Monday, November 8, 2010

Vishnu sahasranama 488-491

ವಿಷ್ಣು ಸಹಸ್ರನಾಮ:   ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ
488) ಗಭಸ್ತಿನೇಮಿಃ
'ಗಬಸ್ತಿ' ಎಂದರೆ ಕಿರಣಗಳು, 'ನೇಮಿ' ಎಂದರೆ ಅಚ್ಚು (ಉದಾ: ಗಾಲಿಯ ಅಚ್ಚು). ಗಭಸ್ತಿನೇಮಿ ಎಂದರೆ ಕಿರಣದ ಅಚ್ಚು; ಅಂದರೆ ಪ್ರಕಾಶದ ವಲಯದ ಮಧ್ಯ ನಿಂತವನು. ಭಗವಂತನ ಸುತ್ತ ಕಿರಣಗಳ ಅಚ್ಚು ತುಂಬಿದೆ.ಇದನ್ನೇ ದೇವಸ್ಥಾನದಲ್ಲಿ 'ಪ್ರಭಾವಳಿ' ಎನ್ನುತ್ತಾರೆ.  
489) ಸತ್ವಸ್ಥಃ
ಭಗವಂತ  ಸತ್ವ ಸ್ವರೂಪನಾಗಿ, ಭಲ ಜ್ಞಾನ ಸ್ವರೂಪನಾಗಿ ಎಲ್ಲರೊಳಗೆ ತುಂಬಿದ್ದಾನೆ. ವಿಶೇಷವಾಗಿ ಸಾತ್ವಿಕ ಕಾರ್ಯಗಳಿಗೆ  ನೆರವಾಗುವ, ಪ್ರತಿಯೊಬ್ಬರೊಳಗಿದ್ದು, ಕತ್ತಲೆಯನ್ನೋಡಿಸುವ ಬೆಳಕಿನ ಪುಂಜನಾದ ಭಗವಂತ ಸತ್ವಸ್ಥಃ. 
490) ಸಿಂಹಃ
'ಸಿಮ್ಮತಿ ಇತಿ ಸಿಂಹಃ' ; ಇನ್ನೊಂದು ಪ್ರಾಣಿಯನ್ನು ಕೊಂದು ತಿಂದು ಬದುಕುವ ಪ್ರಾಣಿಗಳಲ್ಲಿ ಶ್ರೇಷ್ಠವಾದ ಪ್ರಾಣಿ ಸಿಂಹ. ಇಲ್ಲಿ ಸಿಂಹಃ  ಎಂದರೆ 'ಸಂಹಾರ ಮಾಡುವವ' ಎಂದರ್ಥ. ಸರ್ವ ಸಂಹಾರಕ ಭಗವಂತ ನಿಜವಾದ ಸಿಂಹ. ನಮ್ಮಲ್ಲಿರುವ ದೌರ್ಬಲ್ಯ, ದೋಷ, ಎಲ್ಲವನ್ನೂ ನಾಶ ಮಾಡುವವನೂ ಅವನೇ. ಈ ಕಾರಣಕ್ಕಾಗಿ ಭಗವಂತನ ಸಿಂಹ ರೂಪದ ಉಪಾಸನೆ ಮಾಡುತ್ತಾರೆ. "ನನ್ನಲ್ಲಿರುವ ತಮೊಗುಣವನ್ನು, ದೋಷವನ್ನು, ಕಾಮ-ಕ್ರೋಧ-ಮದ-ಮತ್ಸರ-ಲೋಭವನ್ನು ನಾಶಮಾಡಿ, ಸಂಸಾರ ಬಂಧನದಿಂದ ಪಾರುಮಾಡು" ಎಂದು ನರಸಿಂಹ ರೂಪದ ಭಗವಂತನ ಉಪಾಸನೆ ಮಾಡುತ್ತಾರೆ. ಸಾತ್ವಿಕ ಜೀವರೊಳಗಿದ್ದು, ಮುಕ್ತಿಪ್ರದನಾಗಿ, ಸಂಸಾರ ಬಂಧನದ ಸಂಹಾರ ಮಾಡುವ ಭಗವಂತ ಸಿಂಹಃ. 
491) ಭೂತಮಹೇಶ್ವರಃ
ಈ ನಾಮವನ್ನು ಈ ರೀತಿ ಬಿಡಿಸಬಹುದು. ಭೂತ+ಮಹಾ+ಈಶ+ವರ. ಅಂದರೆ ನಮ್ಮನ್ನು ನಿಯಂತ್ರಿಸುವ ಭೂತಗಳಿಗೆ  ಮಹಾ ಈಶ-ಮಹೇಶ್ವರ, ಅವನಿಗೂ ವರವಾದ ಭಗವಂತ ಮಹೇಶ್ವರಃ.  ಪ್ರಪಂಚ ಸೃಷ್ಟಿಗೆ ಕಾರಣವಾದ ಪಂಚಭೂತಗಳೇ  ಸರ್ವ ಭೂತಗಳು (ಮಣ್ಣು, ನೀರು, ಬೆಂಕಿ,ಗಾಳಿ ಮತ್ತು  ಆಕಾಶ). ಪ್ರಪಂಚದ ಎಲ್ಲಾ ರೂಪಗಳೂ ಪಂಚ ಭೂತದ ಒಂದು ಸಮಷ್ಟಿ. ಆದ್ದರಿಂದ ಯಾರಾದರೂ ಸತ್ತಾಗ 'ಪಂಚಭೂತಗಳಲ್ಲಿ ಲೀನವಾದ (ಪಂಚತ್ವಂ ಗತಃ)' ಎನ್ನುತ್ತೇವೆ. ಭೂಮಿಯ ಒಡೆಯ ಶನಿ, ಶನಿಯ ಮೇಲೆ ಇರುವ ದೇವತೆ ಪ್ರಥ್ವೀದೇವತೆ ಮಹೇಶಳು; ನೀರಿನ ಈಶ ಬುಧ, ಬುಧನ ಮೇಲೆ ವರುಣ ಮಹೇಶ; ಬೆಂಕಿಯ ಒಡೆಯ ಪಾಲಕ, ಅವನ ಮೇಲಿರುವ ವೈಶ್ವಾನರ ಮಹೇಶ; ಗಾಳಿಯ ಒಡೆಯ ಮರೀಚಿ, ಅವನ ಮೇಲಿರುವ ಪ್ರಭವವಾಯು ಮಹೇಶ; ಆಕಾಶಕ್ಕೆ ಗಣಪತಿ ಒಡೆಯ ಅವನ ಮೇಲೆ ಪಾರ್ವತಿ. ಈ ಎಲ್ಲಾ ಭೂತ ಮಹೇಶರಿಗೆ ಅಧಿಪತಿ ಶಿವ 'ಸರ್ವ ಭೂತ ಮಹೇಶ'. ಇನ್ನೊಬ್ಬ ಸರ್ವ ಭೂತ ಮಹೇಶ ಮುಖ್ಯ ಪ್ರಾಣ. ಈ ಸರ್ವ ಭೂತ ಮಹೇಶರಿಗೆ  ವರನಾದ ಭಗವಂತ ಭೂತಮಹೇಶ್ವರಃ.

2 comments: