Sunday, November 14, 2010

Vishnusahasranama 557-561

ವಿಷ್ಣು ಸಹಸ್ರನಾಮ:  ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ
557) ವರುಣಃ
ಮಿತ್ರ ಹಗಲಿನ ಸೂರ್ಯನಾದರೆ ವರುಣ ರಾತ್ರಿಯ ಸೂರ್ಯ, ಇದನ್ನೇ  "ಶಂ ನೋ ಮಿತ್ರಃ ಶಂ ವರುಣಃ" ಎಂದಿದ್ದಾರೆ. ಮಿತ್ರನಾಗಿ , ವರುಣನಾಗಿ ಜಗತ್ತಿನ ಹಗಲು ರಾತ್ರಿಯನ್ನು ನಿಯಂತ್ರಿಸುವ ಭಗವಂತ 'ವರುಣಃ' ಜೀವರನ್ನು ಸಂಸಾರವೆಂಬ ಮಾಯೆಯ ಆವರಣದಲ್ಲಿಡುವ ಹಿರಿಯ ಆನಂದ ಸ್ವರೂಪ ಭಗವಂತ ವರುಣಃ. 
558) ವಾರುಣಃ
ನೀರಿನ, ಸಮುದ್ರದ, ಪಶ್ಚಿಮದಿಕ್ಕಿನ ದೇವತೆ ವರುಣ. ಇಂತಹ ವರುಣನಲ್ಲಿದ್ದು, ಸಮಸ್ಥ ಕಾರ್ಯವನ್ನು ನಿರ್ವಹಿಸುವ, ಶತ್ರುಗಳನ್ನು ತಡೆಯಬಲ್ಲ ಭಲದ ಮೂರ್ತಿ, ಕ್ಷೀರಸಾಗರವಾಸಿ ಭಗವಂತ ವಾರುಣಃ. 
559) ವೃಕ್ಷಃ
ವೃಕ್ಷ ಎಂದರೆ ಮರ, ಯಾವುದನ್ನು ಕಡಿಯುತ್ತೇವೋ(ಛೇದನೆ) ಅದು ವೃಕ್ಷ. ಸಂಸಾರವೆಂಬ ಮಹಾ ವೃಕ್ಷವನ್ನು ಕಡಿದು ಮುಕ್ತಿ ಕೊಡುವ ನಿರ್ವೀಕಾರ ಹಾಗು ನಿಶ್ಚಲ ಮೂರ್ತಿ ಭಗವಂತ ವೃಕ್ಷಃ.
560) ಪುಷ್ಕರಾಕ್ಷಃ
ಪುಷ್ಕರಾಕ್ಷಃ ಎಂದರೆ ಪುಷ್ಕರದಂತೆ(ತಾವರೆಯಂತೆ) ಅಕ್ಷ ಉಳ್ಳವ ಅಥವಾ ತಾವರೆಗಣ್ಣಿನವ. ದೇಹದಲ್ಲಿ ಕಣ್ಣು ಆಕರ್ಷಣೆಯ ಕೇಂದ್ರ.  ಭಗವಂತ ಅಗಲವಾದ ಅರಳುಗಣ್ಣಿನ ಸೌಂದರ್ಯಮೂರ್ತಿ. ಕೆಂದಾವರೆ ಬಣ್ಣ ನಸುಗೆಂಪು. ಆರೋಗ್ಯವಾಗಿರುವ ವ್ಯಕ್ತಿಯ ಕಣ್ಣು ಹಾಗಿರುತ್ತದೆ. ರಕ್ತ ಕೆಂಪಾದ ಅಥವಾ ಬಿಳಿಚಾದ ಕಣ್ಣು ಆರೋಗ್ಯದ ಲಕ್ಷಣವಲ್ಲ. ನಸುಗೆಂಪು ವಾತ್ಸಲ್ಯವನ್ನು ಬಿಂಬಿಸುತ್ತದೆ. ಭಕ್ತವಾತ್ಸಲ್ಯವನ್ನು ಬಿಂಬಿಸುವ ಕಣ್ಣುಗಳುಳ್ಳ ವಾತ್ಸಲ್ಯಮೂರ್ತಿ ಭಗವಂತ ಪುಷ್ಕರಾಕ್ಷಃ.       
561) ಮಹಾಮನಾಃ
ಮನಸ್ಸು ಎಂದರೆ 'ಮನನ'. ಒಂದು ವಸ್ತುವನ್ನು ತಳಸ್ಪರ್ಶಿಯಾಗಿ ತಿಳಿಯುವುದು 'ಅರಿವು'. ಇಂತಹ ಮಹತ್ತರವಾದ ಮನನ ಉಳ್ಳವನು ಮಹಾಮನಃ. ಭಕ್ತರು ಬಯಸಿದ್ದೆಲ್ಲವನ್ನೂ ಕೊಡುವ ಮನೋವೈಶಾಲ್ಯವುಳ್ಳ ಸರ್ವಜ್ಞ ಭಗವಂತ ಮಹಾಮನಾಃ.  

No comments:

Post a Comment