Friday, November 12, 2010

Vishnu sahasranama 515-518

ವಿಷ್ಣು ಸಹಸ್ರನಾಮ:  ಜೀವೋ ವಿನಯಿತಾಸಾಕ್ಷೀ ಮುಕುಂದೋಮಿತವಿಕ್ರಮಃ 
515) ಜೀವಃ
 ಉಸಿರಾಟ ಉಳ್ಳವರು ಜೀವರು, ಆದರೆ ಪ್ರಾಣಶಕ್ತಿಯನ್ನು ಧಾರಣೆ ಮಾಡುವ  ನಿಜವಾದ ಶಕ್ತಿ ಭಗವಂತ. ಪ್ರಾಣ ಶಕ್ತಿಯನ್ನು ಧಾರಣೆ ಮಾಡಿ, ಪ್ರಾಣಧಾರಕನಾಗಿ ಒಳಗೆ ಕುಳಿತು ನಮ್ಮನ್ನು ಬದುಕಿಸುವ ಭಗವಂತ ಜೀವಃ.
516) ವಿನಯಿತಾಸಾಕ್ಷೀ
ಭಕ್ತರ ವಿನಯ ಶೀಲತೆಗೆ ಸಾಕ್ಷಿಯಾದವನು ವಿನಯಿತಾಸಾಕ್ಷೀ. ಈ ನಾಮವನ್ನು ಕೆಲವರು ಎರಡು ಶಬ್ದವಾಗಿ ಬಳಸುತ್ತಾರೆ. ಆದರೆ ಇದು ಒಂದೇ ಶಬ್ದ.ವಿನಯಿತಾ ಎಂದರೆ ಒಬ್ಬ ಮನುಷ್ಯನಲ್ಲಿರುವ ಸೌಜನ್ಯ ಅಥವಾ ನಿಯಾಮಕತ್ವ. ಪ್ರತಿಯೊಬ್ಬನಲ್ಲಿಯೂ ಕೂಡಾ ಎರಡು ಗುಣಗಳಿವೆ. ದೊಡ್ಡವರಿಗೆ ವಿನಯವನ್ನು ತೋರಿಸುವ ಹಾಗು ಚಿಕ್ಕವರಿಗೆ ನಿಯಾಮಕತ್ವವನ್ನು ತೋರಿಸುವ ಗುಣ. ನಗಗಿಂತ ಹೆಚ್ಚು  ಜ್ಞಾನವಿರುವವರತ್ತ ವಿನಯ ಹಾಗು ಕಡಿಮೆ ಬುದ್ಧಿ ಇರುವವರತ್ತ ನಿಯಾಮಕತ್ವ. ಭಗವಂತ ಸಾಕ್ಷಿ ಪುರುಷನಾಗಿ ಎಲ್ಲರಲ್ಲೂ ಈ ಗುಣಗಳನ್ನು ಯಾವ ಲೇಪವೂ ಇಲ್ಲದೆ ಅವರವರ ಯೋಗ್ಯತೆಗೆ ತಕ್ಕಂತೆ ನಿಯಂತ್ರಿಸುತ್ತಿದ್ದಾನೆ. ಆದ್ದರಿಂದ ಜನಾಂಗದಲ್ಲಿರುವ ವಿನಯಿತಾ ಗುಣಕ್ಕೆ ಕಾರಣೀಭೂತ ಹಾಗು ಸಾಕ್ಷಿ ಭಗವಂತ ವಿನಯಿತಾಸಾಕ್ಷೀ.
517) ಮುಕುಂದಃ
ಈ ನಾಮ ಬಹಳ ಪ್ರಸಿದ್ಧ. 'ಮುಕು' ಎಂದರೆ ಮುಕ್ತಿ; ಮುಕುಂದಃ ಎಂದರೆ ಮುಕ್ತಿಯನ್ನು ಕೊಡುವವ.ನಿದ್ರೆಯಲ್ಲಿ ನಿತ್ಯ ಮೋಕ್ಷದ ಅನುಭವ ಕೊಡುವವ, ಅಜ್ಞಾನದಿಂದ ಬಿಡುಗಡೆ ಮಾಡಿ, ಸಂಸಾರ ಬಂಧದಿಂದ ಮುಕ್ತಿಯನ್ನು ದಯಪಾಲಿಸುವ, ಮೊಕ್ಷಪ್ರದ ಭಗವಂತ ಮುಕುಂದಃ. 
518) ಅಮಿತವಿಕ್ರಮಃ
'ವಿಕ್ರಮ' ಎಂದರೆ ಎಲ್ಲವನ್ನೂ ನಿಗ್ರಹಿಸುವ, ಎಲ್ಲವನ್ನೂ ನಿರ್ವಹಿಸುವ, ಎಲ್ಲವನ್ನೂ ಮೀರಿನಿಲ್ಲುವ ಎಂದರ್ಥ. 'ಅಮಿತ' ಎಂದರೆ ಅಳತೆಗೆ ಸಿಗದವ. ಅನಂತ ಸಾಮರ್ಥ್ಯವುಳ್ಳ, ಎಣೆಯಿರದ ಪೌರುಷವುಳ್ಳ, ಎಲ್ಲೆಡೆ ತುಂಬಿರುವ  ಭಗವಂತ ಮಿತವಿಕ್ರಮಃ.

No comments:

Post a Comment