Friday, November 19, 2010

Vishnu sahasranama 601-604

ವಿಷ್ಣು ಸಹಸ್ರನಾಮ: ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ
601) ಅನಿವರ್ತೀ
ಹಿಡಿದ ಕಾರ್ಯವನ್ನು ಎಂದೂ ಅಪೂರ್ಣ ಮಾಡದ, ಎಂದೂ ಮಾತಿಗೆ ತಪ್ಪದ ಭಗವಂತ ಅನಿವರ್ತೀ. ಜೀವರಲ್ಲಿ ನೆಲೆಸಿದ ಆತ ಮುಕ್ತರನ್ನು ಎಂದೂ ಸಂಸಾರಕ್ಕೆ ಮರಳಿಸುವುದಿಲ್ಲ.
602) ನಿವೃತ್ತಾತ್ಮಾ
ಭಗವಂತನಿಗೆ ದೇವತೆಗಳ ಮೇಲೆ ಪ್ರೀತಿಯೂ ಇಲ್ಲ, ದೈತ್ಯರ ಮೇಲೆ ದ್ವೇಷವೂ ಇಲ್ಲ. ಆತನಿಗೆ ಯಾವುದರ ಮೇಲೂ ಮೋಹವಿಲ್ಲ. ಏಲ್ಲಿ ಧರ್ಮವಿದೆಯೋ ಅದನ್ನು ಪ್ರೀತಿಸುವ ಭಗವಂತ, ಎಲ್ಲಾ ಬಂಧಗಳಿಂದಾಚೆಗಿನ ತಟಸ್ಥ ಸ್ವರೂಪ. 
603) ಸಂಕ್ಷೇಪ್ತಾ
ವಿಶ್ವವನ್ನು ಪ್ರಳಯ ಕಾಲದಲ್ಲಿ ಸಂಕುಚಗೊಳಿಸುವವನು ಸಂಕ್ಷೇಪ್ತಾ. ಪ್ರಳಯ ಕಾಲದಲ್ಲಿ ಮಣ್ಣು ನೀರಿನಲ್ಲಿ, ನೀರು ಬೆಂಕಿಯಲ್ಲಿ, ಬೆಂಕಿ ಗಾಳಿಯಲ್ಲಿ, ಗಾಳಿ ಆಕಾಶದಲ್ಲಿ, ಆಕಾಶ ಆತ್ಮನಲ್ಲಿ ಸಂಕುಚಗೊಂಡು ಸೂಕ್ಷ್ಮ ಸ್ಥಿತಿಗೆ ಹೋಗುವುದು. ಹೀಗೇ ಸೃಷ್ಟಿ-ಸಂಹಾರ ಮಾಡುವ ಭಗವಂತ ಸಂಕ್ಷೇಪ್ತಾ. 
604) ಕ್ಷೇಮಕೃಚ್ಛಿವಃ
ಸಜ್ಜನರಿಗೆ ಕ್ಷೇಮವನ್ನೀಯುವ, ದುರ್ಜನರ ಕ್ಷೇಮವನ್ನು ಇಲ್ಲವಾಗಿಸುವ ಮಂಗಳ ಸ್ವರೂಪ ಭಗವಂತ 
ಕ್ಷೇಮಕೃಚ್ಛಿವಃ. ನಮಗೆ ಜೀವನ ಕೊಟ್ಟು, ಕ್ಷೇಮ ಕೊಟ್ಟವ. ನಾವು ಏನನ್ನೂ ಪಡೆದಿದ್ದೇವೋ ಅದನ್ನು ಉಳಿಸಿಕೊಳ್ಳಲು ನೆರವನ್ನೀಯುವವ, ನಮ್ಮನ್ನು ಸಂಸಾರ ಬಂಧದಿಂದ ಬಿಡಿಸಿ ಅತಿದೊಡ್ಡ ಕ್ಷೇಮವಾದ ಮೋಕ್ಷವನ್ನು ಕರುಣಿಸುವ ಪರಮಮಂಗಳ ಜ್ಞಾನಾನಂದಭಲಸ್ವರೂಪಿ ಭಗವಂತ ಕ್ಷೇಮಕೃಚ್ಛಿವಃ.  

No comments:

Post a Comment