Sunday, November 21, 2010

Vishnu Sahasranaama 655-664

ವಿಷ್ಣು ಸಹಸ್ರನಾಮ:
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ
ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ
655) ಕಾಮದೇವಃ
ಈ ನಾಮದ ಮೇಲ್ನೋಟದ ಅರ್ಥ ಎಲ್ಲರಿಗೂ ಚಿರಪರಿಚಿತ. ಮನುಷ್ಯನ ಬದುಕಿನಲ್ಲಿ ಬಯಕೆ ಹಾಗು ಅರಿವು (desire and wisdom) ಚೈತನ್ಯದ ಮೂಲಭೂತ ಧರ್ಮ.'ಕಾಮ' ಸಂಸ್ಕೃತದಲ್ಲಿ ಸೌಂದರ್ಯದ ಸಂಕೇತ. ಅಂದರೆ ಸುಂದರವಾದದ್ದನ್ನು ಬಯಸುವುದು 'ಕಾಮ'. 'ಸುಂದರ' ಅಂದರೆ ಪ್ರೀಯವಾದದ್ದು. ಸುಂದರವಾದದ್ದನ್ನು, ಅಥವಾ ಪ್ರಿಯವಾದದ್ದನ್ನು ಬಯಸುವುದು ಕಾಮ. ಸೌಂದರ್ಯ ವಸ್ತುವಿನಲ್ಲಿಲ್ಲ, ನಾವು ನೋಡುವ ದೃಷ್ಟಿಯಲ್ಲಿದೆ. ನಮಗೆ ಯಾವುದು ಇಷ್ಟವೋ ಅದು ನಮಗೆ ಸುಂದರವಾಗಿ ಕಾಣುತ್ತದೆ. ಹೀಗೆ ಇರುವ ಕಾಮವನ್ನು ಈಡೇರಿಸುವ ಕಾಮದೇವ (ಮನ್ಮಥ) ನಮ್ಮೊಳಗಿದ್ದು ವಿವಿಧ ರೂಪದ ಬಯಕೆಗಳನ್ನು ಪ್ರಚೋದಿಸಿ, ಕಾಮನೆಗಳನ್ನು ಈಡೇರಿಸಿ, ಆನಂದವನ್ನು ಕೊಟ್ಟು ವಿಹರಿಸುವವ. ಮನ್ಮಥ ವಿಷ್ಣುವಿನ ಮಗ; ಅವನೇ ಶಿವನ ಮಗ ಸ್ಕಂದ (ಷಣ್ಮುಖ), ಅವನೇ ಬ್ರಹ್ಮನ ಮಗ ಸನತ್ಕುಮಾರ. ನಮಗೆ ಕಾಮನೆಗಳನ್ನು ನೀಡುವ ಹಾಗು ಅದನ್ನು ನಿಯಂತ್ರಿಸುವ ಮನ್ಮಥ-ಸನತ್ಕುಮಾರ-ಷಣ್ಮುಖನೊಳಗಿರುವ, ಸರ್ವ ಕಾಮಗಳನ್ನು ಗೆದ್ದ ಭಗವಂತ ಕಾಮದೇವಃ.     
656) ಕಾಮಪಾಲಃ
ನಮ್ಮ ಎಲ್ಲಾ ಬಯಕೆಗಳನ್ನು ರಕ್ಷಣೆ ಮಾಡುವವನು ಭಗವಂತ. ನಮ್ಮ ಬಯಕೆ ನಮ್ಮ ಅಧೀನ ಅಲ್ಲ. ಧರ್ಮ ಕಾರ್ಯ ಮಾಡಬೇಕು ಎನ್ನುವ ಕಾಮ ಇಲ್ಲದಿದ್ದರೆ ಧರ್ಮವಿಲ್ಲ! ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಬೇಕು ಎನ್ನುವ ಕಾಮನೆ ಇಲ್ಲದಿದ್ದರೆ 'ಅರ್ಥಕ್ಕೆ' ಬೆಲೆಯಿಲ್ಲ. ಕಾಮ ಇಲ್ಲದಿದ್ದರೆ ಎಲ್ಲವೂ ಅಸಾಧ್ಯ. ಬಯಕೆಯೇ ಇಲ್ಲದ ಬದುಕಿಲ್ಲ. ಬಯಕೆ ಕೆಟ್ಟದ್ದಲ್ಲ ಆದರೆ ಕುಸ್ಸಿತವಾದ ಬಯಕೆ ಕೆಟ್ಟದ್ದು. ನಮಗೆ ಒಳ್ಳೆಯ ಬಯಕೆಯನ್ನು ಕೊಟ್ಟು ಅದನ್ನು ಪೂರೈಸಿ ಉದ್ಧರಿಸುವ ಭಗವಂತ ಕಾಮಪಾಲಃ.
657) ಕಾಮೀ
ಕಾಮೀ ಅಂದರೆ ಕಾಮ ಉಳ್ಳವನು ಎಂದರ್ಥವಲ್ಲ. ಕಾಮದ ಒಡೆಯ ಕಾಮೀ. ಜಗತ್ತಿನಲ್ಲಿ ಕಾಮನೆಗಳನ್ನು ಪ್ರೇರೇಪಿಸುವ ಮನ್ಮಥನ ಅಪ್ಪ ಭಗವಂತ ಕಾಮೀ.
658) ಕಾಂತಃ
ರತಿ-ಮನ್ಮಥರಿಗೆ ರೂಪಕೊಟ್ಟ ಭಗವಂತ ಎಲ್ಲರೂ ಬಯಸುವಂತಹ  ಪರಮಸುಂದರ ಮೂರ್ತಿ. ಅತ್ಯಂತ  ಸುಂದರ ಮಾಂಗಲಿಕ ರೂಪ ಆತನದ್ದು. ಇಲ್ಲಿ ಸೌಂದರ್ಯ ಎಂದರೆ ಬಾಹ್ಯ ಸೌಂದರ್ಯವಲ್ಲ, ಪಂಚಭೂತಗಳಿಂದಾದ ಸೌಂದರ್ಯವಲ್ಲ, ಜ್ಞಾನಾನಂದಗಳಿಂದ ತುಂಬಿದ  ಪರಿಪೂರ್ಣ ಸೌಂದರ್ಯ.ಇಂತಹ ಸುಂದರ ಮೂರ್ತಿ ಭಗವಂತ ಕಾಂತಃ.   
659) ಕೃತಾಗಮಃ
ಮೊಟ್ಟ ಮೊದಲು ಜ್ಞಾನವನ್ನು, ವೇದವನ್ನು, ಚತುರ್ಮುಖನಿಗೆ ಉಪದೇಶ ಮಾಡಿ ಜಗತ್ತಿಗೆ ಆಗಮನದ ರೂಪದಲ್ಲಿ ಕೊಟ್ಟವ ಭಗವಂತ. ಆತ ಆಗಮಗಳಿಂದ ಕೃತನಾದವನು. ಸಮಸ್ತ ಆಗಮಗಳಿಂದಲೇ ತಿಳಿಯಬೇಕಾದವನು. ಭೂಮಿಗೆ ಇಳಿದು ಬಂದು, ವೇದ-ಪುರಾಣವನ್ನು ರಚಿಸಿ ಕೊಟ್ಟು, ಶೃತಿ-ಸ್ತುತಿಗಳನ್ನು ನೀಡಿದ ಭಗವಂತ ಕೃತಾಗಮಃ.
660) ಅನಿರ್ದೇಶ್ಯವಪು
ಇಂಥದ್ದೇ ಎಂದು ನಿರೂಪಿಸಲು ಆಗದ ಆಚಿಂತ್ಯ ರೂಪನು. 'ನಿರ್ದೇಶ' ಎಂದರೆ ಇದು ಇಂತದ್ದೇ ಎಂದು ಮನಸ್ಸು ಗ್ರಹಿಸುವ ರೂಪ. ಕೃಷ್ಣನನ್ನು, ರಾಮನನ್ನು, ವ್ಯಾಸರನ್ನು ಕಂಡವರಿದ್ದಾರೆ, ಆದರೆ ಅದು ಕಂಡು ಗ್ರಹಿಸುವ ರೂಪವಲ್ಲ. ಯಾವುದನ್ನು ನಿರೂಪಿಸಲಾಗದೆ ಮಾತು ಮೂಕವಾಗುತ್ತದೋ, ಮನಸ್ಸು ಸ್ವಚ್ಚವಾಗುತ್ತದೋ, ಅಂತಹ ಆನಂದಮಯ ರೂಪ ಎಂದು ಉಪನಿಷತ್ತು ಹೇಳುತ್ತದೆ. ಹೀಗೆ ಮನಸ್ಸಿನ ಚಿಂತನೆಗೆ ಮೀರಿದ ರೂಪವುಳ್ಳ  ಭಗವಂತ  ಅನಿರ್ದೇಶ್ಯವಪು.
661) ವಿಷ್ಣುಃ
ಎಲ್ಲಾ ಕಡೆಯೂ, ಎಲ್ಲರ ಒಳಗೂ-ಹೊರಗೂ ತುಂಬಿರುವ, ಮಾತು ಮನಸ್ಸಿಗೆ ಮೀರಿದ ಅನಂತ ಶಕ್ತಿ ಭಗವಂತ ವಿಷ್ಣುಃ.
662) ವೀರಃ
ಎಲ್ಲವನ್ನೂ ನಿಗ್ರಹಿಸಬಲ್ಲ ಪೌರುಷಶಾಲಿ. 'ವಿ' ಅಂದರೆ ಪಕ್ಷಿ (ಗರುಡ), 'ಈರ' ಅಂದರೆ ಪ್ರಾಣದೇವರು. ಗರುಡ-ಪ್ರಾಣರನ್ನು ನಿಯಂತ್ರಿಸುವ ಪರಾಶಕ್ತಿ ಭಗವಂತ ವೀರ.
663) ಅನಂತಃ
ಅಳತೆಗೆ ಸಿಗದ ಅನಂತ ಶಕ್ತಿ. ಆತ ಕಾಲತಃ, ದೇಶತಃ, ಗುಣತಃ ಅನಂತ.  
664) ಧನಂಜಯಃ
ಅರ್ಜುನನಲ್ಲಿ ಸನ್ನಿಹಿತನಾಗಿ ಅವನನ್ನು ಧನಂಜಯನಾಗಿ ಮಾಡಿದ ಭಗವಂತ
ಧನಂಜಯಃಜಗತ್ತಿನಲ್ಲಿರುವ ಎಲ್ಲಾ ಸಂಪತ್ತು ಆತನ ಸೊತ್ತು. ಆದ್ದರಿಂದ 'ನನ್ನದು' ಎನ್ನುವ ಅಹಂಕಾರ ಬಿಟ್ಟು ಆ ಧನಂಜಯನಲ್ಲಿ ಶರಣಾಗಬೇಕು. 

No comments:

Post a Comment