಸಂಬಂಧಪಟ್ಟ 'ಆದಿತ್ಯಸಾಮ'. ಹೀಗೆ ಮೂರು ಹೊತ್ತು ಮೂರುವಿಧದ ಸಾಮದಿಂದ ಹೊಗಳಲ್ಪಡುವ  ಭಗವಂತ ತ್ರಿಸಾಮಾ.
ಮೂರು ಸ್ವಸ್ತುಗಳನ್ನು (ಸತ್ವ ರಜಸ್ಸು ತಮಸ್ಸು ಅಥವಾ ಮಣ್ಣು, ನೀರು, ಬೆಂಕಿ) ಸಮೀಕರಿಸಿ ಸಮಸ್ತ ಪ್ರಪಂಚವನ್ನು ಸೃಷ್ಟಿ ಮಾಡಿದ ಭಗವಂತ ತ್ರಿಸಾಮ.
580) ಸಾಮಗಃ
ಸಾಮವೇದದ ಮಂತ್ರವನ್ನು ಗಾನಬದ್ಧವಾಗಿ ಹಾಡುವವರು ಸಾಮಗರು. ಭಗವಂತ ಮೊದಲು ಹಯಗ್ರೀವ ರೂಪದಲ್ಲಿ ಸಮಸ್ತ ವೇದವನ್ನು ಉಚ್ಚಾರ ಮಾಡಿದವ. ಹೀಗೆ ಸಾಮವನ್ನು ಗಾನಮಾಡಿ ಆವಿಷ್ಕಾರ ಮಾಡಿದ ಭಗವಂತ ಸಾಮಗಃ.
581) ಸಾಮ
ವೇದದಲ್ಲಿ ಸಾಮವೇದ ನನಗೆ ಬಲು ಇಷ್ಟ, ಅದಕ್ಕಾಗಿ ಅದರಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದೇನೆ ಎಂದು ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ:
ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ (ಅ-೧೦, ಶ್ಲೋ-೨೨)
ಇಲ್ಲಿ ಸಾಮ ಎಂದರೆ ಎಲ್ಲೆಡೆಯು ಸಮನಾಗಿದ್ದು ಎಂದರ್ಥ, ವೇದ ಎಂದರೆ ಜ್ಞಾನ ರೂಪನಾದ್ದರಿಂದ 'ಸಾಮವೇದ' ಎನ್ನಿಸಿ ಸಾಮವೇದದಲ್ಲಿದ್ದೇನೆ ಎಂದರ್ಥ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಕಾರಣವೇನೆಂದರೆ, ವೇದದಲ್ಲಿ ತಾರತಮ್ಯವಿಲ್ಲ ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ! ಸಾಮ ವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಭಗವಂತನಿಗೆ ಅತಿ ಪ್ರಿಯನಾದ ಪ್ರಾಣ ದೇವರ ಹಾಡು 'ಸಾಮಗಾನ' ಭಗವಂತನಿಗೆ ಅತೀ ಇಷ್ಟ.
ಸಾಮದಲ್ಲಿ ಇನ್ನೊಂದು ವಿಶೇಷವಿದೆ. ಋಗ್ವೇದ ಮತ್ತು ಯಜುರ್ವೇದದಲ್ಲಿ  ಮಂತ್ರಗಳ ಹಾಗು ಶಬ್ಧಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ಧದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ (Exclusive quality). ಶಬ್ಧಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಆದ್ದರಿಂದ 'ಸಾಮ' ಭಗವಂತನ ಅನ್ವರ್ಥ ನಾಮ.
582) ನಿರ್ಬಾಣಂ
ಪಾಂಚಭೌತಿಕ ಶರೀರವಿಲ್ಲದ ಜ್ಞಾನಾನಂದಮಯ ಸ್ವರೂಪ ಭಗವಂತ ನಿರ್ಬಾಣಂ.
583) ಭೇಷಜಮ್
ಸಂಸಾರವೆಂಬ ರೋಗಕ್ಕೆ ಏಕಮಾತ್ರ ಮದ್ದು ಭಗವಂತ  ಭೇಷಜಮ್
584) ಭಿಷಕ್
ಸರ್ವ ರೋಗಗಳಿಗೆ ಮದ್ದು ನೀಡುವ ವೈದ್ಯರ  ವೈದ್ಯ.

No comments:

Post a Comment