Sunday, November 14, 2010

Vishnusahasranama 537-540

ವಿಷ್ಣು ಸಹಸ್ರನಾಮ:  ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್
537) ತ್ರಿಪದಃ
ಮೂರು  ವಿಶೇಷ ಹೆಜ್ಜೆಯುಳ್ಳವನು, ಓಂಕಾರದ ಮೂರು ಅಕ್ಷರಗಳಿಂದ(ಅ, ಉ, ಮ್), ಈ ಮೂರು ಅಕ್ಷರದಿಂದಾದ  ಮೂರು ಪದಗಳುಳ್ಳ ವ್ಯಾಹೃತಿಯಿಂದ(ಭೂಃ, ಭುವಃ ಸ್ವಃ), ಈ ಪದಗಳಿಂದಾದ ಗಾಯತ್ರಿಯ ಮೂರು ಪಾದಗಳಿಂದ (ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್) ವಾಚ್ಯನಾದ ಭಗವಂತ ತ್ರಿಪದಃ.
538) ತ್ರಿದಶಾಧ್ಯಕ್ಷಃ
'ತ್ರಿದಶರು' ಎಂದರೆ ದೇವತೆಗಳು, ದೇವತೆಗಳ, ಸ್ವರ್ಗದ ಹಾಗು ಅಲ್ಲಿರುವ ದೇವಾದಿ ದೇವತೆಗಳ ಒಡೆಯ ಭಗವಂತ ತ್ರಿದಶಾಧ್ಯಕ್ಷಃ. ತ್ರಿದಶ ಎಂದರೆ ಮೂರು ಅವಸ್ಥೆಗಳು(ಎಚ್ಚರ-ಕನಸು-ನಿದ್ದೆ); ಇದೇ 'ಓಂ(ಅ, ಉ, ಮ್);'ಅ' ಅಂದರೆ ಆಪ್ತಿ, ಹೊರಗಿನ ಪ್ರಪಂಚದೊಂದಿಗೆ ನಮಗಿರುವ ಸಂಬಂಧ. ಇದಿರುವುದು ಎಚ್ಚರದಲ್ಲಿ ಮಾತ್ರ. 'ಉ' ಅಂದರೆ ಉತ್ಕರ್ಷ, ಹೊರಗಿನ ಪ್ರಪಂಚದ ಸಂಪರ್ಕ ಕಡಿದುಕೊಂಡು, ಒಳ ಪ್ರಪಂಚದಲ್ಲಿ ಕಾಣುವ ಕನಸಿನ ಪ್ರಪಂಚ. 'ಮ್' ಅಂದರೆ ಭಗವಂತನಲ್ಲಿ ಅಂತರ್ಗತನಾಗಿ ಒಳ-ಹೊರ ಪ್ರಪಂಚದ ಅರಿವಿಲ್ಲದೆ, ಇರುವ ನಿದ್ರಾಸ್ಥಿತಿ. ಈ ಮೂರೂ ದಶಗಳಲ್ಲಿ ನಾವು ಸ್ವತಂತ್ರರಲ್ಲ, ಮೂರು ದಶಗಳೊಂದಿಗೆ ನಿರಂತರ ನಮ್ಮನ್ನು ನಡೆಸುವ ಭಗವಂತ ತ್ರಿದಶಾಧ್ಯಕ್ಷಃ.
539) ಮಹಾಶೃಂಗಃ
ಮೇಲ್ನೋಟಕ್ಕೆ ಮಹಾಶೃಂಗಃ ಎನ್ನುವುದು ಭಗವಂತನ ಮತ್ಸ್ಯಾವತಾರಕ್ಕೆ ಸಂಬಂಧಪಟ್ಟ ಹೆಸರು. ಮತ್ಸ್ಯ ರೂಪದಲ್ಲಿ ತನ್ನ ಒಂದು ಶೃಂಗಕ್ಕೆ ಭೂಮಿಯನ್ನು ನಾವೆಯಾಗಿ ಕಟ್ಟಿ, ಪ್ರಳಯಜಲದಲ್ಲಿ ವೈವಸ್ವತ ಮನುವನ್ನು ಪಾರು ಮಾಡಿದ ರೂಪ. ಉನ್ನತವಾದ ಶೃಂಗದಿಂದ  ಭೂಮಿಯನ್ನು ಉದ್ದಾರ ಮಾಡಿ ಋಷಿಗಳನ್ನು ಮುಂದಿನ ಮನ್ವಂತರಕ್ಕೆ, ಪ್ರಳಯದ ಆಚೆಗಿನ ಬದುಕು ಕೊಟ್ಟವ.
ಶೃಂಗ ಎಂದರೆ ಪರ್ವತ ಕೂಡಾ ಹೌದು.  ಹಿಮಾಲಯ ಒಂದು ಮಹಾಶೃಂಗ . ಇಂತಹ ಹಿಮಾಲಯದಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮಹಾಶೃಂಗಃ
540) ಕೃತಾಂತಕೃತ್
ಎಲ್ಲಾ ಕಾಲದಲ್ಲಿ ಎಲ್ಲಾ ಜನರು ಮಾಡುವ/ಮಾಡಿದ ಕರ್ಮ ಕೊನೆಗಾಣಬೇಕಾದರೆ ಭಗವಂತನ ಕೃಪೆ ಬೇಕು."ನಾಹಂ  ಕರ್ತಾ  ಹರಿ  ಕರ್ತ" ಕರ್ಮವನ್ನು ಅವನೇ ನಮ್ಮೊಳಗಿದ್ದು ಮಾಡಿಸುತ್ತಾನೆ. ಇಂತಹ ಭಗವಂತ ಕೃತಾಂತಕೃತ್.
ಯಮನನ್ನು ಸೃಷ್ಟಿ ಮಾಡಿದ ಹಾಗು ಕೊನೆಗೆ ಅವನನ್ನೂ ಸಂಹಾರ ಮಾಡುವ ಭಗವಂತ ಎಲ್ಲಾ ಸಂಹಾರ ಶಕ್ತಿಗಳನ್ನು ಮೀರಿ ನಿಂತ ಮಹಾ ಸಂಹಾರ ಶಕ್ತಿ. ಆದ್ದರಿಂದ ಆತ ಕೃತಾಂತಕೃತ್. 

No comments:

Post a Comment