Wednesday, November 24, 2010

Vishnu sahasranama 698-702

ವಿಷ್ಣು ಸಹಸ್ರನಾಮ:  ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ
698) ವಸುಪ್ರದಃ
ಈ ನಾಮ ಒಂದೇ ಕಡೆ ಎರಡು ಸಾರಿ ಬಂದಿದೆ. ವ +ಸು+ಪ್ರದ; ಇಲ್ಲಿ 'ವ' ಅಂದರೆ ಜ್ಞಾನ, 'ಸು' ಎಂದರೆ ಸುಖ ಅಥವಾ ಆನಂದ. ಆದ್ದರಿಂದ ಮ್ಮೊಳಗಿನಿಂದ ಅರಿವಿನ ಆನಂದವನ್ನು ಅರಳಿಸುವ ಭಗವಂತ ವಸುಪ್ರದಃ. ಒಮ್ಮೆ ನಮ್ಮ ಅಂತರಂಗದ ಅರಿವು ತೆರೆದುಕೊಂಡಾಗ, ಹೊರಗಿನ ಯಾವ ಸಲಕರಣೆಯೂ ಬೇಡ, ಯಾವುದರ ನೆರವೂ ಬೇಡ, ಯಾವ ಪುಸ್ತಕವೂ ಬೇಡ, ಯಾವ ಓದೂ ಬೇಡ. ಮನಸ್ಸಿನ ಈ ಸ್ಥಿತಿಯಲ್ಲಿ ನಮಗೆ ಅಧ್ಯಾತ್ಮದ ಮೇಲೆ ಅಧಿಕಾರ ಬರುತ್ತದೆ. ಇದು ನಮ್ಮ ಹೃದಯ ಮಾತನಾಡುವ ಅದ್ಬುತ  ಸ್ಥಿತಿ. ಇಂತಹ ಸ್ಥಿಯಲ್ಲಿ ನಮಗೆ ಅಧ್ಯಾತ್ಮದ ಬಗ್ಗೆ ಬರೆಯುವ ಹಾಗು ಮಾತನಾಡುವ ಶಕ್ತಿ ಬರುತ್ತದೆ. ಹೀಗೆ ನಮಗೆ ನಮ್ಮ ಹೃದಯದಿಂದ ಅರಿವು ಆನಂದವಾಗಿ ಚಿಮ್ಮುವ  ಸ್ಥಿತಿಯನ್ನು ಕೊಡುವ ಭಗವಂತ ವಸುಪ್ರದಃ. 
699) ವಾಸುದೇವಃ
ವಾಸು+ದೇವ, ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ; ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ)  ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ. 
700) ವಸುಃ
ಭಗವಂತ ಸರ್ವೋತ್ಕೃಷ್ಟವಾದ ಜ್ಞಾನಾನಂದ ಸ್ವರೂಪ. ನಮಗಿರುವ ಆನಂದ ಒಂದು ಸೂಕ್ಷ್ಮ ಬಿಂದು ಹಾಗು ಅದು ದುಃಖದ ಜೊತೆಗಿರುವ ಆನಂದ, ಆದರೆ ಭಗವಂತ ಎಂದೂ ದುಃಖಸ್ಪರ್ಶವಿಲ್ಲದ, ಎಂದೂ ಅಳಿವಿರದ, ಅನಂತ ಜ್ಞಾನಾನಂದ ಸ್ವರೂಪ.      
701) ವಸುಮನಾಃ
ಜ್ಞಾನಾನಂದ ಸ್ವರೂಪಭೂತವಾದ ಮನಸ್ಸುಳ್ಳ ಭಗವಂತ ವಸುಮನಾಃ.
702) ಹವಿಃ
'ಹವನ' ಎಂದರೆ ಆಹುತಿ; ಯಾರಿಗೋಸ್ಕರ ನಾವು ಆಹುತಿ ಕೊಡುತ್ತೆವೋ ಆತ ಹವಿಃ.
ನಾವು ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಮನಸ್ಸನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಧ್ಯಾನ, ದೈಹಿಕ ಇಂದ್ರಿಯಗಳನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಕರ್ಮ. ನಾವು ನಮ್ಮ ಮನಸ್ಸನ್ನು ಹಾಗು ಕರ್ಮವನ್ನು ಭಗವಂತನತ್ತ ಹರಿದು ಬಿಡಬೇಕು, ಅದೇ ನಿಜವಾದ ಹವನ. "ನಿನ್ನ ಮನಸ್ಸು ಭಗವಂತನನ್ನೇ ನೆನೆಯಲಿ, ಭಗವಂತನ ನಾಮಗಳ ಗುಣಾನುಸಂದಾನದಲ್ಲಿ ಮೈಮರೆಯಲಿ, ನಿನ್ನ ಸಮಸ್ತ ಇಂದ್ರಿಯಗಳು ಭಗವಂತನ ಅರ್ಪಣರೂಪವಾದ ಕರ್ಮದಲ್ಲಿ ತೊಡಗಲಿ ಆಗ ಭಗವಂತ ಹವಿಯಾಗಿ ನಿನ್ನ ರಕ್ಷಣೆ ಮಾಡುತ್ತಾನೆ".           

No comments:

Post a Comment