Tuesday, November 16, 2010

Vishnusahasranama 575-578

ವಿಷ್ಣು ಸಹಸ್ರನಾಮ: ದಿವಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ
575) ದಿವಸ್ಪೃಕ್
ಮುಗಿಲನ್ನು ಮುತ್ತಿ ನಿಂತವನು ದಿವಸ್ಪೃಕ್; ಭಗವಂತ ಭೂ ಆಕಾಶದಲ್ಲಿ ತುಂಬಿ ನಿಂತಿದ್ದಾನೆ. ಅವನಿಗೆ ತಿಳಿಯದ ವಿಷಯ ಈ ಪ್ರಪಂಚದಲ್ಲಿಲ್ಲ. ಆತ ಎಲ್ಲವನ್ನೂ ಕಾಣಬಲ್ಲ.
576) ಸರ್ವದೃಗ್ ವ್ಯಾಸಃ
ಇಲ್ಲಿ ವ್ಯಾಸ ಎನ್ನುವುದು 'ವಿಸ್ತಾರ, ವಿಭಾಗ' ಎನ್ನುವ ಅರ್ಥವನ್ನೂ ಕೊಡುತ್ತದೆ. ವೇದಗಳನ್ನು ವಿಭಾಗ ಮಾಡಿ ಜ್ಞಾನಿಗಳ ಅರಿವನ್ನು ವಿಸ್ತಾರ ಮಾಡಿದ ಭಗವಂತ  ಸರ್ವದೃಗ್ ವ್ಯಾಸಃ.
ಭಗವಂತ ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾನೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ  ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ  ಒಟ್ಟು 12  ಶಾಖೆಗಳು. ಹೀಗೆ ವೇದವನ್ನು  1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಭಗವಂತ, ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ ಸರ್ವದೃಗ್ ವ್ಯಾಸಃ.         
577) ವಾಚಸ್ಪತಿಃ
ಭಗವಂತ ವಾಗ್ದೇವತೆಯ ಒಡೆಯ. ಮೂಲತಃ ವಾಗ್ದೇವತೆ ಸಮಸ್ತ ವೇದ ಮಾನಿನಿಯಾದ ಲಕ್ಷ್ಮಿ. ಇಂತಹ ವಾಗ್ದೇವತೆಯ ಒಡೆಯ ಭಗವಂತ ವಾಚಸ್ಪತಿಃ
ಸಮಸ್ತ ವೇದದ ಸಾರವನ್ನು ಭಗವದ್ಗೀತೆಯ ಮುಖೇನ ಉಪದೇಶ ಮಾಡಿದ ಹಾಗು , ಅದನ್ನೇ ಶಬ್ದರೂಪದಲ್ಲಿ ಸೆರೆ ಹಿಡಿದ ವ್ಯಾಸ ರೂಪಿ ಭಗವಂತ ವಾಚಸ್ಪತಿಃ
578) ಅಯೋನಿಜಃ
ತಾಯ ಬಸಿರಿನಿಂದ ಹುಟ್ಟದವನು ಅಯೋನಿಜಃ. ಕೃಷ್ಣ ದೇವಕಿಯಿಂದ, ರಾಮ ಕೌಸಲ್ಯಳಿಂದ,ವಾಮನ ಅದಿತಿಯಿಂದ, ವೇದವ್ಯಾಸ ಸತ್ಯವತಿಯಲ್ಲಿ ಹುಟ್ಟಿದರು. ಆದರೆ ವಾಸ್ತವಿಕವಾಗಿ ಭಗವಂತ ಅಯೋನಿಜಃ. ಇದನ್ನು ಸ್ಪಷ್ಟವಾಗಿ ಆತನ ನರಸಿಂಹ, ಕೂರ್ಮ,ಮತ್ಸ್ಯ ವರಾಹ ಇತ್ಯಾದಿ ಅವತಾರದಲ್ಲಿ ಕಾಣಬಹುದು. ಆತ ತಾಯ ಬಸಿರಿನಿಂದ ಹುಟ್ಟುವುದಿಲ್ಲ, ಆದರೆ ನಮಗೆ ಹಾಗೆ ಕಾಣಿಸಿಕೊಳ್ಳುತ್ತಾನೆ. ಆತನಿಗೆ ಜನನವೆಂಬುದೊಂದಿಲ್ಲ. ಆತ ನಮಗೆ ಕಾಣಿಸಿಕೊಳ್ಳುವುದನ್ನು ನಾವು ಆತನ ಜನನ ಎಂದು ತಿಳಿಯುತ್ತೇವೆ ಅಷ್ಟೇ.

No comments:

Post a Comment