Monday, November 15, 2010

Vishnusahasranama 567-570

ವಿಷ್ಣು ಸಹಸ್ರನಾಮ:  ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ
567) ಆದಿತ್ಯಃ
ಭೂಮಿಯಲ್ಲಿ ಪ್ರತಿಯೊಂದು ಜೀವದೊಳಗೆ ಅಂತರ್ಯಾಮಿಯಾಗಿರುವ ಭಗವಂತನೇ ಸೂರ್ಯ ಮಂಡಲದಲ್ಲಿ ತುಂಬಿ ಸೂರ್ಯ ಕಿರಣಗಳ ಮೂಲಕ ಶಕ್ತಿಪಾತ ಮಾಡುತ್ತಿದ್ದಾನೆ. ಆದಿತ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಆದಿತ್ಯಃ.
568) ಜ್ಯೋತಿರಾದಿತ್ಯಃ
ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆ ಅದರ ಮೂಲ ಭಗವಂತ. ಗೀತೆಯಲ್ಲಿ ಹೇಳಿದಂತೆ: 
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇ s ಖಿಲಮ್ |
ಯಚ್ಚಂದ್ರಮಸಿ  ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ || (ಅ-೧೫ ಶ್ಲೋ-೧೨)
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನ ಬೆಳಕೆಂದು ತಿಳಿ".  ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ, ಬೆಳಕಿನ ಮೂಲ ಕಾರಣಗಳಾದ ಸೂರ್ಯಾದಿಗಳಲ್ಲಿ ತುಂಬಿದ ಜ್ಞಾನ ಮೂರ್ತಿ ಭಗವಂತ ಜ್ಯೋತಿರಾದಿತ್ಯಃ
569) ಸಹಿಷ್ಣುಃ
ಭಗವಂತ ಅಪರಾಧಗಳನ್ನು ಸಹಿಸುವ ಕರುಣಾಮೂರ್ತಿ. ನಾವು ಕೆಲವೊಮ್ಮೆ ದೇವರನ್ನು ತಪ್ಪಾಗಿ ತಿಳಿಯುತ್ತೇವೆ, ಬಯ್ಯುತ್ತೇವೆ, ತಪ್ಪು ಉಪಾಸನೆ ಮಾಡುತ್ತೇವೆ.ಆದರೆ ಆತ ಭಕ್ತರ ಸರ್ವಾಪರಾಧವನ್ನು ಮನ್ನಿಸುವ ಮಹಾ ಸಹಿಷ್ಣು, ಯಾರಾದರು ಅನನ್ಯ ಭಕ್ತಿಯಿಂದ ಕರೆದಾಗ ಅವರ ಸರ್ವಾಪರಾಧವನ್ನು ಮನ್ನಿಸುವ ಕರುಣಾಮೂರ್ತಿ.ಆದರೆ ತಪ್ಪುಮಾಡಿದವರ ತಪ್ಪನ್ನು ಭಗವಂತ ಕ್ಷಮಿಸುವುದಿಲ್ಲ. ಏಕೆಂದರೆ ಕ್ಷಮೆ ನಮ್ಮನ್ನು ಕೆಡಿಸಬಹುದು ಎನ್ನುವ ಕಾರುಣ್ಯ ಭಗವಂತನದ್ದು.     
570) ಗತಿಸತ್ತಮಃ
ನಮ್ಮ ಜೀವದ ಗತಿಯನ್ನರಿತ, ಎಲ್ಲರಿಗಿಂತ ಎತ್ತರದಲ್ಲಿರುವ ಕಾರುಣ್ಯಮೂರ್ತಿ.'ಗತಿ' ಎಂದರೆ ನಾವು ಹೋಗಿ ಸೇರಬೇಕಾದ ತಾಣ. ಗಮ್ಯವಾದ ಸ್ಥಾನದಲ್ಲಿ ಶ್ರೇಷ್ಠವಾದ ಹಿರಿಯ ತಾಣ ಭಗವಂತ ಗತಿಸತ್ತಮಃ.

No comments:

Post a Comment