Saturday, November 13, 2010

vishnu Sahasranama 533-536

ವಿಷ್ಣು ಸಹಸ್ರನಾಮ: ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ
533) ಮಹರ್ಷಿಃ
ಋಷಿ ಎಂದರೆ ವೇದ ಮಂತ್ರದ ದೃಷ್ಟಾರ. ವೇದ ಮಂತ್ರವನ್ನು ಕಂಡವರು ಋಷಿಗಳು.ಸಮಗ್ರ ವೇದವನ್ನು ಕಂಡ ಋಷಿ ಮಹರ್ಷಿ. ಸಮಸ್ತ ವೇದಗಳನ್ನು ಮೊತ್ತಮೊದಲ ಬಾರಿ ಆವಿಷ್ಕಾರ ಮಾಡಿ ಚತುರ್ಮುಖನಿಗೆ ಉಪದೇಶ ಮಾಡಿದ ಮಹರ್ಷಿ-ಭಗವಂತ. ಶಾಸ್ತ್ರಕಾರರು ಹೇಳುತ್ತಾರೆ-ಯಾವುದಾದರು ಮಂತ್ರ ಜಪ ಮಾಡುವಾಗ ಅಥವಾ ಒಂದು ಸೂಕ್ತ ಹೇಳುವಾಗ ನಮಗೆ ಋಷಿ ಯಾರು ಎಂದು ತಿಳಿದಿಲ್ಲವಾದರೆ ಆಗ 'ಅಸ್ಸ್ಯ ಶ್ರೀ  ಮಹಾಮಂತ್ರಸ್ಸ್ಯ ಹಯಗ್ರೀವ ಋಷಿಹಿ' ಎಂದು ಹೇಳಿದರೆ ಸಾಕು. ಏಕೆಂದರೆ ಸರ್ವ ವೇದಗಳ ಪ್ರಥಮ ದೃಷ್ಟನಾದ ಭಗವಂತ ಕಾಣದ ಮಂತ್ರವಿಲ್ಲ. ಹೀಗೆ ಮಹತ್ತಾದ ದೊಡ್ಡ ಋಷಿ ಭಗವಂತ ಮಹರ್ಷಿಃ.
ಋಷಿ ಅಂದರೆ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡು ಭಗವಂತನನ್ನು ತಿಳಿದ ಸತ್ಯದರ್ಶಿಗಳು, ಸತ್ಯವಚನರು. ಭಗವಂತನನ್ನು ಪೂರ್ತಿ ತಿಳಿದವವರು ಯಾರೂ ಇಲ್ಲ, ಭಗವಂತನೊಬ್ಬನೇ! ಆದ್ದರಿಂದ ನಿಜವಾದ ಮಹರ್ಷಿ ಭಗವಂತ. ಸರ್ವಜ್ಞನೂ, ಸರ್ವ ವೇದದೃಷ್ಟನೂ ಆದ ಭಗವಂತ ಮಹರ್ಷಿಃ.
534) ಕಪಿಲಾಚಾರ್ಯಃ
'ಆಚಾರ' ಎಂದರೆ ಒಳ್ಳೆಯ ನೆಡತೆ ಉಳ್ಳವರು, ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದು ಅದರಂತೆ ನೆಡೆದು ಇನ್ನೊಬ್ಬರಿಗೆ ದೃಷ್ಟಾಂತವಾಗುವವರು. ಅವತಾರ ರೂಪಿಯಾಗಿ ಬಂದು ಮನುಷ್ಯ ಹೇಗೆ ನಡೆದುಕೊಳ್ಳಬೇಕು ಎಂದು ಕೃತಿಯಲ್ಲಿ ತೋರಿಸಿಕೊಟ್ಟ ಮಹಾ ಆಚಾರ್ಯ ಮರ್ಯಾದಪುರುಷ ಶ್ರೀರಾಮ. ದೌರ್ಜನ್ಯದಿಂದ ದೂರವಿರು,ಏಲ್ಲಿ ಪ್ರೀತಿ ಇದೆ ಅಲ್ಲಿ ಪ್ರೀತಿ ತೋರಿಸು, ಇನ್ನೊಬ್ಬರು ಸಂತೋಷವಾಗಿರುವುದನ್ನು ನೋಡಿ ಸಂತೋಷ ಪಡು, ಇನ್ನೊಬ್ಬರ ಕಷ್ಟಕ್ಕೆ ಕರಗು,ಒಳ್ಳೆಯವರ ಸಹವಾಸ ಮಾಡು, ದುಷ್ಟರಿಂದ ದೂರವಿರು. ಈ ಮನೋವೃತ್ತಿ ಅಳವಡಿಸಿಕೊಂಡವರು ನಿಜವಾದ ಆಚಾರ್ಯರು. ಭಗವಂತ ಶ್ರೀರಾಮನಾಗಿ ಬಂದು ಎಲ್ಲವನ್ನೂ ಮಾಡಿತೊರಿಸಿದ.  ಕಪಿಲ ಎಂದರೆ ಕಂ+ಪಾಯನ್+ಲಯ; ಇಡೀ ಪ್ರಪಂಚವನ್ನು ತನ್ನಲ್ಲಿ ಲೀನಗೊಳಿಸುವ ಸರ್ವಸಂಹಾರಕ. ಆನಂದ ರೂಪನಾಗಿ ಲಯಗೊಳಿಸುವವನು. ಕಪಿಲ ಮುನಿಯಾಗಿ ಅವತರಿಸಿದವನು. ಆನಂದವನ್ನು ಪಾನಮಾಡುವವನು ಹಾಗು ಈಯುವವನು ಆದ ಲೋಕಗುರು ಭಗವಂತ ಕಪಿಲಾಚಾರ್ಯಃ          
535) ಕೃತಜ್ಞಃ
ನಾವು ಹೇಳುವುದುಂಟು , 'ತಾವು ಮಾಡಿದ ಉಪಕಾರಕ್ಕೆ ನಾವು ಕೃತಜ್ಞನಾಗಿದ್ದೇವೆ ಎಂದು' ; ಇಲ್ಲಿ ಕೃತಜ್ಞತೆ  ಎಂದರೆ ಇನ್ನೊಬ್ಬರು ಮಾಡಿದ ಸಹಾಯವನ್ನು ಮರೆಯದೆ ತಿಳಿದಿರುವುದು ಅಥವಾ ನೆನಪಿಟ್ಟುಕೊಳ್ಳುವುದು. 'ಕೃತ' ಎಂದರೆ 'ನಡೆದದ್ದು' ನಮಗೋಸ್ಕರ ಪ್ರಪಂಚದಲ್ಲಿ ಪರೋಕ್ಷವಾಗಿ ನಡೆಯುವ ಉಪಕಾರವನ್ನು ತಿಳಿಯುವುದು ಕೃತಜ್ಞತೆ. ಒಬ್ಬ ಮನುಷ್ಯನ ಅಸ್ತಿತ್ವಕ್ಕೆ ಸಾವಿರಾರು ಬಂಧಗಳಿರುತ್ತವೆ ಹಾಗು ಋಣಿಗಳಾಗಿ ನಾವು ಬದುಕುತ್ತಿರುತ್ತೇವೆ. ನಮಗಾಗಿ ಈ ಪ್ರಪಂಚದಲ್ಲಿ ಏನೇನು ನಡೆಯುತ್ತಿದೆ  ಎಂದು ನಮಗೇ ತಿಳಿದಿರುವುದಿಲ್ಲ. ಅದನ್ನು ತಿಳಿದಿರುವವನು ಭಗವಂತನೊಬ್ಬನೇ. ಆದ್ದರಿಂದ ಎಲ್ಲವನ್ನೂ ಬಲ್ಲ ಭಗವಂತ ಕೃತಜ್ಞಃ.
536) ಮೇದಿನೀಪತಿಃ
ಮೇದಿನೀಪತಿ ಎಂದರೆ ಮೇದಿನಿಗೆ ಒಡೆಯ ಅಥವಾ ಭೂಪತಿ. ಸಾಮಾನ್ಯವಾಗಿ ರಾಜರಿಗೆ ಭೂಪತಿ ಎನ್ನುವುದುಂಟು ಆದರೆ ನಾವು ಎಂದೂ ಈ ಭೂಮಿಗೆ ಒಡೆಯರಲ್ಲ. ಯಾರು  ಈ ಭೂಮಿಯನ್ನು ಸೃಷ್ಟಿ ಮಾಡಿದನೋ ಅವನು ನಿಜವಾದ ಮೇದಿನೀಪತಿ. ಆದ್ದರಿಂದ ಈ ಭೂಮಿಯನ್ನು ನಿರ್ಮಿಸಿ, ಪಾಲನೆ ಮಾಡುವ ಭಗವಂತ ಮೇದಿನೀಪತಿಃ

No comments:

Post a Comment