Monday, November 22, 2010

Vishnusahasranama 675-678

ವಿಷ್ಣು ಸಹಸ್ರನಾಮ:    ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ
675) ಮಹಾಕ್ರಮಃ
ಕ್ರಮ ಎಂದರೆ 'ರೀತಿ' ; ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಆಕಸ್ಮಿಕವಲ್ಲ, ಅದು ಕ್ರಮಬದ್ಧವಾದ ಕ್ರಿಯೆ.ಎಲ್ಲವನ್ನೂ ಕರಾರುವಕ್ಕಾಗಿ ಗಣಿತಬದ್ಧವಾಗಿ ಮಾಡುವ ಭಗವಂತ
ಮಹಾಕ್ರಮಃ.  ಅನಂತ ಕಾಲದಿಂದ ಈ ಪ್ರಪಂಚ ನೆಡೆದು ಬಂದಿದೆ, ಹಾಗು ಮುಂದುವರಿಯುತ್ತದೆ. ಈವರೆಗೆ ಅನಂತ ಪ್ರಪಂಚ ಸೃಷ್ಟಿಯಾಗಿದೆ ಹಾಗು ಇನ್ನು ಮುಂದೆ ಅನಂತ ಪ್ರಪಂಚ ಸೃಷ್ಟಿಯಾಗಲಿದೆ.ಆದರೆ ಪ್ರತಿಯೊಂದು ಸೃಷ್ಟಿಯೂ ಕ್ರಮಬದ್ಧ. ಪ್ರತಿಯೊಂದಕ್ಕೂ ಒಂದು ಲೆಕ್ಕಾಚಾರವಿದೆ, ಅದರಂತೆಯೇ ನಡೆಯುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಪೂರ್ವನಿರ್ಧರಿತ.
676) ಮಹಾಕರ್ಮಾ
ಈ ವಿಶ್ವದಲ್ಲಿ ಮಹತ್ತಾದ ಕರ್ಮ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ.  ಇಂತಹ ಮಹಾ ಕರ್ಮವನ್ನು ನಿರ್ವಹಿಸುವ ಭಗವಂತ
ಮಹಾಕರ್ಮಾ. ನಮ್ಮ ಕೈಯಲ್ಲಿ ಮಹತ್ತಾದ ಕರ್ಮವನ್ನು ಮಾಡಿಸುವವನೂ ಅವನೇ.
677) ಮಹಾತೇಜಾಃ
ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ.ಜಗತ್ತಿನಲ್ಲಿ ನಡೆಯುವ ತೇಜಸ್ಸಿನ ಪ್ರತಿಯೊಂದು ಕ್ರಿಯೆಯ ಮೂಲ ಭಗವಂತ
ಮಹಾತೇಜಾಃ. ಆತ ಎಲ್ಲವನ್ನೂ ಬೆಳಗಿಸುವ ಬೆಳಕು. ಗೀತೆಯಲ್ಲಿ ಹೇಳುವಂತೆ:
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕ
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಅ-೧೫, ಶ್ಲೋ-೦೬)
ಅಂದರೆ "ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ"  ಹೀಗೆ ಬೆಳಕುಗಳಿಗೆ ಬೆಳಕು ನೀಡುವ ಮಹಾ ತೇಜಸ್ಸು ಭಗವಂತ
ಮಹಾತೇಜಾಃ.  
678) ಮಹೋರಗಃ
ಉರಗ ಎಂದರೆ ಹೊಟ್ಟೆ ಹೊಸೆದುಕೊಂಡು ಹೋಗುವ ಪ್ರಾಣಿ; ಅದನ್ನು ಸರ್ಪ ಎನ್ನುತ್ತಾರೆ. ಹೆಡೆ ಇರುವ ಹಾವು 'ನಾಗರ'. ಭಗವಂತ ದೊಡ್ಡ ಉರಗದ ಮೇಲೆ ಮಲಗಿದ ಶೇಷಶಾಹಿ. ಶೇಷಶಾಹಿ ಎಂದರೇನು ಎನ್ನುವುದನ್ನು ನಾವು ನಮ್ಮೊಳಗಿರುವ ದೇವರನ್ನು ಕಾಣಲು ಪ್ರಯತ್ನಿಸಿದಾಗ ಮಾತ್ರ ತಿಳಿಯುತ್ತದೆ. ಈ ಹಿಂದೆ ಹೇಳಿದಂತೆ ನಮ್ಮ ದೇಹದೊಳಗೆ ಮೂಲಾಧಾರದಿಂದ ಸಹಸ್ರಾರದವರೆಗೆ ಬೇರೆ ಬೇರೆ ಶಕ್ತಿ ಕೇಂದ್ರಗಳಿವೆ. ಮೂಲಾಧಾರದಲ್ಲಿ ಮಾಡಿಕೆಹಾಕಿ ತಲೆಯನ್ನು ಕೆಳಗಿಟ್ಟು ಮಲಗಿದ ಉರಗದ ಸ್ಥಿತಿಯಲ್ಲಿ ಕುಂಡಲಿನಿ ಶಕ್ತಿ ಅಡಗಿದೆ. ಕೆಳಮುಖವಾಗಿರುವ ಈ ಶಕ್ತಿ
ಕೇಂದ್ರದಿಂದ ಶಕ್ತಿ ಪಾತವಾಗುತ್ತದೆ. ಇಂತಹ ಹಾವನ್ನು ಕೆಣಕಿದರೆ ಮಾತ್ರ ಅದು ಹೆಡೆ ಎತ್ತುತ್ತದೆ; ಆಗ ಶಕ್ತಿ ಮೇಲ್ಮುಖವಾಗಿ ಸ್ವಾಧಿಷ್ಟಾನ-ಮಣಿಪುರ-ಅನಾಹತ-ವಿಶುದ್ಧಿ-ಆಜ್ಞಾ-ಸಹಸ್ರಾರ, ಹೀಗೆ ಹಂತ ಹಂತವಾಗಿ ಮೇಲೇರುತ್ತದೆ. ನಮ್ಮ ಆಜ್ಞಾ ಚಕ್ರವೇ ಕ್ಷೀರ ಸಾಗರ. ಇಂತಹ ಕ್ಷೀರ ಸಾಗರದಲ್ಲಿ ಸಹಸ್ರಾರದತ್ತ ಹೆಡೆಯತ್ತಿನಿಂತ ಶೇಷ ಶಕ್ತಿ ಹಾಗು ಅದರ ಮೇಲೆ ಮಲಗಿ ದರ್ಶನವನ್ನೀಯುವ ಅನಂತ ಪದ್ಮನಾಭ ಭಗವಂತ ಮಹೋರಗಃ.

No comments:

Post a Comment