Sunday, November 14, 2010

Vishnusahasranama 562-566

ವಿಷ್ಣು ಸಹಸ್ರನಾಮ:  ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ
562) ಭಗವಾನ್
ಈ ನಾಮ ಬಹಳ ಪ್ರಸಿದ್ಧವಾದ, ಎಲ್ಲಾ ಬಾಷೆಯಲ್ಲಿ, ಎಲ್ಲಾ ಜಾತಿ-ಧರ್ಮಗಳಲ್ಲಿ ಇರುವ ನಾಮ.ಸಾಮಾನ್ಯವಾಗಿ ಭಗವಂತನಿಗೆ ಬ್ರಹ್ಮ, ಪರಬ್ರಹ್ಮ, ಆತ್ಮ, ಪರಮಾತ್ಮ ಹಾಗು ಭಗವನ್ ಈ ನಾಮಗಳು ವಿಶಿಷ್ಟ ನಾಮಗಳು. ಇಲ್ಲಿ 'ಭಗ' ಎಂದರೆ ಭಾಗ್ಯ, ಭಗವಾನ್ ಎಂದರೆ ಭಾಗ್ಯಸ್ವರೂಪ.
ಮಹಾಭಾರತದಲ್ಲಿ ಹೇಳಿದಂತೆ: "ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಶ್ರೀಹ ಜ್ಞಾನ ವೈರಾಗ್ಯ ಯೋಗಸ್ಚೈವ ಶನ್ನುಂ ಭಗಃ". ಆರು ಗುಣಗಳನ್ನು 'ಭಗ' ಶಬ್ದ ಹೇಳುತ್ತದೆ. ಐಶ್ವರ್ಯ, ವೀರ್ಯ, ಯಶಸ್ಸು, ಶ್ರೀ, ಜ್ಞಾನ ಮತ್ತು ವೈರಾಗ್ಯ.
೧) ಐಶ್ವರ್ಯ: ಪೂರ್ಣ ಐಶ್ವರ್ಯ ಅಂದರೆ ಸರ್ವ ಸಮರ್ಥ (Omnipotent) 
೨) ವೀರ್ಯ: ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ ಶಕ್ತಿ.
೩) ಯಶಸ್ಸು: ಯಶಸ್ಸು ಎಂದರೆ ಕೀರ್ತಿ. ಭಗವಂತನ ಸರ್ವ ನಿಯಾಮಕತ್ವವನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ, ಅದರಿಂದ ಯಶಸ್ಸು.
೪) ಶ್ರೀ: ಶ್ರೀ ಎಂದರೆ ಸಂಪತ್ತು. ಇಡೀ ಜಗತ್ತಿನ ಸಮಸ್ತ ವಸ್ತುವು ಯಾರಿಗೆ ಸೇರಿದ್ದೋ ಅವನು ನಿಜವಾದ ಶ್ರೀ. ಈ ಬ್ರಹ್ಮಾಂಡವೇ ಅತೀ ದೊಡ್ಡ ಸಂಪತ್ತು.
೫) ಜ್ಞಾನ: ಜ್ಞಾನಪೂರ್ಣ, ಸರ್ವಜ್ಞ
೬) ವೈರಾಗ್ಯ: ಯಾವುದರ ಬಗ್ಗೆಯೂ 'ನನ್ನದು' ಅನ್ನುವ ಭಾವನೆ ಇಲ್ಲದಿರುವುದು.
ಈ ಆರು ಗುಣಗಳು ಪೂರ್ಣಪ್ರಮಾಣದಲ್ಲಿರುವ, ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲದವ ಭಗವಾನ್.
563) ಭಗಹಾ
ದುಷ್ಟರ ಭಾಗ್ಯವನ್ನು ಕಸಿವವನು ಹಾಗು ಪುಣ್ಯಾತ್ಮರಿಗೆ ಭಾಗ್ಯಪ್ರದನಾಗಿರುವ ಭಗವಂತ ಭಗಹಾ. 
564) ಆನಂದೀ
ಪೂರ್ಣಾನಂದವುಳ್ಳವನು; ಪೂರ್ಣಾನಂದ ಸ್ವರೂಪ ಭಗವಂತ ಆನಂದೀ. 
565) ವನಮಾಲೀ
ಇದು ವಿಶೇಷವಾಗಿ ಕೃಷ್ಣಾವತಾರಕ್ಕೆ ಸಂಬಂಧಪಟ್ಟ ಹೆಸರು. ಕೃಷ್ಣ ಗೋಪಾಲಕರ ಜೊತೆ ಗೋವುಗಳನ್ನು ಕಾಯುತ್ತಿದ್ದ. ಆಗ ಪ್ರಕೃತಿಯಲ್ಲಿರುವ ಹೂ, ನವಿಲುಗರಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಕುತ್ತಿಗೆಯಿಂದ ಕಾಲಿನಗಂಟಿನವರೆಗೆ ಹೂ ಮಾಲೆಯನ್ನು ಮಾಡಿ ಹಾಕಿಕೊಳ್ಳುತ್ತಿದ್ದ ಭಗವಂತನನ್ನು ವನಮಾಲೀ ಎನ್ನುತ್ತಿದ್ದರು.
ಪ್ರಪಂಚ ಸೃಷ್ಟಿಯ ಮೊದಲ ಹಂತದಲ್ಲಿ ನಾನಾ ಬಗೆಯ ವನಸ್ಪತಿಗಳ ರೂಪದಲ್ಲಿ ಜೀವಸೃಷ್ಟಿ ಮಾಡಿದ ಭಗವಂತ ವನಮಾಲೀ.
566) ಹಲಾಯುಧಃ
ನೇಗಿಲನ್ನು ಆಯುಧವಾಗಿ ಬಳಸಿದ ನರರೂಪಿ ಬಲರಾಮನೊಳಗೆ ಆವಿರ್ಭೂತಿಯಾದ ಭಗವಂತ
ಹಲಾಯುಧಃ

No comments:

Post a Comment