Friday, November 12, 2010

Vishnu sahasranama 523-527

ವಿಷ್ಣು ಸಹಸ್ರನಾಮ: ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ
523) ಅಜಃ
'ನ ಜಾಯತೇ ಇತಿ ಅಜಃ'; 'ಜ' ಎಂದರೆ ಜನನ; ಅ+ಜಃ-ಅಜಃ ಎಂದರೆ ಹುಟ್ಟಿರದವನು. ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿದ  ಚತುರ್ಮುಖನನ್ನು ಅಜ ಎನ್ನುತ್ತಾರೆ. ಇಂತಹ ಚತುರ್ಮುಖನೊಳಗೆ ಸನ್ನಿಹಿತನಾಗಿ ಸೃಷ್ಟಿ ಮಾಡುವ ಭಗವಂತ, ತಾನು ಹುಟ್ಟದೆ, ಎಲ್ಲವನ್ನೂ ಸೃಷ್ಟಿ ಮಾಡಿ ಸಂಹಾರ ಮಾಡುವ ಭಗವಂತ ಅಜಃ.    
524) ಮಹಾರ್ಹಃ
ಪೂಜ್ಯರಿಗೆಲ್ಲ ಹಿರಿಯ ಪೂಜ್ಯ ಮಹಾರ್ಹಃ. ಇಲ್ಲಿ ಅರ್ಹ ಎಂದರೆ ಪೂಜೆಗೆ ಯೋಗ್ಯರು, ಪೂಜನೀಯರು; ನಾವು ಪೂಜಿಸಬೇಕಾದ ವಸ್ತುವಿನಲ್ಲಿ ಸರ್ವಶ್ರೇಷ್ಠನಾಗಿ ಸನ್ನಿಹಿತನಾಗಿರುವ ಭಗವಂತ ಮಹಾರ್ಹಃ.
525) ಸ್ವಾಭಾವ್ಯಃ
ನಿರ್ಮಾಣ ಮಾಡಲು ಅಸಾಧ್ಯವಾದವ ಹಾಗು ಸ್ವತಂತ್ರವಾಗಿದ್ದು ಇನ್ನೊಬ್ಬರ ನಿಯಂತ್ರಕ್ಕೊಳಪದವನು ಸ್ವಾಭಾವ್ಯಃ .
526) ಜಿತಾಮಿತ್ರಃ
ಅಮಿತ್ರರನ್ನು(ಶತ್ರುಗಳನ್ನು) ಗೆದ್ದವ. ಭಗವಂತನ  ಶತ್ರುಗಳು ಧರ್ಮದ ಮತ್ತು ಜ್ಞಾನದ ವಿರೋಧಿಗಳು. ಯಾರು ಪಾತಕಿಗಳೋ, ಧರ್ಮ ಮತ್ತು ಜ್ಞಾನವನ್ನು ದ್ವೇಶಿಸುತ್ತಾರೋ ಅವರನ್ನು ಭಗವಂತ ಶಿಕ್ಷಿಸುತ್ತಾನೆ. ಆತ ದುಷ್ಟ ನಿಗ್ರಹ ಮಾಡುವುದು ಯಾವುದೇ ದ್ವೇಷದಿಂದಲ್ಲ. ಇದು ತಂದೆ-ತಾಯಿ ಮಕ್ಕಳಿಗೆ ಶಿಕ್ಷೆ ಕೊಟ್ಟಂತೆ. ಏಕೆಂದರೆ ಅಸುರರೂ ಕೂಡಾ ಭಗವಂತನ ಮಕ್ಕಳೇ. ಜೀವ ಸ್ವಭಾವಕ್ಕನುಗುಣವಾಗಿ ಅವರ ಸ್ವಭಾವ ವೃದ್ಧಿಯಾಯಿತು ಅಷ್ಟೇ. ಅಲ್ಲಿ ದೋಷ ಕಂಡುಬಂದಾಗ ಅದನ್ನು ಭಗವಂತ ನಿಗ್ರಹ ಮಾಡುತ್ತಾನೆ.
ಸಂಸ್ಕೃತದಲ್ಲಿ ಮಿತ್ರ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಒಂದು ಸೂರ್ಯ ಇನ್ನೊಂದು ಗೆಳೆಯ. ಸೂರ್ಯ 'ಮಿತಿ-ಅರಿವು'  ಕೊಡುವವ. ಅಂದರೆ ಬೆಳಕು ಹರಿಸಿ ವಸ್ತುವಿನ ಜ್ಞಾನ ಕೊಡುವವ. ನಾವು ದಾರಿ ತಪ್ಪಿದಾಗ ದಾರಿ ತೋರಿಸಿ ನಮ್ಮನ್ನು ಸರಿ ದಾರಿಗೆ ತರುವವ ನಿಜವಾದ ಮಿತ್ರ.ಆದ್ದರಿಂದ ಸೂರ್ಯನನ್ನು ಮಿತ್ರ ಎನ್ನುತ್ತಾರೆ. 'ಅಮಿತ್ರ' ಎಂದರೆ ಅಜ್ಞಾನವನ್ನು ಹರಡುವವ. ಕತ್ತಲ ದಾರಿಯನ್ನು (ಅಜ್ಞಾನವನ್ನು) ಕಳಚಿ ಬೆಳಕಿನತ್ತ ಕೊಂಡೊಯ್ಯುವ ಭಗವಂತ  ಜಿತಾಮಿತ್ರಃ.
527) ಪ್ರಮೋದನಃ
ಪ್ರಮೋದಂ ನಯತಿ ಇತಿ ಪ್ರಾಮಯತಿ. ಅರಿವು ಕೊಟ್ಟು, ಅರಿವಿನ ಮುಖೇನ  ನಮ್ಮನ್ನು ಆನಂದದ ದಾರಿಯಲ್ಲಿ ಕೊ
ಡೊಯ್ಯುವವನು, ಕೊನೆಗೆ ಮುಕ್ತಿಯಲ್ಲಿ ಪೂರ್ಣಾನಂದವನ್ನು ಕೊಡುವವನು ಪ್ರಮೋದನಃ. ನಿಜವಾದ ಆನಂದ ಯಾವುದು? ಕೆಲವರಿಗೆ ಹೊನ್ನು, ಇನ್ನು ಕೆಲವರಿಗೆ ಹೆಣ್ಣು, ಮತ್ತೆ ಕೆಲವರಿಗೆ ಮಣ್ಣು. ಆದರೆ ನಿಜವಾದ ಆನಂದ ಇದಲ್ಲ. ಜ್ಞಾನದಿಂದ ಮನಸ್ಸು ಅರಳುವುದು ನಿಜವಾದ ಆನಂದ. ನಮಗೆ ಅತ್ಯಂತ ಅಮೂಲ್ಯವಾದ ಅರಿವನ್ನು ಕೊಟ್ಟು, ಅದರಿಂದ ಆನಂದದ ಮಾರ್ಗವನ್ನು ತೋರಿ ಆನಂದದತ್ತ ಕೊಡೊಯ್ಯುವವನು ಪ್ರಮೋದನಃ

1 comment: