Sunday, November 28, 2010

Vishnu sahasranama 712-720

ವಿಷ್ಣು ಸಹಸ್ರನಾಮ:
ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ
 

712) ಭೂತಾವಾಸಃ
ಎಲ್ಲಾ ಭೂತಗಳ ಒಳಗೆ ಆವಾಸ ಮಾಡುವ ಭಗವಂತ ಭೂತಾವಾಸಃ. ಚೇತನಾಚೇತನ, ಚರಾಚರಾತ್ಮಕ, ಸಮಸ್ತ ಪ್ರಾಣಿಗಳ ಒಳಗೆ, ಪಂಚಭೂತಗಳಲ್ಲಿ ನೆಲೆಸಿರುವ ಭಗವಂತ ಭೂತಾವಾಸಃ.
713) ವಾಸುದೇವಃ
ನಮ್ಮ ಜೀವನದಲ್ಲಿ ಎಚ್ಚರ-ಕನಸು-ನಿದ್ದೆ  ಈ ಮೂರು ಹಂತಗಳು ಯಾವಾಗಲೂ ಇರುತ್ತವೆ.  ಈ ಹಂತಗಳಿಗೆ ಭಗವಂತನ ಅರಿವೂ ಬೇಡ, ಕುಂಡಲಿನಿ ಜಾಗೃತವಾಗುವುದು ಬೇಡ. ಈ ಹಂತಗಳನ್ನು ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರೂಪಿ ಭಗವಂತ ನಿಯಂತ್ರಿಸುತ್ತಾನೆ. ಈ ಮೂರು ಹಂತಗಳ ಆಚೆಗಿನ ಸ್ಥಿತಿ 'ತುರಿಯ'. ಈ ಸ್ಥಿತಿಯನ್ನು ತಲುಪಬೇಕಾದರೆ ಕುಂಡಲಿನಿ ಜಾಗೃತವಾಗಬೇಕು. ಈ ಸ್ಥಿತಿಯನ್ನು ನಿಯಂತ್ರಿಸುವ ಭಗವಂತನ ರೂಪ ವಾಸುದೇವ ರೂಪ. ಜ್ಞಾನಾನಂದದ ಸ್ಪುರಣದೊಂದಿಗೆ, ಅಂತರಂಗದ ಜಾಗೃತಾವಸ್ಥೆಯಲ್ಲಿ, ಅಂತರಾತ್ಮನನ್ನು ಕಾಣುವ ಅನುಭೂತಿಗೊಳಪಡಿಸುವ ಭಗವಂತ ವಾಸುದೇವಃ.
714) ಸರ್ವಾಸುನಿಲಯಃ
ಪ್ರತಿಯೊಂದು ಜೀವದೊಳಗೆ,ಪ್ರತಿಯೊಂದು ಇಂದ್ರಿಯದಲ್ಲಿ ನೆಲೆಸಿರುವ, ಸರ್ವ ಪ್ರಾಣಿಗಳಿಗಾಸರೆಯಾದ ಭಗವಂತ ಸರ್ವಾಸುನಿಲಯಃ
715) ಅನಲಃ
ಮಿತಿಯಿಲ್ಲದ ಶಕ್ತಿ ಸಂಪನ್ನ, ಅಗ್ನಿಯ ಅಂತರ್ಯಾಮಿ ಭಗವಂತ ಅನಲಃ.
716) ದರ್ಪಹಾ
ದರ್ಪ+ಹಾ; ದರ್ಪವನ್ನು ದಮನಿಸುವ(ನಾಶಮಾಡುವ) ಭಗವಂತ ದರ್ಪಹಾ. ಸಾಮಾನ್ಯವಾಗಿ ಮನುಷ್ಯನಿಗೆ ಅನುಕೂಲ, ಅಧಿಕಾರ ಸಿಕ್ಕಾಗ ಅದರಿಂದ ಅಹಂಕಾರ ಬರುತ್ತದೆ. ಶ್ರೀಮಂತಿಕೆಯ-ಮದ, ಯೌವನದ-ಮದ, ಅಧಿಕಾರದ-ಮದ, ವಿದ್ಯೆಯ-ಮದ, ಹೀಗೆ ಅನೇಕ ಕಾರಣದಿಂದಾಗಿ ತಾನು ದೊಡ್ಡ ವ್ಯಕ್ತಿ ಎನ್ನುವ ದರ್ಪ ನಮ್ಮಲ್ಲಿ ಮನೆಮಾಡುತ್ತದೆ. ಇದರ ಪರಿಣಾಮ ನಾವು ಇನ್ನೊಬ್ಬರನ್ನು ಕೀಳಾಗಿ ಕಾಣುತ್ತೇವೆ. ಕೆಲವೊಮ್ಮೆ ಒಳ್ಳೆಯವರೂ ಕೂಡಾ ಇಂತಹ ದರ್ಪಕ್ಕೆ ಬಲಿಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ಭಗವಂತ ನಮ್ಮ ದರ್ಪ ಹರಣ ಮಾಡುತ್ತಾನೆ. ವಿಷ್ಣು ಪುರಾಣದಲ್ಲಿ ಹೇಳುವಂತೆ "ಯಸ್ಯ ಅನುಗ್ರಹಂ ಇಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ" ಶ್ರೀಮಂತಿಕೆಯಿಂದ ಭಗವಂತನನ್ನು ಮರೆಯುವ ಸಂದರ್ಭ ಬಂದಾಗ ಅಂತವರನ್ನು ದಿವಾಳಿ ಮಾಡಿ ಉದ್ಧರಿಸುವ ಭಗವಂತ ದರ್ಪಹಾ.
ಇದನ್ನೇ ಭಾಗವತದಲ್ಲಿ ಹೀಗೆ ಹೇಳಿದ್ದಾರೆ: 
ಯಸ್ಯಾನುಗ್ರಹಮಿಚ್ಛಾಮಿ ಹರಿಷ್ಯೇ ತದ್ ಧನಂ ಶನೈಃ |
ತತೋsಧನಂ ತ್ಯಜಂತ್ಯಸ್ಯ ಸ್ವಜನಾ ದುಃಖದುಃಖಿನಮ್ ||
ಭಗವಂತನ ಮೊದಲ ಪರೀಕ್ಷೆ ಭಕ್ತನ ಕಿಸೆ ಖಾಲಿ ಮಾಡುವುದು. ಕ್ರಮೇಣ ಕೈಯಲ್ಲಿದ್ದ ದುಡ್ಡೆಲ್ಲ ಕರಗಿತು ಎನ್ನುವಾಗ ಬಂಧು-ಬಾಂಧವರು ದೂರ ಸರಿಯುತ್ತಾರೆ. ದುಡ್ಡಿದ್ದಷ್ಟು ಕಾಲ ಬೆನ್ನ ಹಿಂದೆ ಜನ ತಿರುಗಾಡುತ್ತಾರೆ. ಗೌರವ ಸ್ಥಾನಮಾನ ಸಿಗುತ್ತದೆ. ಇದರಿಂದ ಅಹಂಕಾರ ಬಲಿಯುತ್ತದೆ. ದೇವರ ಸ್ಮರಣೆ ಮರೆಯಾಗುತ್ತದೆ. ದುಡ್ಡಿಲ್ಲದಾಗ, ಎಲ್ಲಾ ಜನ ಕೈಬಿಟ್ಟಾಗ ಭಗವಂತ ಕೈಹಿಡಿಯುತ್ತಾನೆ!     
717) ದರ್ಪದಃ
ನಮ್ಮ ದರ್ಪ ಹರಣ ಮಾಡುವ ಭಗವಂತ, ನಮಗೆ ದರ್ಪದ ಅಗತ್ಯವಿದ್ದಾಗ ಅದನ್ನು ಕೊಡುವವನೂ ಅವನೇ ! ದುಷ್ಟರ ವಿರುದ್ಧ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕೆಚ್ಚನ್ನು ಕೊಡುವ ಭಗವಂತ ದರ್ಪದಃ. ಆತ ಸೌಜನ್ಯ ಅನ್ಯಾಯಕ್ಕೆ ಶರಣಾಗುವ ಸ್ಥಿತಿಬಂದಾಗ ನಮಗೆ ದರ್ಪವನ್ನು ಕೊಟ್ಟು ಸಲಹುತ್ತಾನೆ.   
718) ದೃಪ್ತಃ
ಯಾರಿಗೂ ಮಣಿಯದ ನಿತ್ಯತೃಪ್ತ ಭಗವಂತ, ದುಷ್ಟರಲ್ಲಿದ್ದು ದರ್ಪ ತೋರಿಸುವ ದೃಪ್ತಃ!
719) ದುರ್ಧರಃ
ಭಗವಂತ ಸುಲಭದಲ್ಲಿ ಧ್ಯಾನಕ್ಕೆ ಸಿಗದವನು. ಆತ 'ಏನು'  'ಎಂತು' ಎಂದು ತಿಳಿಯುವುದು ಕಷ್ಟ. ಆತನನ್ನು ತಿಳಿಯಲು ಅನೇಕ ಜನ್ಮದ ಸಾಧನೆ ಬೇಕು. 
720) ಅಪರಾಜಿತಃ
ಎಂದೂ ಸೋಲರಿಯದ ಭಗವಂತ ಅಪರಾಜಿತಃ.

No comments:

Post a Comment