Monday, November 29, 2010

Vishnu sahasranama 729-740

ವಿಷ್ಣು ಸಹಸ್ರನಾಮ:
ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್ 
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ
729) ಏಕಃ
ಯಾರು  ಸರ್ವಕರ್ತನೋ, ಯಾರಿಂದ ಈ ಜಗತ್ತು ಸೃಷ್ಟಿಯಾಗಿದೆಯೋ ಅವನೇ ದೇವರು. ಆತನ ರೂಪ ಹಲವು, ನಾಮ ಹಲವು, ಆದರೆ ದೇವರು ಒಬ್ಬನೆ. ದೇವರು ಒಂದೊಂದು ಮತಕ್ಕೆ, ಒಂದೊಂದು ಬಾಷೆಗೆ,ಒಂದೊಂದು ಜನಾಂಗಕ್ಕೆ, ಒಂದೊಂದು ಜಾತಿಗೆ,ಒಂದೊಂದು ದೇಶಕ್ಕೆ, ಒಬ್ಬೊಬ್ಬ ಅಲ್ಲ. ಆತ ಒಬ್ಬನೆ; ಆತ ಏಕಃ. 
730) ನೈಕಃ
ಭಗವಂತ ಒಬ್ಬಂಟಿಯಲ್ಲ! ಬಿಂಬರೂಪನಾಗಿ ಅನಂತಜೀವರಲ್ಲಿ ನೆಲಸಿ ಒಬ್ಬನೇ ಅನೇಕವಾಗಿದ್ದಾನೆ!
731) ಸವಃ
ಎಲ್ಲಾ ಯಜ್ಞಗಳಿಂದ(ಮಾನಸ, ಧ್ಯಾನ, ಪೂಜೆ, ಪ್ರಾರ್ಥನೆ, ದೈನಂದಿನ ಕರ್ಮ ಇತ್ಯಾದಿ) ಆರಾಧಿಸಲ್ಪಡುವ, ಜ್ಞಾನ ಸ್ವರೂಪ ಭಗವಂತ ಸವಃ.
732) ಕಃ
ಕಃ ಅಂದರೆ 'ಯಾರು' ('Who' is the name of God); ಆನಂದ ಸ್ವರೂಪ ಭಗವಂತ ಕಃ.
733) ಕಿಮ್
ಏನು ಎಂತು ಎಂದು ಎಲ್ಲರೂ ತಿಳಿಯಲು ಬಯಸುವ ವಸ್ತು; ಕಂ ಅಂದರೆ ಆನಂದ, ಕಿಮ್ ಎಂದರೆ ಅತಿಶಯ ಅಥವಾ ಅನಂತ ಆನಂದ ಸ್ವರೂಪ. 
734) ಯತ್
ಎಲ್ಲಾ  ಕಡೆ ತುಂಬಿರುವ, ಎಲ್ಲವನ್ನೂ ಬಲ್ಲ ಭಗವಂತ ಯತ್.
735) ತತ್
ನಮ್ಮ ಒಳಗೆ, ನಮ್ಮ ಹೊರಗೆ ತುಂಬಿರುವ, ಕಾಲತಃ, ದೇಶತಃ, ಗುಣತಃ ಅನಂತವಾಗಿ ವ್ಯಾಪ್ತನಾದ ಭಗವಂತ ತತ್.
736) ಪದಮನುತ್ತಮಮ್ (ಪದಮ್+ಅನುತ್ತಮಮ್)
ಎಲ್ಲರೂ ಕೊನೆಗೆ ಹೋಗಿ ಸೇರಬೇಕಾದ ಕೊನೆಯ ತಾಣ(Last destination of every soul); ಇದಕ್ಕಿಂತ ಉತ್ತಮ ಸ್ಥಾನ ಇನ್ನೊಂದಿಲ್ಲ(ಹಿರಿಯ ಗಮ್ಯ ಸ್ಥಾನ).  

737) ಲೋಕಬಂಧುಃ
ಭಗವಂತ ಜೀವ ಜಾತದ ಬಂಧು;ನಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾದ ಜಗತ್ತಿನ ಹಿರಿಯ; ಎಲ್ಲರಿಗೂ ಅತ್ಯಂತ ಹತ್ತಿರದ ಗೆಳೆಯ. ನಿಜವಾದ ಗೆಳೆಯರು ಎಂದೂ ತಪ್ಪನ್ನು ಹುಡುಕುವುದಿಲ್ಲ, ದೋಷಗಳನ್ನು ಎತ್ತಿಹಿಡಿಯುವುದಿಲ್ಲ. ಗೆಳೆತನದಲ್ಲಿ ಸ್ವಾರ್ಥವಿರುವುದಿಲ್ಲ. ನಿಸ್ವಾರ್ಥವಾಗಿ, ಕಾರಣವಿಲ್ಲದೆ ಒಬ್ಬರಿಗೊಬ್ಬರು ಸ್ಪಂದಿಸುವವರು 'ಸ್ನೇಹಿತರು'. ಇಂತಹ ನಿಸ್ವಾರ್ಥ ಬಾಂಧವ್ಯ ಗಂಡ-ಹೆಂಡಿರ ನಡುವೆ, ತಂದೆ-ತಾಯಿ-ಮಕ್ಕಳ ನಡುವೆ ಇರುವುದಿಲ್ಲ. ಭಗವಂತ ಒಬ್ಬ ಆತ್ಮೀಯ ಗೆಳೆಯನಂತೆ. ನಮ್ಮ ಸರ್ವದೋಷಗಳನ್ನು ಕಡೆಗಣಿಸಿ ಸ್ವೀಕರಿಸುವ ಕರುಣಾಸಿಂಧು. ತಪ್ಪುಗಳನ್ನು ಕ್ಷಮಿಸಿ ನಮ್ಮನ್ನು ಮೇಲೆತ್ತುವ, ಜಗತ್ತನ್ನು ಉದ್ಧರಿಸುವ ಲೋಕಬಂಧುಃ.
738) ಲೋಕನಾಥಃ
ಎಲ್ಲರನ್ನೂ ಪ್ರೀತಿಸಿ ಸಲಹುವ ಲೋಕದ ಸ್ವಾಮಿ. 
739) ಮಾಧವಃ
'ಮಾ' ಎಂದರೆ 'ಇಲ್ಲ' ; 'ಧವ' ಎಂದರೆ ನಿಯಂತ್ರಿಸತಕ್ಕ ಯಜಮಾನ. ಭಗವಂತನನ್ನು ನಿಯಂತ್ರಿಸುವ ಇನ್ನೊಬ್ಬ ಯಜಮಾನ ಅಥವಾ ಸ್ವಾಮಿ ಯಾರೂ ಇಲ್ಲ.  
740) ಭಕ್ತವತ್ಸಲಃ
ಭಕ್ತಿಗೆ ಕರಗುವ ಭಗವಂತ ಭಕ್ತವತ್ಸಲಃ. ಭಕ್ತಿ ಎಂದರೆ ಸಮರ್ಪಣಾಭಾವ. 'ನಾನು ಏನೂ ಅಲ್ಲ, ನನ್ನನ್ನು ನಿನ್ನ ಪಾದದಲ್ಲಿ ಅರ್ಪಿಸಿಕೊಂಡಿದ್ದೇನೆ,ನನ್ನ ರಕ್ಷಣೆಯ ಭಾರ ನಿನ್ನದು' ಎನ್ನುವ ಅರ್ಪಣಾ ಭಾವ. ಸ್ವಾರ್ಥ ರಹಿತವಾಗಿ ಭಗವಂತನನ್ನು ಪ್ರೀತಿಸುವುದೇ ಭಕ್ತಿ. ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನನ್ನು ಹೇಗೆ ನಿಸ್ವಾರ್ಥವಾಗಿ ಪ್ರೀತಿಸುತ್ತಾನೋ ಹಾಗೇ ನಾವು ಭಗವಂತನನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಸ್ವಾರ್ಥಕ್ಕೆ ಎಡೆ ಇರಬಾರದು. ಭಗವಂತನೆಂದರೆ ಭಯಾನಕ ವಸ್ತು ಎಂದು ಭಯದಿಂದ ಪೂಜಿಸದೇ, ಪ್ರಹಲ್ಲಾದನಂತೆ ಪ್ರೀತಿಯಿಂದ ಮಾಡುವ ಭಕ್ತಿಗೆ ಕರಗುವ ಭಗವಂತ ಭಕ್ತವತ್ಸಲಃ.

No comments:

Post a Comment