Sunday, November 28, 2010

Vishnu sahasranama 721-728

ವಿಷ್ಣು ಸಹಸ್ರನಾಮ:
ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ
721) ವಿಶ್ವಮೂರ್ತಿಃ
ಭಗವಂತ ವಿಶ್ವಮೂರ್ತಿ, ವಿಶ್ವದ ಎಲ್ಲಾ ವಸ್ತುಗಳಲ್ಲೂ ಆತನ ಸನ್ನಿಧಾನವಿದೆ. ನಾವು ಮಾಡುವ ಪ್ರತಿಮೆಗಿಂತ ಹಿರಿಮೆಯುಳ್ಳ ಪ್ರತಿಮೆ ಭಗವಂತನೇ ಮಾಡುವ ಪ್ರತಿಮೆ. ಉದಾಹರಣೆಗೆ ನೇಪಾಳದ ಘಂಡಕಿ ನದಿಯಲ್ಲಿ ಸಿಗುವ ಶಾಲಿಗ್ರಾಮ, ನರ್ಮದಾ ನದಿಯಲ್ಲಿ ಸಿಗುವ ಶಿವಲಿಂಗ ಇತ್ಯಾದಿ. ಇಷ್ಟೇ ಅಲ್ಲದೆ ಬೆಟ್ಟಗಳು, ನದಿಗಳೂ  ಕೂಡಾ ಆತನ ಪ್ರತೀಕ. ಬದರಿಯ ನರ-ನಾರಾಯಣ ಪರ್ವತ, ಹಿಮಾಲಯದ ಕೈಲಾಸ ಪರ್ವತ, ಗಂಗಾತೀರ್ಥ  ಇತ್ಯಾದಿ.  ಅಗ್ನಿಯಲ್ಲಿ ಅಗ್ನಿನಾರಾಯಣ, ಸೂರ್ಯನಲ್ಲಿ ಸೂರ್ಯ ನಾರಾಯಣ, ಮರದಲ್ಲಿ(ಅಶ್ವತ್ಥ), ಗೋವುಗಳಲ್ಲಿ ಹೀಗೆ ಸಮಸ್ಥ ವಿಶ್ವವೇ ಆತನ ಪ್ರತೀಕ.    
722) ಮಹಾಮೂರ್ತಿಃ
ಇಡೀ ಬ್ರಹ್ಮಾಂಡವೇ ಪ್ರತೀಕವಾಗಿರುವ, ಸರ್ವವ್ಯಾಪಿ ರೂಪವುಳ್ಳ ಭಗವಂತ ಮಹಾಮೂರ್ತಿಃ.
723) ದೀಪ್ತಮೂರ್ತಿಃ
ಎಲ್ಲಾ ಕಡೆಯೂ ಬೆಳಕಿನ ಪುಂಜವಾಗಿರುವ, ಪ್ರಕಾಶ ಸ್ವರೂಪ ಭಗವಂತ ದೀಪ್ತಮೂರ್ತಿಃ.
724) ಅಮೂರ್ತಿಮಾನ್
ಭಗವಂತ ಜ್ಞಾನಾನಂದ ಸ್ವರೂಪಿ, ಆತನಿಗೆ ಪಾಂಚಭೌತಿಕವಾದ ರೂಪವಿಲ್ಲ. ಆದ್ದರಿಂದ ಆತ ಅಮೂರ್ತಿಮಾನ್.

725) ಅನೇಕಮೂರ್ತಿಃ
ಭಗವಂತ ಒಂದೊಂದು ಕಡೆ ಒಂದೊಂದು ರೂಪದಲ್ಲಿ ತುಂಬಿದ್ದಾನೆ. ಪಂಚಕೋಶಗಳಲ್ಲಿ, ಕರ್ಮೆಂದ್ರಿಯಗಳಲ್ಲಿ, ಜ್ಞಾನೇಂದ್ರಿಯಗಳಲ್ಲಿ, ಪಂಚಭೂತಗಳಲ್ಲಿ, ಹೀಗೆ ಅನೇಕ ರೂಪದಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವ ಭಗವಂತ ಅನೇಕಮೂರ್ತಿಃ.    
726) ಅವ್ಯಕ್ತಃ
ಭಗವಂತ ಸರ್ವವ್ಯಾಪಿಯಾದರೂ ಸಹ ಆತ ವ್ಯಕ್ತನಾಗಿ ಕಾಣಿಸಿಕೊಳ್ಳದ ಅವ್ಯಕ್ತ ಮೂರ್ತಿ
727) ಶತಮೂರ್ತಿಃ
ಅನಂತ ರೂಪಿ ಭಗವಂತ ಶತಮೂರ್ತಿಃ. ಆತನ ಒಂದೊಂದು ಅವತಾರದಲ್ಲೂ ನೂರಾರು ರೂಪಗಳು. ಇದನ್ನು ಕೃಷ್ಣ ಅಷ್ಟೋತ್ತರ ಶತನಾಮದಲ್ಲಿ, ನರಸಿಂಹ ಅಷ್ಟೋತ್ತರ ಶತನಾಮದಲ್ಲಿ ಹಾಗು ರಾಮ ಅಷ್ಟೋತ್ತರ ಶತನಾಮದಲ್ಲಿ ಕಾಣಬಹುದು.ನಾರಾಯಣ ಅಷ್ಟೋತ್ತರದಲ್ಲಿ ಆತನ 108 ರೂಪಗಳ ವರ್ಣನೆಯಿದೆ; ಸಹಸ್ರನಾಮದಲ್ಲಿ  ಆತನ ಸಹಸ್ರ ರೂಪಗಳು, ಹೀಗೆ ನೂರಾರು ರೂಪಗಳುಳ್ಳ ಭಗವಂತ ಶತಮೂರ್ತಿಃ.
728) ಶತಾನನಃ
ಭಗವಂತ ಅನಂತ ಮುಖದವನು. ಚತುರ್ಮುಖ ಬ್ರಹ್ಮ(ಶತಾನಂದ) ಮೊಟ್ಟಮೊದಲು ಸೃಷ್ಟಿಯ ಆದಿಯಲ್ಲಿ ಕಂಡ ವಿಶ್ವರೂಪ. ‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ   ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ.

2 comments:

  1. ಬಹಳ ಒಳ್ಳೆಯ ಕೆಲಸ, ಶ್ರೀಮನ್ಮಹಾವಿಷ್ಣು ಹರಸಲಿ !

    ReplyDelete
  2. ಧನ್ಯವಾದಗಳು ಭಟ್ ಅವರೆ

    ReplyDelete