Sunday, November 14, 2010

Vishnusahasranama 545-549

ವಿಷ್ಣು ಸಹಸ್ರನಾಮ: ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ
545) ಗುಹ್ಯಃ
ಹೃದಯ ಗುಹೆಯೊಳಗೆ ಗುಟ್ಟಾಗಿ ನೆಲೆಸಿರುವವನು! ; ಇದರಿಂದಾಗಿ ಆತ ಹೊರಪ್ರಪಂಚದಲ್ಲಿ ಎಷ್ಟೇ ಹುಡುಕಿದರೂ ಸಿಗಲಾರ; ಆದರೆ ಒಳಪ್ರಪಂಚದಲ್ಲಿ ಆತನನ್ನು ಹುಡುಕುವ ಪ್ರಯತ್ನ ಮಾಡಿದರೆ ಹೃದಯ ಗುಹೆಯಲ್ಲಿ ನೆಲೆಸಿದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಉಪನಿಷತ್ತುಗಳನ್ನು 'ಗುಹ್ಯ' ಎನ್ನುತ್ತಾರೆ. ವೇದೊಪನಿತ್ತುಗಳಿಂದ ವೇದ್ಯನಾಗಿ ಹೃದಯಗುಹೆಯಲ್ಲಿ ನಿಗೂಢವಾಗಿರುವ ಭಗವಂತ ಗುಹ್ಯಃ.
546) ಗಭೀರಃ
ಎಷ್ಟೇ ಆಳಕ್ಕಿಳಿದರೂ ತುದಿ ಸಿಗದ, ಅಳೆಯಲಾಗದ ಆಳದವನು ಗಭೀರಃ. ಎಷ್ಟೇ ಚಿಂತನೆ ಮಾಡಿದರೂ ಆಳ ತಿಳಿಯಲು ಅಸಾಧ್ಯವಾದ, ಅಳತೆಗೆ ಸಿಗದಷ್ಟು ಅಗಾಧವಾದ, ಸೀಮೆ ಇಲ್ಲದ ಭಗವಂತ ಗಭೀರಃ.
547) ಗಹನಃ
ಭಗವಂತನ ಹುಡುಕಾಟ 'ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ'.  ಆತ ತಿಳಿಯಲಾಗದ ತಿಟ್ಟಿನವನು, ಆತನನ್ನು ಏನು ಎತ್ತ ಎಂದು ಪತ್ತೆ ಹಚ್ಚುವುದು ಅಸಾಧ್ಯ. ಹೀಗೆ ಎಷ್ಟೇ ಅಲೆದಾಡಿದರೂ ಸಿಗದ ಭಗವಂತ ಗಹನಃ.
548) ಗುಪ್ತಃ
ಭಗವಂತ ಎಂದೂ ತನ್ನನ್ನು ತಾನು ತೆರೆದು ತೋರಿಸುವುದಿಲ್ಲ ಆತ ಗುಪ್ತಃ. ಮೊದಲು ನಾವು ಆತನ ಮುಂದೆ ಬತ್ತಲಾಗಬೇಕು, ಆಗ ಆತ ನಮ್ಮ ಮುಂದೆ ತೆರೆದುಕೊಳ್ಳುತ್ತಾನೆ. ಯಾರು ತಮ್ಮನ್ನು ತಾವು ಆತನಲ್ಲಿ ಅರ್ಪಿಸಿಕೊಳ್ಳುತ್ತಾರೋ ಅವರಿಗೆ ಭಗವಂತ ತೆರೆದುಕೊಳ್ಳುತ್ತಾನೆ.
549) ಚಕ್ರಗದಾಧರಃ
ಭಗವಂತ ಚಕ್ರ ಗದೆಗಳನ್ನು ತೊಟ್ಟವನು. ಚಕ್ರ-ದುರ್ಗಾರೂಪ, ಗದೆ ವಾಯು ರೂಪ. ಶ್ರಿತತ್ವ ಹಾಗು ವಾಯು ತತ್ವ ಸದಾ ಭಗವಂತನೊಂದಿಗಿರುತ್ತಾರೆ. ಚಕ್ರ ಸಂಹಾರ ಶಕ್ತಿಯ ಪ್ರತಿರೂಪವಾದರೆ, ಗದಾ ಕಾಮನಿಗ್ರಹದ ಸಂಕೇತ. ಚಕ್ರದಿಂದ ಧರ್ಮದ ನಿರಂತರ ಚಲನೆ, ಹಾಗು ಮನುಷ್ಯನ ಸ್ವಚ್ಚಂದತೆಗೆ ಕಡಿವಾಣವಾಗಿದ್ದು, ಧರ್ಮ ಸಂರಕ್ಷಣೆ ಮಾಡುವ ಭಗವಂತ ಚಕ್ರಗದಾಧರಃ.     

No comments:

Post a Comment