Sunday, November 21, 2010

Vishnu sahasranama 646-654

ವಿಷ್ಣು ಸಹಸ್ರನಾಮ: 
ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ 
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ
646) ಕಾಲನೇಮಿನಿಹಾ
ಕಾಲನೇಮಿ ಎನ್ನುವವನು ಒಬ್ಬ ಅಸುರ. ಆತನೇ ಕಂಸನಾಗಿ ಹುಟ್ಟಿದ್ದು. ತಾವು ಬಯಸಿದಂತೆ ಕಾಲವನ್ನು ಬಳಸುವ ಲೋಕ ಕಂಟಕರನ್ನು ಸಂಹಾರ ಮಾಡುವುದಕ್ಕೋಸ್ಕರ ಭೂಮಿಗಿಳಿದು ಬರುವ ಭಗವಂತ ಕಾಲನೇಮಿನಿಹಾ. ಕಾಲವನ್ನು ನಿಯಂತ್ರಿಸುವ ಬ್ರಹ್ಮನನ್ನೂ ಒಂದು ದಿನ ಸಂಹಾರ ಮಾಡುವ (ಮಹಾಪ್ರಳಯದಲ್ಲಿ) ಭಗವಂತ ಕಾಲನೇಮಿನಿಹಾ.
647) ವೀರಃ
ಪರಾಕ್ರಮಶಾಲಿ
648) ಶೌರಿಃ
ಶೂರರಿಗೆಲ್ಲ ಈಶ್ವರ. ಅನ್ಯಾಯದ ವಿರುದ್ಧ ಹೋರಾಡುವ ಎಲ್ಲಾ ಶೂರರೊಳಗಿದ್ದು ದುಷ್ಟ ಸಂಹಾರ ಮಾಡುವ ಭಗವಂತ ಶೌರಿಃ. ಶೂರಸೇನನ(ವಾಸುದೇವನ ತಂದೆ) ವಂಶದಲ್ಲಿ ಹುಟ್ಟಿಬಂದ ಅವತಾರಪುರುಷ ಭಗವಂತ ಶೌರಿಃ 
649) ಶೂರಜನೇಶ್ವರಃ
ಶೂರರಿಗೆಲ್ಲ ಒಡೆಯ.
650) ತ್ರಿಲೋಕಾತ್ಮಾ
ಮೂರು ಲೋಕಗಳ ಎಲ್ಲಾ ಜೀವರೊಳಗಿರುವ ಅಂತರ್ಯಾಮಿ. ಮೂರು ಲೋಕದಲ್ಲಿ ನಿಂತು ಎಲ್ಲವನ್ನೂ ಮಾಡುವ ಭಗವಂತ ತ್ರಿಲೋಕಾತ್ಮಾ.
651) ತ್ರಿಲೋಕೇಶಃ
ಮೂರು ಲೋಕಗಳ ಸ್ವಾಮಿ.
652) ಕೇಶವಃ
ಕೇಶದಿಂದ ಆವಿರ್ಭಾವ ಹೊಂದಿ ಅವತಾರವೆತ್ತಿದ ಗುಂಗುರು ಕೂದಲಿನ ಚೆಲುವ(ಕೃಷ್ಣ). ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ.
ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ. ಬೆಳಕಾಗಿ, ಮಳೆಯಾಗಿ, ಸೂರ್ಯಕಿರಣದೊಳಗೆ ಸನ್ನಿಹಿತನಾದ ಭಗವಂತ ಕೇಶವಃ.      
653) ಕೇಶಿಹಾ
ಕೇಶಿ ಎನ್ನುವ ಅಸುರನನ್ನು ಸಂಹಾರ ಮಾಡಿದವನು, ಪ್ರಳಯ ಕಾಲದಲ್ಲಿ ಸೂರ್ಯನನ್ನು, ಪ್ರಾಣತತ್ವವನ್ನೂ  ಸಂಹರಿಸುವವನು.
ಸೂರ್ಯನನ್ನು  ಮುಳುಗುವಾಗ, ಮೂಡುವಾಗ ಮತ್ತು ಗ್ರಹಣಕಾಲದಲ್ಲಿ ನೇರವಾಗಿ ನೋಡಬಾರದು, ನೀರಿನಲ್ಲಿ  ಸೂರ್ಯನ ಪ್ರತಿಬಿಂಬವನ್ನು ನೋಡುವುದು ಕಣ್ಣಿಗೆ ಹಾನಿಕರ. ಏಕೆಂದರೆ ಆ ಕಿರಣಗಳಲ್ಲಿ ದುಷ್ಟ ಶಕ್ತಿಗಳಿರುತ್ತವೆ ಇಂತಹ ದುಷ್ಟಶಕ್ತಿಗಳನ್ನು ಸಂಹಾರ ಮಾಡುವ ಭಗವಂತ ಕೇಶಿಹಾ.
ಬೆಳಿಗ್ಗೆ ಸೂರ್ಯೋದಯವಾದಮೇಲೂ ಮಲಗಿ ನಿದ್ದೆ ಮಾಡುವಂತೆ ಮಾಡುವ ಅಸುರಶಕ್ತಿಯನ್ನು (ಮಂದೇಹನನ್ನು) ನಾಶಮಾಡುವ ಭಗವಂತ ಕೇಶಿಹಾ.
654) ಹರಿಃ
ನಮ್ಮ ಎಲ್ಲಾ ಸಮಸ್ಯೆಗಳನ್ನು,ಸಂಸಾರ ಬಂಧನವನ್ನು ಪರಿಹರಿಸುವ, ಕೊನೆಗೆ ಸಮಸ್ತ ವಿಶ್ವವನ್ನು ಸಂಹರಿಸುವ ಭಗವಂತ
ಹರಿಃ.
ಅನಂತ ರೂಪದಲ್ಲಿ ವಿಶ್ವದೊಳಗೆ ವಿಹರಿಸುವ, ಭಕ್ತಿಯಿಂದ ಅರ್ಪಿಸಿದ ಆಹುತಿಯನ್ನು ಸ್ವೀಕರಿಸುವ ಭಗವಂತ,
ಹರಿದ್ವರ್ಣನಾಗಿ ಇಡೀ ಭೂಮಿಯಲ್ಲಿ ಸಸ್ಯ ಸಮೃದ್ಧಿ ಮಾಡಿದ ಹರಿಃ.   

No comments:

Post a Comment